ಕುಲುಮೆ ಬೆಂಕಿಯಲ್ಲು ಭಕ್ತಿಯ ದೀಪ ಬೆಳಗಿಸಿದ ಶರಣ ಕಮ್ಮಾರ ಕಲ್ಲಯ್ಯ

ಬಸವ ಮೀಡಿಯಾ
ಬಸವ ಮೀಡಿಯಾ

ಮೈಸೂರು:

ಕುಲುಮೆಯ ಬೆಂಕಿಯಲ್ಲೂ ಭಕ್ತಿಯ ದೀಪ ಬೆಳಗಿಸಿದವರು ಶರಣ ಕಮ್ಮಾರ ಕಲ್ಲಯ್ಯ ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಹೇಳಿದರು.

ನಗರದ ರಾಮಕೃಷ್ಣ ನಗರದಲ್ಲಿರುವ ಸಾಲುಮರದ ತಿಮ್ಮಕ್ಕ ಉದ್ಯಾನವನದ ಭವನದಲ್ಲಿ ಮೈಸೂರು ಜಿಲ್ಲಾ ಕಮ್ಮಾರ ಮತ್ತು ಗೆಜ್ಜಗಾರ ಸಮುದಾಯದ ಕ್ಷೇಮಾಭಿವೃದ್ಧಿ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.

ಕೈಯಲ್ಲಿ ಸುತ್ತಿಗೆ, ಮುಂದೆ ಕುಲುಮೆ, ಸುತ್ತಲೂ ಬೆಂಕಿ ಇದ್ದರೂ ಹೃದಯದಲ್ಲಿ ಶಿವಭಕ್ತಿಯನ್ನು ತುಂಬಿಕೊಂಡು ಕಾಯಕವನ್ನೇ ಕೈಲಾಸವಾಗಿಸಿಕೊಂಡವರು. ೧೨ನೇ ಶತಮಾನದ ಮಹಾನ್ ಶರಣ ಕಮ್ಮಾರ ಕಲ್ಲಯ್ಯ.

ಕಲ್ಲಯ್ಯನವರ ಬದುಕನ್ನು ಕೇವಲ ಒಬ್ಬ ಕಮ್ಮಾರನ ಜೀವನ ಎಂದು ನೋಡಿದರೆ ಅವರ ಗ್ರಹಿಕೆ ಅಪೂರ್ಣವಾಗುತ್ತದೆ. ಅವರು ಕಬ್ಬಿಣಕ್ಕೆ ಆಕಾರ ನೀಡಿದ್ದಷ್ಟೇ ಅಲ್ಲ, ತಮ್ಮ ಬೆವರಿಗೆ ಗೌರವ ನೀಡಿ, ದುಡಿಮೆಯನ್ನು ದಾಸೋಹದೊಂದಿಗೆ ಜೋಡಿಸಿದವರು.

ಇಂದಿನ ಶಿಕ್ಷಣಕ್ಕೆ ಪುಸ್ತಕ-ಶಾಲೆಗಳಿದ್ದರೆ, ಕಮ್ಮಾರ ಕಲ್ಲಯ್ಯನವರಿಗೆ ಕುಲುಮೆಯೇ ವಿಶ್ವವಿದ್ಯಾಲಯ, ಬೆಂಕಿಯೇ ಪರೀಕ್ಷೆ, ಸುತ್ತಿಗೆಯೇ ಸಾಧನ, ಬೆವರೇ ಶುಲ್ಕ ಹಾಗೂ ಕಾಯಕವೇ ಪದವಿಯಾಗಿತ್ತು.

ಎಮ್ಮೆ ಹೈನವು ಲೇಸು, ಕಮ್ಮನಾಂಬ್ರವು ಲೇಸು, ಸುಮ್ಮನೆ ಒಡವೆ ಬರಲೇಸು ಊರಿಗೆ, ಕಮ್ಮಾರ ಲೇಸು ಎಂಬುದನ್ನು ಸರ್ವಜ್ಞರು ಅಂದೇ ಸಾರಿದ್ದರು. ಮುಮ್ಮಡಿ ಕೃಷ್ಣರಾಜ ಒಡೆಯರು ಅರಮನೆಯ ಬೊಕ್ಕಸದ ವಜ್ರ-ವೈಡೂರ್ಯಗಳನ್ನು ಗುರುಕಾಣಿಕೆಯಾಗಿ ನೀಡಲು ಬಂದಾಗ, ಗುರುಮಲ್ಲೇಶ್ವರರು ಅದನ್ನು ನಿರಾಕರಿಸಿ ಪ್ರಜೆಗಳ ದುಡಿಮೆಯಿಂದ ಬಂದ ಸಂಪತ್ತು ಗುರುಕಾಣಿಕೆಯಾಗುವುದಿಲ್ಲ, ನಿನ್ನ ಸ್ವಂತ ಕಾಯಕದ ಬೆವರಿನಿಂದ ಗಳಿಸಿದ ಕಾಣಿಕೆಯನ್ನು ತಂದುಕೊಡು ಎಂದರು.

ಗುರುವಿನ ಆಜ್ಞೆಯಂತೆ ಮಹಾರಾಜರು ಕಾಯಕಕ್ಕಾಗಿ ಸಾಮಾನ್ಯ ವೇಷಧರಿಸಿ ಬೀದಿಗೆ ಬಂದಾಗ ಅವರಿಗೆ ಸಿಕ್ಕಿದ್ದು ಒಬ್ಬ ಕಮ್ಮಾರ. ಕುಲುಮೆಯ ಶಾಖ, ಕಬ್ಬಿಣದ ಭಾರ ಮತ್ತು ಸುತ್ತಿಗೆಯ ಹೊಡೆತಗಳ ನಡುವೆ ದಿನವಿಡೀ ಕಮ್ಮಾರನ ಬಳಿ ಶ್ರಮಪಟ್ಟು ದುಡಿದ ಮಹಾರಾಜರು, ಕೂಲಿಯಾಗಿ ನಾಲ್ಕಾಣೆ ಗಳಿಸಿದರು. ಆ ನಾಲ್ಕಾಣೆಯ ಕಾಯಕದ ಬೆವರನ್ನು ಗುರುಗಳ ಪಾದಕ್ಕೆ ಅರ್ಪಿಸಿದಾಗ ಗುರುಮಲ್ಲೇಶ್ವರರು ಅರಮನೆಯ ಚಿನ್ನಕ್ಕಿಂತ ಕಾಯಕದ ಬೆವರಿನ ಒಂದು ಕಾಸೇ ನಿಜವಾದ ಗುರುಕಾಣಿಕೆ ಎಂದು ಹರಸಿದರು.

ಕಮ್ಮಾರನ ಕಾಯಕ ಪರಂಪರೆ ಮತ್ತು ಬಸವಣ್ಣನವರ ಕಾಯಕವೇ ಕೈಲಾಸ ತತ್ತ್ವ ಎಷ್ಟು ಶ್ರೇಷ್ಠವಾದುದು ಎಂಬುದಕ್ಕೆ ಈ ಐತಿಹಾಸಿಕ ಮತ್ತು ಜನಪದ ಪ್ರಸಂಗ ಸಾಕ್ಷಿಯಾಗಿದೆ ಎಂದು ಅವರು ಬಣ್ಣಿಸಿದರು.

ರಾಜ್ಯ ಕಮ್ಮಾರ ಸಂಘದ ಅಧ್ಯಕ್ಷ ಗೋಳೂರು ಟಿ. ರಂಗಸ್ವಾಮಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶದ ಬೆನ್ನೆಲುಬು ರೈತರು, ರೈತ ಬಂಧುಗಳ ಬೆನ್ನೆಲುಬು ಕಮ್ಮಾರ ಸಮುದಾಯ. ರೈತರ ಕೃಷಿ ಚಟುವಟಿಕೆಗಳಿಗೆ ಅಗತ್ಯವಾದ ಉಪಕರಣಗಳಿಂದ ಹಿಡಿದು ದೇಶವನ್ನು ಕಾಯುವ ಸೈನಿಕರ ಸೇವೆಗೆ ಬೇಕಾಗುವ ವಿವಿಧ ಕಬ್ಬಿಣದ ಉಪಕರಣಗಳ ತಯಾರಿಕೆಯವರೆಗೆ ಕಮ್ಮಾರ ಸಮುದಾಯದ ಕಾಯಕದ ಕೊಡುಗೆ ಅಪಾರವಾಗಿದೆ.

ಕಾಯಕ, ಕೌಶಲ್ಯ ಮತ್ತು ಪರಿಶ್ರಮವನ್ನು ಬದುಕಿನ ಮೌಲ್ಯವನ್ನಾಗಿಸಿಕೊಂಡಿರುವ ಕಮ್ಮಾರ ಸಮುದಾಯವು ಸಾಮಾಜಿಕ, ರಾಜಕೀಯ, ಶೈಕ್ಷಣಿಕ ಹಾಗೂ ಆರ್ಥಿಕ ಕ್ಷೇತ್ರಗಳಲ್ಲಿ ಮತ್ತಷ್ಟು ಸಂಘಟಿತವಾಗಿ, ಸಮಾಜದ ಮುಖ್ಯವಾಹಿನಿಗೆ ಬರಬೇಕು. ಸಮುದಾಯದ ಪ್ರತಿಯೊಬ್ಬರೂ ಒಗ್ಗಟ್ಟಿನಿಂದ ಮುನ್ನಡೆಯುವ ಮೂಲಕ ತಮ್ಮ ಹಕ್ಕು, ಗೌರವ ಹಾಗೂ ಅವಕಾಶಗಳನ್ನು ಪಡೆದುಕೊಳ್ಳುವುದರ ಜೊತೆಗೆ, ಸಮಾಜದ ಅಭಿವೃದ್ಧಿಯ ರಥವನ್ನು ಮುನ್ನಡೆಸುವ ಶಕ್ತಿಯಾಗಿ ರೂಪುಗೊಂಡು, ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಸಾಧಕರಾದ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ, ರಾಜ್ಯ ಕಮ್ಮಾರ ಸಂಘದ ಮಹಿಳಾ ಕಾರ್ಯದರ್ಶಿ ದಾಕ್ಷಾಯಿಣಿ, ಸಮಾಜ ಸೇವಕ ಆರ್. ನಟರಾಜ್, ಈಶ್ವರಗೌಡನಹಳ್ಳಿ, ಮಹೇಶ್ ಅವರನ್ನು ಸನ್ಮಾನಿಸಲಾಯಿತು.

ಮೈಸೂರು ಜಿಲ್ಲಾ ಕಮ್ಮಾರ ಮತ್ತು ಗೆಜ್ಜಗಾರ ಸಮುದಾಯದ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬಿ. ಮಂಜುನಾಥ್ ಪ್ರಾಸ್ತಾವಿಕ ನುಡಿ ನುಡಿದರು. ಸಂಘದ ಗೌರವಾಧ್ಯಕ್ಷ ವೆಂಕಟರಮಣಶೆಟ್ಟಿ ಬೈಲಾ ಪರಿಚಯಿಸಿದರು. ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ರಾಮಶೆಟ್ಟಿ, ಎಲ್.ಐ.ಸಿ. ಸಿದ್ಧಶೆಟ್ಟಿ ಉಪಸ್ಥಿತರಿದ್ದರು.

ಖಜಾಂಚಿ ಶೇಖರ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಬಿ. ಮಹದೇವು ವಂದಿಸಿದರು. ಪದವೀಧರ ಶಿಕ್ಷಕಿ ವಿದ್ಯಾಶ್ರೀ ನಿರೂಪಿಸಿದರು. ನಾಗರತ್ನ ಮತ್ತು ತಂಡ ಪ್ರಾರ್ಥಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

Share This Article
Leave a comment

Leave a Reply

Your email address will not be published. Required fields are marked *