ಬಸವಾದಿ ಶರಣರ ಹೆಸರಿನ ಹಿಂದೂ ಸಮಾವೇಶಕ್ಕೆ ತೀವ್ರ ವಿರೋಧ

ಬಸವ ಮೀಡಿಯಾ
ಬಸವ ಮೀಡಿಯಾ

ಸಿಂಧನೂರು:

ಜೂನ್ 28ರಂದು ಬಸವಕಲ್ಯಾಣದಲ್ಲಿ ಕಾಡಸಿದ್ಧೇಶ್ವರಮಠದ ಕನ್ನೇರಿ ಸ್ವಾಮಿ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಬಸವಾದಿ ಶರಣರ ಹಿಂದೂ ಸಮಾವೇಶಕ್ಕೆ ಬಸವಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ರುದ್ರಪ್ಪ ಪಗಡದಿನ್ನಿ ಬಸವಾದಿ ಶರಣರು ಜಾತಿ, ಮತಭೇದಗಳನ್ನು ತೊಡೆದು ಹಾಕಿ, ಸಮಾನತೆಯ ಸಮಾಜವನ್ನು ಕಟ್ಟಲು ಪ್ರಯತ್ನಿಸಿದ್ದರು. ಆದರೆ ಕನ್ನೇರಿ ಸ್ವಾಮಿಗಳು ಶರಣರ ಸಿದ್ಧಾಂತವನ್ನೇ ಗಾಳಿಗೆ ತೂರಿ ಅವರ ಹೆಸರಿನಲ್ಲಿ ಹಿಂದೂ ಸಮಾವೇಶ ಮಾಡುವ ಮೂಲಕ ಶರಣರ ತತ್ವಗಳನ್ನು ಬಲಿಕೊಡಲು ಹೊರಟಿದ್ದಾರೆ.

ರಾಜ್ಯದ ಪ್ರತಿಯೊಂದು ಜಿಲ್ಲೆಗಳಿಂದ ಅವರ ಧೋರಣೆಯನ್ನು ಖಂಡಿಸಿ ಜೂನ್ 28 ರಂದು ಬಸವಕಲ್ಯಾಣಕ್ಕೆ ತೆರಳಿ ಶರಣರ ಹೆಸರಿನಲ್ಲಿ ನಡೆಯುವ ಹಿಂದೂ ಸಮಾವೇಶವನ್ನು ಪ್ರತಿಭಟಿಸುವುದಾಗಿ ಅವರು ತಿಳಿಸಿದರು.

ಪಟ್ಟಭದ್ರರ ಹಿತಾಸಕ್ತಿಗೆ ಬಲಿಯಾಗಿರುವ ಕನ್ನೇರಿ ಸ್ವಾಮಿಗಳು, ಸಂಸ್ಕಾರವನ್ನೇ ಮರೆತಿದ್ದಾರೆ. ಅಸಂವಿಧಾನಿಕ ಪದಗಳಿಂದ ಬಸವ ಪರಂಪರೆಯ ಮಠಾಧೀಶರನ್ನು ಮತ್ತು ಬಸವಾಭಿಮಾನಿಗಳನ್ನು ಮೂದಲಿಸುತ್ತಿದ್ದಾರೆ. ವೈಯಕ್ತಿಕವಾಗಿ ಅವರು ಯಾವುದೇ ಧರ್ಮವನ್ನು ಆಚರಿಸಲಿ, ಆದರೆ ಶರಣರ ಕ್ಷೇತ್ರಕ್ಕೆ ಬಂದು ಅವರ ಆಶಯಗಳಿಗೆ ವಿರುದ್ಧವಾದ ಕಾರ್ಯಕ್ರಮ ಮಾಡುವುದನ್ನು ತಾವು ವಿರೋಧಿಸುವುದಾಗಿ ತಿಳಿಸಿದರು.

ಬಸವ ಕೇಂದ್ರದ ಮುಖಂಡ ಬಸವಲಿಂಗಪ್ಪ ಬಾದರ್ಲಿ ಮಾತನಾಡಿ, ಬಸವಾದಿ ಶರಣರ ಹಿಂದೂ ಸಮಾವೇಶದ ಹಿಂದೆ ಆರ್.ಎಸ್.ಎಸ್. ನಾಟಕವಾಡುತ್ತಿದೆ. ಅವರೇ ಕಾರ್ಯಕ್ರಮದ ರೂವಾರಿಗಳಾಗಿದ್ದು, ತಮ್ಮ ಹೆಸರೇಳದೆ ಕನ್ನೇರಿಸ್ವಾಮಿ, ಚಲುವಾದಿ ನಾರಾಯಣಸ್ವಾಮಿ, ರಮೇಶ ಜಿಗಜಿಣಗಿ, ಬಸವರಾಜ ಪಾಟೀಲ ಯತ್ನಾಳ ಮತ್ತಿತರರ ಹೆಗಲ ಮೇಲೆ ಬಂದೂಕ ಇಟ್ಟು ಲಿಂಗಾಯತರ ಮೇಲೆ ಗುಂಡು ಹಾರಿಸುವ ಸಂಚು ನಡೆದಿದೆ.

ಲಿಂಗಾಯತರ ವಿರುದ್ಧ ಲಿಂಗಾಯತರನ್ನೇ ಛೂ ಬಿಟ್ಟು ಲಿಂಗಾಯತ ಧರ್ಮವನ್ನು ನಾಶ ಮಾಡುವ ಹುನ್ನಾರ ಆರ್.ಎಸ್.ಎಸ್. ಮುಖಂಡರದ್ದಾಗಿದೆ ಎಂದು ಟೀಕಿಸಿದರು.

ಕಾಂಗ್ರೆಸ್ ಸರ್ಕಾರ ಬಸವಣ್ಣನನ್ನು ಸಾಂಸ್ಕೃತಿಕ ನಾಯಕ ಘೋಷಣೆ ಮಾಡಿದ ಕಾರಣಕ್ಕಾಗಿ ಲಿಂಗಾಯತರು ಕಾಂಗ್ರೆಸ್‌ ಪರ ಹೋಗುತ್ತಾರೆನ್ನುವ ಭಯದಿಂದ ಆ‌ರ್. ಎಸ್.ಎಸ್. ಮತ್ತು ಬಿ.ಜೆ.ಪಿ. ಲಿಂಗಾಯತರನ್ನು ಒಡೆಯಲು ವಿವಿಧ ತಂತ್ರಗಳನ್ನು ಹೆಣೆಯುತ್ತಿದೆ ಎಂದು ಅವರು ಆಪಾದಿಸಿದರು.

ಬಸವ ಕೇಂದ್ರದ ಅಧ್ಯಕ್ಷ ಕರೇಗೌಡ ಕುರುಕುಂದಿ, ಬಸವ ಟ್ರಸ್ಟ್ ಅಧ್ಯಕ್ಷ ಕೆ. ಶರಣಪ್ಪ ಟೆಂಗಿನಕಾಯಿ, ಮುಖಂಡರಾದ ಚಂದ್ರೇಗೌಡ, ಬಸವರಾಜಪ್ಪ ಮತ್ತಿತರರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HyjxiPYAeioCDGVqP9ADsE

Share This Article
Leave a comment

Leave a Reply

Your email address will not be published. Required fields are marked *