ಬಸವಕಲ್ಯಾಣ:
‘ಬಸವಾ-ನುಯಾಯಿಗಳನ್ನು ಬಸವ ತಾಲಿಬಾನಿಗಳು ಎಂದು ಹೀಯಾಳಿಸಿದ ಕನ್ನೇರಿ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಅವರು ಆಯೋಜಿಸುತ್ತಿರುವ ಬಸವಾದಿ ಶರಣರ ಹಿಂದೂ ಸಮಾವೇಶಕ್ಕೆ ಪ್ರಬಲ ವಿರೋಧ ವ್ಯಕ್ತಪಡಿಸುವುದಕ್ಕಾಗಿ ಚರ್ಚಿಸುವುದಕ್ಕೆ ಜೂನ್ 12ರಂದು ನಗರದಲ್ಲಿ ಬೃಹತ್ ಸಭೆ ಆಯೋಜಿಸಲಾಗುತ್ತಿದೆ’ ಎಂದು ರಾಷ್ಟ್ರೀಯ ಬಸವದಳದ ರಾಜ್ಯ ಘಟಕದ ಅಧ್ಯಕ್ಷ ಬಸವರಾಜ ಪಾಟೀಲ ಶಿವಪುರ ಹೇಳಿದ್ದಾರೆ.
ಮಂಗಳವಾರ ಅವರು ಪ್ರಕಟಣೆ ನೀಡಿದ್ದು, ‘ಅಂದು ಮಧ್ಯಾಹ್ನ 1 ಗಂಟೆಗೆ ನಗರದ ಸಸ್ತಾಪುರ ರಸ್ತೆಯಲ್ಲಿನ ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯ ಸಭಾಂಗಣದಲ್ಲಿ ಸಭೆ ನಡೆಯಲಿದೆ. ರಾಜ್ಯದಾದ್ಯಂತ ಹಮ್ಮಿಕೊಂಡಿದ್ದ ಬಸವ ಸಂಸ್ಕೃತಿ ಯಾತ್ರೆ ಬಗ್ಗೆಯೂ ಕನ್ನೇರಿ ಸ್ವಾಮೀಜಿ ಅಪಸ್ವರ ಎತ್ತಿದ್ದರು.
ಹಿಂದೂ ಸಮಾವೇಶಕ್ಕೆ ವಿರೋಧವಿಲ್ಲ. ಆದರೆ, ಬಸವಾದಿ ಶಿವಶರಣರ ಹಿಂದೂ ಸಮಾವೇಶ ಎಂಬ ಹೆಸರಲ್ಲಿ ಸಮಾವೇಶ ಆಯೋಜಿಸುವುದ-ಕ್ಕೆ ನಮ್ಮ ಪ್ರಬಲ ವಿರೋಧವಿದೆ’ ಎಂದು ಹೇಳಿದ್ದಾರೆ.
‘ಕನ್ನೇರಿ ಸ್ವಾಮೀಜಿ ನಾಡಿನಾದ್ಯಂತ ಹಲವಾರು ಕಡೆಗಳಲ್ಲಿ ಇಂಥ ಸಮಾವೇಶಗಳನ್ನು ನಡೆಸಿ ಬಸವತತ್ವದ ಬಸವಾದಿ ಶಿವಶರಣರ ಸ್ವಾಮೀಜಿಗಳ ಬಗ್ಗೆ ಅಪಶಬ್ದ ಮಾತನಾಡುತ್ತಿದ್ದಾರೆ. ಕುರಿತಾಗಿ ಇಲ್ಲಸಲ್ಲದ ಕತೆ ಕಟ್ಟಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ವೈದಿಕಶಾಹಿ ಸಂಘಟನೆಗಳ ಕೈಗೊಂಬೆಯಾಗಿ ಅವರು ಶರಣ ಸಂಸ್ಕೃತಿಯ ವಿರುದ್ಧವಾಗಿ ವರ್ತಿಸುತ್ತಿದ್ದಾರೆ. ಆದ್ದರಿಂದ ಎಲ್ಲರೂ ಒಗ್ಗಟ್ಟಿನಿಂದ ಅವರ ವಿರುದ್ಧ ಪ್ರತಿಭಟಿಸಬೇಕಾಗಿದೆ’ ಎಂದರು.
‘ಶರಣತತ್ವಕ್ಕೆ ಚ್ಯುತಿ ಬರುವಂತೆ ಕನೇರಿ ಸ್ವಾಮೀಜಿ ನಡೆದುಕೊಳ್ಳುತ್ತಿರುವ ಕಾರಣ ಬಸವಣ್ಣನವರ ನಾಡಿನಲ್ಲಿ ಕಾರ್ಯಕ್ರಮ ಆಯೋಜಿಸುವುದಕ್ಕೆ ಅವರಿಗೆ ನೈತಿಕ ಹಕ್ಕು ಇಲ್ಲ. ಹೀಗಾಗಿ ಸ್ವಪ್ರತಿಷ್ಠೆ ಗುಂಪುಗಾರಿಕೆಗೆ ಬದಿಗಿಟ್ಟು, ಆಸ್ಪದ ನೀಡದೆ ಎಲ್ಲರೂ ಒಂದೇ ವೇದಿಕೆಗೆ ಬರಬೇಕಾಗಿದೆ. ಈ ಕಾರಣ ಜಿಲ್ಲೆಯ ಹಾಗೂ ತಾಲ್ಲೂಕಿನ ಎಲ್ಲ ಬಸವತತ್ವದ ಮಠಾಧೀಶರಿಗೆ, ಸಂಘ ಸಂಸ್ಥೆಯವರಿಗೆ, ಗಣ್ಯರಿಗೆ ಸಭೆಗೆ ಆಹ್ವಾನಿಸಲಾಗಿದೆ’ ಎಂದು ಅವರು ತಿಳಿಸಿದ್ದಾರೆ.
