ದಾವಣಗೆರೆ:
ಇಲ್ಲಿನ ತರಳಬಾಳು ಬಡಾವಣೆಯ ಶಿವಕುಮಾರ ಸ್ವಾಮಿ ಮಹಾಮಂಟಪದಲ್ಲಿ ಈಚೆಗೆ ನಡೆದ ಶಿವಗೋಷ್ಠಿ ಸಮಿತಿಯ 333ನೇ ಶಿವಾನುಭವ ಗೋಷ್ಠಿಯಲ್ಲಿ ಹೊಳಲ್ಕೆರೆಯ ಕೊಟ್ರೆ ನಂಜಪ್ಪ ಪದವಿಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕ ಡಾ. ಜಿ.ವಿ. ಮಂಜುನಾಥ ಅವರು “ಲಿಂಗೈಕ್ಯ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಸಾಧನಾ ಪಥ”ವಿಷಯ ಕುರಿತು ಉಪನ್ಯಾಸ ನೀಡಿದರು.
ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಇಪ್ಪತ್ತನೆಯ ಜಗದ್ಗುರುಗಳಾಗಿದ್ದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು ಜಾತಿ, ಕುಲ, ಮತ ಮತ್ತು ಪಂಥಗಳ ಭೇದಗಳನ್ನು ಮೀರಿ ಮನುಷ್ಯನನ್ನು ಮೊದಲು ಮನುಷ್ಯನಾಗಿ ಕಾಣಬೇಕು ಎಂಬ ಬಸವತತ್ತ್ವವನ್ನು ಕೇವಲ ಬೋಧಿಸದೆ, ತಮ್ಮ ಬದುಕಿನ ಮೂಲಕ ಅನುಷ್ಠಾನಗೊಳಿಸಿದ ಮಹಾನ್ ಸಮಾಜಮುಖಿ ಸಂತರು ಎಂದು ಹೇಳಿದರು.
1946ರಲ್ಲಿ ಸಿರಿಗೆರೆಯಲ್ಲಿ ಪ್ರೌಢಶಾಲೆ ಮತ್ತು ಪ್ರಸಾದ ನಿಲಯವನ್ನು ಆರಂಭಿಸಿ, ಎಲ್ಲ ಜಾತಿ-ವರ್ಗಗಳ ವಿದ್ಯಾರ್ಥಿಗಳು ಒಂದೇ ಪಂಕ್ತಿಯಲ್ಲಿ ಕುಳಿತು ಊಟ ಮಾಡುವ ವ್ಯವಸ್ಥೆ ಮಾಡಿದ್ದು ಅಂದಿನ ಸಾಮಾಜಿಕ ಪರಿಸ್ಥಿತಿಯಲ್ಲಿ ಅತ್ಯಂತ ಕ್ರಾಂತಿಕಾರಕ ಹೆಜ್ಜೆಯಾಗಿತ್ತು. ಜಾತಿಯ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ಪ್ರತ್ಯೇಕಿಸುವ ಮನೋಭಾವದ ವಿರುದ್ಧ ನಿಂತು, ಸಹಪಂಕ್ತಿ ಭೋಜನದ ಮೂಲಕ ಸಮಾನತೆ ಮತ್ತು ಸಹೋದರತ್ವದ ಸಂದೇಶವನ್ನು ಅವರು ನೀಡಿದರು.

ದಲಿತರು ಹಾಗೂ ಸಾಮಾಜಿಕವಾಗಿ ಹಿಂದುಳಿದವರಿಗೆ ಶಿಕ್ಷಣ ಮತ್ತು ವಸತಿ ಸೌಲಭ್ಯ ಕಲ್ಪಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸಿದರು. ಹೆಣ್ಣುಮಕ್ಕಳ ಶಿಕ್ಷಣಕ್ಕೂ ವಿಶೇಷ ಆದ್ಯತೆ ನೀಡಿ ಗ್ರಾಮೀಣ ಪ್ರದೇಶಗಳಲ್ಲಿ ಪ್ರೌಢಶಾಲೆಗಳನ್ನು ಆರಂಭಿಸುವ ಮೂಲಕ ಮಹಿಳೆಯರ ಶೈಕ್ಷಣಿಕ ಮತ್ತು ಸಾಮಾಜಿಕ ಪ್ರಗತಿಗೆ ಭದ್ರ ಬುನಾದಿ ಹಾಕಿದರು.
ಜಗದ್ಗುರುಗಳವರ ಜಾತ್ಯತೀತ ದೃಷ್ಟಿಕೋನವು ಕೇವಲ ಸಹಪಂಕ್ತಿ ಭೋಜನಕ್ಕೆ ಸೀಮಿತವಾಗಿರಲಿಲ್ಲ. ಪ್ರತಿಯೊಬ್ಬ ಮನುಷ್ಯನನ್ನೂ ಸಮಾನ ಗೌರವದಿಂದ ಕಾಣಬೇಕು ಮತ್ತು ಅವರವರ ಧಾರ್ಮಿಕ ನಂಬಿಕೆಗಳಿಗೆ ಗೌರವ ನೀಡಬೇಕು ಎಂಬ ವಿಶಾಲ ಮಾನವೀಯ ದೃಷ್ಟಿಯನ್ನು ಅವರು ಹೊಂದಿದ್ದರು.
ಸಿರಿಗೆರೆಯ ಪ್ರಸಾದ ನಿಲಯದಲ್ಲಿ ವಿವಿಧ ಜಾತಿ ಮತ್ತು ಧರ್ಮಗಳಿಗೆ ಸೇರಿದ ವಿದ್ಯಾರ್ಥಿಗಳು ಒಟ್ಟಾಗಿ ವಾಸಿಸಿ ವಿದ್ಯಾಭ್ಯಾಸ ಮಾಡುವ ವಾತಾವರಣ ನಿರ್ಮಾಣವಾಗಿತ್ತು. ಮುಸ್ಲಿಂ ವಿದ್ಯಾರ್ಥಿಗಳು ತಮ್ಮ ಧಾರ್ಮಿಕ ಆಚರಣೆಯಂತೆ ನಮಾಜ್ ಮಾಡಲು ಅವಕಾಶ ಕಲ್ಪಿಸಲಾಗಿತ್ತು ಎಂಬ ಮಾಜಿ ಕೇಂದ್ರ ಸಚಿವ ಸಿ.ಎಂ. ಇಬ್ರಾಹಿಂ ಅವರ ಹೇಳಿಕೆಯೂ ಜಗದ್ಗುರುಗಳ ಧಾರ್ಮಿಕ ಸೌಹಾರ್ದದ ಮನೋಭಾವಕ್ಕೆ ಸಾಕ್ಷಿಯಾಗಿದೆ.
ಆದಿಜಾಂಬವ ಮಠದ ಜಗದ್ಗುರು ಶ್ರೀ ರುದ್ರಮುನಿ ಸ್ವಾಮಿಗಳ ಅಡ್ಡಪಲ್ಲಕ್ಕಿ ಮಹೋತ್ಸವವನ್ನು ತಮ್ಮ ಮಠದ ಆನೆ, ಕುದುರೆ ಮತ್ತು ಸಕಲ ಬಿರುದಾವಳಿಗಳೊಂದಿಗೆ ನಡೆಸುವಂತೆ ಮಾಡಿದ್ದು, ಭರಮಸಾಗರದಲ್ಲಿ ಮಸೀದಿ ಉದ್ಘಾಟನೆಯಲ್ಲಿ ಪಾಲ್ಗೊಂಡಿದ್ದು ಅವರ ವಿಶಾಲ ಧಾರ್ಮಿಕ ದೃಷ್ಟಿಯ ನಿದರ್ಶನಗಳಾಗಿವೆ.
ವ್ಯಕ್ತಿಯ ಜನ್ಮಕ್ಕಿಂತ ಅವನ ಗುಣ, ನಡತೆ ಮತ್ತು ಮಾನವೀಯತೆ ಮುಖ್ಯ ಎಂಬ ನಿಲುವನ್ನು ಅವರು ತಮ್ಮ ನಡೆ-ನುಡಿಗಳಲ್ಲಿ ವ್ಯಕ್ತಪಡಿಸಿದರು. ಜಾತೀಯತೆಯ ವಿರುದ್ಧ ಅವರು ತೆಗೆದುಕೊಂಡ ನಿಲುವು ಕೇವಲ ಭಾಷಣದ ಮಟ್ಟದಲ್ಲಿರದೆ, ಮಠದ ಆಡಳಿತ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿಯೂ ಸ್ಪಷ್ಟವಾಗಿ ಪ್ರತಿಬಿಂಬಿತವಾಗಿತ್ತು ಎಂದು ಡಾ. ಮಂಜುನಾಥ ವಿವರಿಸಿದರು.
ಶಿಕ್ಷಣವನ್ನು ಸಾಮಾಜಿಕ ಪರಿವರ್ತನೆಯ ಪ್ರಮುಖ ಸಾಧನವೆಂದು ಪರಿಗಣಿಸಿದ್ದ ಜಗದ್ಗುರುಗಳು ಬಡವರು, ದಲಿತರು ಮತ್ತು ಗ್ರಾಮೀಣ ಪ್ರದೇಶದ ಮಕ್ಕಳಿಗೆ ವಿದ್ಯಾಭ್ಯಾಸದ ಅವಕಾಶ ಕಲ್ಪಿಸುವುದರ ಮೂಲಕ ಅವರ ಬದುಕಿನಲ್ಲಿ ಹೊಸ ಭರವಸೆಯನ್ನು ಮೂಡಿಸಿದರು. ಬಸವಣ್ಣನವರ “ಜ್ಞಾನದ ಬಲದಿಂದ ಅಜ್ಞಾನದ ಕೇಡ ನೋಡಯ್ಯಾ”ಎಂಬ ವಚನದ ಆಶಯವನ್ನು ಕಾರ್ಯರೂಪಕ್ಕೆ ತಂದ ಅವರು, ಶಿಕ್ಷಣವು ಕೆಲವೇ ವರ್ಗಗಳ ಸ್ವತ್ತಾಗದೆ ಸಮಾಜದ ಪ್ರತಿಯೊಬ್ಬರಿಗೂ ದೊರೆಯಬೇಕು ಎಂಬ ನಿಲುವನ್ನು ಹೊಂದಿದ್ದರು.
ಶಿಕ್ಷಣದ ಮೂಲಕ ಸ್ವಾಭಿಮಾನ, ಸಮಾನತೆ ಮತ್ತು ಸಾಮಾಜಿಕ ಸಬಲೀಕರಣ ಸಾಧ್ಯ ಎಂಬುದನ್ನು ಅವರು ಅರಿತಿದ್ದರು. ಆದ್ದರಿಂದಲೇ ಮಠದ ಶಿಕ್ಷಣ ಸಂಸ್ಥೆಗಳು ಅನೇಕ ಬಡ ಮತ್ತು ಹಿಂದುಳಿದ ಕುಟುಂಬಗಳ ಮಕ್ಕಳಿಗೆ ಬದುಕಿನ ಹೊಸ ದಾರಿಯನ್ನು ತೆರೆದವು.
ಹೆಣ್ಣುಮಕ್ಕಳ ಶಿಕ್ಷಣಕ್ಕೆ ನೀಡಿದ ಆದ್ಯತೆಯೂ ಅವರ ದೂರದೃಷ್ಟಿಗೆ ಸಾಕ್ಷಿಯಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಪ್ರೌಢಶಾಲೆಗಳನ್ನು ಆರಂಭಿಸುವ ಮೂಲಕ ಹೆಣ್ಣುಮಕ್ಕಳು ಶಿಕ್ಷಣ ಪಡೆದು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಮುನ್ನಡೆಯಲು ಅವಕಾಶ ಕಲ್ಪಿಸಿದರು. ಈ ಕಾರ್ಯದಿಂದ ಗ್ರಾಮೀಣ ಮಹಿಳೆಯರು ಸಮಾಜದ ಪ್ರಮುಖ ವಾಹಿನಿಗೆ ಬರುವಂತಾಯಿತು. ಶಿಕ್ಷಣದ ಮೂಲಕ ಒಂದು ಪೀಳಿಗೆಯನ್ನಷ್ಟೇ ಅಲ್ಲ, ಮುಂದಿನ ಹಲವು ಪೀಳಿಗೆಗಳ ಸಾಮಾಜಿಕ ಸ್ಥಿತಿಯನ್ನೇ ಬದಲಾಯಿಸಬಹುದು ಎಂಬುದನ್ನು ಅವರ ಸಾಧನೆಗಳು ತೋರಿಸಿಕೊಟ್ಟಿವೆ ಎಂದರು.
ಶರಣ ಸಾಹಿತ್ಯ ಮತ್ತು ಬಸವತತ್ತ್ವದ ಪ್ರಸಾರಕ್ಕೂ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು ವಿಶೇಷ ಆದ್ಯತೆ ನೀಡಿದರು. ಶರಣರ ಜಯಂತಿಗಳು, ವಚನಗಾಯನ, ವಿಚಾರಗೋಷ್ಠಿಗಳು, ಸರ್ವಶರಣ ಸಮ್ಮೇಳನಗಳು ಮತ್ತು ಶಿವಾನುಭವ ಪ್ರವಾಸಗಳ ಮೂಲಕ ಶರಣರ ತತ್ತ್ವ, ವಚನ ಸಾಹಿತ್ಯ ಮತ್ತು ಸಾಮಾಜಿಕ ಸಂದೇಶಗಳನ್ನು ಜನಸಾಮಾನ್ಯರಿಗೆ ತಲುಪಿಸಿದರು.
‘ಶರಣಸತಿ ಲಿಂಗಪತಿ’, ‘ಮರಣವೇ ಮಹಾನವಮಿ’, ‘ವಿಶ್ವಬಂಧು ಮರುಳಸಿದ್ಧ’ಮೊದಲಾದ ನಾಟಕಗಳನ್ನು ರಾಜ್ಯದ ವಿವಿಧೆಡೆ ಮಾತ್ರವಲ್ಲದೆ ದೇಶದ ಹಲವು ಭಾಗಗಳಲ್ಲಿಯೂ ಪ್ರದರ್ಶಿಸುವ ಮೂಲಕ ಶರಣರ ವಿಚಾರಧಾರೆಯನ್ನು ಜನಮನಕ್ಕೆ ತಲುಪಿಸಿದರು.
ಅಕ್ಕಮಹಾದೇವಿಯವರ ಜನ್ಮಸ್ಥಳವಾದ ಉಡುತಡಿಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ “ಅಕ್ಕಮಹಾದೇವಿ ರಿಸರ್ವ್ ಲ್ಯಾಂಡ್”ರೂಪಿಸುವ ಪ್ರಯತ್ನ ನಡೆಸಿದರು. ವಿವಿಧ ಸಮುದಾಯಗಳ ನಡುವಿನ ಸಾಮಾಜಿಕ ಅಂತರವನ್ನು ಕಡಿಮೆ ಮಾಡಲು ಅಂತರ್ಜಾತಿ ಮತ್ತು ಅಂತರ್ಧರ್ಮೀಯ ವಿವಾಹಗಳಿಗೂ ಪ್ರೋತ್ಸಾಹ ನೀಡಿದರು. ಹೀಗೆ ಶಿಕ್ಷಣ, ಸಹಪಂಕ್ತಿ ಭೋಜನ, ಸಾಮಾಜಿಕ ಸಬಲೀಕರಣ, ಧಾರ್ಮಿಕ ಸೌಹಾರ್ದ, ಶರಣ ಸಾಹಿತ್ಯ ಪ್ರಸಾರ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಬಸವತತ್ತ್ವವನ್ನು ಜನಜೀವನದಲ್ಲಿ ಅಳವಡಿಸುವ ಪ್ರಯತ್ನ ಮಾಡಿದರು. ಅವರ ಜೀವನವು ಬಸವಣ್ಣನವರ ಸಮಾನತೆಯ ತತ್ತ್ವದ ಜೀವಂತ ವ್ಯಾಖ್ಯಾನದಂತಿತ್ತು ಎಂದು ಡಾ. ಮಂಜುನಾಥ ಹೇಳಿದರು.
ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಆಡಳಿತಾಧಿಕಾರಿಗಳಾದ ಡಾ. ಹೆಚ್.ವಿ. ವಾಮದೇವಪ್ಪ ಅವರು ಮಾತನಾಡಿ, ಲಿಂಗೈಕ್ಯ ಹಿರಿಯ ಜಗದ್ಗುರುಗಳು ಹೆಣ್ಣುಮಕ್ಕಳ ಶಿಕ್ಷಣಕ್ಕೆ ವಿಶೇಷ ಒತ್ತು ನೀಡಿ ಗ್ರಾಮೀಣ ಭಾಗಗಳಲ್ಲಿ ಪ್ರೌಢಶಾಲೆಗಳನ್ನು ಆರಂಭಿಸಿದರು. ಇದರ ಫಲವಾಗಿ ಗ್ರಾಮೀಣ ಪ್ರದೇಶದ ಅನೇಕ ಮಹಿಳೆಯರು ಶಿಕ್ಷಣ ಪಡೆದು ಸಮಾಜದ ಪ್ರಮುಖ ವಾಹಿನಿಗೆ ಬರುವಂತಾಯಿತು. ಶಿಕ್ಷಣದ ಮೂಲಕ ಸಾಮಾಜಿಕ ಪರಿವರ್ತನೆ ಸಾಧ್ಯ ಎಂಬುದನ್ನು ಹಿರಿಯ ಜಗದ್ಗುರುಗಳು ತಮ್ಮ ಕಾರ್ಯಗಳ ಮೂಲಕ ತೋರಿಸಿಕೊಟ್ಟರು ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ತರಳಬಾಳು ಸೇವಾ ಟ್ರಸ್ಟಿನ ಅಧ್ಯಕ್ಷರಾದ ಮಾಗನೂರು ಸಂಗಮೇಶ್ವರ ಗೌಡ ಅವರು ವಹಿಸಿ ಅಧ್ಯಕ್ಷೀಯ ನುಡಿಗಳನ್ನಾಡಿದರು.
ಕದಳಿ ಮಹಿಳಾ ವೇದಿಕೆಯವರು ಸುಶ್ರಾವ್ಯವಾಗಿ ವಚನ ಗಾಯನ ನಡೆಸಿಕೊಟ್ಟರು. ಬೆಳ್ಳೂಡಿಯ ಪಟೇಲ್ ಗುರುಬಸಪ್ಪ ಪ್ರೌಢಶಾಲೆಯ ಶಿಕ್ಷಕರು ಕಾರ್ಯಕ್ರಮವನ್ನು ನಿರ್ವಹಿಸಿದರು. ನಿವೃತ್ತ ಮುಖ್ಯೋಪಾಧ್ಯಾಯರಾದ ಶರಣ ಎಸ್.ಆರ್. ಶಿರಗಂಬಿ ಸೇರಿದಂತೆ ಹಲವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
