ಬಸವಣ್ಣನವರ ಅವಹೇಳನ ಮಾಡಿದವರಿಗೆ ಕಲ್ಯಾಣ ಪ್ರವೇಶವಿಲ್ಲ: ಗುರುಬಸವ ಪಟ್ಟದ್ದೇವರು

ಬಸವ ಮೀಡಿಯಾ
ಬಸವ ಮೀಡಿಯಾ

ಅನುಭವ ಮಂಟಪದಲ್ಲಿ ಪೂರ್ವಭಾವಿ ಸಭೆ.

ಔರಾದ:

ಬಸವಣ್ಣ ಹಾಗೂ ಬಸವಾದಿ ಶಿವಶರಣರನ್ನು ಅವಹೇಳನ ಮಾಡಿದವರನ್ನು ಬಸವಕಲ್ಯಾಣದಲ್ಲಿ ನಡೆಯಲಿರುವ ಬಸವ ಹಿಂದೂ ಸಮಾವೇಶಕ್ಕೆ ಬರಲು ಅವಕಾಶ ನೀಡುವುದಿಲ್ಲ ಎಂದು ಭಾಲ್ಕಿ ಹಿರೇಮಠ ಸಂಸ್ಥಾನದ ಪೂಜ್ಯ ಗುರುಬಸವ ಪಟ್ಟದ್ದೇವರು ಎಚ್ಚರಿಕೆ ನೀಡಿದರು.

ಶನಿವಾರ ಪಟ್ಟಣದ ಅನುಭವ ಮಂಟಪದಲ್ಲಿ ಜೂ. 28 ರಂದು ಕನ್ನೇರಿ ಶ್ರೀ ವಿರುದ್ಧ ನಡೆಯಲಿರುವ ಬೃಹತ್ ಪ್ರತಿಭಟನೆಯ ಪೂರ್ವಭಾವಿ ಸಭೆಯಲ್ಲಿ‌ ಮಾತನಾಡಿದರು.

ನಾವು ಹಿಂದೂ ಸಮಾವೇಶಕ್ಕೆ ವಿರೋಧಿಗಳಲ್ಲ. ಆದರೆ ಬಸವಣ್ಣನ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಕೊಲ್ಲಾಪುರದ ಕನ್ನೇರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿಗೆ ಕಲ್ಯಾಣ ನಾಡಿನಲ್ಲಿ ಸ್ಥಾನವಿಲ್ಲ ಎಂದು ಸ್ಪಷ್ಟಪಡಿಸಿದರು.

ಬಸವಾಭಿಮಾನಿಗಳು ಒಂದಾಗಿ ಬಸವತತ್ವದ ಗೌರವ ಕಾಪಾಡುವ ಸಮಯ ಬಂದಿದೆ. ಬಸವಣ್ಣನವರನ್ನು ಕೀಳಾಗಿ ಮಾತನಾಡಿದವರು ಬಸವ ಹಿಂದೂ ಸಮಾವೇಶ ನಡೆಸುವ ನೈತಿಕ ಹಕ್ಕನ್ನೇ ಕಳೆದುಕೊಂಡಿದ್ದಾರೆ ಎಂದು ಅವರು ಹೇಳಿದರು.

“ನಮ್ಮ ಧರ್ಮ ಲಿಂಗಾಯತ. ಭೌಗೋಳಿಕವಾಗಿ ನಾವು ಹಿಂದೂಗಳು. ಆದರೆ ಬಸವ ತತ್ವವನ್ನು ಅವಮಾನಿಸುವವರ ಬೆಂಬಲಕ್ಕೆ ನಿಲ್ಲುವುದು ಸರಿಯಲ್ಲ. ಜೂನ್ 28ರಂದು ಹೆಚ್ಚಿನ ಸಂಖ್ಯೆಯಲ್ಲಿ ಬಸವಾಭಿಮಾನಿಗಳು ಭಾಗವಹಿಸಿ ಬಸವ ತತ್ವದ ಪರವಾಗಿ ಒಗ್ಗಟ್ಟಿನ ಸಂದೇಶ ನೀಡಬೇಕು. ತಪ್ಪು ಅರಿತು ಕ್ಷಮೆ ಕೇಳಿ ಬಂದರೆ ಅವರನ್ನು ಸ್ವಾಗತಿಸುತ್ತೇವೆ” ಎಂದರು.

ಬಸವಕಲ್ಯಾಣ ಅನುಭವ ಮಂಟಪದ ಸಂಚಾಲಕರಾದ ಶಿವಾನಂದ ಮಹಾಸ್ವಾಮೀಜಿ ಮಾತನಾಡಿ, ಬಸವಣ್ಣ ಹಾಗೂ ಶಿವಶರಣರ ವಿರುದ್ಧದ ಅವಹೇಳನಕಾರಿ ಹೇಳಿಕೆಗಳನ್ನು ತೀವ್ರವಾಗಿ ಖಂಡಿಸಿದರು.

“ಜಗತ್ತಿಗೆ ಸಮಾನತೆ, ಮಾನವೀಯತೆ ಮತ್ತು ಶ್ರೇಷ್ಠ ಜೀವನ ಮೌಲ್ಯಗಳನ್ನು ಸಾರಿದವರು ಬಸವಾದಿ ಶಿವಶರಣರು. ಅವರ ಬಗ್ಗೆ ಅವಹೇಳನ ಮಾಡಿದವರನ್ನು ಸಮಾಜ ಕ್ಷಮಿಸುವುದಿಲ್ಲ. ಬಸವ ತತ್ವಕ್ಕೆ ಧಕ್ಕೆಯಾದಾಗ ಎಲ್ಲ ಬಸವಾಭಿಮಾನಿಗಳು ಒಂದಾಗಿ ಉತ್ತರ ನೀಡುತ್ತಾರೆ” ಎಂದು ಹೇಳಿದರು.

ಅನಿಲ ಮಹಾರಾಜರು ಮಾತನಾಡುತ್ತ, ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ಜಾತಿ-ಧರ್ಮದ ಭೇದವಿಲ್ಲದೆ ‘ಎಲ್ಲರೂ ನನ್ನವರು’ ಎಂಬ ಬಸವ ತತ್ವವನ್ನು ಬದುಕಿನಲ್ಲಿ ಅಳವಡಿಸಿಕೊಂಡವರು. ಎಲ್ಲ ಧರ್ಮದ ಜನರಿಗೆ ಲಿಂಗದೀಕ್ಷೆ ನೀಡಿ ಸಮಾನತೆಯ ಸಂದೇಶ ಸಾರಿದ್ದಾರೆ. ಬಂಜಾರ ಸಮುದಾಯದ ನನಗೂ ಲಿಂಗದೀಕ್ಷೆ ನೀಡಿರುವುದು ಅದಕ್ಕೆ ಸಾಕ್ಷಿ. ಇಂತಹ ಮಹನೀಯರು ಹಾಗೂ ಬಸವ ತತ್ವದ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿದರೆ ನಾವು ಎಂದಿಗೂ ಸುಮ್ಮನಿರುವುದಿಲ್ಲ ಎಂದರು.

ಸಭೆಯಲ್ಲಿ ಪ್ರಭುಲಿಂಗ ಮಹಾಸ್ವಾಮೀಜಿ, ಜಾಗತಿಕ ಲಿಂಗಾಯತ ಮಹಾಸಭೆಯ ಜಿಲ್ಲಾಧ್ಯಕ್ಷ ಬಸವರಾಜ ಧನ್ನೂರ, ಮನ್ಮಥ ಹುಗ್ಗೆ, ನಿವೃತ್ತ ಎಇಇ ಸಿದ್ದಯ್ಯ ಕವಡಿಮಠ, ಪ್ರಕಾಶ ಘೂಳೆ, ರವೀಂದ್ರ ಮೀಸೆ, ಬಂಡೆಪ್ಪ ಕಂಟೆ, ಡಾ. ಸಂಜೀವಕುಮಾರ‌ ಜುಮ್ಮಾ, ಮಲ್ಲಿಕಾರ್ಜುನ ಟಂಕಸಾಲೆ, ಸರುಬಾಯಿ ಘೂಳೆ, ಜಗನ್ನಾಥ ಮೂಲಗೆ, ಸಿದ್ರಾಮಪ್ಪ ನಿಡೋದೆ, ಮಾರುತಿ ಗಾದಗೆ, ಮಹಾದೇವ ಮುದ್ದಾ, ಚಂದ್ರಕಾಂತ ಘೂಳೆ, ನಾಗನಾಥ ಶಂಕು, ಸಂಜೀವಕುಮಾರ ವಲಾಂಡೆ, ಶರಣಪ್ಪ ನೌಬಾದೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಜೂನ್ 28ರಂದು ಬಸವಕಲ್ಯಾಣದಲ್ಲಿ ಬೃಹತ್ ಪ್ರತಿಭಟನೆ

ಬಸವ ಭಕ್ತರನ್ನು ‘ಬಸವ ತಾಲಿಬಾನಿಗಳು’ ಎಂದು ಅವಹೇಳನ ಮಾಡಿದ ಬಸವದ್ರೋಹಿ ಕನ್ನೇರಿ ಶ್ರೀಗಳ ಬಸವಕಲ್ಯಾಣ ಪ್ರವೇಶವನ್ನು ವಿರೋಧಿಸಿ ಜೂನ್ 28ರಂದು ಬಸವಕಲ್ಯಾಣದಲ್ಲಿ ಬೃಹತ್ ಪ್ರತಿಭಟನಾ ಹೋರಾಟ ಹಮ್ಮಿಕೊಳ್ಳಲಾಗಿದೆ.

ಈ ಪ್ರತಿಭಟನೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಜೊತೆಗೆ ಮಹಾರಾಷ್ಟ್ರ, ತೆಲಂಗಾಣ ಹಾಗೂ ಆಂಧ್ರಪ್ರದೇಶ ರಾಜ್ಯದಿಂದಲೂ ಸಾವಿರಾರು ಬಸವ ಭಕ್ತರು ಭಾಗವಹಿಸಲಿದ್ದಾರೆ. ಬಸವತತ್ವದ ಪರವಾಗಿ ನಮ್ಮ ಒಗ್ಗಟ್ಟು ಮತ್ತು ಶಕ್ತಿಯನ್ನು ಪ್ರದರ್ಶಿಸಲು ಎಲ್ಲ ಬಸವಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಬಸವಪರ ಸಂಘಟನೆಗಳು ಕೋರಿಕೊಂಡಿವೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HyjxiPYAeioCDGVqP9ADsE

Share This Article
2 Comments
  • ಜಯ ಬಸವ 👍🏻👏🏻👏🏻ಶರಣು 👏🏻👏🏻ನಿಮ್ಮ ಮತ ಮಾತುಗಳು ಬಸವ ನುಡಿಗಳಿಗೆ ನಮ್ಮ ಪೂರ್ಣ ಬೆಂಬಲ 🙏🏻🙏🏻

Leave a Reply

Your email address will not be published. Required fields are marked *