ಅಕ್ಟೋಬರ್ 3, 4 ಜಿಲ್ಲೆಯಲ್ಲಿ ಬಸವಶಕ್ತಿ ಶಿಬಿರ, ಅನುಭವ ಮಂಟಪ ಜಾಗೃತಿ ಅಭಿಯಾನ
ರಾಯಚೂರು:
ಶರಣ ನುಲಿಯ ಚಂದಯ್ಯ ಮತ್ತು ವಚನ ಪಿತಾಮಹ ಫ.ಗು. ಹಳಕಟ್ಟಿ ಅವರ ಜಯಂತಿ ಕಾರ್ಯಕ್ರಮ ಮತ್ತು ಬಸವ ಮೀಡಿಯಾ ಹಾಗೂ ಬಸವಪರ ಸಂಘಟನೆಗಳ ಆಶ್ರಯದ ಜಿಲ್ಲಾಮಟ್ಟದ ಬಸವಶಕ್ತಿ ಶಿಬಿರದ ಪೂರ್ವಭಾವಿ ಸಭೆ ಇತ್ತೀಚೆಗೆ ನಡೆಯಿತು.
ಪ್ರಾಸ್ತಾವಿಕವಾಗಿ ಮಾತನಾಡಿದ ಜೆ.ಎಲ್.ಎಂ. ಜಿಲ್ಲಾಧ್ಯಕ್ಷ ಪಿ.ರುದ್ರಪ್ಪ ಅವರು, ಪ್ರಸ್ತುತ ಸನ್ನಿವೇಶದಲ್ಲಿ ಬಸವ ಚಳವಳಿ ಮುನ್ನೆಡಸಲು, ಬಸವತತ್ವಗಳನ್ನು ಅನುಷ್ಠಾನಕ್ಕೆ ತರಲು ಸಂಪ್ರದಾಯವಾದಿಗಳಿಂದ ಅಡೆತಡೆಗಳು ಉಂಟಾಗುತ್ತಿವೆ.
ಮುಂದಿನ ವರ್ಷಗಳಲ್ಲಿ ಬಸವಕಲ್ಯಾಣ ನೂತನ ಅನುಭವ ಮಂಟಪದ ಕೆಲಸ ಮುಗಿಯಲಿದ್ದು, ಯಾವುದೇ ರೂಪದಲ್ಲಿ ಸ್ಥಾಪಿತ ಹಿತಾಸಕ್ತಿಗಳು, ವೈದಿಕರು ಅದರ ಒಳನುಗ್ಗಿ ಲಿಂಗಾಯತ ಧರ್ಮದ ಮೂಲ ಆಶಯಗಳನ್ನು ತಿರುಚಿ, ಹಾಳುಮಾಡದಂತೆ ಕಾಪಾಡಿಕೊಳ್ಳುವ ಹೊಣೆ ನಮ್ಮೆಲ್ಲರ ಮೇಲಿದೆ.

ಪಂಜಾಬಿನ ಸಿಖ್ಖರ ಸ್ವರ್ಣಮಂದಿರದ ಮಾದರಿಯಲ್ಲಿ ನಾವೇ ಪಾಳೆಯಂತೆ ಕರಸೇವೆಯ ಮೂಲಕ ನಿರ್ವಹಿಸಿ ಶರಣರ ಮೂಲ ಆಶಯವನ್ನು ಕಾಪಾಡಲು ಬಸವಶಕ್ತಿ ಶಿಬಿರ ಹಾಗೂ ಅನುಭವ ಮಂಟಪ ಜಾಗೃತಿಯನ್ನು ರಾಯಚೂರಿನಲ್ಲಿ ಅಕ್ಟೋಬರ್ 3 ಹಾಗೂ 4 ರಂದು ಬಸವ ಕೇಂದ್ರದಲ್ಲಿ ನಡೆಸುವ ಉದ್ಧೇಶವನ್ನು ತಿಳಿಸಿದರು.
ಡಾ. ಸುರೇಶ ಸಗರದ ಮಾತನಾಡಿ, ಯಾವುದೇ ಕಾರ್ಯಕ್ರಮಗಳಿಗೆ ಹಣಕಾಸಿನ ಅವಶ್ಯಕತೆ ಇರುತ್ತದೆ. ಅದನ್ನು ವೈದ್ಯಾಧಿಕಾರಿಗಳ ಸಂಘದಿಂದಲೇ ಬೆಂಬಲವಾಗಿ ನಿರ್ವಹಿಸಿ ಶಿಬಿರವನ್ನು ಯಶಸ್ವಿಗೊಳಿಸೋಣ ಎಂದರು.
ಬಸವತತ್ವವನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಆದರೆ ಧರ್ಮ ಅಂದ ತಕ್ಷಣ ಅದಕ್ಕೊಂದು ವಿಶೇಷತೆ ಬಂದು ಅದು ಚಳುವಳಿಯಾಗಿ, ಅಲ್ಪಸಂಖ್ಯಾತ ಧರ್ಮ ಹೀಗೆ ಕೆಲವು ವಿರೋಧ ಹುಟ್ಟುತ್ತವೆ. ಅದಕ್ಕಾಗಿ ಯಾವುದೇ ಗೋಷ್ಠಿಯಲ್ಲಿ ಪದಗಳ ಬಳಕೆ ಸೂಕ್ಷ್ಮವಾಗಿರಲಿ, ಅನಾವಶ್ಯಕವಾಗಿ ವಿರೋಧಿಗಳನ್ನು ಎಚ್ಚರಿಸದಂತಿರಲಿ ಎಂದು ಕಿವಿಮಾತು ಹೇಳಿದರು.
ಹೋರಾಟಗಾರ, ಚಿಂತಕ ಆರ್. ಮಾನಸಯ್ಯ ಮಾತನಾಡಿ, ನಾನು ಬುದ್ಧ ಬಸವ ಅಂಬೇಡ್ಕರ್ ತತ್ವಗಳ ಪಾಲಕ. ಮನೆಯಲ್ಲಿ ಬುದ್ಧ ಬಸವಣ್ಣ ಮತ್ತು ಏಸುಕ್ರಿಸ್ತನ ಪೋಟೊಗಳಿವೆ. ಆದರೆ ನನ್ನ ಉಸಿರು ಬಸವಣ್ಣ. ಬಸವಶಕ್ತಿ ಶಿಬಿರಕ್ಕೆ ತನು ಮನ ಧನ ಸಹಾಯದೊಂದಿಗೆ ಇಬ್ಬರು ಮಕ್ಕಳು ಶಿಬಿರಾರ್ಥಿಗಳಾಗಿ, ನಾನು ಸಹ ಭಾಗವಹಿಸುವೆ ಎಂದು ಘೋಷಿಸಿದರು.

ರಿಮ್ಸ್ ವೈದ್ಯಾಧಿಕಾರಿ ಡಾ. ರಾಮಬಾಬು ಮೈಸೂರು ಮಾತನಾಡುತ್ತಾ, ನಾವೆಲ್ಲರೂ ಒಂದು ನಿಗದಿತ ತತ್ವವನ್ನು ಒಪ್ಪಿಕೊಂಡಿದ್ದೇವೆ. ಏಕೆಂದರೆ ಬಸವತತ್ವವು ನಿಸರ್ಗಕ್ಕೆ ಹತ್ತಿರವಾದುದು. ನಿಸರ್ಗಕ್ಕೆ ವಿರೋಧವಿರುವ ಯಾವ ತತ್ವಗಳು ಬಹಳ ದಿನ ಉಳಿಯುವುದಿಲ್ಲ ಎಂದರು.
ವೈದಿಕ ತತ್ವಗಳು ನಿಸರ್ಗಕ್ಕೆ ವಿರೋಧವಾಗಿವೆ. ದ್ರೋಣಾಚಾರ್ಯ ಏಕಲವ್ಯನ ಹೆಬ್ಬೆರಳೇ ಕೇಳಲು ಕಾರಣವೇನು? ಹೆಬ್ಬೆರಳು ಏಕಾಗ್ರತೆ ಮತ್ತು ಬುದ್ಧಿಯ ಮೆದುಳಿನ ಸಂಬಂಧ ಹೊಂದಿದೆ. ಪುರಾಣದಲ್ಲಿ ಹೇಳಿದೆ ಎಂದು ನಂಬಿ, ಹೆಬ್ಬೆರಳಿನ ಬಗ್ಗೆ ಯೋಚನೆ ಮಾಡುವುದನ್ನೆ ನಾವು ಬಿಟ್ಟೆವು.
ಹೆಬ್ಬೆರಳನ್ನೇ ಏಕೆ ಕೇಳಿದ ಎಂದು ಯೋಚಿಸಿದ್ದರೆ ಉತ್ತರ ಸಿಗುತ್ತಿತ್ತು. ಕಾರಣ ನಾವು ಮೊದಲು ಬುದ್ಧಿಯನ್ನು ಬೆಳೆಸಿಕೊಳ್ಳಬೇಕು. ಯೋಚನೆ ಮಾಡಬೇಕು.
ಬಸವತತ್ವ ನಮ್ಮಲ್ಲಿ ಯೋಚನಾಶಕ್ತಿ ಬೆಳಸುವುದಲ್ಲದೇ ಆತ್ಮಶಕ್ತಿಯನ್ನು ತುಂಬುತ್ತದೆ ಎಂದರು.
ಸಭೆಯ ಅಧ್ಯಕ್ಷತೆಯನ್ನು ಬಸವಕೇಂದ್ರದ ಗೌರವಾಧ್ಯಕ್ಷ ನಾಗನಗೌಡ ಹರವಿ ವಹಿಸಿದ್ದರು. ಅತಿಥಿಗಳಾಗಿ ಡಾ. ಬಸವಪ್ರಭು ಪಾಟೀಲ ಬೆಟ್ಟದೂರು, ಡಾ. ವಿ.ಎ. ಮಾಲಿಪಾಟೀಲ, ಚನ್ನಬಸವ ಇಂಜನಿಯರ್, ಜಗದೇವಿ ಚನ್ನಬಸವ, ಲಲಿತಾ ಡಾ. ಬಸನಗೌಡ ಉಪಸ್ಥಿತರಿದ್ದರು.

ಜೆ.ಎಲ್.ಎಂ. ತಾಲೂಕಾಧ್ಯಕ್ಷ ಜೆ. ಬಸವರಾಜ ಮತ್ತು ಚನ್ನಬಸವಣ್ಣ ಮಹಾಜನಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಬಸವಪರ ಸಂಘಟನೆಗಳ ಮುಖಂಡರಾದ ಮಹದೇವಪ್ಪ ಚಿಂಚಿರ್ಕಿ, ಮುದ್ದನಗೌಡ, ಬೆಟ್ಟಪ್ಪ ಬಸನಗೌಡ ಸೇರಿದಂತೆ ಸುಮಾರು ೬೦ ಜನ ಸೇರಿದ್ದರು. ಬಸವಶಕ್ತಿ ಶಿಬಿರ ಯಶಸ್ವಿ ಮಾಡುವ ತೀರ್ಮಾನ ಮಾಡಲಾಯಿತು. ವಚನ ಮಂಗಲ, ನಂತರ ಪ್ರಸಾದದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

ಬಸವಶಕ್ತಿ ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿ ಬರುತ್ತದೆ, ಆಯೋಜಿಕರಿಗೆಲ್ಲರಿಗೂ ಅನಂತ ಭಕ್ತಿಯ ಶರಣು ಶರಣಾರ್ಥಿಗಳು
ಒಳ್ಳೆಯ ಸಂದೇಶ ರವಾನಿಸಿದ್ದಿರಿ.ಆದರೆ ವೀರಶೈವಾದಿ ಈಶ್ವರ ಖಂಡ್ರೆಯವರ ಬಗ್ಗೆ ಎಚ್ಚರವಿರಲಿ. ಜೈ ಬಸವ. ಅವರು ಕಲಬೆರಕೆ ಮಾಡುವರು.
ಬಸವರಾಜ ಕುರಗೋಡ, ರಾಯಚೂರು. ಅವರೇ ಅರ್ಜುನನಿಗೆ ವಿಶ್ವದ ಏಕೈಕಧಾನುರ್ಧರ ಮಾಡುವ ಪ್ರಾಣ ತೊಟ್ಟಿರುವ ಗುರುಗಳು, ಏಕಲವ್ಯನ ಶಬ್ದವೇದಿ ವಿಧ್ಯ ಅವರ ಮನಸ್ಸಿನಲ್ಲಿಯೇ ಗೊಂದಲ ಸೃಷ್ಟಿ ಮಾಡಿತ್ತು. ಅದಕ್ಕೆ ಹೆಬ್ಬೆರಳು ಪಡೆದರೆ ಅರ್ಜುನನಿಗಿಂತ ಕನಿಷ್ಠ ತರಬೇತಿ ಮತ್ತು ಧನುರ್ವಿದ್ಯ ಪ್ರದರ್ಶನ ಮಾಡಲು ಯೋಗ್ಯತೆ ಇರಿಸಿದರು. ಅವರು ಗುರು ಧರ್ಮ ಮೀರಿ ದಕ್ಷಣೆ ಕೇಳಿ ತಮ್ಮ ವಚನ ಪಾಲಿಸಿದರು. ಎಲ್ಲರಿಗೂ ಶುಭವಾಗಲಿ, ಶರಣು ಶರಣಾರ್ಥಿ.
ಜೈ ಬುದ್ಧ ಬಸವಣ್ಣ ಬಾಬಾ ಸಾಹೇಬ್ಅಂಬೇಡ್ಕರ್ ಸಮಾಜಕ್ಕೆ ನಮ್ಮ ದೇಶಕ್ಕೆ ಬಹಳ ಮುಖ್ಯವಾಗಿ ಬಳಕೆಯಲ್ಲಿರುವ ಮಹಾ ಶಕ್ತಿ ಗಳು.ನಾವು ಇವರ ನಡೆಗಳನ್ನು ಚಲಾವಣೆ ಇರುವ. ಹಾಗೆ ನಡೆದುಕೊಳ್ಳಬೇಕು.ಜೈ ಬಸವಣ್ಣ