ಭಾಲ್ಕಿ
ಕಾಲೇಜಿನ ಅಭ್ಯಾಸಕ್ಕಾಗಿ ವಿದ್ಯಾರ್ಥಿಗಳು ಅರಮನೆಯಂತಹ ಕಟ್ಟಡಗಳಿಗೆ ಮಾರು ಹೋಗಿ ಪ್ರವೇಶ ಪಡೆಯದೆ, ಉತ್ತಮ ಸಂಸ್ಕಾರ, ಶಿಸ್ತುಭರಿತ ಶಿಕ್ಷಣ ನೀಡುವ ಕಾಲೇಜುಗಳಲ್ಲಿ ಪ್ರವೇಶ ಪಡೆದರೆ ಭವಿಷ್ಯ ಉಜ್ಜಲಗೊಳ್ಳುತ್ತದೆ. ಇಂತಹ ಶಿಕ್ಷಣ ನೀಡುತ್ತಿರುವ ಗುರುಕುಲ ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಸುದೈವಿಗಳು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನಕುಮಾರ ಹೇಳಿದರು.
ತಾಲ್ಲೂಕಿನ ಕರಡ್ಯಾಳದ ಶ್ರೀ ಚನ್ನಬಸವೇಶ್ವರ ಗುರುಕುಲ ವಿಜ್ಞಾನ ಪಿಯು ಕಾಲೇಜಿನ ಜೆಇಇ ಮೇನ್ಸ್, ಅಡ್ವಾನ್ಸ್ ಪರೀಕ್ಷೆಗಳಲ್ಲಿ ಮಹೋನ್ನತ ಸಾಧನೆಗೈದು ಪ್ರತಿಷ್ಠಿತ ಐಐಟಿ, ಎನ್ ಐಟಿ ಕಾಲೇಜುಗಳಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಿ ಅವರು ಮಾತನಾಡಿದರು.
ಕಠಿಣ ಪರಿಶ್ರಮದಿಂದ ಮಾತ್ರ ವಿದ್ಯಾರ್ಥಿಗಳು ತಮಗಿಷ್ಟವಾದ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆಗೈಯಲು ಸಾಧ್ಯವಿದೆ.
ಇಂದು ತಮ್ಮದೇ ಸ್ವಂತ ಕಾಲೇಜು, ಕೈ ತುಂಬಾ ಹಣವಿದ್ದರೂ ಸಹ ವಿದ್ಯಾರ್ಥಿಗಳಿಗೆ ಇಷ್ಟವಾದ ಸೀಟು, ಕಾಲೇಜು ಪಡೆಯಲು ಸಾಧ್ಯವಿಲ್ಲ. ಹಾಗಾಗಿ, ವಿದ್ಯಾರ್ಥಿಗಳು ಚೆನ್ನಾಗಿ ಅಭ್ಯಾಸಿಸಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅತ್ಯುತ್ತಮ ಸ್ಥಾನ, ಅರ್ಹತೆ ಪಡೆದು ಕೌನ್ಸೆಲಿಂಗ್ ಮೂಲಕವೇ ಸೀಟು ಪಡೆಯಬೇಕಾಗುತ್ತದೆ ಎಂದು ತಿಳಿಸಿದರು.
ಉತ್ತಮ ಸಾಧನೆಗೈಯಲು ವಿದ್ಯಾರ್ಥಿಗಳು ಯಾವತ್ತೂ ತಮ್ಮ ತಲೆಯಲ್ಲಿ ನಕಾರಾತ್ಮಕ ಆಲೋಚನೆಗಳನ್ನು ಬೆಳೆಯಲು ಆಸ್ಪದ ಕೊಡಬಾರದು. ಎರಡು ವರ್ಷದ ತಪಸ್ಸಿನ ಓದು ಸಾಮಾನ್ಯ ವಿದ್ಯಾರ್ಥಿಯನ್ನು ಕೂಡ ಅಸಾಮಾನ್ಯ ಸಾಧಕನನ್ನಾಗಿ ಪರಿವರ್ತಿಸುತ್ತದೆ ಎಂದು ಹೇಳಿದರು.

ಭಗವಂತ ಎಲ್ಲರಿಗೂ ಸಮಾನ ಪ್ರತಿಭೆಯನ್ನು ನೀಡಿದ್ದಾನೆ. ಹೆಚ್ಚು ಪರಿಶ್ರಮ ಪಡುವವರು ಉನ್ನತ ಸಾಧನೆ ಮಾಡುತ್ತಾರೆ. ಕಡಿಮೆ ಪರಿಶ್ರಮ ಪಡುವವರು ಜೀವನದಲ್ಲಿ ಹಿಂದೆ ಬೀಳುತ್ತಾರೆ.
ನಿಜಾಮನ ಕಾಲದಲ್ಲಿ ಹೊರಗಡೆ ಉರ್ದು ಬೋರ್ಡ್ ಹಾಕಿ ಒಳಗಡೆ ಕನ್ನಡವನ್ನು ಕಲಿಸಿರುವ ಚನ್ನಬಸವ ಪಟ್ಟದ್ದೇವರು, ಸಂತ ಶ್ರೇಷ್ಠರಾಗಿರುವ ಬಸವಲಿಂಗ ಪಟ್ಟದ್ದೇವರು ಸ್ಥಾಪಿಸಿರುವ ಕಾಲೇಜಿನಲ್ಲಿ ಅಭ್ಯಾಸ ಮಾಡಲು ವಿದ್ಯಾರ್ಥಿಗಳು ಪುಣ್ಯ ಮಾಡಿರಬೇಕು ಎಂದು ಬಣ್ಣಿಸಿದರು.
ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿ, ಹಿಂದುಳಿದ ನಮ್ಮ ಭಾಗವನ್ನು ನನ್ನ ಗುರುಗಳಾದ ಬಸವಲಿಂಗ ಪಟ್ಟದೇವರ ದೂರದೃಷ್ಟಿ, ಸತತ ಪ್ರಯತ್ನದ ಫಲವಾಗಿ ಶೈಕ್ಷಣಿಕವಾಗಿ ಮುಂದುವರೆದಿದೆ.
ಪೂಜ್ಯರು ಹಿರೇಮಠ ಸಂಸ್ಥಾನಕ್ಕೆ ವಿದ್ಯಾರ್ಥಿಯಾಗಿ ಬಂದಿದ್ದರು. ಅವರಿಗೆ ಜೀವನದಲ್ಲಿ ಶಿಕ್ಷಕರಾಗಬೇಕು ಎಂಬ ಆಸೆ ಇತ್ತು. ಲಿಂಗೈಕ್ಯ ಚೆನ್ನಬಸವ ಪಟ್ಟದ್ದೇವರ ಪೂಜ್ಯರಲ್ಲಿನ ಸೇವಾ ಮನೋಭಾವ, ಸದ್ಗುಣಗಳನ್ನು ನೋಡಿ ಹಿರೇಮಠ ಸಂಸ್ಥಾನಕ್ಕೆ ಪೀಠಾಧಿಪತಿಯನ್ನಾಗಿ ಮಾಡಿ ಸಮಾಜಕ್ಕೆ ದಾರಿ ತೋರುವ ಗುರುವನ್ನಾಗಿಸಿದರು ಎಂದು ತಿಳಿಸಿದರು.
ನಮ್ಮ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಪ್ರತಿಭೆಗೆ ಸೂಕ್ತ ಮಾರ್ಗದರ್ಶನ, ತರಬೇತಿ, ಪ್ರೋತ್ಸಾಹ ದೊರಕುತ್ತದೆ. ಇದರ ಫಲವಾಗಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ನೀಟ್, ಜೆಇಇ ಸೇರಿದಂತೆ ಇತರ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ತೋರುತ್ತಾರೆ. ಇವರ ಸಾಧನೆಯ ಶ್ರೇಯಸ್ಸು ನಮ್ಮ ಕಾಲೇಜಿನ ಸಿಬ್ಬಂದಿಗೆ ಸಲ್ಲಬೇಕು ಎಂದು ಹೇಳಿದರು.
ಭಗವಂತ ಕರುಣಿಸಿದ ಬದುಕನ್ನು ಅರ್ಥಪೂರ್ಣವನ್ನಾಗಿಸಲು ವಿದ್ಯಾರ್ಥಿಗಳು ಸದ್ಗುಣ, ಸದ್ವಿಚಾರ, ಸದ್ವರ್ತನೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಜೆಇಇ ಮೇನ್ಸ್, ಅಡ್ವಾನ್ಸ್ ಪರೀಕ್ಷೆಗಳಲ್ಲಿ ಅಮೋಘ ಸಾಧನೆಗೈದ 56 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನಕುಮಾರ ದಂಪತಿಯನ್ನು ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು.
ಮಹಾಲಿಂಗ ಸ್ವಾಮೀಜಿ, ಪ್ರಮುಖರಾದ ಚನ್ನಬಸವಣ್ಣ ಬಳತೆ, ಪ್ರಸನ್ನ ಖಂಡ್ರೆ, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ನಿಕಟಪೂರ್ವ ಅಧ್ಯಕ್ಷ ಶಶಿಧರ ಕೋಸಂಬೆ, ಜಯರಾಜ ಖಂಡ್ರೆ, ಸಿದ್ದಯ್ಯ ಕವಡಿಮಠ ಸೇರಿದಂತೆ ಇತರರು ಇದ್ದರು.
ಸಂಸ್ಥೆಯ ಆಡಳಿತಾಧಿಕಾರಿ ಮೋಹನರೆಡ್ಡಿ ಸ್ವಾಗತಿಸಿದರು. ಪ್ರಾಚಾರ್ಯ ಬಸವರಾಜ ಮೊಳಕೀರೆ ಪ್ರಾಸ್ತಾವಿಕ ಮಾತನಾಡಿದರು. ಮಧುಕರ ನಿರೂಪಿಸಿದರು. ಉಪ ಪ್ರಾಚಾರ್ಯ ಸಿದ್ರಾಮ ಗೊಗ್ಗಾ ವಂದಿಸಿದರು.

56 ವಿದ್ಯಾರ್ಥಿಗಳು IIT ಪ್ರವೇಶ ಪಡೆಯುತ್ತಿರುವುದು ಒಂದು ದಾಖಲೆ, ಹಿಂದುಳಿದ ಪ್ರದೇಶ ಎಂಬ ಹಣೆಪಟ್ಟಿ ಹೊತ್ತ ಭಾಗದಲ್ಲಿ ಇದು ಶೈಕ್ಷಣಿಕ ಕ್ರಾಂತಿ ಎಂದೇ ಕರೆಯಬಹುದು. ಪೂಜ್ಯರಿಗೆ ಶರಣು ಶರಣಾರ್ಥಿಗಳು