ಮಹದೇಶ್ವರ ಬೆಟ್ಟ
ಸ್ವಾಮಿಗಳಾದವರು ಸಮಾಜದಲ್ಲಿನ ಕಲ್ಮಶಗಳನ್ನು ಸ್ವಚ್ಛಗೊಳಿಸುವ ಕಾರ್ಯ ಮಾಡಬೇಕು, ಎಂದು ಪೂಜ್ಯ ಡಾ. ತೋಂಟದ ಸಿದ್ದರಾಮ ಸ್ವಾಮೀಜಿ ಹೇಳಿದರು.
ಇಲ್ಲಿನ ಸಾಲೂರು ಮಠದಲ್ಲಿ ಆಗಸ್ಟ್ ಎರಡರಿಂದ ನಾಲ್ಕರವರೆಗೆ ಹಮ್ಮಿಕೊಂಡಿದ್ದ ಮೈಸೂರು- ಚಾಮರಾಜನಗರ ವೀರಶೈವ-ಲಿಂಗಾಯತ ಮಠಾಧಿಪತಿಗಳ ಗೋಷ್ಠಿಯಲ್ಲಿ ಮಾತನಾಡಿದರು.
ಸಮಾಜ ಮತ್ತು ಮಠಾಧಿಪತಿಗಳ ಸಂಬಂಧವು ಮೀನು ಮತ್ತು ನೀರಿನಂತಿರಬೇಕು. ಮಠಾಧಿಪತಿಗಳು ಲಿಂಗಾಂಗ ಸಾಮರಸ್ಯ ದೊಂದಿಗೆ ಸಮಾಜ ಸೇವೆಯಲ್ಲಿಯೂ ತೊಡಗಿಸಿಕೊಳ್ಳಬೇಕು, ಎಂದು ತಿಳಿಸಿದರು.
ಹುಬ್ಬಳ್ಳಿ ಮೂರು ಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳು ಮಾತನಾಡಿ, ರಾಜ್ಯದ ಮೂಲೆ ಮೂಲೆಗಳಿಂದಲೂ ಮಠಾಧೀಶರುಗಳು 7ನೇ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ರುವುದು ವಿಶೇಷವಾಗಿದೆ ಎಂದರು.

ಮಂಟೇಸ್ವಾಮಿ ಪರಂಪರೆ
ಕಪ್ಪಡಿ ಮಂಟೇಸ್ವಾಮಿ ಮಠದ ಎಂ.ಎಲ್.ವರ್ಚಸ್ವಿ ಶ್ರೀಕಂಠಸಿದ್ಧಲಿಂಗರಾಜೇ ಅರಸ್ ಅವರು ಮಂಟೇಸ್ವಾಮಿ ಪರಂಪರೆಯ ಜೀವನ ಮತ್ತು ಸಾಹಿತ್ಯ ಕುರಿತು ಮಾತನಾಡಿದರು.
ಮಂಟೇಸ್ವಾಮಿ ಹಾಗೂ ಮಹದೇಶ್ವರರ ಸಮಕಾಲೀನರು ಎಂದು ನಂಬಲಾಗಿದೆ. ಮಂಟೇಸ್ವಾಮಿಗಳು ಐಕ್ಯರಾದ ಸಂದರ್ಭ ಮಹದೇಶ್ವರರು ಬೊಪ್ಪೇಗೌಡನಪುರಕ್ಕೆ ಬಂದಿದ್ದರು ಎಂಬ ಐತಿಹ್ಯವಿದೆ, ಮಂಟೇಸ್ವಾಮಿ ಪರಂಪರೆಯಲ್ಲೂ ವಚನಗಳನ್ನು ಕಾಣಬಹುದು. ಎಂದು ಅವರು ಹೇಳಿದರು.
ಮಂಟೇಸ್ವಾಮಿ ನೀಲಗಾರ ಪರಂಪರೆಗೆ ಸೇರಿದವರಾಗಿದ್ದು ಕೋಡೆಕಲ್ ಬಸವಣ್ಣನವರ ಶಿಷ್ಯರಾಗಿದ್ದರು. ಮಂಟೇಸ್ವಾಮಿ ಅವರ ಶಿಷ್ಯರಲ್ಲಿ ಸಿದ್ಧಪ್ಪಾಜಿ, ರಾಚಪ್ಪಾಜಿ ಪ್ರಮುಖರಾಗಿದ್ದಾರೆ. ದೊಡ್ಡಮ್ಮತಾಯಿಗೂ ಮಂಟೇಸ್ವಾಮಿ ಪರಂಪರೆಯಲ್ಲಿ ಮಹತ್ವದ ಸ್ಥಾನವಿದೆ.
ನೀಲಗಾರರು ಮಂಟೇಸ್ವಾಮಿ ಕಾವ್ಯವನ್ನು ಹೆಚ್ಚು ಪ್ರಚುರಪಡಿಸಿದರು. ನೀಲಗಾರರ ಪರಂಪರೆ ಜಾತ್ಯಾತೀತವಾದುದಾಗಿದ್ದು ದಾಸೋಹಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ, ಎಂದರು.

ನಿಜಗುಣ ಶಿವಯೋಗಿಗಳು
ವಿಚಾರ ಸಂಕಿರಣದಲ್ಲಿ ನಿಜಗುಣ ಶಿವಯೋಗಿಗಳ ಜೀವನ ಮತ್ತು ಸಾಹಿತ್ಯ ಕುರಿತು ಮಾತನಾಡಿದ
ವಿಶ್ರಾಂತ ಪ್ರಾಧ್ಯಾಪಕಿ ಡಾ.ಎಚ್.ಟಿ.ಶೈಲಜಾ ಶಿವಯೋಗಿಗಳು ಯಡಿಯೂರು ಸಿದ್ಧಲಿಂಗೇಶ್ವರರ
ಶಿವಯೋಗಿಗಳು ಸಿದ್ಧಲಿಂಗೇಶ್ವರರ ಒಡನಾಡಿಗಳಾಗಿದ್ದು ಅವರು ರಚಿಸಿರುವ 66 ವಚನಗಳಿಗೆ ಕನ್ನಡ ಸಾಹಿತ್ಯದಲ್ಲಿ ಮಹತ್ತರ ಸ್ಥಾನವಿದೆ. ಅವರ ವಚನಗಳು ತಾತ್ವಿಕ ಮತ್ತು ಸೈದ್ಧಾಂತಿಕ ನೆಲೆಗಟ್ಟಿನ ಮೇಲೆ ರಚನೆಯಾಗಿವೆ.
ವಿವೇಕ ಚಿಂತಾಮಣಿ, ಕೈವಲ್ಯಪದ್ಧತಿ, ಪರಮಾರ್ಥ ಪ್ರಕಾಶಿಕೆ, ಪರಮಾರ್ಥಗೀತೆ, ಅನುಭವಸಾರ, ಪರಮಾನುಭವ ಬೋಧೆ ಹಾಗೂ 63 ಪುರಾತನರ ತ್ರಿವಿಧದಂತಹ ಶ್ರೇಷ್ಠ ಗ್ರಂಥಗಳನ್ನು ರಚಿಸಿದ್ದಾರೆ ಎಂದರು.
ಕನ್ನಡಕ್ಕೆ ಸಾಹಿತ್ಯಕ್ಕೆ ನಿಜಗುಣ ಶಿವಯೋಗಿಗಳ ಕೊಡುಗೆ ಅಪಾರ ಎಂದು ಉಪ್ಪಿನ ಬೆಟಗೇರಿ ಮಠದ ಕುಮಾರ ವಿರೂಪಾಕ್ಷಸ್ವಾಮಿ ತಿಳಿಸಿದರು.

ಕೊಳ್ಳೇಗಾಲ ಪ್ರದೇಶದಲ್ಲಿ ರಾಜರಾಗಿದ್ದ ನಿಜಗುಣ ಶಿವಯೋಗಿಗಳು ಜೀವನದ ಬಗ್ಗೆ ವೈರಾಗ್ಯ ಹೊಂದಿ ಚಿಲಕವಾಡಿಯ ಶಂಭುಲಿಂಗ ಬೆಟ್ಟದಲ್ಲಿ ಹಲವು ವರ್ಷಗಳ ಕಾಲ ಸಾಧನೆಯಲ್ಲಿ ತೊಡಗಿಸಿಕೊಂಡರು, ಎಂದರು.
ಕಾರ್ಯಕ್ರಮದಲ್ಲಿ ನಾಡಿನ ಹಲವು ಮಠಗಳ ಶ್ರೀಗಳು ಭಾಗವಹಿಸಿದ್ದರು.
