‘ಧರ್ಮ ಒಡೆದ’ ಕಾರಣಕ್ಕೆ ಲಿಂಗಾಯತರು ಸಿಟ್ಟಾಗಿದ್ದಾರೆ ಎನ್ನುವ ಮಹಾಸುಳ್ಳು
ಬೆಂಗಳೂರು
ಲಿಂಗಾಯತ ಧರ್ಮದ ಹೋರಾಟ ಬೆಂಬಲಿಸಿದ್ದರಿಂದ 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೋಲಾಯಿತು ಎಂಬ ದೊಡ್ಡ ಅಪಪ್ರಚಾರ ನಡೆದುಕೊಂಡು ಬಂದಿದೆ.
ಸಮಾಜದಲ್ಲಿ ತಪ್ಪು ಕಲ್ಪನೆ ಬಿತ್ತಲು ಕೆಲವರು ಈ ಮಾತನ್ನು ಮತ್ತೇ ಮತ್ತೇ ಹೇಳಿಕೊಂಡು ಬರುತ್ತಿದ್ದಾರೆ. ಒಂದು ಸುಳ್ಳನ್ನು ನೂರು ಬಾರಿ ಹೇಳಿದರೆ ಪ್ರಶ್ನಿಸದ ಜನರಿಗೆ ಅದು ಸತ್ಯದ ಹಾಗೆಯೇ ಕಾಣುತ್ತದೆ.
ವಿಶೇಷವಾಗಿ ಸಚಿವ ಎಂ ಬಿ ಪಾಟೀಲ್, ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಟಾರ್ಗೆಟ್ ಮಾಡಲು ಇದನ್ನು ಬಳಸಿಕೊಳ್ಳಲಾಗುತ್ತಿದೆ.
ಈ ವಾದ ಬೇರು ಬಿಟ್ಟಷ್ಟೂ ಪ್ರತ್ಯೇಕ ಧರ್ಮ ಮಾನ್ಯತೆಗೆ ಜನ ಬೆಂಬಲವಿಲ್ಲ ಎಂದು ಸಾಬೀತು ಪಡಿಸಿದ ಹಾಗೆ ಭಾಸವಾಗುತ್ತದೆ. ಲಿಂಗಾಯತ ಧರ್ಮ ಚಳುವಳಿ ಕೆಲವೇ ಅತೃಪ್ತ ಜೀವಿಗಳ ಕೈವಾಡ ಎಂದು ಹೇಳಲು ಸುಲುಭವಾಗುತ್ತದೆ.
ವೈದಿಕ ಮಾಧ್ಯಮಗಳಲ್ಲಿ, ಕೆಲವು ರಾಜಕಾರಣಿಗಳಲ್ಲಿ ಹಾಗೂ ಸಂಘಟನೆಗಳಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುವ ಈ ವಾದವನ್ನು ಸಾಕ್ಷಿ ಸಮೇತ ಪರಿಶೀಲಿಸುವುದು ನಾವು ಮಾಡಬೇಕಾಗಿರುವ ಮೊದಲ ಕೆಲಸ.
ಈ ವಾದದ ನಾಲ್ಕು ಆಯಾಮಗಳನ್ನು ಗಮನಿಸಬೇಕು:
2018ರಲ್ಲಿ ಕಾಂಗ್ರೆಸ್ಸಿಗೆ ಲಿಂಗಾಯತ ಮತ ಕಡಿಮೆಯಾಯಿತು
ಇದು ಸತ್ಯ. 2018ರ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಲಿಂಗಾಯತ ಮತಗಳು ಕಡಿಮೆ ಬಿದ್ದವು.
2013ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಅದರಲ್ಲಿ 26 ಲಿಂಗಾಯತ ಎಂಎಲ್ಎಗಳಿದ್ದರು. ಅದು 2018ರಲ್ಲಿ 16ಕ್ಕೆ ಇಳಿಯಿತು.
| ಕಾಂಗ್ರೆಸ್ | |
| 2013 | 26 |
| 2018 | 16 |
(ಚುನಾವಣೆಯಲ್ಲಿ ಲಿಂಗಾಯತ ಎಂಎಲ್ಎಗಳ ಸಂಖ್ಯೆ)
2017-18ರ ಲಿಂಗಾಯತ ಚಳುವಳಿಯ, ರ್ಯಾಲಿಗಳ ಲಾಭ ಪಡೆಯಲು ಸಿದ್ದರಾಮಯ್ಯ ಸರಕಾರ ಸ್ವತಂತ್ರ ಧರ್ಮದ ಬೇಡಿಕೆ ಅನೊಮೋದಿಸಿತು. ಆದರೆ ಅವರ ಲೆಕ್ಕಾಚಾರ ಕೆಲಸ ಮಾಡದೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಲಿಂಗಾಯತ ಮತಗಳು ನಿರೀಕ್ಷಿಸಿದಕ್ಕಿಂತಲೂ ಕಡಿಮೆ ಬಿದ್ದವು. ಇದನ್ನೇ ಸತೀಶ್ ಜಾರಕಿಹೊಳಿ 2018ರಲ್ಲಿ ಕಾಂಗ್ರೆಸ್ ಕೈ ಸುಟ್ಟಿಕೊಂಡಿತು ಎಂದು ಹೇಳಿದ್ದು.
ಇಲ್ಲಿ ಮೂರು ಮುಖ್ಯ ಪ್ರಶ್ನೆಗಳನ್ನು ಕೇಳಬೇಕು:
* ಪ್ರತ್ಯೇಕ ಧರ್ಮ ಹೋರಾಟ ಬೆಂಬಲಿಸಿದ್ದರಿಂದ ಕಾಂಗ್ರೆಸ್ಸಿಗೆ ಲಿಂಗಾಯತ ಮತಗಳು ಕಡಿಮೆಯಾದವೇ?
* ಹಿಂದೂ ‘ಧರ್ಮ ಒಡೆದ್ದಿದ್ದರಿಂದ’ ಲಿಂಗಾಯತರು ತಿರುಗಿ ಬಿದ್ದರೆ?
* ಅಥವಾ 2018ರಲ್ಲಿ ಕಾಂಗ್ರೆಸ್ಸಿಗೆ ಲಿಂಗಾಯತರ ಮತ ಕಡಿಮೆಯಾಗಲು ಬೇರೆ ಕಾರಣಗಳಿವೆಯೇ?
ಯಡಿಯೂರಪ್ಪ, ಕೆಜೆಪಿ ಪಾತ್ರ
2013ರಲ್ಲಿ ಕಾಂಗ್ರೆಸ್ಸಿಗೆ ಹೆಚ್ಚಿನ ಲಿಂಗಾಯತ ಮತಗಳು ಬೀಳಲು ಕಾರಣ ಕೆಜೆಪಿ.
2007ರಲ್ಲಿ ಎಚ್ ಡಿ ಕುಮಾರಸ್ವಾಮಿ ಅಧಿಕಾರ ಹಸ್ತಾಂತರ ಮಾಡಲು ನಿರಾಕರಿಸಿದರು. ಅದರಿಂದ ರೊಚ್ಚಿಗೆದ್ದ ಲಿಂಗಾಯತರು 2008ರ ಚುನಾವಣೆಯಲ್ಲಿ ಯಡಿಯೂರಪ್ಪನವರ ಬೆಂಬಲಕ್ಕೆ ನಿಂತು ಅವರನ್ನು ಸಿಎಂ ಮಾಡಿದರು.
ನಂತರ ಯಡಿಯೂರಪ್ಪ, ಬಿಜೆಪಿ ಸಂಬಂಧ ಹಳಸಿ, 2013ರಲ್ಲಿ ಅವರು ಕೆಜೆಪಿ ಕಟ್ಟಿದರು.
ಆಗ ಬಹಳಷ್ಟು ಲಿಂಗಾಯತರು ಅವರ ಹಿಂದೆ ಹೋದರು. 2013 ಚುನಾವಣೆಯಲ್ಲಿ ಶೇಕಡಾ 10ರಷ್ಟು ಮತ ಪಡೆದ ಕೆಜೆಪಿ, ಬಿಜೆಪಿಗೆ ಮರೆಯಲಾಗದ ಹೊಡೆತ ಕೊಟ್ಟಿತು.
ಇದರ ಅನಿರೀಕ್ಷಿತ ಲಾಭ ಪಡೆದುಕೊಂಡಿದ್ದು ಕಾಂಗ್ರೆಸ್.
ಹಲವಾರು ಕ್ಷೇತ್ರಗಳಲ್ಲಿ ಲಿಂಗಾಯತ ಮತಗಳು ಕೆಜೆಪಿ, ಬಿಜೆಪಿ ನಡುವೆ ಹಂಚಿಹೋಗಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದರು. ಕೆಲವು ಕಡೆ ಬಿಜೆಪಿಗೆ ಮತ ಹಾಕುತ್ತಿದ್ದ ಲಿಂಗಾಯತರು ಕಾಂಗ್ರೆಸ್ಸಿಗೆ ಮತ ಹಾಕಿದರು. ಆದರೆ ಇಲ್ಲಿ ಕಾಂಗ್ರೆಸ್ಸಿಗೆ ಲಾಭವಾಗಿದಿಕ್ಕಿಂತಲೂ, ಬಿಜೆಪಿಗೆ ನಷ್ಟವಾಗಿದ್ದೇ ಹೆಚ್ಚು ಎನ್ನುವುದನ್ನು ಗಮನಿಸಬೇಕು. ದೊಡ್ಡ ಪ್ರಮಾಣದ ಲಿಂಗಾಯತ ಮತಗಳು ಕೆಜೆಪಿಗೆ ಹರಿದಿದ್ದೇ ಇದಕ್ಕೆ ಕಾರಣ.
| ಕಾಂಗ್ರೆಸ್ | ಬಿಜೆಪಿ | ಕೆಜೆಪಿ | |
| 2008 | 19 | 39 | |
| 2013 | 26 | 10 | 6 |
(ಚುನಾವಣೆಯಲ್ಲಿ ಲಿಂಗಾಯತ ಎಂಎಲ್ಎಗಳ ಸಂಖ್ಯೆ)
2008ರ ಚುನಾವಣೆಯಲ್ಲಿ ಕಾಂಗ್ರೆಸ್ಸಿನಿಂದ 19 ಲಿಂಗಾಯತ ಎಂಎಲ್ಏಗಳು ಆಯ್ಕೆಯಾಗಿದ್ದರು. ಅವರ ಸಂಖ್ಯೆ 2013ರಲ್ಲಿ 26ಕ್ಕೆ ಏರಲು ಇದೇ ಕಾರಣ.
2008ರಲ್ಲಿ ಬಿಜೆಪಿಯಿಂದ 39 ಲಿಂಗಾಯತ ಎಂಎಲ್ಏಗಳು ಗೆದ್ದಿದ್ದರು. ಅದು 2013ರಲ್ಲಿ 10ಕ್ಕೆ ಕುಸಿಯಲು ಇದೇ ಕಾರಣ.
2018ರ ಹೊತ್ತಿಗೆ ರಾಜಕೀಯ ಚಿತ್ರಣ ಮತ್ತೆ ಬದಲಾಗಿತ್ತು. ಮೋದಿ, ಅಮಿತ್ ಶಾ ರಾಜಿ ಮಾಡಿಕೊಂಡ ಮೇಲೆ ಯಡಿಯೂರಪ್ಪ ಬಿಜೆಪಿಗೆ ಮರಳಿ, ಮತ್ತೆ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದರು.
ಅವರ ಜೊತೆ ಲಿಂಗಾಯತ ಮತಗಳು ಮತ್ತೆ ಬಿಜೆಪಿಗೆ ಹೋಗಿದ್ದರಿಂದ ಕಾಂಗ್ರೆಸ್ ಎಂಎಲ್ಎಗಳು 16ಕ್ಕೆ ಇಳಿದರು. ಬಿಜೆಪಿ ಎಂಎಲ್ಎಗಳು 34ಕ್ಕೆ ಏರಿದರು.
ಇದನ್ನು ಸ್ಪಷ್ಟಪಡಿಸಲು ನಾವು ಹೋಲಿಸಬೇಕಾಗಿರುವುದು 2013 ಮತ್ತು 2018ರ ಚುನಾವಣೆಗಳಲ್ಲ. 2008 ಮತ್ತು 2018 ಚುನಾವಣೆಗಳನ್ನು.
ಕಾಂಗ್ರೆಸ್ಸಿನ ಎಂಎಲ್ಎಗಳ ಸಂಖ್ಯೆ 2008ರಲ್ಲಿ 19, 2018ರಲ್ಲಿ 16. ಹೆಚ್ಚುಕಡಿಮೆ ಕಾಂಗ್ರೆಸ್ ತನ್ನ ಸಾಂಪ್ರದಾಯಿಕ ಲಿಂಗಾಯತ ಮತಗಳನ್ನು ಉಳಿಸಿಕೊಂಡಿತ್ತು.
ಬಿಜೆಪಿ ಎಂಎಲ್ಎಗಳ ಸಂಖ್ಯೆ 2008ರಲ್ಲಿ 39, 2018ರಲ್ಲಿ 38. ಸಣ್ಣ ಬದಲಾವಣೆಯಷ್ಟೇ.
| ಕಾಂಗ್ರೆಸ್ | ಬಿಜೆಪಿ | |
| 2008 | 19 | 39 |
| 2018 | 16 | 38 |
(ಚುನಾವಣೆಯಲ್ಲಿ ಲಿಂಗಾಯತ ಎಂಎಲ್ಎಗಳ ಸಂಖ್ಯೆ)
ರ್ಯಾಲಿಗಳಿಗೂ ಚುನಾವಣೆಗೂ ಸಂಬಂಧವಿಲ್ಲ
2017-18ರ ಬೃಹತ್ ಲಿಂಗಾಯತ ರ್ಯಾಲಿಗಳು ಅಷ್ಟೇ ಬೃಹತ್ತಾಗಿ ಸಮಾಜದಲ್ಲಿ ಸಂಚಲನ, ಜಾಗೃತಿಯನ್ನುಂಟು ಮಾಡಿದವು.
ಆದರೆ ಅವು 2018ರ ಚುನಾವಣೆಯ ಮೇಲೆ ಯಾವುದೇ ಪರಿಣಾಮ ಬೀರಲಾಗಲಿಲ್ಲ.
ವಾಸ್ತವವಾಗಿ, ಚುನಾವಣೆ ಸಮಯದಲ್ಲಿ ನಡೆಯುವ ಯಾವುದೇ ರ್ಯಾಲಿ ಮೂಲಕ ಮತಗಳನ್ನು ಬದಲಿಸುವ ಸಾಧ್ಯತೆಯಿಲ್ಲ, ಎಂದು ವಿದ್ವಾಂಸರು ಹೇಳುತ್ತಾರೆ.
ರ್ಯಾಲಿಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಬಹುದು, ಪಕ್ಷಗಳ ಹಣ ಬಲ, ತೋಳ್ಬಲ ತೋರಿಸಬಹುದು. ಆದರೆ ಇವುಗಳ ಮೂಲಕ ಚುನಾವಣೆಗಳ ಭವಿಷ್ಯ ಬರೆಯಲು ಸಾಧ್ಯವಾಗುವುದಿಲ್ಲ.
ಮತದಾನದ ನಂತರ ನಡೆಯುವ ಸಮೀಕ್ಷೆಗಳಲ್ಲಿ ದೊಡ್ಡ ಹೆಸರು ಮಾಡಿರುವ ಸಂಸ್ಥೆ ‘ಆಕ್ಸಿಸ್ ಮೈ ಇಂಡಿಯಾ.’ ಅದರ ಮುಖ್ಯಸ್ಥ ಪ್ರದೀಪ್ ಗುಪ್ತ ಅವರ ಪ್ರಕಾರ ರ್ಯಾಲಿಗಳ ಪ್ರಭಾವದಿಂದ ಮತ ಹಾಕುವ ಜನರ ಸಂಖ್ಯೆ ಶೇಕಡಾ 10ಕ್ಕಿಂತ ಕಡಿಮೆಯಂತೆ.
2023ರ ಕರ್ನಾಟಕ ಚುನಾವಣೆ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ 17 ಕ್ಷೇತ್ರಗಳಲ್ಲಿ ರ್ಯಾಲಿ ಮಾಡಿದ್ದರು. ಇವುಗಳಲ್ಲಿ ಬಿಜೆಪಿ ಗೆದ್ದಿದ್ದು 5ರಲ್ಲಿ ಮಾತ್ರ.
ಲಿಂಗಾಯತರು ಸಿಟ್ಟಾಗಿದ್ದಾರೆ ಎನ್ನುವ ಮಹಾ ಸುಳ್ಳು
ಹಿಂದೂ ಧರ್ಮ ಒಡೆಯಲು ಮುಂದಾದ್ದರಿಂದ ಲಿಂಗಾಯತರು ಕಾಂಗ್ರೆಸ್ಸಿನಿಂದ ದೂರವಾದರು ಅನ್ನುವ ಮತ್ತೊಂದು ಮಹಾಸುಳ್ಳು ಹರಡಿಕೊಂಡು ಬಂದಿದ್ದಾರೆ.
ವೀರೇಂದ್ರ ಪಾಟೀಲರನ್ನು ತೆಗೆದಿದ್ದರಿಂದ ಲಿಂಗಾಯತರು ಆಕ್ರೋಶಗೊಂಡಿದ್ದು ನಿಜ. ಆದರೆ ಸ್ವತಂತ್ರ ಧರ್ಮ ಹೋರಾಟ ಬೆಂಬಲಿಸಿದ್ದರಿಂದ ಲಿಂಗಾಯತರು ಮುನಿಸಿಕೊಂಡಿದ್ದಾರೆ ಎನ್ನುವುದು ಉದ್ದೇಶಪೂರ್ವಕವಾಗಿ ಸೃಷ್ಟಿಸುತ್ತಿರುವ ಭ್ರಮೆ.
ಕೆಟ್ಟ ಆಡಳಿತ ನೀಡಿ, ರಾಜ್ಯದ ಸೌಹಾರ್ದತೆ ಕದಡಿದ್ದರಿಂದ 2023ರ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಅನುಭವಿಸಿತು.
ಬಿಜೆಪಿ ಬಹುತೇಕ ಸಮುದಾಯಗಳ ವಿಶೇಷವಾಗಿ ಲಿಂಗಾಯತರ ಬೆಂಬಲ ಕಳೆದುಕೊಂಡಿತು. ಬಿಜೆಪಿ ಲಿಂಗಾಯತ ಎಂಎಲ್ಎಗಳ ಸಂಖ್ಯೆ 38ರಿಂದ 18ಕ್ಕೆ ಕುಸಿಯಿತು. ಕಾಂಗ್ರೆಸ್ ಎಂಎಲ್ಎಗಳು 16ರಿಂದ 34ಕ್ಕೆ ಏರಿದರು, ಅಂದರೆ ಎರಡು ಪಟ್ಟುಗಿಂತಲೂ ಹೆಚ್ಚಾದರು.
| ಕಾಂಗ್ರೆಸ್ | ಬಿಜೆಪಿ | |
| 2018 | 16 | 38 |
| 2023 | 34 | 18 |
(ಚುನಾವಣೆಯಲ್ಲಿ ಲಿಂಗಾಯತ ಎಂಎಲ್ಎಗಳ ಸಂಖ್ಯೆ)
ಯಡಿಯೂರಪ್ಪ ಸೇರಿ ಅನೇಕ ಹಿರಿಯ ನಾಯಕರನ್ನು ಕಡೆಗಣಿಸಿ, ಬಿ ಎಲ್ ಸಂತೋಷ್ ಬಣ ಮೇಲುಗೈ ಸಾಧಿಸಿದ್ದರಿಂದ ಲಿಂಗಾಯತರು ಬಿಜೆಪಿ ಬಿಟ್ಟು ಕಾಂಗ್ರೆಸ್ ಕಡೆ ಹೊರಳಿದರು.
ಧರ್ಮ ಒಡೆದ ಕಾರಣಕ್ಕೆ ಲಿಂಗಾಯತರು ಮುನಿಸಿಕೊಂಡಿದ್ದಾರೆ ಎಂಬ ವಾದಕ್ಕೆ ಲಿಂಗಾಯತರೇ ಪೆಟ್ರೋಲ್ ಹಾಕಿ ಸುಟ್ಟ ಚುನಾವಣೆಯಿದು.
ಈ ಚರ್ಚೆಯಿಂದ ಎರಡು ವಿಷಯಗಳು ಸ್ಪಷ್ಟವಾಗುತ್ತವೆ:
* ಲಿಂಗಾಯತ ಹೋರಾಟ ಬೆಂಬಲಿಸಿದ್ದು 2018ರ ಕಾಂಗ್ರೆಸ್ ಸೋಲಿಗೆ ಕಾರಣವಾಯಿತು ಎನ್ನುವುದು ಸುಳ್ಳು.
* ಧರ್ಮ ಒಡೆದ ಕಾರಣಕ್ಕೆ ಲಿಂಗಾಯತರು ಕಾಂಗ್ರೆಸ್ಸಿನ ಮೇಲೆ ಮುನಿಸಿಕೊಂಡಿದ್ದಾರೆ ಎನ್ನುವುದು ಮಹಾಸುಳ್ಳು.
ಲಿಂಗಾಯತ ಮತಗಳನ್ನು ಯಾವ ಪಕ್ಷವೂ ಗುತ್ತಿಗೆ ಪಡೆದಿಲ್ಲ. ಸಂದರ್ಭಕ್ಕೆ ತಕ್ಕಂತೆ ಮತಗಳು ಬೀಳುತ್ತವೆ ಅಥವಾ ಕೈ ಕೊಡುತ್ತವೆ.
‘ಧರ್ಮ ಒಡೆದ’ ಕಾರಣಕ್ಕೆ ಕಾಂಗ್ರೆಸ್ಸಿಗೆ ಲಿಂಗಾಯತ ಮತಗಳು ಕಡಿಮೆಯಾಗಿಲ್ಲ. ಬದಲಾಗಿ ಹೆಚ್ಚಿವೆ.
ಸ್ವತಂತ್ರ ಧರ್ಮದ ಹೋರಾಟ ಪ್ರಗತಿಪರ ಲಿಂಗಾಯತರ ಸಂಖ್ಯೆ, ಧ್ವನಿ ಗಟ್ಟಿಗೊಳಿಸುತ್ತಿದೆ. ಅವರು ಬಹುತೇಕವಾಗಿ ಕಾಂಗ್ರೆಸ್ಸನ್ನು ಇದೇ ಕಾರಣಕ್ಕಾಗಿ ಬೆಂಬಲಿಸುವುದನ್ನು ಕಾಣಬಹುದು.
ಎಂ ಬಿ ಪಾಟೀಲ್, ಸಿದ್ದರಾಮಯ್ಯ ಅವರಿಗೆ ಲಿಂಗಾಯತರಲ್ಲಿ ದೊಡ್ಡ ಅಭಿಮಾನಿ ಬಳಗವಿದೆ. ಸತೀಶ್ ಜಾರಕಿಹೊಳಿ, ಪ್ರಿಯಾಂಕ್ ಖರ್ಗೆಯಂತಹ ಆರೆಸ್ಸೆಸ್ ವಿರೋಧಿ ರಾಜಕಾರಣಿಗಳಿಗೂ ಬಗ್ಗೆಯೂ ವ್ಯಾಪಕ ಒಲವಿದೆ.
ಲಿಂಗಾಯತ ಚಳುವಳಿಯ ಮೇಲೆ ಸಂಘ ಪರಿವಾರದ ಮಾರಿ ಕಣ್ಣು ಬೀಳಲು ಇದೂ ಒಂದು ಕಾರಣ.
ಈ ಅಂಕಿ ಅಂಶಗಳು, ಸತ್ಯಾಂಶ ವೈದಿಕ ಮಾಧ್ಯಮಗಳಿಗೆ, ಸಂಘ ಪರಿವಾರದವರಿಗೆ, ಪಂಚ ಪೀಠದವರಿಗೆ ಚೆನ್ನಾಗಿ ಗೊತ್ತು.
ಆದರೂ ಲಿಂಗಾಯತ ಚಳುವಳಿಯ ವರ್ಚಸ್ಸು, ಬೆಂಬಲ ಕುಗ್ಗಿಸಲು ಕುತಂತ್ರದಿಂದ ಅಪಪ್ರಚಾರ ಮಾಡುತ್ತಿದ್ದಾರೆ.
ಇವೆಲ್ಲವನ್ನೂ ಸರಿಯಾಗಿ ಗಮನಿಸದೇ, ಗಟ್ಟಿ ನಿಲುವು ತೆಗೆದುಕೊಳ್ಳದೇ ಜಾರಕಿಹೊಳಿಯಂತಹ ರಾಜಕಾರಣಿಗಳೂ ಲಿಂಗಾಯತ ಹೋರಾಟ ಬೆಂಬಲಿಸಿ ಕಾಂಗ್ರೆಸ್ ಕೈ ಸುಟ್ಟುಕೊಂಡಿತು ಎಂದು ಹೇಳುತ್ತಿರುವುದು ದುರದೃಷ್ಟ.
(ಮುಂದುವರೆಯುವುದು)

ಒಳ್ಳೆಯ ಸಂದೇಶ ರವಾನಿಸಿದ್ದಿರಿ ಜೈ ಬಸವ ಶರಣು ಶರಣಾರ್ಥಿ, ಲಿಂಗಾಯತರು ಯಾರಪರ ಇಲ್ಲ.ಒಳ್ಳಯವರ ಪರ ಇದ್ದಾರೆ