ಬಸವ ಸೇವಾ ಸಮಿತಿ ಕಾರ್ಯಕ್ರಮದಲ್ಲಿ ಶಕ್ತಿತತ್ವ ಕುರಿತು ಮುಕ್ತ ಚರ್ಚೆ

ಬಸವ ಮೀಡಿಯಾ
ಬಸವ ಮೀಡಿಯಾ

ರಾಜಧಾನಿಯಲ್ಲಿ ೬೪ನೇ ವಚನಾಮೃತ ಕಾರ್ಯಕ್ರಮ

ಬೆಂಗಳೂರು:

ಬಸವ ನಗರದ ಬಸವ ಸೇವಾ ಸಮಿತಿಯ ಮಾಸಿಕ ೬೪ನೇ ವಚನಾಮೃತ ಕಾರ್ಯಕ್ರಮ ರವಿವಾರ ನಡೆಯಿತು.

ನಗರದ ವಿಭೂತಿಪುರ ನಿವಾಸಿ ಶರಣ ದಂಪತಿಗಳಾದ ಲಕ್ಷ್ಮೀ ಮತ್ತು ಎಂ.ಕೆ. ರಮೇಶ ಅವರ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಶಕ್ತಿ ತತ್ವ’ ವಿಷಯವಾಗಿ ಮುಕ್ತ ಚರ್ಚೆಯಾಯಿತು.  

ಕಾರ್ಯಕ್ರಮದಲ್ಲಿ ರಾಜೇಶ್ವರಿ ಪಾಟೀಲ ಮತ್ತು ಶಕುಂತಲ ಸಾಲಿಮಠ ಅವರ ವಚನ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಲಾಯಿತು.

ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಎ. ಎಸ್. ಓಂಕಾರಪ್ಪ ಅವರು ಸಭಿಕರನ್ನು ಸ್ವಾಗತಿಸಿದರು.

ಪದ್ಧತಿಯಂತೆ ಅಶೋಕ ಹಳ್ಳದಮಠ, ಮಾಜಿ ಅಧ್ಯಕ್ಷರು, ಬಸವ ಬಳಗ, ಬಿಇಎಂಎಲ್ ಇವರನ್ನು ಸರ್ವಾನುಮತದಿಂದ ಸಭಾಧ್ಯಕ್ಷರನ್ನಾಗಿ ಆಯ್ಕೆಮಾಡಲಾಯಿತು.

ಸಮಿತಿಯ ಅಧ್ಯಕ್ಷರಾದ ಡಾ. ಮಲ್ಲಿಕಾರ್ಜುನ ಹಂಜಿ ಅವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಶಕ್ತಿ ತತ್ವವನ್ನು ವೈಜ್ಞಾನಿಕ ರೀತಿಯಲ್ಲಿ ಅರ್ಥೈಸುತ್ತಾ, ಪ್ರತಿಯೊಂದು ಪರಮಾಣುವಿನಲ್ಲಿರುವ ನ್ಯೂಟ್ರಾನ್ ಅನ್ನು ಶಿವನಿಗೆ, ಪ್ರೋಟೀನ್ ಅನ್ನು ಶಕ್ತಿಗೆ ಮತ್ತು ನ್ಯೂಟ್ರಾನ್ ಅನ್ನು ಪ್ರಕೃತಿಗೆ ಹೋಲಿಸುತ್ತಾ, ಶಕ್ತಿಯ ಕುರಿತು ಬರೆದಿರುವ ಬಸವಣ್ಣನವರ ವಚನವನ್ನು ನಿರ್ವಚನ ಮಾಡುತ್ತಾ, ಸರ್ವರೂ ಮುಕ್ತ ಚರ್ಚೆಯಲ್ಲಿ ಸಕ್ರಿಯವಾಗಿ ಭಾಗವಹಿಸಲು ಆಹ್ವಾನಿಸಿದರು.

ಬಿಬಿಎಂಪಿ ಮಾಜಿ ಸದಸ್ಯರಾದ ಎಸ್.ಜಿ. ನಾಗರಾಜ ಅವರು ಜ್ಯೋತಿ ಬೆಳಗಿಸಿ, ಬಸವೇಶ್ವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟನೆ ಮಾಡಿದರು.

ನಂತರ ಎಂ.ಕೆ. ರಮೇಶ ಅವರು ನಾಗರಾಜ ಅವರನ್ನು, ಮಲ್ಲಿಕಾರ್ಜುನ ಹಂಜಿ ಅವರನ್ನು ಮತ್ತು ಏಚ್ಏಎಲ್ ಕಾರ್ಮಿಕ ಮುಖಂಡರನ್ನು ಸನ್ಮಾನಿಸಿದರು.

ಸನ್ಮಾನ ಸ್ವೀಕರಿಸಿ ಉದ್ಘಾಟನಾ ನುಡಿಗಳನ್ನು ಹೇಳಿದ ನಾಗರಾಜ ಅವರು, ಶಕ್ತಿಯ ಮಹತ್ವವನ್ನು ಮತ್ತು ಶಕ್ತಿ ಮತ್ತು ಶಿವನ ಅವಿನಾಭಾವ ಸಂಬಂಧವನ್ನು ವಿವರಿಸುತ್ತಾ, ಬಸವ ಸಮಿತಿಯ ಕಾರ್ಯಕ್ರಮಗಳು ಜನಸಾಮಾನ್ಯರಲ್ಲಿ ಧಾರ್ಮಿಕ ಸೂಕ್ಷ್ಮಗಳನ್ನು ತಿಳಿಸುವಲ್ಲಿ ಸೂಕ್ತ ರೀತಿಯಲ್ಲಿ ಸಹಾಯಕ ಎಂದು ತಿಳಿಸಿದರು.

ಮುಕ್ತ ಚರ್ಚೆಯನ್ನು ಮುಂದುವರೆಸುತ್ತಾ ಶಾಬಾದಿ ಗುರುಗಳು, ಶಕ್ತಿಯ ವಿವಿಧ ರೂಪಗಳನ್ನು ವಿಶ್ಲೇಷಿಸುತ್ತಾ, ನಮ್ಮ ನಿತ್ಯ ಜೀವನದಲ್ಲಿ ಶಕ್ತಿಯ ಉಪಯೋಗಗಳನ್ನು ವಿವರಿಸಿದರು.

ನಂತರ ಮಾತನಾಡಿದ ಗುರುಮೂರ್ತಿ ಗುರುಗಳು, ಶಿವ ಶಕ್ತಿ ಸಂಬಂಧವನ್ನು ಲಿಂಗಾಂಗ ಸಾಮರಸ್ಯಕ್ಕೆ ಹೋಲಿಸುತ್ತಾ, ಸತ್ಯಶುದ್ಧ ಕಾಯಕ ಮತ್ತು ಸತ್ಕಾರ್ಯಗಳು ನಮ್ಮ ಶಕ್ತಿಯನ್ನು ನಮಗೆ ತಿಳಿಯದೆ ಹೇಗೆ ಹೆಚ್ಚಿಸುತ್ತವೆ ಎಂದು ವಿವರಿಸಿದರು.

ಕಲ್ಲಿನಾಥ ಅವರು ಅಲ್ಲಮಪ್ರಭುಗಳ ವಚನವನ್ನು ನಿರ್ವಚನ ಮಾಡುತ್ತಾ, ಕುಂಡಲಿನಿ ಶಕ್ತಿ ಮೂಲಾಧಾರ ಚಕ್ರದಿಂದ ಸಹಸ್ರ ಚಕ್ರಕ್ಕೆ ಊರ್ಧ್ವ ಮುಖವಾಗಿ ಚಲಿಸಿ ಸಮಾಧಿ ಸಾಧಿಸುವ ಕ್ರಮಗಳನ್ನು ವಿವರಿಸುತ್ತಾ, ಶಿವ ಶಕ್ತಿ ಅವಿನಾಭಾವ ಸಂಬಂಧವನ್ನು ವರ್ಣಿಸಿದರು.

ಮಲ್ಲೇಶಗೌಡರು ಸಾತ್ವಿಕ, ರಾಜಸಿಕ ಮತ್ತು ತಾಮಸಿಕ ಗುಣಗಳನ್ನು ವರ್ಣಿಸುತ್ತಾ, ಸಾತ್ವಿಕ ಮನೋಭಾವ ನಮ್ಮ ಶಕ್ತಿಯನ್ನು ಯಾವ ರೀತಿ ವರ್ಧಿಸುತ್ತದೆ ಎಂದು ತಿಳಿಸಿದರು.

ನಂತರ ಸಾಲಿಮಠ ಅವರು ಜ್ಯೋತಿರ್ಲಿಂಗಗಳ ತಮ್ಮ ಶಕ್ತಿಯನ್ನು ನಮ್ಮ ಮೇಲೆ ಹೇಗೆ ಪ್ರಭಾವ ಮಾಡುತ್ತವೆ ಎಂದು ವರ್ಣಿಸಿದರು.

ನಿವೃತ್ತ ತತ್ವಶಾಸ್ತ್ರದ ಪ್ರಾಧ್ಯಾಪಕರಾದ ನಂಜುಂಡಯ್ಯನವರು, ಪ್ರಾಚೀನ ಶೈವ ಪರಂಪರೆಯಲ್ಲಿ ವಿಶೇಷವಾಗಿ ಕಾಶ್ಮೀರಿ ಮತ್ತು ತಮಿಳು ಶೈವ ಸಂಸ್ಕೃತಿಯಲ್ಲಿ ಶಿವ ಶಕ್ತಿ ಸಂಬಂಧವನ್ನು ವರ್ಣಿಸುತ್ತಾ ಬಸವಾದಿ ಶರಣರು ಹಲವು ಸೂಕ್ಷ್ಮಗಳನ್ನು ತಮ್ಮ ವಚನಗಳಲ್ಲಿ ತಿಳಿಸಿದ್ದಾರೆ ಎಂದು ವಿವರಿಸಿದರು.

ಸಮಿತಿಯ ಅಧ್ಯಕ್ಷರಾದ ಡಾ. ಮಲ್ಲಿಕಾರ್ಜುನ ಹಂಜಿ ಅವರು ಆದಯ್ಯನ ಮತ್ತು ಬಾಲಸಂಗಯ್ಯನ ವಚನಗಳನ್ನು ಆಧರಿಸಿ ಶಕ್ತಿಯ ವಿವಿಧ ಪ್ರಕಾರಗಳಾದ ಇಚ್ಛಾ, ಕ್ರಿಯಾ ಮತ್ತು ಜ್ಞಾನ ಮತ್ತು ಅವುಗಳ ಸಂಬಂಧವನ್ನು ವಿವರಿಸಿದರು.

ಸಭಾಧ್ಯಕ್ಷರಾದ ಅಶೋಕ ಹಳ್ಳದಮಠ ಅವರು ಶಕ್ತಿಯನ್ನು ಹೆಣ್ಣುಮಕ್ಕಳು ಮನೆ ವಿರ್ವಹಿಸುವ ರೀತಿಗೆ ಹೋಲಿಸುತ್ತಾ, ಬಸವಾದಿ ಶರಣರು ಹೆಣ್ಣುಮಕ್ಕಳಿಗೆ ಕೊಟ್ಟಿರುವ ಸವಲತ್ತನ್ನು ಉಪಯೋಗಿಸಿಕೊಂಡು ಇಂತಹ ಕಾರ್ಯಕ್ರಮಗಳು ಸಕ್ರಿಯವಾಗಿ ಮುಕ್ತ ಚರ್ಚೆಯಲ್ಲಿ ಭಾಗವಹಿಸಿ ತಮ್ಮ ಜ್ಞಾನ ಸಂಪತ್ತನ್ನು ಹೆಚ್ಚಿಸಿಕೊಳ್ಳಬೇಕೆಂದು ಕರೆ ಕೊಟ್ಟರು.

ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಎ. ಎಸ್. ಓಂಕಾರಪ್ಪ ಅವರು ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ನಡೆಸಿಕೊಟ್ಟರು ಹಾಗೂ ಎಲ್ಲರಿಗೂ ಶರಣು ಸಮರ್ಪಣೆ ಮಾಡಿದರು. ಶಕುಂತಲಾ ಸಾಲಿಮಠ ಅವರು ಮಂಗಳ ಗೀತೆ ಹಾಡಿದರು. ಹಿಂದಿನ ಅಧ್ಯಕ್ಷರಾದ ಆರ್.ಡಿ. ಪಾಟೀಲ, ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಅಣ್ಣೇಗೌಡರು, ರಾಣಿ ಚೆನ್ನಮ್ಮ ಮಹಿಳಾ ಸಂಘದ ಅಧ್ಯಕ್ಷರಾದ ವಿಶಾಲಮ್ಮ ಮತ್ತು ಸಮಿತಿಯ ಖಜಾಂಚಿಗಳಾದ ಮಲ್ಲಿಕಾರ್ಜುನ ಕಳಹಾಳ, ಸಹ ಕಾರ್ಯದರ್ಶಿಯಾದ ವೀರೇಶ ಜಿ ಕೆ, ಶಿವಶಂಕರ ರೆಡ್ಡಿಯವರು ಉಪಸ್ಥಿತರಿದ್ದರು.

ನಂತರ ಚರ್ಚೆಯಲ್ಲಿ ಭಾಗವಹಿಸಿದ ಮತ್ತು ಪ್ರಾರ್ಥನೆ ಮಾಡಿದ ಎಲ್ಲರಿಗೂ ಶರಣ ಸಾಹಿತ್ಯವನ್ನೊಳಗೊಂಡ ಪುಸ್ತಕಗಳನ್ನು ವಿತರಿಸಿಸಲಾಯಿತು.

ಸಮಿತಿಯ ಪರವಾಗಿ ಕಾರ್ಯಕ್ರಮದ ಪ್ರಾಯೋಜಕರಾದ ಎಂ.ಕೆ. ರಮೇಶ ದಂಪತಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮವು ಪ್ರಸಾದ ವಿತರಣೆಯೊಂದಿಗೆ ಸಮಾಪ್ತಿಯಾಯಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LcykjUHphtT2VDkfrKC3PM

Share This Article
Leave a comment

Leave a Reply

Your email address will not be published. Required fields are marked *