ಬಸವನಬಾಗೇವಾಡಿ
“ಇವನಾರವ ಇವನಾರವ ಎನ್ನದೆ ಇವನಮ್ಮವ ಇವನಮ್ಮವ ಎನ್ನಿರಯ್ಯ” ಎಂದು ಜಗತ್ತಿಗೆ ಸಮಾನತೆಯ ಸಂದೇಶ ಸಾರಿದ, ಪ್ರಜಾಪ್ರಭುತ್ವದ ಆದ್ಯಪ್ರವರ್ತಕ, ವಿಶ್ವಗುರು ಬಸವಣ್ಣನವರು ಜನಿಸಿದ ಪವಿತ್ರ ಭೂಮಿ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಆಗಿದೆ.
ಜಗತ್ತಿನಾದ್ಯಂತ ಬಸವ ತತ್ವದ ಬೆಳಕು ಪಸರಿಸಿದ್ದರೂ, ಆ ಸೂರ್ಯ ಹುಟ್ಟಿದ ನೆಲ ಮಾತ್ರ ಇಂದಿಗೂ ಸರ್ಕಾರದ ಸಾಂಸ್ಕೃತಿಕ ಮತ್ತು ಮೂಲಭೂತ ಸೌಕರ್ಯಗಳ ನಿರ್ಲಕ್ಷ್ಯಕ್ಕೆ ಒಳಗಾಗಿರುವುದು ಕೋಟ್ಯಂತರ ಬಸವ ಭಕ್ತರ ಮನಸ್ಸಿಗೆ ಆಳವಾದ ನೋವುಂಟು ಮಾಡಿದೆ.
ಹೋರಾಟದ ಹಾದಿ: ಶೂನ್ಯದಿಂದ ಪ್ರಾಧಿಕಾರದವರೆಗೆ
ಬಸವನಬಾಗೇವಾಡಿಯ ಇಂದಿನ ಸ್ವರೂಪವು ಕೇವಲ ಸರ್ಕಾರದ ಕೊಡುಗೆಯಲ್ಲ; ಬದಲಾಗಿ ಅದು ದಶಕಗಳ ಕಾಲ ನಡೆದ ಸತತ ಹೋರಾಟದ ಫಲ. ಕಳೆದ 20 ವರ್ಷಗಳಿಂದ ರಾಷ್ಟ್ರೀಯ ಬಸವಸೈನ್ಯ ಸಂಘಟನೆಯು ನಡೆಸಿದ ಅವಿರತ ಹೋರಾಟದ ಪರಿಣಾಮವಾಗಿ 2002 ರಲ್ಲಿ ಬಸವನಬಾಗೇವಾಡಿ ಕ್ಷೇತ್ರವು ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರ್ಪಡೆಗೊಂಡು, ಭವ್ಯವಾದ ಬಸವ ಜನ್ಮ ಸ್ಮಾರಕ ನಿರ್ಮಾಣವಾಯಿತು.
ಮುಂದೆ ಬಸವನಬಾಗೇವಾಡಿಯು ಪ್ರತ್ಯೇಕವಾಗಿ ಅಭಿವೃದ್ಧಿಯಾಗಬೇಕು ಎಂಬ ಬೇಡಿಕೆಯೊಂದಿಗೆ ನಡೆದ ಹೋರಾಟಕ್ಕೆ ಪೂರಕವಾಗಿ, ಮಾನ್ಯ ಸಚಿವರಾದ ಶಿವಾನಂದ ಪಾಟೀಲರ ವಿಶೇಷ ಕಾಳಜಿ ಮತ್ತು ಶ್ರಮದಿಂದ ಇಂದು ಸ್ವತಂತ್ರ ‘ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ’ ಅಸ್ತಿತ್ವಕ್ಕೆ ಬಂದಿದೆ. ಆದರೆ, ಕೇವಲ ಪ್ರಾಧಿಕಾರ ರಚನೆಯಾದರೆ ಸಾಲದು; ಅದಕ್ಕೆ ಬೇಕಾದ ಅನುದಾನ ಮತ್ತು ಸೌಲಭ್ಯಗಳ ವಿಚಾರದಲ್ಲಿ ಸರ್ಕಾರ ಇನ್ನೂ ಮೌನ ವಹಿಸಿರುವುದು ವಿಷಾದನೀಯ.
ಉತ್ಸವಗಳ ಪಟ್ಟಿಯಲ್ಲಿ ಬಾಗೇವಾಡಿಗೆ ಸ್ಥಾನವೆಲ್ಲಿ?
ರಾಜ್ಯ ಸರ್ಕಾರವು ಪ್ರತಿವರ್ಷ ಮೈಸೂರು ದಸರಾವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಆಚರಿಸುತ್ತದೆ. ಹಂಪಿ, ಬಾದಾಮಿ, ಲಕ್ಕುಂಡಿ, ಕದಂಬೋತ್ಸವಗಳಂತಹ ಸಾಂಸ್ಕೃತಿಕ ಹಬ್ಬಗಳು ಸಡಗರದಿಂದ ನಡೆಯುತ್ತವೆ. ಆದರೆ ಬಸವಣ್ಣನವರ ಜನ್ಮಸ್ಥಳದಲ್ಲಿ ಸರ್ಕಾರಿ ಪ್ರಾಯೋಜಿತ ಉತ್ಸವ ನಡೆಯುತ್ತಿಲ್ಲವೇಕೆ?
2002 ರಲ್ಲಿ ಅಂದಿನ ಸಚಿವ ಲಿಂಗೈಕ್ಯ ಬಿ. ಎಸ್. ಪಾಟೀಲ (ಸಾಸನೂರ) ಅವರು ಸರ್ಕಾರದ ಮೇಲೆ ಒತ್ತಡ ಹಾಕಿ ನಡೆಸಿದ್ದ ‘ವಚನ ಸಂಗೀತೋತ್ಸವ’ದ ನಂತರ ಯಾವುದೇ ಸರ್ಕಾರ ಇಂತಹ ಸಾಹಸಕ್ಕೆ ಕೈ ಹಾಕಿಲ್ಲ. ಬಸವ ಜಯಂತಿಯಂದು ಬಸವನಬಾಗೇವಾಡಿ ಉತ್ಸವವನ್ನು ಸರ್ಕಾರವೇ ಅಧಿಕೃತವಾಗಿ ಆಚರಿಸಬೇಕು ಎಂಬುದು ಜನರ ನ್ಯಾಯಯುತ ಆಗ್ರಹವಾಗಿದೆ.
ಮೂಲಭೂತ ಸೌಕರ್ಯಗಳ ಕೊರತೆ:
ಕೂಡಲಸಂಗಮ ಮತ್ತು ಬಸವಕಲ್ಯಾಣಕ್ಕೆ ನೀಡುವ ಆದ್ಯತೆಯನ್ನು ಸರ್ಕಾರ ಬಾಗೇವಾಡಿಗೆ ನೀಡುತ್ತಿಲ್ಲ ಎನ್ನುವುದು ಕಟು ಸತ್ಯ. ಇಲ್ಲಿಗೆ ಬರುವ ಪ್ರವಾಸಿಗರಿಗೆ ಮತ್ತು ಭಕ್ತರಿಗೆ ಕನಿಷ್ಠ ಸೌಲಭ್ಯಗಳೂ ಇಲ್ಲದಿರುವುದು ಶೋಚನೀಯ.
- ಭವ್ಯ ಯಾತ್ರಿ ನಿವಾಸ: ಬಸವೇಶ್ವರ ದೇವಸ್ಥಾನದ ಪಕ್ಕದಲ್ಲೇ ದೂರದ ಊರುಗಳಿಂದ ಬರುವ ಭಕ್ತರಿಗಾಗಿ ಅತ್ಯಾಧುನಿಕ ಸೌಲಭ್ಯವುಳ್ಳ ಭವ್ಯ ಯಾತ್ರಿ ನಿವಾಸ ನಿರ್ಮಾಣವಾಗಬೇಕು.
- ನಿರಂತರ ಅನ್ನದಾಸೋಹ: ಬಸವಣ್ಣನವರ ದಾಸೋಹ ತತ್ವದಂತೆ, ಬರುವ ಪ್ರತಿಯೊಬ್ಬ ಪ್ರವಾಸಿಗರಿಗೂ ದಿನದ 24 ಗಂಟೆಯೂ ನಿರಂತರ ಪ್ರಸಾದದ ವ್ಯವಸ್ಥೆ ಪ್ರಾಧಿಕಾರದ ವತಿಯಿಂದಲೇ ನಡೆಯಬೇಕು.
- ಪ್ರವಾಸೋದ್ಯಮಕ್ಕೆ ಉತ್ತೇಜನ: ಅಂತರಾಷ್ಟ್ರೀಯ ಪ್ರವಾಸಿಗರನ್ನು ಸೆಳೆಯಲು ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಇಲ್ಲಿ ಒಂದು ‘ಥ್ರೀ ಸ್ಟಾರ್’ ಹೋಟೆಲ್ ಪ್ರಾರಂಭಿಸುವುದು ತುರ್ತು ಅಗತ್ಯವಾಗಿದೆ.
- ದಕ್ಷ ಆಡಳಿತ: ಪ್ರಾಧಿಕಾರವು ಕೇವಲ ಹೆಸರಿಗೆ ಮಾತ್ರ ಇರಬಾರದು. ಅದರ ಕಾರ್ಯವೈಖರಿ ಚುರುಕಾಗಲು ಪ್ರಾಧಿಕಾರದ ಕಚೇರಿಯಲ್ಲಿ ಕನಿಷ್ಠ ‘ತಹಶೀಲ್ದಾರ್ ಗ್ರೇಡ್’ ದರ್ಜೆಯ ಅಧಿಕಾರಿಯನ್ನು ಕಾಯಂ ಆಗಿ ನೇಮಿಸಬೇಕು.
- ಬಸವೇಶ್ವರ ಪರಿಕಲ್ಪನೆಯ ಅನುಭವ ಮಂಟಪದ ಥೀಮ್ ಪಾರ್ಕ್ ನಿರ್ಮಾಣ ಮಾಡಬೇಕು.
ಮುಖ್ಯಮಂತ್ರಿಗಳಾದ ಮಾನ್ಯಶ್ರೀ ಸಿದ್ದರಾಮಯ್ಯನವರು ಕೇವಲ ಭಾಷಣದಲ್ಲಿ ಬಸವಣ್ಣನವರನ್ನು ಸ್ಮರಿಸಿದರೆ ಸಾಲದು, ಅದು ಕಾಯಕದಲ್ಲಿ ಸಾಬೀತಾಗಬೇಕು. ಕೂಡಲಸಂಗಮ-ಬಸವಕಲ್ಯಾಣದ ಮಾದರಿಯಲ್ಲೇ ಬಸವನಬಾಗೇವಾಡಿಗೂ ಸಮಾನ ಅನುದಾನ ಮತ್ತು ಗೌರವ ಸಿಗಬೇಕು. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆಸುವ ಉತ್ಸವಗಳಂತೆ ”ಬಸವನಬಾಗೇವಾಡಿ ಉತ್ಸವ”ವನ್ನು ಹಮ್ಮಿಕೊಳ್ಳುವ ಮೂಲಕ ಸರ್ಕಾರ ಬಸವಭಕ್ತರ ದಶಕಗಳ ಕನಸನ್ನು ನನಸು ಮಾಡಲೆಂಬುದು ನಮ್ಮ ಒತ್ತಾಯ.
