ಧಾರವಾಡ :
ನಗರದ, ಸ್ವರಸೇನ ಪಂಡಿತ ಸಂಗಮೇಶ್ವರ ಗುರವ ಪ್ರತಿಷ್ಠಾನ ಇವರ ಆಶ್ರಯದಲ್ಲಿ ದಿನಾಂಕ ೭.೫.೨೦೨೬ ರಿಂದ ೧೫.೦೫.೨೦೨೬ ರವರೆಗೆ ಪ್ರತಿದಿನ ಸಂಜೆ ೪ ಘಂಟೆಯಿಂದ ೬ ಘಂಟೆಯವರೆಗೆ, ಸ್ವರಸೇನ ಪಂಡಿತ ಸಂಗಮೇಶ್ವರ ಗುರವ ಅವರ ೧೩ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ವಚನ ಗಾಯನ ತರಬೇತಿ ಶಿಬಿರವನ್ನು ಆರ್.ಎನ್. ಶೆಟ್ಟಿ ಕ್ರೀಡಾಂಗಣದ ಎದುರಿನ ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
೭ ರಂದು ಖ್ಯಾತ ಗಾಯಕರಾದ ಡಾ. ಮೃತ್ಯುಂಜಯ ಶೆಟ್ಟರ ಶಿಬಿರವನ್ನು ಉದ್ಘಾಟಿಸಲಿದ್ದು, ಡಾ. ಸುಪ್ರಿಯಾ ಮಲಶೆಟ್ಟಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ವಚನಗಳ ಮಹತ್ವದ ಕುರಿತು ಮಾತನಾಡಲಿದ್ದಾರೆ. ಟ್ರಸ್ಟ್ ಅಧ್ಯಕ್ಷರಾದ ಪ್ರೊ. ಶಶಿಧರ ತೋಡಕರ ಅವರು ಅದ್ಯಕ್ಷತೆ ವಹಿಸಲಿದ್ದಾರೆ.
ಖ್ಯಾತ ಹಿಂದೂಸ್ಥಾನಿ ಗಾಯಕ ಪಂಡಿತ ಕೈವಲ್ಯಕುಮಾರ ಗುರವ, ಡಾ. ಸುಮಿತ್ರಾ ಕಾಡದೇವರಮಠ, ಡಾ. ಜ್ಯೋತಿಲಕ್ಷ್ಮಿ ಡಿ.ಪಿ, ಪ್ರೊ. ಶಿವಲೀಲಾ ವೈಜನಾಥ, ವಿದುಷಿ ಸುಜಾತಾ ಗುರವ ಹಾಗೂ ಹಫಿಜಖಾನ್ ಅವರು ಶಿಬಿರವನ್ನು ನಡೆಸಿಕೊಡಲಿದ್ದಾರೆ.
ಪಂಡಿತ ನಂದಿಕೇಶ್ವರ ಗುರವ, ಮಲ್ಲೇಶ ಹೂಗಾರ ತಬಲಾ ಸಾಥ ನೀಡಲಿದ್ದಾರೆ. ಐದು ಪ್ರಮುಖ ವಚನಕಾರರ ವಚನಗಳನ್ನು ಆಯ್ಕೆ ಮಾಡಿಕೊಂಡು, ವಚನಗಳ ಸಾರದೊಂದಿಗೆ ಸ್ವರ, ಸಂಗೀತಕ್ಕೆ ಅಳವಡಿಸುವ ತರಬೇತಿಯನ್ನು ನೀಡಲಾಗುವುದು.
೧೫ರ ಸಂಜೆ ೪ ಘಂಟೆಗೆ ‘ವಚನ ಗಾಯನ ಸಮಾರೊಪ’ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ. ಲಿಂಗರಾಜ ಅಂಗಡಿಯವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದು, ತರಬೇತಿಯಲ್ಲಿ ಕೊನೆಯ ದಿನ ಸ್ಪರ್ಧೆಯಲ್ಲಿ ವಿಜೇತರಾದ ಶಿಬಿರಾರ್ಥಿಗಳಿಗೆ ಪಾಂಡುರಂಗ ನೀರಲಕೇರಿ ಅವರು ಪ್ರಶಸ್ತಿ ಪತ್ರ ಮತ್ತು ಬಹುಮಾನ ವಿತರಿಸಲಿದ್ದಾರೆ.
ಅಧ್ಯಕ್ಷತೆಯನ್ನು ಪ್ರತಿಷ್ಠಾನದ ಅಧ್ಯಕ್ಷರಾದ ಪ್ರೊ. ಶಶಿಧರ ತೋಡಕರ್ ವಹಿಸಲಿದ್ದಾರೆ. ತರಬೇತಿ ಶಿಬಿರದಲ್ಲಿ ಟ್ರಸ್ಟನ ಗೌರವಾಧ್ಯಕ್ಷರಾದ ಶಶಿ ಸಾಲಿ, ಸದಸ್ಯರಾದ ಪಂಡಿತ ಕೈವಲ್ಯಕುಮಾರ ಗುರವ ಭಾಗವಹಿಸಲಿದ್ದಾರೆ.
ಶಿಬಿರದಲ್ಲಿ ಭಾಗವಹಿಸಲು ವಿದುಷಿ ಸುಜಾತಾ ಗುರವ ಮೊ: ೯೦೬೦೮೮೭೫೭೫ಕ್ಕೆ ಸಂಪರ್ಕಿಸಿ ಹೆಸರು ನೊಂದಾಯಿಸಬೇಕೆಂದು ಟ್ರಸ್ಟ್ ಕಾರ್ಯದರ್ಶಿ ಪ್ರಕಾಶ ಬಾಳಿಕಾಯಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
