‘ಪುಸ್ತಕಗಳು ಲಭ್ಯವಿರದ ಕಾಲದಲ್ಲಿ ಜನರಿಗೆ ವಚನ ಮುಟ್ಟಿಸಿದ ಸಂಗೀತ’

ಬಸವ ಮೀಡಿಯಾ
ಬಸವ ಮೀಡಿಯಾ

ಮೈಸೂರು

ಮುದ್ರಣ ತಂತ್ರಜ್ಞಾನ ಮತ್ತು ಪುಸ್ತಕಗಳು ಲಭ್ಯವಿರದ ಕಾಲದಲ್ಲಿ ಸಂಗೀತದ ಮೂಲಕ ವಚನಗಳು ಜನಮಾನಸದಲ್ಲಿ ನೆಲೆಯಾಯಿತು. ಸಂಗೀತಕ್ಕೆ ಸ್ವರ, ರಾಗ, ತಾಳ ಹಾಗೂ ಭಾವನೆಗಳ ಮೂಲಕ ಮನಸ್ಸನ್ನು ತಟ್ಟುವ ಶಕ್ತಿ ಇದೆ.

ಆದರೆ ಸಂಗೀತದ ಪ್ರಭಾವದಲ್ಲಿ ವಚನದ ಮೂಲ ಆಶಯ ಮರೆಯಾಗಬಾರದು ಎಂದು ಸಾಹಿತಿ ಪ್ರೊ.ಒ.ಎಲ್‌.ನಾಗಭೂಷಣ ಸ್ವಾಮಿ ಸಲಹೆ ನೀಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬಸವ ಬಳಗಗಳ ಒಕ್ಕೂಟ ಹಾಗೂ ಸುತ್ತೂರು ಮಠದ ಆಶ್ರಯದಲ್ಲಿ ಸುತ್ತೂರು ಮಠದ ಸಭಾಂಗಣದಲ್ಲಿ ಆಯೋಜಿಸಿರುವ ವಚನ ಸಂಗೀತ ಉತ್ಸವದಲ್ಲಿ ಶುಕ್ರವಾರ ಮಾತನಾಡಿದರು.

‘ವಚನಗಳನ್ನು ಕೇವಲ ವೇದಿಕೆಯಲ್ಲಿ ಹಾಡುವುದರಿಂದ ಅಥವಾ ಪುಸ್ತಕದಲ್ಲಿ ಓದುವುದರಿಂದ ಅದರ ಉದ್ದೇಶ ಈಡೇರುವುದಿಲ್ಲ. ಅವು ನಮ್ಮನ್ನು ಪ್ರಶ್ನಿಸಬೇಕು, ನಮ್ಮೊಳಗಿನ ಅಹಂಕಾರವನ್ನು ಗುರುತಿಸುವಂತೆ ಮಾಡಬೇಕು ಹಾಗೂ ನಮ್ಮ ನಡೆ- ನುಡಿಯಲ್ಲಿ ಬದಲಾವಣೆ ತರಬೇಕು. ವಚನವನ್ನು ಕೇವಲ ಕೇಳುವುದಲ್ಲ, ಬದುಕಬೇಕು’ ಎಂದರು.

ಆಲೂರು ಪ್ರಾಂಶುಪಾಲ ತಿಮ್ಮರಾಜು, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಪ್ರಾಧ್ಯಾಪಕಿ ಎನ್‌.ಕೆ.ಲೋಲಾಕ್ಷಿ, ಸಿದ್ದು ಯಾಪಲಪರವಿ ಮಾತನಾಡಿದರು.

ಕುಂದೂರು ಮಠದ ಡಾ. ಶರತ್‌ಚಂದ್ರ ಸ್ವಾಮೀಜಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕಿ ನಿರ್ಮಲಾ ಮಠಪತಿ, ಬಸವ ಬಳಗಗಳ ಒಕ್ಕೂಟದ ಅಧ್ಯಕ್ಷ ಎಂ.ಚಂದ್ರಶೇಖರ, ಶಾರದ ಶಿವಲಿಂಗಸ್ವಾಮಿ, ಧನ್ಯಾ ಸತ್ಯೇಂದ್ರ‌ಮೂರ್ತಿ ಭಾಗವಹಿಸಿದರು.

ಸಮಾರೋಪ ಸಮಾರಂಭ

ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಹಿರಿಯ ಸಾಹಿತಿ ಗೊ.ರು.ಚನ್ನಬಸಪ್ಪ
ವಚನಗಳು ಕೇವಲ ಸಾಹಿತ್ಯವಷ್ಟೇ ಅಲ್ಲ; ಅವು ಸಂಗೀತದ ವಸ್ತುವೂ ಹೌದು, ನೃತ್ಯದ ವಸ್ತುವೂ ಹೌದು, ರಂಗಭೂಮಿಯ ವಸ್ತುವೂ ಹೌದು ಎಂದು ಅಭಿಪ್ರಾಯಪಟ್ಟರು.

ಗಾಯನದ ಮೂಲಕ ವಚನಗಳು ಜನಮನ ತಲುಪಿಸಲು ಮಹನೀಯರ ಕೊಡುಗೆ ಅಪಾರ. ಅವರಿಂದ ವಚನ ಸಂಗೀತದ ಪರಂಪರೆ ಇನ್ನಷ್ಟು ಜನಪ್ರಿಯವಾಯಿತು ಎಂದು ತಿಳಿಸಿದರು.

ವಿಧಾನ ಪರಿಷತ್‌ ಸದಸ್ಯ ಆರ್‌.ರಘು ಕೌಟಿಲ್ಯ ಮಾತನಾಡಿ ಶರಣರ ಸಂದೇಶ ಇಂದಿಗೂ ಪ್ರಸ್ತುತವಾಗಿದೆ. ಮುಂದೆಯೂ ಇಡೀ ವಿಶ್ವಕ್ಕೆ ದಾರಿದೀಪವಾಗಬಲ್ಲದು ಎಂದು ತಿಳಿಸಿದರು.

ಚಿಂತಕ ಶಂಕರ ದೇವನೂರು ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕಿ ನಿರ್ಮಲಾ ಮಠಪತಿ, ಬಸವ ಬಳಗಗಳ ಒಕ್ಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್‌, ಸುಚಿತ್ರಾ ಹೆಗಡೆ, ಶಿವಕುಮಾರ್ ಹಾಜರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KwtAu0MkQzPIzsDZf3EOP6

Share This Article
2 Comments
  • ಇದೊಂದು ಮಹತ್ವವಾದ ಕಾರ್ಯಕ್ರಮ… ಆದರೆ ಕಾರ್ಯಕ್ರಮದ ಬಗ್ಗೆ ಸರಿಯಾಗಿ ಪ್ರಚಾರ ಮಾಡದ ಕಾರಣ ಈ ಕಾರ್ಯಕ್ರಮ ನಡೆದಿದೆ ಎಂದು ಎಷ್ಟೋ ಜನರಿಗೆ ಗೊತ್ತಾಗಿಲ್ಲ. ಆಯೋಜಕರು ಬಸವ ಪರ ಮತ್ತು ಇತರೆ ಸಂಘಟನೆಗಳ ಜೊತೆ ಸೇರಿ ವ್ಯಾಪಕ ಪ್ರಚಾರ ಮಾಡಬೇಕಾಗಿತ್ತು.. ಕಾರ್ಯಕ್ರಮ ವಿನೂತನವಾಗಿ ಚನ್ನಾಗಿತ್ತು

Leave a Reply

Your email address will not be published. Required fields are marked *