ಲಿಂಗಾಯತ ಜಾತಿ ಅಲ್ಲ ಅದೊಂದು ವಿಶ್ವಧರ್ಮ
ಹೊಸದುರ್ಗ:
ತಾಲ್ಲೂಕಿನ ನಾಯಿಗೆರೆ ಗ್ರಾಮದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ತಾಲೂಕು ಘಟಕದ ವತಿಯಿಂದ ‘ಬಸವ ಭಾರತಕ್ಕಾಗಿ ಬಸವ ಚಿಂತನೆ’ ಮಾಸಿಕ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನಾಡಿದ ಜಾಗತಿಕ ಲಿಂಗಾಯತ ಮಹಾಸಭಾ ತಾಲೂಕ ಅಧ್ಯಕ್ಷರಾದ ಜೆ. ಮಲ್ಲೇಶ ರೇಷ್ಮೆರಾಜ ಅವರು, ಯೇಸುಕ್ರಿಸ್ತ ಹುಟ್ಟುವ ಮುಂಚೆ ಕ್ರೈಸ್ತ ಧರ್ಮವಿರಲಿಲ್ಲ. ಮಹಮ್ಮದ್ ಪೈಗಂಬರ್ ಹುಟ್ಟುವ ಮುಂಚೆ ಇಸ್ಲಾಂ ಧರ್ಮ ಇರಲಿಲ್ಲ. ಬುದ್ಧ ಹುಟ್ಟುವುದಕ್ಕಿಂತ ಮುಂಚೆ ಬೌದ್ಧ ಧರ್ಮವಿರಲ್ಲಿಲ್ಲ. ಬಸವಣ್ಣ ಹುಟ್ಟುವ ಮುಂಚೆ ಬಸವಧರ್ಮ ಅಂದರೆ ಲಿಂಗಾಯತ ಧರ್ಮ ಇರಲಿಲ್ಲ. ವೀರಶೈವರು ಶೈವ ಆರಾಧಕರು ಲಿಂಗಾಯತ ಧರ್ಮಕ್ಕಿಂತ ಮುಂಚೆಯಿಂದಲೂ ಇದ್ದವರು, ಮುಂದೆ ಅವರು ಲಿಂಗಾಯತ ಧರ್ಮದ ತತ್ವವನ್ನು ಅರಿತು ಲಿಂಗಾಯತ ಧರ್ಮವನ್ನು ಸೇರಿದವರು.

ಅದೇ ತೆರನಾಗಿ ವೀರಶೈವರಂತೆ ಬಸವಾದಿ ಶಿವಶರಣರ ತತ್ವಗಳನ್ನು ಒಪ್ಪಿ ನೂರಾರು ಜಾತಿ, ಧರ್ಮೀಯರು ಲಿಂಗಾಯತ ಧರ್ಮವನ್ನು ಅನುಸರಿಸಿದರು. ವೀರಶೈವರಲ್ಲದ ಲಿಂಗಾಯತರು ಅನ್ಯ ಜಾತಿಯವರು ಲಿಂಗಾಯತ ಧರ್ಮದಲ್ಲಿ ಬಹಳಷ್ಟು ಜನ ಸಿಗುತ್ತಾರೆ. ಆದರೆ ಲಿಂಗಾಯತರಲ್ಲದ ವೀರಶೈವರು ಯಾರು ಇಲ್ಲ.
ಹೀಗಾಗಿ ಲಿಂಗಾಯತ ಒಂದು ಜಾತಿ ಅಲ್ಲ ಅದೊಂದು ವಿಶ್ವಧರ್ಮ ಎಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜೆ.ಎಲ್.ಎಂ. ಮುಖಂಡ ಬಸವರಾಜ ಕಟ್ಟಿ ಅವರು ಮಾತನಾಡಿ, ಲಿಂಗಾಯತ ಧರ್ಮದ ಅಲ್ಪಸಂಖ್ಯಾತ ಸ್ಥಾನಮಾನ ದೊರೆತಿದ್ದೆ ಆದರೆ ಲಿಂಗಾಯತ ಧರ್ಮದ ಬಡಜನರಿಗೆ ಆರ್ಥಿಕ ಮತ್ತು ಶೈಕ್ಷಣಿಕ ಸೌಲಭ್ಯ ದೊರೆತು ಉತ್ತಮರಾಗಲು ತುಂಬಾ ಅವಕಾಶಗಳಿವೆ.
ಭಾರತ ಸರ್ಕಾರದಿಂದ ದೊರೆಯುವ ಅಲ್ಪಸಂಖ್ಯಾತ ಕಲ್ಯಾಣ ನಿಧಿಯು ನಿಜವಾಗಿಯೂ ಲಿಂಗಾಯತ ಧರ್ಮೀಯರಿಗೆ ಸಿಗಬೇಕಾಗಿದೆ. ಕರ್ನಾಟಕದಲ್ಲಿ ಹುಟ್ಟಿದ ಏಕೈಕ ಕನ್ನಡ ಧರ್ಮವಾಗಿದ್ದು, ಭಾರತದ 140 ಕೋಟಿ ಜನಸಂಖ್ಯೆಯಲ್ಲಿ ಕೇವಲ 5 ಕೋಟಿ ಮಾತ್ರ ಲಿಂಗಾಯತರಿದ್ದು ನಿಜವಾದ ಅಲ್ಪಸಂಖ್ಯಾತರು ನಾವಾಗಿದ್ದೇವೆ ಎಂದು ತಿಳಿಸಿದರು.

ಸಾನಿಧ್ಯ ವಹಿಸಿದ್ದ ಪೂಜ್ಯ ತಿಪ್ಪೇರುದ್ರ ಸ್ವಾಮಿಜಿ ಅವರು ಮಾತನಾಡಿ, ಇಷ್ಟಲಿಂಗವನ್ನು ಎಲ್ಲರೂ ಸಹ ಕಟ್ಟಿಕೊಂಡು ಅದರ ಅರ್ಥವನ್ನು ತಿಳಿದುಕೊಳ್ಳಬೇಕು. ತಲೆಯಲ್ಲಿ ಒಂದು ಟೋಪಿ ಹಾಕಿಕೊಂಡಿದ್ದರೆ ಅವರನ್ನು ಇಸ್ಲಾಂ ಎಂದು ಗುರುತಿಸುತ್ತೇವೆ. ಹೀಗೆ ಒಂದೊಂದು ಧರ್ಮಕ್ಕೆ ಒಂದು ಗುರುತು ಇರುವಂತೆ, ಲಿಂಗಾಯತ ಧರ್ಮಕ್ಕೂ ಇಷ್ಟಲಿಂಗಧಾರಣೆ, ಹಣೆಯಲ್ಲಿ ವಿಭೂತಿ ಹಾಕಿಕೊಳ್ಳುವುದು ನಮ್ಮ ಧರ್ಮದ ಸಂಕೇತವಾಗಿದೆ ಎಂದು ಆಶೀರ್ವಚನ ಮಾಡಿದರು.
ಸಮ್ಮುಖ ವಹಿಸಿದ್ದ ಹೊಸದುರ್ಗ ಬಸವ ಮಂಟಪದ ಅಕ್ಕಮಹಾದೇವಿ ಮಾತಾಜಿ ಅವರು ಸಹ ಆಶೀರ್ವಚನ ಮಾತುಗಳನ್ನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಿರ್ಮಲ ನಿವೃತ್ತ ಶಿಕ್ಷಕರು, ಹೊಸದುರ್ಗ ಇವರು ಸಹ ವಚನಗಳ ಸಂದೇಶವನ್ನು ವಿವರಿಸುತ್ತಾ, ನಿರೂಪಣೆಯನ್ನು ನಡೆಸಿಕೊಟ್ಟರು.

ಎನ್.ಸಿ. ಲಿಂಗದೇವರು ಅವರು ಅಧ್ಯಕ್ಷತೆಯನ್ನು ವಹಿಸಿದ್ದರು.
ಸೋಮಶೇಖರ ಹೊಳಲ್ಕೆರೆ, ಜಯಣ್ಣ ಕಾಚಾಪುರ ಚೆನ್ನಬಸವಣ್ಣನವರ ವಚನದೊಂದಿಗೆ ವಿಶ್ಲೇಷಣೆ ಮಾಡಿದರು.
ಗ್ರಾಮದ ಶ್ರೀಕಂಠಪ್ಪ ಸ್ವಾಗತ ಮಾಡಿದರು. ಎಂ. ರಂಗನಾಥ ನಾಯಿಗೆರೆ, ತಾಲೂಕ ಪ್ರಧಾನ ಕಾರ್ಯದರ್ಶಿ ಜಾಗತಿಕ ಲಿಂಗಾಯತ ಮಹಾಸಭಾ ಇವರು ಶರಣು ಸಮರ್ಪಣೆ ಮಾಡಿದರು.

ಬಸವಣ್ಣನವರ ತತ್ವಗಳನ್ನು ಹಳ್ಳಿ ಹಳ್ಳಿಗಳಲ್ಲಿ ಪ್ರಚಾರ ಮಾಡಬೇಕೆಂಬ ಉದ್ಧೇಶದ ಕಾರ್ಯಕ್ರಮದಲ್ಲಿ ಹೊಸದುರ್ಗ, ಕಾಚಾಪುರ, ಮೈಲಾಪುರ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ನಾಯಿಗೆರೆ ಗ್ರಾಮಸ್ಥರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
