ಹೊಸದುರ್ಗ ತಾಲೂಕಿನ ಕೆರೆಗಳಿಗೆ ಹರಿದ ಭದ್ರಾ ನೀರು; ಕಾರ್ಯಕ್ಕೆ ಚಾಲನೆ

ಹಂಚಿಕೊಂಡು ಊಟ ಮಾಡುವ ಉದಾರ ಸಂಸ್ಕೃತಿ ಶ್ರೇಷ್ಠ : ಸಾಣೇಹಳ್ಳಿ ಸ್ವಾಮೀಜಿ

ಸಾಣೇಹಳ್ಳಿ :

ದಶಕಗಳ ಕಾಲದ ರೈತರ ಸುದೀರ್ಘ ಹೋರಾಟ ಹಾಗೂ ಪ್ರಯತ್ನದ ಫಲವಾಗಿ ಹೊಸದುರ್ಗ ತಾಲೂಕಿನ ಸಾಣೇಹಳ್ಳಿ ಕೆರೆ ಸೇರಿದಂತೆ ಈ ಭಾಗದ ಕೆರೆಗಳಿಗೆ ನೀರು ಹರಿಸುವ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಣೇಹಳ್ಳಿ ಗ್ರಾಮದ ಬಳಿ ಗೇಟ್ (ರೆಗ್ಯುಲೇಟರ್) ಓಪನ್ ಮಾಡುವ ಮೂಲಕ ಚಾಲನೆ ನೀಡಲಾಯಿತು.

ಚಾಲನೆ ನೀಡಿ ಮಾತನಾಡಿದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು; ಕಳೆದ 30 ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ ನಡೆಯುತ್ತಿದ್ದ ನಿರಂತರ ಪ್ರಯತ್ನ ಹಾಗೂ ಹೋರಾಟಕ್ಕೆ ಇವತ್ತು ಸ್ವಲ್ಪ ಮಟ್ಟಿಗೆ ಫಲ ಸಿಕ್ಕಂತಾಗಿದೆ. ಈ ನೀರಾವರಿ ಯೋಜನೆಯು ಕೇವಲ ಹೊಸದುರ್ಗ ತಾಲೂಕಿಗೆ ಮಾತ್ರ ಸೀಮಿತವಾದದ್ದಲ್ಲ, ಶಾಸಕರು ಹೇಳಿದಂತೆ ಇದು ‘ಒಕ್ಕೂಟ ವ್ಯವಸ್ಥೆ’ಗೆ ಒಳಪಟ್ಟದ್ದು. ನಮ್ಮ ನಾಲ್ಕು ಜಿಲ್ಲೆಗಳಿಗೂ ಸೇರಿದ ನೀರಾಗಿದೆ. ‘ನನಗೆ ಬೇಕು, ನಿನಗೆ ಬೇಡ’ ಎಂದು ಹಠ ಮಾಡುವುದಕ್ಕಿಂತ, ಎಲ್ಲರೂ ಹಂಚಿಕೊಂಡು ಊಟ ಮಾಡುವ ಉದಾರ ಸಂಸ್ಕೃತಿ ಶ್ರೇಷ್ಠವಾದದ್ದು.

“ಮನುಷ್ಯ ದಿನದಿಂದ ದಿನಕ್ಕೆ ಸ್ವಾರ್ಥಿಯಾಗುತ್ತಿದ್ದಾನೆ. ‘ನನಗೆ ಮಾತ್ರ ಬೇಕು, ಬೇರೆಯವರು ಏನಾದರೂ ಆಗಲಿ’ ಎನ್ನುವ ಮನೋಭಾವ ಸರಿಯಲ್ಲ. ‘ಅವರೂ ಬದುಕಿದರೆ ಮಾತ್ರ ನಾನು ಬದುಕಲು ಸಾಧ್ಯ’ ಎಂಬ ಭಾವನೆ ಬೆಳೆಸಿಕೊಂಡಾಗ ಮಾತ್ರ ನೀರನ್ನು ಸರಿಯಾದ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳಲು ಸಾಧ್ಯ.

ಈ ನೀರಿನ ಶುಚಿತ್ವವನ್ನು ಪ್ರತಿಯೊಬ್ಬರೂ ಕಾಪಾಡಿಕೊಳ್ಳಬೇಕು. ಚಾನೆಲ್‌ನಲ್ಲಿ ಬಾಟಲಿಗಳು, ಕಸ-ಕಡ್ಡಿಗಳನ್ನು ಎಸೆಯುತ್ತಿರುವುದನ್ನು ಗಮನಿಸಿದ್ದೇವೆ. ಅದೇ ನೀರನ್ನು ನಾಳೆ ನಾವು ಕುಡಿಯಬೇಕಾಗುತ್ತದೆ. ಜೀವಜಲವಾದ ಈ ನೀರಿನ ಪವಿತ್ರತೆಯನ್ನು ಉಳಿಸಲು ಚಾನೆಲ್ ದಂಡೆಯಲ್ಲಿರುವ ಯಾವ ಹಳ್ಳಿಯ ಜನರೂ ಕಸವನ್ನು ಕಾಲುವೆಗೆ ಚೆಲ್ಲಬಾರದು.

ನಮಗೆ ಪ್ರಕೃತಿಯ ಐದು ಕೊಡುಗೆಗಳಾದ ಭೂಮಿ, ನೀರು, ಆಕಾಶ, ಗಾಳಿ ಮತ್ತು ಬೆಂಕಿ ಅತ್ಯಂತ ಮುಖ್ಯ. ಇವುಗಳಿಲ್ಲದೆ ಜೀವಸಂಕುಲ ಬದುಕಲು ಸಾಧ್ಯವಿಲ್ಲ. ನಾವು ಹೊರಗಡೆ ಎಷ್ಟೇ ಒಳ್ಳೆಯ ಬಟ್ಟೆ ಧರಿಸಿ ಸುಂದರವಾಗಿ ಕಂಡರೂ, ಕಲುಷಿತ ನೀರು-ಗಾಳಿಯಿಂದಾಗಿ ಒಳಗಿನ ಶರೀರದ ಅಂಗಾಂಗಗಳು ಹಾಳಾಗುತ್ತವೆ. ಆದ್ದರಿಂದ ಪರಿಸರ ಹಾಗೂ ನೀರಿನ ಶುದ್ಧತೆ ಅತ್ಯಗತ್ಯ.”

“ಬರಗಾಲದ ಬಿಸಿಲು ತಟ್ಟಿದಾಗ ಮೊದಲು ಸುಡುವುದು ರೈತನ ಹೃದಯ. ಬೆವರು ಸುರಿಸಿ ಬೆಳೆದ ಬೆಳೆ ಕಣ್ಣೆದುರೇ ಒಣಗಿದಾಗ ಆ ನೋವು ಹೇಳಲು ಪದಗಳೇ ಸಾಲದು. ಸಾಲದ ಭಾರ, ಬರದ ಮಳೆ ರೈತನ ಬದುಕನ್ನೇ ಕಣ್ಣೀರಾಗಿಸುತ್ತದೆ. ರೈತನ ಕಣ್ಣೀರಿನ ಬೆಲೆ ಅರಿತಾಗ ಮಾತ್ರ ಅನ್ನದ ಪ್ರತಿಯೊಂದು ಅಗಳಿನ ಬೆಲೆ ನಮಗೆ ತಿಳಿಯುತ್ತದೆ,” ಎಂದು ರೈತರ ಕಷ್ಟಕ್ಕೆ ಕರಗಿದರು.

“ದಾರಿಯಲ್ಲಿ ಬರುವಾಗ ನೋಡಿದೆವು, ನಾಲ್ಕು ಹನಿ ಮಳೆಯಾಯಿತು ಎಂದು ರೈತರು ರಾಗಿ, ಶೇಂಗಾ ಬಿತ್ತನೆ ಮಾಡಿದ್ದಾರೆ. ಆದರೆ ಮಳೆ ಇಲ್ಲದೆ ಬೆಳೆಗಳೆಲ್ಲ ಒಣಗಿಹೋಗಿವೆ. ಬರಗಾಲ ಬರೀ ಹೊಸದುರ್ಗಕ್ಕೆ ಬಂದಿಲ್ಲ; ಚಳ್ಳಕೆರೆ, ತುಮಕೂರು, ಕಡೂರು ಭಾಗದಲ್ಲೂ ಇದೇ ಪರಿಸ್ಥಿತಿ ಇದೆ. ಈ ವರ್ಷ ತುಂಬಾ ಕಷ್ಟದ ದಿನಗಳಿರುವುದರಿಂದ ಲಭ್ಯವಿರುವ ನೀರನ್ನು ಅತ್ಯಂತ ಮಿತವಾಗಿ ಹಾಗೂ ಎಚ್ಚರಿಕೆಯಿಂದ ಬಳಸಿಕೊಳ್ಳಬೇಕು.

ಪ್ರತಿಯೊಬ್ಬರಲ್ಲೂ ತಾಳ್ಮೆ ಇರಬೇಕು. ರೈತರು ಭೂಮಿ ಕಳೆದುಕೊಂಡಿದ್ದಾರೆ, ಅವರಿಗೆ ನೀರು ಸಿಗದಿದ್ದರೆ ವೇದನೆಯಾಗುತ್ತದೆ. ತಾಲೂಕಿನ ಎಲ್ಲಾ ಕೆರೆಗಳಿಗೂ ಕ್ರಮೇಣ ನೀರು ಬಿಡುವ ವ್ಯವಸ್ಥೆಯನ್ನು ಶಾಸಕರು ಮತ್ತು ಅಧಿಕಾರಿಗಳು ಮಾಡಬೇಕು. ರೈತನಿಗೆ ನೀರು, ಭೂಮಿ, ವಿದ್ಯುತ್ ಸರಿಯಾಗಿದ್ದರೆ ಸರ್ಕಾರಕ್ಕೆ ಸಾಲ ಕೊಡುವಷ್ಟು ಶಕ್ತನಾಗುತ್ತಾನೆ. ರೈತ ಬದುಕಿದರೆ ನಾವೆಲ್ಲರೂ ಬದುಕುತ್ತೇವೆ.

“ಈ ಬೃಹತ್ ಯೋಜನೆಗೆ ಹಿಂದಿನಿಂದಲೂ ಶ್ರಮಿಸಿದ ಮಹನೀಯರ, ದೈಹಿಕವಾಗಿ ದೂರವಾದವರ ಪರಿಶ್ರಮ ಅಪಾರ. ಪ್ರಸ್ತುತ ಈ ಯೋಜನೆಗೆ ಸ್ಪಂದಿಸಿದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಯಡಿಯೂರಪ್ಪ, ಈಗಿನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹಾಗೂ ನೀರಾವರಿ ಸಚಿವರಿಗೆ ಸಾರ್ವಜನಿಕರ ಪರವಾಗಿ ಸ್ವಾಮೀಜಿ ಧನ್ಯವಾದ ಹೇಳಿದರು.

ಜಾಕ್ ವೆಲ್ ಗೇಟ್ ತೆರೆಯುವುದರ ಮೂಲಕ ಚಾಲನೆ ನೀಡಿ ಮಾತನಾಡಿದ ಹೊಸದುರ್ಗ ಕ್ಷೇತ್ರ ಶಾಸಕ ಬಿ. ಜಿ. ಗೋವಿಂದಪ್ಪ “ಜನರ ಹಾಗೂ ರೈತರ ಕಷ್ಟಕ್ಕೆ ಸ್ಪಂದಿಸಿ, ನಮ್ಮೆಲ್ಲರ ಒತ್ತಡಕ್ಕೆ ಮಣಿದು ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು 3 ಟಿಎಂಸಿ ನೀರು ಹರಿಸಲು ಅನುಮತಿ ನೀಡಿದ್ದಾರೆ.

ಚಿತ್ರದುರ್ಗದ ಗೂಳಯ್ಯನ ಕೆರೆ ತಲುಪಿದ ತಕ್ಷಣವೇ ಹೊಸದುರ್ಗ ಭಾಗದ ನಾಲೆ ಹಾಗೂ ಕೆರೆಗಳಿಗೆ ನೀರು ಹರಿಸಲು ಕ್ರಮ ಕೈಗೊಳ್ಳಲಾಗಿದೆ.

ಇದು ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು ಹಾಗೂ ದಾವಣಗೆರೆ ಜಿಲ್ಲೆಗಳ 12 ತಾಲೂಕುಗಳಿಗೆ ಸೇರಿದ ಯೋಜನೆಯಾಗಿದೆ. ಒಕ್ಕೂಟ ವ್ಯವಸ್ಥೆಯ ಕಾನೂನು ಚೌಕಟ್ಟಿನಲ್ಲಿ ಪ್ರತಿಯೊಂದು ಕೆರೆಗೂ ನೀರು ತಲುಪಿಸುವ ಕೆಲಸವನ್ನು ಅಧಿಕಾರಿಗಳು ಮತ್ತು ನಾವು ಮಾಡುತ್ತೇವೆ. ಸಾರ್ವಜನಿಕರು ಯಾವುದೇ ರೀತಿಯ ಸುಳ್ಳು ಊಹಾಪೋಹಗಳಿಗೆ ಕಿವಿಗೊಡಬಾರದು,” ಎಂದು ಮನವಿ ಮಾಡಿದರು.

ನೀರಾವರಿ ಇಲಾಖೆಯ ಅಧಿಕಾರಿ ಸುರೇಶ ಪ್ರಾಸ್ತಾವಿಕವಾಗಿ ಮಾತನಾಡಿ, “ಹೊಸದುರ್ಗ ತಾಲೂಕಿನಲ್ಲಿ ಒಟ್ಟು 32 ಕೆರೆಗಳನ್ನು ತುಂಬಿಸುವ ಯೋಜನೆಯಿದು. ಇವತ್ತು ಸಾಣೇಹಳ್ಳಿಯ ‘1C’ ರೆಗ್ಯುಲೇಟರ್ ಎತ್ತುವುದರ ಮೂಲಕ ಪ್ರಥಮ ಹಂತದಲ್ಲಿ 19 ಕೆರೆಗಳಿಗೆ ನೀರು ಹರಿಯಲು ಚಾಲನೆ ನೀಡಲಾಗಿದೆ. ಮುಂದಿನ ಹಂತದಲ್ಲಿ ಮಾಡದಕೆರೆ ಹೋಬಳಿಯ ಜಾನಕಲ್ಲ, ಹೊಸದುರ್ಗ, ದೇವಪುರ ಸೇರಿದಂತೆ ಉಳಿದ ಕೆರೆಗಳಿಗೂ ನೀರು ಹರಿಸಲಾಗುತ್ತದೆ,” ಎಂದು ಯೋಜನೆಯ ತಾಂತ್ರಿಕ ವಿವರ ನೀಡಿದರು.

ಕಾರ್ಯಕ್ರಮದಲ್ಲಿ ಇಲಾಖೆಯ ಸೂಪರಿಂಟೆಂಡಿಂಗ್ ಎಂಜಿನಿಯರ್ (SE), ಎಕ್ಸಿಕ್ಯೂಟಿವ್ ಎಂಜಿನಿಯರ್ (EE), ಎ.ಇ.ಇ. ಸುರೇಶ, ಪ್ರಕಾಶ ಜನಪ್ರತಿನಿಧಿಗಳು, ಸ್ಥಳೀಯ ಮುಖಂಡರು ಹಾಗೂ ಸಾಣೇಹಳ್ಳಿ ಗ್ರಾಮಸ್ಥರು  ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Share This Article
Leave a comment

Leave a Reply

Your email address will not be published. Required fields are marked *