(ಇಂದು ಹರ್ಡೇಕರ ಮಂಜಪ್ಪನವರ ಜಯಂತಿ ನಿಮಿತ್ಯ ಲೇಖನ)
ಶರಣ ಹರ್ಡೇಕರ ಮಂಜಪ್ಪನವರು ಕರ್ನಾಟಕದಲ್ಲಿ ಆಗಿ ಹೋದ ಮಹಾಪುರುಷರು ಹಾಗೂ ಪುಣ್ಯಪುರುಷರಲ್ಲಿ ಒಬ್ಬರಾಗಿದ್ದಾರೆ.
ಕನ್ನಡ ನಾಡಿನ ಮೊಟ್ಟ ಮೊದಲ ಸಾಮ್ರಾಜ್ಯ ಕದಂಬ ರಾಜ್ಯದ ಸ್ಥಾಪಕ ಮಯೂರು ವರ್ಮನ ರಾಜಧಾನಿ ಬನವಾಸಿಯ ಸಾಮಾನ್ಯ ಕುಟುಂಬದಲ್ಲಿ ದಿನಾಂಕ ೧೮-೨-೧೮೮೬ ರಂದು ಜನಿಸಿದರು. ಪ್ರಾಥಮಿಕ ಶಿಕ್ಷಣಣವನ್ನು ಬನವಾಸಿಯಲ್ಲಿ ಮುಲ್ಕಿ ಪರೀಕ್ಷೆ ಪಾಸಾಗಿದ್ದು ಶಿರ್ಶಿಯಲ್ಲಿ ಮುಗಿಸಿದರು.
೧೯೦೩ ರಲ್ಲಿ ಮುಲ್ಕಿ ಪರೀಕ್ಷೆ ಪಾಸಾದ ನಂತರ ತಾವು ಕಲಿತ ಶಾಲೆಯಲ್ಲಿಯೇ ಶಿಕ್ಷಕರಾದರು. ಉತ್ತಮ ಶಿಕ್ಷಕರೆಂದು ಪ್ರಸಿದ್ಧ ಪಡೆದರು. ಮಕ್ಕಳಿಗೆ ಕವಾಯತ, ಶಿಸ್ತು ಕಲಿಸುತ್ತಾ ಮಕ್ಕಳ ಸಾಹಿತ್ಯ ರಚಿಸುವ ಮೂಲಕ ಮಕ್ಕಳ ಸಾಹಿತಿಗಳಾದರು. ಕೆಲವೇ ದಿನಗಳಲ್ಲಿ ಶಿಕ್ಷಕ ವೃತ್ತಿಗೆ ರಾಜಿನಾಮೆ ನೀಡಿ, ಪತ್ರಿಕಾರಂಗವನ್ನು ಪ್ರವೇಶಿಸಿದರು. ಸನ್ ೧೯೦೬ ರಲ್ಲಿ `ಧನುರ್ದಾರಿ’ ಎಂಬ ವಾರ ಪತ್ರಿಕೆ ಪ್ರಾರಂಭಿಸಿದರು.
ಇದರ ಮೂಲಕ ಭಾರತದಲ್ಲಿ ಸ್ವಾತಂತ್ರ‍್ಯ ಪ್ರಾಪ್ತಿಗಾಗಿ ಹೋರಾಡುವ ಕಲಿತನ ಮತ್ತು ಜನರ ಅಜ್ಞಾನ, ಮೂಢನಂಬಿಕೆಯಿಂದ ಜನರನ್ನು ಮುಕ್ತಗೊಳಿಸುವ ಸಾಮಾಜಿಕ ಚಿಂತನೆ ಪತ್ರಿಕೆಗಳಲ್ಲಿ ಬರೆಯುತ್ತಿದ್ದರು. ೧೯೨೮ ರಲ್ಲಿ ಖಾದಿ ವಿಜಯ', ೧೯೩೦ ರಲ್ಲಿ ಉದ್ಯೋಗ ಮಾಸಪತ್ರಿಕೆ, ೧೯೩೧ ರಲ್ಲಿ
ಶರಣ ಸಂದೇಶ’ ವಾರ ಪತ್ರಿಕೆ ಪ್ರಕಾಶನಗೊಳಿಸಿದರು. ಲಿಂಗಾಯತ ಸಮಾಜಕ್ಕೆ ಬಸವಾದಿ ಶಿವಶರಣರ ತತ್ವಸಂದೇಶಗಳನ್ನು “ಶರಣ ಸಂದೇಶ” ಪತ್ರಿಕೆಯ ಮೂಲಕ ಪ್ರಕಟಿಸುತ್ತಾ ಲಿಂಗಾಯತ ಸಮಾಜಕ್ಕೆ ತಾತ್ವಿಕ ನೆಲೆಗಟ್ಟನ್ನು ಒದಗಿಸಿದವರು ಮಂಜಪ್ಪನವರು, ಅಂತೆಯೇ ಅವರನ್ನು ಧೀಮಂತ ಪತ್ರಕರ್ತರೆಂದು ಕರೆಯುತ್ತಾರೆ.

ಕರ್ನಾಟಕ ಗಾಂಧೀ ಎನಿಸಿಕೊಂಡ ಹರ್ಡೇಕರ ಮಂಜಪ್ಪನವರು ಮಹಾತ್ಮಾ ಗಾಂಧೀಜಿಯವರ ಒಡನಾಡಿಯಾಗಿದ್ದರು. ೧೯೨೪ ರಂದು ಬೆಳಗಾವಿಯಲ್ಲಿ ಜರುಗಿದ ಕಾಂಗ್ರೆಸ್ ಅಧಿವೇಶನದ ಇತಿಹಾಸ ಸಂದರ್ಭದಲ್ಲಿ ಗಾಂಧೀಜಿಯವರೊಡನೆ ಮಂಜಪ್ಪನವರು ಸಂಚರಿಸಿದರು. ಅಸ್ಪೃಶ್ಯತಾ ನಿವಾರಣೆಯ ಉದ್ಧೇಶದಿಂದ ಕೈಕೊಳ್ಳಾದ ಈ ಪ್ರವಾಸದ ಸಂದರ್ಭದಲ್ಲಿ ಮಂಜಪ್ಪನವರು ೧೨ ನೇ ಶತಮಾನದಲ್ಲಿ ಬಸವಣ್ಣನವರು ಸಾಧಿಸಿದ ಅಸ್ಪೃಶ್ಯತಾ ನಿವಾರಣೆ, ಜಾತ್ಯಾತೀತ ಸಮಾಜ ಸ್ಥಾಪನೆ ಬಗ್ಗೆ ವಿವರಿಸಿದಾಗ ಗಾಂಧೀಜಿಯವರು ಬಸವಣ್ಣನವರ ಮಾನವೀಯ ಕಾರ್ಯಗಳನ್ನು ಮುಕ್ತ ಮನಸ್ಸಿನಿಂದ ಒಪ್ಪಿ ಪ್ರಶಂಸಿಸಿದರು.
ಇದೇ ಸಂದರ್ಭದಲ್ಲಿ ಮಂಜಪ್ಪನವರು ಮೊಟ್ಟಮೊದಲು “ಬಸವೇಶ್ವರ ಸೇವಾದಳ” ಎಂಬ ಸ್ವಯಂ ಸೇವಾಪಡೆಯನ್ನು ಕಟ್ಟಿಕೊಂಡು ಬಂದು ಸ್ವಯಂ ಸೇವಕರ ತಂಡದೊಂದಿಗೆ ಸೇವೆಯನ್ನು ಮಾಡಿದರು. ಮಂಜಪ್ಪನರ ಬದುಕು-ಬರಹ-ಸಿದ್ಧಾಂತ-ಆಚರಣೆ-ಆದರ್ಶ ಎಲ್ಲವೂ ಗಾಂಧೀಜಿಯವರಂತೆ ಇದ್ದವು. ಇದನ್ನೆಲ್ಲ ನೋಡಿದಂತಹ ಬೆಳಗಾವಿಯ ಶ್ರೀ ಗಂಗಾಧರರಾವ ದೇಶಪಾಂಡೆಯವರು ಮಂಜಪ್ಪನವರನ್ನು `ಕರ್ನಾಟಕ ಗಾಂಧೀ’ ಎಂದು ಸಂಬೋಧಿಸಿ ಗೌರವಿಸಿದ್ದಾರೆ.
ಕರ್ನಾಟಕ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವಣ್ಣನವರ ಒಂದು ವಚನ “ದಾಸೀಪುತ್ರನಾಗಲಿ, ವೇಶ್ಯಾಪುತ್ರನಾಗಲಿ, ಶಿವದೀಕ್ಷೆಯಾದ ಬಳಿಕ ಸಾಕ್ಷಾತು ಶಿವನೆಂದು ವಂದಿಸಿ, ಪೂಜಿಸಿ, ಪಾದೋದಕ ಪ್ರಸಾದ ಕೊಂಬುದೆ ಯೋಗ್ಯ. ಹೀಗಲ್ಲದೆ ಉದಾಸಿನವ ಮಾಡಿ ಬಿಡುವವರಿಗೆ ಪಂಚಮಹಾಪಾತಕ ನರಕ ಕಾಣಾ, ಕೂಡಲಸಂಗಮದೇವಾ” ಎಂಬ ವಚನದಿಂದ ಪ್ರಭಾವಿತರಾದ ಮಂಜಪ್ಪನವರು ಬಸವತತ್ವಕ್ಕೆ ಬಂದರು. ಇದೇ ವೇಳೆಯಲ್ಲಿ ದಾವಣಗೆರೆ ವಿರಕ್ತಮಠದ ಪೂಜ್ಯ ಮೃತ್ಯುಂಜಯ ಸ್ವಾಮಿಗಳು ಹಾಗೂ ಅನೇಕ ಹಿರಿಯರು ಮಂಜಪ್ಪನವರ ವಿಚಾರಗಳಿಗೆ ಬೆಂಬಲವನ್ನಿತ್ತರು.
ಇದರ ಪರಿಣಾಮದಿಂದ ೧೯೧೧ ರಲ್ಲಿ ಭಜನಾ ಸಂಘ' ಸ್ಥಾಪನೆ,
ಶ್ರಾವಣ ಮಾಸೋಪನ್ಯಾಸಮಾಲೆ’ ಪ್ರಾರಂಭ. ೧೯೧೩ ರಲ್ಲಿ ಪ್ರಪ್ರಥಮ `ಬಸವ ಜಯಂತಿ’ ಆರಂಭಿಸಿದ ಕೀರ್ತಿ ಮಂಜಪ್ಪನವರಿಗೆ ಸಲ್ಲುತ್ತದೆ.
ಅದೇ ರೀತಿ ಸ್ತ್ರೀಯರಲ್ಲಿ ಜಾಗ್ರತೆ ಮೂಡಿಸಲು `ಅಕ್ಕಮಹಾದೇವಿ ಜಯಂತಿ'' ಪ್ರಾರಂಭಿಸಿ ಅಕ್ಕಮಹಾದೇವಿಯ ಜೀವನ ಆದರ್ಶನಗಳನ್ನು, ವಚನಗಳ ಸಂದೇಶ ಕುರಿತಾದ ಲೇಖನಗಳನ್ನು ಪ್ರಕಟಿಸಿದರು. ಪುರಷರಷ್ಟೇ-ಸ್ತ್ರೀ ಸಮಾನಳು ಎಂಬ ವಿಚಾರಗಳು ಬೆಳೆದು
ಅಕ್ಕನ ಬಳಗ’ ಹುಟ್ಟಿಕೊಳ್ಳಲು ಕಾರಣವಾಯಿತು. ಶರಣ ಸಾಹಿತ್ಯ ರಚನೆ, ಪ್ರಕಟಣೆ, ಪ್ರಚಾರ ಮಾಡತೊಡಗಿದರು. ಇದರಿಂದ ತಮ್ಮನ್ನು ತಾವು ಸಮಾಜ ಸೇವೆಗೆ ಅರ್ಪಿಸಿಕೊಂಡರು.
ಹರ್ಡೇಕರ ಮಂಜಪ್ಪನವರು ೧೯೨೬ ರಲ್ಲಿ ವಿಜಯಪುರ ಜಿಲ್ಲೆಯ ಆಲಮಟ್ಟಿಯಲ್ಲಿ ಆಶ್ರಮವನ್ನು ಸ್ಥಾಪಿಸಿ, ಶರಣ ಜೀವನ ನಡೆಸಲು ಹತ್ತಿದರು. ೧೯೨೭ ರಲ್ಲಿ ವಿದ್ಯಾಲಯವನ್ನು ಪ್ರಾರಂಭಿಸಿ, ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯ ಭಾವನೆಯನ್ನು ಮೂಡಿಸಲು ರಾಷ್ಟ್ರೀಯ ಶಿಕ್ಷಣವನ್ನು ಕೊಡಲು ಪ್ರಾರಂಭಿಸಿದರು. ಪೂಜ್ಯ ಬಂಥನಾಳ ಸ್ವಾಮಿಗಳಿಂದ ಪ್ರಭಾವಿತರಾಗಿ ವಿಜಾಪುರದ ಹಳ್ಳಿ-ಹಳ್ಳಿಗೆ ಸಂಚರಿಸುತ್ತಾ ಬಸವಾದಿ ಶಿವಶರಣರ ತತ್ವ ಸಂದೇಶಗಳನ್ನು ಪ್ರಚಾರ ಮಾಡಿದರು.
ಮಂಜಪ್ಪನವರು ಕನ್ನಡ ಸಾಹಿತ್ಯಕ್ಕೆ ೮೨ ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ. ಅಲ್ಲದೇ ೬ ಪತ್ರಿಕೆಗಳನ್ನು ಪತ್ರಕರ್ತರಾಗಿ, ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಮಂಜಪ್ಪನವರ ಬದುಕಿನ ಮೇಲೆ ಹೆಚ್ಚು ಪ್ರಭಾವ ಬೀರಿದ ಅಂಶವೆಂದರೆ ಬಸವಾದಿ ಶಿವಶರಣ ನಡೆ-ನುಡಿಗಳು, ಶರಣರ ಕಾಯಕ-ದಾಸೋಹ-ಶಿವಯೋಗ ತತ್ವಗಳು. ಬಸವಣ್ಣನವರ ಜೀವನ ಮತ್ತು ಬೋಧನೆಗಳಿಂದ ಬಹಳ ಪರಿವರ್ತನೆ ಹೊಂದಿದರು. ಸತ್ಯಾಗ್ರಹ, ಖಾದಿ, ಉದ್ಯೋಗ ಮುಂತಾದ ಲೌಕಿಕ ಚಟುವಟಿಕೆಗಳಲ್ಲಿ ತೊಡಗಿದ್ದ ಇವರು ಶರಣರ ಬಾಳಿನಿಂದ ಸ್ಫೂರ್ತಿ ಪಡೆದರು. ಅಂತೆಯೇ ಇವರಿಂದ `ಬಸವ ಬೋಧಾಮೃತ, ಪ್ರಮಥಾಚಾರ ದೀಪಿಕೆ, ಸುಬೋಧಸಾರ, ವಚನಕಾರರ ಸಮಾಜ ರಚನೆ ಮುಂತಾದ ಪುಸ್ತಕಗಳು ರಚನೆಯಾದವು.

ಶರಣ ಮಂಜಪ್ಪನವರು ಒಡಲಲ್ಲಿ ಸ್ವಾತಂತ್ರ‍್ಯದ ಕನಸು ತುಂಬಿಕೊಂಡಿದ್ದರು. ಆದರೆ ಆರೋಗ್ಯ ಹದಗೆಟ್ಟಿತು. ಆಲಮಟ್ಟಿಯಲ್ಲಿ ಪ್ರಕಟವಾಗುತ್ತಿದ್ದ `ಶರಣ ಸಂದೇಶ’ ಪತ್ರಿಕೆ ನಿಂತು ಹೋಯಿತು. ನಾಡಿನಾದ್ಯಂತ ಜನರ ಮಹಾಪುರ ಆಲಮಟ್ಟಿ ಆಶ್ರಮಕ್ಕೆ ಹರಿದು ಬಂತು. ೩ ನೇ ಜನವರಿ ೧೯೪೭ ರಂದು ನೆರೆದಿದ್ದ ಹಿತಚಿಂತಕರನ್ನು ಕಣ್ತುಂಬಿ ನೋಡಿ ಈ ರೀತಿ ಸಂದೇಶ ನೀಡಿದರು. “ಧೀರರಾಗಿರಿ, ಪವಿತ್ರರಾಗಿರಿ, ಸ್ವತಂತ್ರ ರಾಷ್ಟ್ರದ ವೀರರಾಗಿರಿ, ಇದು ನನ್ನ ಕಡೆಯ ಮನವಿ” ಎಂದು ಹೇಳುತ್ತಾ ವಿಶ್ವಗುರು ಬಸವಣ್ಣನವರ ಮಹಾಬಯಲಿನಲ್ಲಿ ಬಯಲಾದರು.
ಇಂಥಹ ದೇಶಭಕ್ತ, ಸ್ವಾತಂತ್ರ‍್ಯಯೋಧ, ರಾಷ್ಟ್ರಧರ್ಮದೃಷ್ಠಾರ, ನಿರಂಜನ ಶರಣ, ಸಂಘಟನಾ ಪಿತಾಮಹ, ಪತ್ರಿಕೋದ್ಯಮಿ, ಬಸವ ಜಯಂತಿ ಹರಿಕಾರ, ಕರ್ನಾಟಕದ ಗಾಂಧೀ, ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ಶರಣ ಸಾಹಿತಿ, ಮಕ್ಕಳ ಸಾಹಿತಿ, ಶಿಕ್ಷಕ, ಆಲಮಟ್ಟಿಯ ಶರಣ, ಕರ್ನಾಟಕದ ಮಹಾಪುರುಷರಲ್ಲಿ ಒಬ್ಬರಾದ ಹರ್ಡೇಕರ ಮಂಜಪ್ಪನವರ ಜಯಂತಿ ಇಂದಿನ ಯುವಕರಿಗೆ, ಸಾಧಕರಿಗೆ, ರಾಷ್ಟ್ರಭಕ್ತರಿಗೆ, ನಮ್ಮ ನಿಮ್ಮೆಲ್ಲರಿಗೆ ಪ್ರೇರಕ ಶಕ್ತಿಯಾಗಿದ್ದಾರೆ.