ಕಲಬುರಗಿ :
ಇತ್ತೀಚೆಗೆ ಗಂಗಾವತಿಯ ಸಭೆಯಲ್ಲಿ ಕನ್ನೇರಿ ಸ್ವಾಮಿ ಸಂವಿಧಾನದಲ್ಲಿ ಮನುಸ್ಮೃತಿ ಅಡಕವಾಗಿದೆ ಎಂದು ಹೇಳಿಕೆ ನೀಡಿರುವುದನ್ನು ಉಗ್ರವಾಗಿ ಖಂಡಿಸುತ್ತೇವೆ ಎಂದು ಜಾಗತಿಕ ಲಿಂಗಾಯತ ಮಹಾಸಭಾ ಕಲಬುರಗಿ ಘಟಕದ ಜಿಲ್ಲಾಧ್ಯಕ್ಷ ಆರ್.ಜಿ. ಶೆಟಗಾರ ತಿಳಿಸಿದರು.
ಕನ್ನೇರಿ ಸ್ವಾಮೀಜಿ ವಿವಾದಾತ್ಮಕ ಹೇಳಿಕೆ ನೀಡಿ ಸಮಾಜದಲ್ಲಿ ಶಾಂತಿ ಕದಡುವುದರೊಂದಿಗೆ ಸಾರ್ವಜನಿಕರ ಮನಸ್ಸಿಗೆ ಘಾಸಿಗೊಳಿಸುತ್ತಿದ್ದಾರೆ. ಸಂವಿಧಾನದ ಬಗ್ಗೆ ಅಧ್ಯಯನ ಮತ್ತು ಅರಿವು ಇಲ್ಲದೆ ಬೇಕಾಬಿಟ್ಟಿಯಾಗಿ ಹೇಳಿಕೆ ನೀಡಿರುವುದು ಕುಚೋದ್ಯದ ಕ್ರಮವಾಗಿದೆ ಎಂದು ಬುಧವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಭಾರತದ ಸಂವಿಧಾನದಲ್ಲಿ ಭಾರತದ ಪ್ರತಿಯೊಬ್ಬ ಪ್ರಜೆಗೆ ಸಮಾನ ಅವಕಾಶ ಮತ್ತು ತಮ್ಮ ಧರ್ಮದ ಆಚರಣೆಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಮನುಸ್ಮೃತಿ ವರ್ಣಾಶ್ರಮ, ವರ್ಗತಾರತಮ್ಯ ಬೋಧಿಸುತ್ತದೆ. ಸಂವಿಧಾದನಲ್ಲಿ
ಸರ್ವರಿಗೂ ಸಮಾನ ಅವಕಾಶ ಕಲ್ಪಿಸಿರುವಾಗ ಕನ್ನೇರಿ ಸ್ವಾಮೀಜಿ ಕುತಂತ್ರದ ಹೇಳಿಕೆ ನೀಡಿ ಸಂವಿಧಾನಕ್ಕೆ ಅವಮಾನಿಸುತ್ತಿರುವರು. ಇವರ ವಿರುದ್ಧ ಕಾನೂನಿನ ಕ್ರಮ ತೆಗೆದುಕೊಂಡು ರಾಷ್ಟ್ರದಿಂದ ಆಚೆಗೆ ಗಡಿಪಾರು ಮಾಡುವಂತೆ ಆಗ್ರಹಿಸಿದರು.
ಸಂವಿಧಾನಕ್ಕೆ ಅಪಮಾನ ಮಾಡಿದರೆ ಭಾರತಕ್ಕೆ ಅಪಮಾನ ಮಾಡಿದಂತೆ. ಹೀಗೆ ಅಸಂಬದ್ಧ ಮಾತುಗಳನ್ನು ಆಡುವುದಿದ್ದರೆ ಕಾವಿ ಬಿಚ್ಚಿ ರಾಜಕೀಯ ಪಕ್ಷ ಸೇರಬೇಕು. ಈ ಬಗ್ಗೆ ಸಭೆ ಸೇರಿ ಇವರ ವಿರುದ್ಧ ಕೈಗೊಳ್ಳಬೇಕಾದ ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಲಾಗುವುದು ಎಂದು ಶೆಟಗಾರ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಜೆ.ಎಲ್.ಎಂ. ಪ್ರಧಾನ ಕಾರ್ಯದರ್ಶಿ ಅಶೋಕ ಘೂಳಿ, ಮುಖಂಡರಾದ ಹಣಮಂತರಾವ ಪಾಟೀಲ, ಶಿವಶರಣಪ್ಪ ದೇಗಾಂವ ಇದ್ದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HhJYSZVofEgD6VIx5ufPBU
