ಚಿತ್ರದುರ್ಗ:
ನಗರದ ಶ್ರೀ ಜಗದ್ಗುರು ಗುರುಪಾದ ಮುರುಘರಾಜೇಂದ್ರರು ಅಡ್ಡಾಡಿದ ತಪೋನೆಲದಲ್ಲಿ ಶ್ರಮದಾನದ ಮೂಲಕ ಸಸಿ ನೆಡುವ, ಕಸ ತೆಗೆಯುವ ಗಿಡಗಳಿಗೆ ಪಾತಿ ಮಾಡುವುದು ಸೇರಿದಂತೆ ಅನೇಕ ಕೆಲಸಗಳು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಂದ ನಡೆಯಿತು.

ನಂತರ ಡಾ. ಬಸವಕುಮಾರ ಸ್ವಾಮೀಜಿ ಅವರು ಮನಸ್ಸಿನ ಏಕಾಗ್ರತೆಗೆ ಅಗತ್ಯ ಎನ್ನುವ ಬಸವಾದಿ ಶರಣರು ನಿರೂಪಿಸಿರುವ ಇಷ್ಟಲಿಂಗದ ಶಿವಯೋಗ(ಧ್ಯಾನ) ಸಾಧಿಸುವ ಕುರಿತಾಗಿ ಪ್ರಾತ್ಯಕ್ಷಿಕೆ ನೀಡಿದರು.
‘ಭಾರತದ ಆಧ್ಯಾತ್ಮಿಕ ಪರಂಪರೆಯಲ್ಲಿ ಬಸವಾದಿ ಶಿವಶರಣರ ನಡೆ ನುಡಿಗಳು, ಅವರ ವಚನಗಳಲ್ಲಿ ಮಾನವನನ್ನು ಮಹದೇವನನ್ನಾಗಿಸುವ ತತ್ವಾದರ್ಶ ಮತ್ತು ಉದಾತ್ತ ಮೌಲ್ಯಗಳು ಅಡಕವಾಗಿವೆ.
ತನು-ಮನ ಶುದ್ಧಿಗಾಗಿ ಕೆಲವರು ದೇವಾಲಯಗಳಿಗೆ ಹೋಗುತ್ತಾರೆ. ಶಿವಯೋಗ ಸಾಧನೆಯಿಂದಲೂ ತನು-ಮನ-ಭಾವಶುದ್ಧಿಯ ಸಾಧ್ಯತೆಯಿದೆ.
ಈ ಶಿವಯೋಗದಿಂದ ಏರುಪೇರು-ಕಳವಳ-ಸಂದಿಗ್ಧತೆ ಮನೋವಿಕಲತೆಯಿಂದ ಬಿಡುಗಡೆಯ ಮಾರ್ಗ ಉಂಟು. ನಮ್ಮ ದೇಹ ಮತ್ತು ಮನಸ್ಸು ಪಂಚೇಂದ್ರಿಯಗಳ ಉಪಟಳದಿಂದ ಬೇಸತ್ತಿರುತ್ತದೆ. ಅವುಗಳನ್ನು ಹತೋಟಿ ಅಥವಾ ಸ್ಥಿಮಿತಕ್ಕೆ ತರಲು ಈ ಮಾರ್ಗ ಅನುಸರಿಸುವುದರಿಂದ ಸಾಧ್ಯವಿದೆ.
ಶಿವ ಎಂದರೆ ಹೊಸ ಅರ್ಥವೇನಿಲ್ಲ, ಶುಭ ಅಥವಾ ಮಂಗಳಕರ ಎಂದು. ನಾವು ಆಡುವ ಮಾತು ನೋಡುವ ದೃಷ್ಟಿ ಸದುವಿನಯ, ಸದ್ವರ್ತನೆಯಿಂದ ಕೂಡಿರಬೇಕು. ಇಷ್ಟಲಿಂಗದ ಮೂಲಕ ಮನಸ್ಸನ್ನು ಕೇಂದ್ರೀಕರಿಸಿ ತದೇಕಚಿತ್ತದಿಂದ ನೋಡಬೇಕು.
ಇದರಿಂದ ಧ್ಯಾನ-ಮೌನದೊಂದಿಗೆ ಸಮಾಧಾನ ಪ್ರಾಪ್ತವಾಗುತ್ತದೆ. ಇದನ್ನು ಎಲ್ಲಾ ಕಾಲಕ್ಕೂ ಎಲ್ಲರೂ ಜಾತಿ-ಮತ ಲಿಂಗಭೇದವಿಲ್ಲದೆ ಮಾಡಲು ಬಸವಾದಿ ಶರಣರು ಹೇಳಿದ್ದಾರೆ,’ ಎಂದು ಸ್ವಾಮೀಜಿ ತಿಳಿಸಿದರು.

ಖ್ಯಾತಗಾಯಕಿ ಜಾನಕಿ ಅವರು ಈ ನಾಡು ಕಂಡ ಅಪ್ರತಿಮ ಶ್ರೇಷ್ಠಗಾಯಕಿ. ಅವರಿಗೆ ಅವರೇ ಸಾಟಿ. ಅವರ ಗಾನ ನಮನ ನಡೆದಿದೆ. ಹಾಗೆಯೇ ಹಿರಿಯ ಗಾಂಧಿವಾದಿ ನಿಜಲಿಂಗಪ್ಪನವರ ಒಡನಾಡಿಯಾಗಿದ್ದ ಹೆಚ್. ಹನುಮಂತಪ್ಪ ಅವರು ಈ ಸಮಾಜಕ್ಕೆ ರಾಜಕೀಯದಲ್ಲಿದ್ದುಕೊಂಡು ಅನುಪಮ ಸೇವೆ ಸಲ್ಲಿಸಿದ್ದಾರೆ. ಅವರ ಸ್ಮರಣೆಯೂ ನಡೆದಿರುವುದು ಸುದೈವ ಎಂದರು.
ಕಾರ್ಯಕ್ರಮದಲ್ಲಿ ಈ ನಾಡಿಗೆ ಎಂದೂ ಮರೆಯಲಾಗದ ಹಾಡುಗಳನ್ನು ಹಾಡಿ ಜನಮಾನಸದಲ್ಲಿ ಚಿರಸ್ಥಾಯಿಯಾಗಿರುವ ಡಾ. ಎಸ್. ಜಾನಕಿ ಅವರಿಗೆ ಗಾನ ನಮನ ಹಾಗೂ ಹಿರಿಯ ಗಾಂಧಿವಾದಿ ರಾಷ್ಟ್ರನಾಯಕ ಎಸ್. ನಿಜಲಿಂಗಪ್ಪ ಅವರ ಒಡನಾಡಿ ಅನುಯಾಯಿಯಾಗಿದ್ದ ಹೆಚ್. ಹನುಮಂತಪ್ಪ ಅವರಿಗೆ ನುಡಿ ನಮನ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಹೆಚ್. ಹನುಮಂತಪ್ಪ ಅವರ ಬಗೆಗೆ ನುಡಿ ನಮನ ಸಲ್ಲಿಸಿದ ಅವರ ಒಡನಾಡಿ, ಎಸ್ಸೆನ್ ಸ್ಮಾರಕ ಟ್ರಸ್ಟ್ನ ಪದಾಧಿಕಾರಿಯೂ ಆದ ಎಸ್. ಷಣ್ಮುಖಪ್ಪ ಅವರು ಮಾತನಾಡಿ, ಹನುಮಂತಪ್ಪನವರು ಶಿಕ್ಷಕರಾಗಿ, ವಕೀಲರಾಗಿ, ರಾಜಕಾರಣಿಯಾಗಿ ಜನಪರ ಕೆಲಸಗಳನ್ನು ಮಾಡಿದವರಾಗಿದ್ದಾರೆ. ಅವರು ಸ್ಥಾಪಿಸಿದ ಸರಸ್ವತಿ ಕಾನೂನು ಕಾಲೇಜಿನಲ್ಲಿ ಅನೇಕ ಪ್ರತಿಭಾನ್ವಿತ ನ್ಯಾಯವಾದಿಗಳು ಹೊರಹೊಮ್ಮಿದ್ದಾರೆ.
ಅವರು ಈ ಚಿತ್ರದುರ್ಗ- ರಾಯದುರ್ಗ ರೈಲುಮಾರ್ಗ, ಅಂಬೇಡ್ಕರ್ ಪ್ರತಿಮೆ ಮತ್ತು ಮದಕರಿ ನಾಯಕ ಪ್ರತಿಮೆ ನಿರ್ಮಾಣ, ನೀರಾವರಿ ಹೋರಾಟ ಸೇರಿದಂತೆ ಅವರ ರಾಜಕೀಯ ಜೀವನದಲ್ಲಿ ಅನೇಕ ಬಡವರಿಗೆ ಉದ್ಯೋಗಾವಕಾಶ ಕೊಡಿಸಿದ್ದಾರೆ. ಹಾಗೆಯೇ ರಾಜಕೀಯದಲ್ಲಿ ಇವರ ಮಾತಿಗೆ ಮನ್ನಣೆ ಇರುತ್ತಿತ್ತು. ಅವರು ಎಸ್ಸೆನ್ ಸ್ಮಾರಕ ಟ್ರಸ್ಟ್ನಲ್ಲಿದ್ದು ಅವರ ಪುಣ್ಯಭೂಮಿ ಒಂದು ಐತಿಹಾಸಿಕ ಸ್ಮಾರಕವಾಗಲು ಶ್ರಮಿಸಿದರು.
ಸ್ಮಾರಕದಲ್ಲಿ ರಾಜಕೀಯ ಪ್ರವೇಶ ಮಾಡುವವರಿಗೆ ಒಂದು ತರಬೇತಿ ಶಾಲೆ ಆರಂಭಿಸಬೇಕೆಂಬ ಮಹಾತ್ವಾಕಾಂಕ್ಷೆ ಅವರಲ್ಲಿತ್ತು. ಅದು ಈಡೇರಲಿಲ್ಲ. ಅದು ನನಸಾದರೆ ಅವರಿಗೊಂದು ನಿಜ ನುಡಿನಮನವಾಗುತ್ತದೆಂದರು.
ಇದೇ ಸಂದರ್ಭದಲ್ಲಿ ಪ್ರಜಾವಾಣಿ ದಿನಪತ್ರಿಕೆಯ ಜಿಲ್ಲಾ ವರದಿಗಾರ ಕೆ.ಪಿ. ಓಂಕಾರಮೂರ್ತಿ ಅವರು ಡೆಡ್‌ಲೈನ್ ಕಥೆಗಾಗಿ ರಾಜ್ಯಮಟ್ಟದ ಪ್ರಶಸ್ತಿ ಪಡೆದ ಹಿನ್ನೆಲೆಯಲ್ಲಿ ಅವರನ್ನು ಶಾಲು ಹೊದೆಸಿ, ಅಭಿನಂದನಾ ಪತ್ರವನ್ನು ನೀಡಿ ಗೌರವಿಸಲಾಯಿತು.

ಅದೇ ರೀತಿ ಎಸ್.ಜೆ.ಎಂ. ವಿದ್ಯಾಪೀಠದ ಆಶ್ರಯದಲ್ಲಿ ನಡೆಯುತ್ತಿರುವ ಬಾಪೂಜಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಗೊಂಚಿಗಾರ್ ಅವರು ಶಾಲೆಯಲ್ಲಿ ಮಕ್ಕಳಿಗೆ ಪಠ್ಯದ ಜತೆಗೆ ಪರಿಸರ ಕಾಳಜಿ ಬಗ್ಗೆ ಮಾಹಿತಿಯನ್ನು ಪ್ರಾಯೋಗಿಕವಾಗಿ ಮಾಡಿ ಸೈ ಎನಿಸಿಕೊಂಡಿದ್ದಾರೆ. ಹಾಗೆಯೇ ಸಂಸ್ಥೆಯ ಪ್ರಾಚಾರ್ಯರಾಗಿ ನಿವೃತ್ತಿ ಹೊಂದಿದ ಡಾ. ಎಸ್.ಹೆಚ್. ಪಂಚಾಕ್ಷರಿ ಹಾಗೂ ಈ ಹಿಂದೆ ಇದೇ ಸಂಸ್ಥೆಯಲ್ಲಿದ್ದ ನಂತರ ಬೆಸ್ಕಾಂ ಸೇರಿ ಮೊನ್ನೆ ನಿವೃತ್ತಿ ಹೊಂದಿದ ನಾಗಭೂಷಣ ದಂಪತಿಗಳನ್ನು ಗೌರವಿಸಲಾಯಿತು.
ನಂತರ ಕಾರ್ಯಕ್ರಮದಲ್ಲಿ ಎಸ್. ಜಾನಕಿಯವರ ನುಡಿ ನಮನ ಹಾಗೂ ಗಾನ ನಮನ ನಡೆಯಿತು. ಆರಂಭಕ್ಕೆ ಮಧ್ಯಕರ್ನಾಟಕದ ಹೆಸರಾಂತ ಶಾರದಾ ಬ್ರಾಸ್ ಬ್ಯಾಂಡ್‌ನ ಸಂಸ್ಥಾಪಕ ಎಸ್.ವಿ. ಗುರುಮೂರ್ತಿ ಅವರು ಜಾನಕಿಯವರ ಬಾನಲ್ಲೂ ನೀನೇ ಭುವಿಯಲ್ಲೂ ನೀನೇ ಗೀತೆಯನ್ನು ಸ್ಯಾಕ್ಸೋಫೋನ್ ಮೂಲಕ ನುಡಿಸಿ ಗಾನ ನಮನಕ್ಕೆ ಮುನ್ನುಡಿ ಹಾಡಿದ ಅವರು ನಂತರ ಮಾತನಾಡುತ್ತ, ಕಲಾವಿದರಿಗೆ ಸಾವಿಲ್ಲ. ನಮ್ಮ ಜಾನಕಮ್ಮನವರು ಸತ್ತಿಲ್ಲ. ನಮ್ಮ ನಡುವೆ ಗಾಯನದಲ್ಲಿ ಕೋಟ್ಯಾಂತರ ಮನದಲ್ಲಿ ಹಾಡಿನ ಮೂಲಕ ನಮ್ಮೊಂದಿಗಿದ್ದಾರೆ.
ಒಂದೆರಡಲ್ಲ ೪೮ ಸಾವಿರ ಹಾಡುಗಳನ್ನು ಹಾಡಿದ್ದಾರೆಂದರೆ ಸಾಮಾನ್ಯ ಮಾತಲ್ಲ. ಅವರು ಗಾನಗಂಗೆ, ಸರಸ್ವತಿ ಎಂದರೆ ತಪ್ಪಿಲ್ಲ ಎಂದು ಸ್ಮರಿಸಿದರು.

ನಂತರದಲ್ಲಿ ಹವ್ಯಾಸಿ ಹಾಗೂ ಕೆಲ ವೃತ್ತಿ ಹಿನ್ನೆಲೆಗಾಯಕರಾದ ಜ್ಯೋತಿ ಗಿರೀಶ್, ಅವರು ನಿನ್ನ ಸವಿನೆನಪೇ ಗೀತೆ ಹಾಡಿದರೆ, ಸತ್ಯನಾರಾಯಣ – ದೇವರ ಆಟ ಬಲ್ಲವರಾರು, ಗೊಂಚಿಗಾರ್ – ಮಧುಮಾಸ ಚಂದ್ರಮ, ವರದಾಶಂಕರ್-ಬುದ್ಧಿಮಾತ ಕೇಳಿ, ಡಾ. ಚೇತನ್ ಮತ್ತು ಪ್ರಣತಿ – ಜೀವ ವೀಣೆ ನೀನು ಮಿಡಿತದ, ಚಂದ್ರಕಲಾ ಮತ್ತು ಮನು- ನಗುವಾ ನಯನ, ಕಲ್ಪಶ್ರೀ-ಒಮ್ಮೆ ನಿನ್ನನ್ನು ಕಣ್ತುಂಬ, ಶ್ರೀನಿವಾಸ್-ಬಿಸಿಲಾದರೇನು, ಯಶೋಧ ವಿಜಯಕುಮಾರ್, ಹೆಚ್.ಸಿ. ಪದ್ಮಾವತಿ, ಡಿ.ಓ. ಮುರಾರ್ಜಿ – ತನ್ನಂ ತನ್ನಂ ಎಂದು ಮಿಡಿಯುತಿದೇ, ಲಿಂಗರಾಜ್-ಆಕಾಶ ದೀಪವು ನೀನು, ಚಂದ್ರಣ್ಣ ತತ್ವಪದ ಸೇರಿದಂತೆ ಮತ್ತಿತರ ಗಾಯಕರು ಡಾ. ಎಸ್. ಜಾನಕಿ ಅವರ ಹಾಡುಗಳನ್ನು ಹಾಡಿ ನೆರೆದವರನ್ನು ಭಾವುಕರನ್ನಾಗಿಸಿದರು.
ಈ ಸಂದರ್ಭದಲ್ಲಿ ಎಸ್.ಜೆ.ಎಂ. ವಿಶ್ವವಿದ್ಯಾಲಯದ ಕುಲಪತಿ ಡಾ. ಕೆ.ಬಿ. ಗುಡಸಿ, ಗಾಯತ್ರಿ ಶಿವರಾಂ, ನಾಗರಾಜ ಸಂಗಂ, ಕವಿ ಗಂಗಾಧರಪ್ಪ, ಮಲ್ಲಿಕಾರ್ಜುನಪ್ಪ, ಗೌಳಿರುದ್ರಪ್ಪ, ವಕೀಲರಾದ ಉಮೇಶ್, ಗುತ್ತಿನಾಡು ಪ್ರಕಾಶ್, ವರ್ತಕ ತಿಪ್ಪೇಸ್ವಾಮಿ, ಕಣಿವೆಮಾರಮ್ಮ ತಿಪ್ಪೇಸ್ವಾಮಿ, ಆಯುಷ್ ಯೋಗ ಸಂಸ್ಥೆಯ ಪ್ರಸನ್ನಕುಮಾರ್, ಮಂಜುನಾಥ್, ಬಸವರಾಜ್, ಶಿವಯೋಗಿ, ಸೇರಿದಂತೆ ವಿವಿಧ ಮಠಾಧೀಶರು ಕಲಾವಿದರು, ಕಲಾಭಿಮಾನಿಗಳು, ಭಕ್ತರು, ಸಾರ್ವಜನಿಕರು, ಎಸ್.ಜೆ.ಎಂ. ವಿದ್ಯಾಪೀಠದ ಕೆಲ ಶಾಲಾಕಾಲೇಜುಗಳ ನೌಕರರು ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಸಮಾಜ, ಸಂಘಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸಮಾರಂಭದ ಆರಂಭಕ್ಕೆ ಜಮುರಾ ಕಲಾವಿದ ಉಮೇಶ್ ಪತ್ತಾರ ವಚನಗೀತೆ ಮೂಲಕ ಪ್ರಾರ್ಥನೆ ಹಾಡಿದರು. ಹರ್ಷಿತ ಎನ್. ಸ್ವಾಗತಿಸಿದರೆ, ಅಧ್ಯಾಪಕಿ ಲತಾ ಹಾಗೂ ನಿವೃತ್ತ ಶಿಕ್ಷಕಿ ಆರ್.ವಿಜಯಲಕ್ಷ್ಮಿ ಅವರುಗಳು ಕಾರ್ಯಕ್ರಮ ನಿರ್ವಹಿಸಿದರು. ಮಹಾಂತೇಶ್ ನಿಟುವಳ್ಳಿ ಶರಣು ಸಮರ್ಪಣೆ ಮಾಡಿದರು.
