ಭಾಲ್ಕಿ:
ವಿಶ್ವಬಸವಧರ್ಮ ಟ್ರಸ್ಟ್ ಅನುಭವಮಂಟಪ ಬಸವಕಲ್ಯಾಣ ವತಿಯಿಂದ ಪ್ರಸಕ್ತ ಸಾಲಿನ ಡಾ. ಜಯದೇವಿತಾಯಿ ಲಿಗಾಡೆ ರಾಷ್ಟ್ರೀಯ ಪುರಸ್ಕಾರಕ್ಕೆ ಬೀದರನ ಹಿರಿಯ ಸಮಾಜ ಸೇವಕಿಯಾದ ಡಾ. ಗುರಮ್ಮ ಸಿದ್ದಾರೆಡ್ಡಿ ಅವರನ್ನು ಆಯ್ಕೆ ಮಾಡಲಾಗಿದೆ.
ಈ ಪುರಸ್ಕಾರವನ್ನು ಪೂಜ್ಯ ಡಾ. ಬಸವಲಿಂಗ ಪಟ್ಟದ್ದೇವರ ಸಾನಿಧ್ಯದಲ್ಲಿ ಜೂನ್ 30ರಂದು ಬಸವಕಲ್ಯಾಣದ ಅನುಭವಮಂಟಪದಲ್ಲಿ ಸಾಯಂಕಾಲ 5 ಗಂಟೆಗೆ ಪ್ರದಾನ ಮಾಡಲಾಗುವುದು ಎಂದು ವಿಶ್ವಬಸವಧರ್ಮ ಟ್ರಸ್ಟ್ ಅನುಭವಮಂಟಪದ ಕಾರ್ಯದರ್ಶಿಗಳಾದ ಡಾ.ಎಸ್.ಬಿ. ದುರ್ಗೆ ಅವರು ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
ಪ್ರಶಸ್ತಿ ಪುರಸ್ಕೃತರ ಪರಿಚಯ:
ಡಾ. ಗುರಮ್ಮ ಸಿದ್ದಾರೆಡ್ಡಿ ಅವರು ಬೀದರ ಜಿಲ್ಲೆಯಲ್ಲಿ ನಡೆಯುವ ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಮತ್ತು ಸಾಹಿತ್ಯಕ ಹಾಗೂ ವೈದ್ಯಕೀಯ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ.
ಭಾರತ ಸೌಟ್ಸ್ ಮತ್ತು ಗೈಡ್ಸ್ ಸಂಸ್ಥೆ, ಜಿಲ್ಲಾ ಆಯುಕ್ತರಾಗಿ ಸುದೀರ್ಘ ಕಾಲದಿಂದ ಸೇವೆ ಸಲ್ಲಿಸುತ್ತಿದ್ದಾರೆ. ರಾಷ್ಟ್ರೀಯ ಏಕತೆ, ಸಾಂಸ್ಕೃತಿಕ ಚಟುವಟಿಕೆಗಳು, ಕುಟುಂಬ ಯೋಜನೆ, ಕೈಗಾರಿಕೆ, ನ್ಯಾಯಾಂಗ ಸೇವೆ, ಅಂಗವಿಕಲರ ಪುನರ್‌ವಸತಿ ಮುಂತಾದ ಕ್ಷೇತ್ರಗಳಲ್ಲಿ ಇವರು ಸಲ್ಲಿಸುತ್ತಿರುವ ಸೇವೆ ಅಭಿನಂದನಾರ್ಹವಾಗಿದೆ.
ವಯಸ್ಕರ ಶಿಕ್ಷಣ ಹಾಗೂ ಆರೋಗ್ಯ ಮತ್ತು ಗ್ರಾಮೀಣ ಪ್ರದೇಶ ಅಭಿವೃದ್ಧಿಗಾಗಿ ವಿಶೇಷ ಕಾರ್ಯ ಮಾಡುತ್ತಿದ್ದಾರೆ. ಅನೇಕ ಸಂಘ ಸಂಸ್ಥೆಗಳನ್ನು ಸ್ಥಾಪಿಸಿ, ನಿರಂತರ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದಾರೆ.
ಗುರು-ಲಿಂಗ-ಜಂಗಮ ಪ್ರೇಮಿಗಳಾದ ದಾಸೋಹ ಭಾವವುಳ್ಳವರಾಗಿದ್ದಾರೆ. ಇವರ ಸಮಗ್ರ ಸೇವೆಯನ್ನು ಗುರುತಿಸಿ, ಪ್ರಸಕ್ತ ಸಾಲಿನ ಡಾ. ಜಯದೇವಿತಾಯಿ ಅಗಾಡೆ ರಾಷ್ಟ್ರೀಯ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HyjxiPYAeioCDGVqP9ADsE
