ಮೊಳಕಾಲ್ಮೂರು :
“ಮನುಷ್ಯನ ಜೀವನದಲ್ಲಿ ಲೌಕಿಕದ ಲೋಕಾನುಭವಕ್ಕಿಂತ ಶರಣರ ತತ್ವವನ್ನೊಳಗೊಂಡ ಶಿವಾನುಭವವೇ ಅತ್ಯಂತ ಮುಖ್ಯವಾದುದು. ಶರಣರ ಚಿಂತನೆಗಳು ನಿರಂತರವಾಗಿ ನಡೆಯುವ ಮೂಲಕ ಸಮಾಜದಲ್ಲಿ ಸತ್ಸಂಸ್ಕಾರ ಬೆಳೆಯಬೇಕು,” ಎಂದು ಪಾಂಡೋಮಟ್ಟಿ ವಿರಕ್ತಮಠದ ಪೂಜ್ಯ ಡಾ. ಗುರುಬಸವ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.
ಸಿದ್ದಯ್ಯನಕೋಟೆಯ ಬಸವ ಕೇಂದ್ರ, ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಶಾಖಾಮಠ ಹಾಗೂ ಚಿಜ್ಯೋತಿ ಸಾಂಸ್ಕೃತಿಕ ಕಲಾ ವೇದಿಕೆ ವತಿಯಿಂದ ಆಯೋಜಿಸಲಾಗಿದ್ದ ೯೫ನೇ ಶಿವಾನುಭವ ಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ತ್ರಿವಿಧ ದಾಸೋಹಿಗಳ ಕಾರ್ಯ ಶ್ಲಾಘನೀಯ, ಬಯಲು ಸೀಮೆಯ ಈ ಭಾಗದಲ್ಲಿ ಕಳೆದ ೨೮ ವರ್ಷಗಳಿಂದ ಸತತವಾಗಿ ಬಸವಾದಿ ಶಿವಶರಣರ ತತ್ವಗಳನ್ನು ಪ್ರಸಾರ ಮಾಡುತ್ತಿರುವ ಸಿದ್ದಯ್ಯನಕೋಟೆಯ ಶ್ರೀ ಬಸವಲಿಂಗ ಮಹಾಸ್ವಾಮಿಗಳ ಕಾರ್ಯವನ್ನು ಕೊಂಡಾಡಿದ ಅವರು, “ಬುದ್ಧ, ಬಸವ, ಅಂಬೇಡ್ಕರ್ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಶೈಕ್ಷಣಿಕ, ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಅವರು ಸಲ್ಲಿಸುತ್ತಿರುವ ಸೇವೆ ಅಪಾರ. ಈ ಭಾಗದ ಪಾಲಿಗೆ ಅವರು ನಿಜಕ್ಕೂ ತ್ರಿವಿಧ ದಾಸೋಹಿಗಳು,” ಎಂದು ಶ್ಲಾಘಿಸಿದರು.
ಪ್ರತಿ ಹುಣ್ಣಿಮೆಗೆ ಶಿವಾನುಭವ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದ ಸಿದ್ದಯ್ಯನಕೋಟೆಯ ಪೀಠಾಧಿಪತಿ ಪೂಜ್ಯ ಬಸವಲಿಂಗ ಮಹಾಸ್ವಾಮಿಗಳು, “ಭಕ್ತರ ಸಹಕಾರದೊಂದಿಗೆ ಪ್ರತಿ ತಿಂಗಳ ಹುಣ್ಣಿಮೆಯಂದು ಶ್ರೀಮಠದಲ್ಲಿ ಶಿವಾನುಭವ ಕಾರ್ಯಕ್ರಮ ನಡೆಯುತ್ತಿದೆ. ನಾಡಿನ ಹೆಸರಾಂತ ಅನುಭಾವಿಗಳನ್ನು, ಶರಣರನ್ನು ಕರೆಸಿ ತತ್ವ ಪ್ರಸಾರ ಮಾಡುವ ಈ ಕಾಯಕ ನಮ್ಮೆಲ್ಲರ ಜವಾಬ್ದಾರಿಯಾಗಿದೆ” ಎಂದರು.
ಶ್ರೀಮಠದ ಕಾರ್ಯದರ್ಶಿ ಪಿ.ಆರ್. ಕಾಂತರಾಜ ಮಾತನಾಡಿ, “ಶ್ರೀಗಳು ‘ಮಹಾಂತ ಜೋಳಿಗೆ’ಯ ಮೂಲಕ ಜನರ ದುಶ್ಚಟಗಳನ್ನು ಬಿಡಿಸಿ ಬಸವತತ್ವದ ಹಾದಿಗೆ ತರುತ್ತಿದ್ದಾರೆ. ಗಡಿನಾಡ ಸಾಂಸ್ಕೃತಿಕ ಉತ್ಸವದ ಮೂಲಕ ಜಾನಪದ ಕಲೆಗಳ ರಕ್ಷಣೆ ಮಾಡುತ್ತಿರುವ ಅವರು ಯುವಜನತೆಗೆ ಮಾದರಿಯಾಗಿದ್ದಾರೆ,” ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಎಂ.ಬಿ. ಭೋಗೇಶಗೌಡ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಕೃಷಿ ಮತ್ತು ಶಿಕ್ಷಣದ ಜೊತೆಗೆ ಸಂಸ್ಕಾರ ನೀಡುವ ಕಾರ್ಯ ಈ ಮಠದಿಂದ ನಡೆಯುತ್ತಿರುವುದು ಈ ಭಾಗದ ಜನರ ಸೌಭಾಗ್ಯ ಎಂದು ಹರ್ಷ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕೆ.ಓ. ಶಿವಣ್ಣ, ಕೆ.ಪಿ. ಪಂಪಾಪತಿ, ನಾಗೇಂದ್ರಪ್ಪ, ಉದ್ಯಮಿ ರಮೇಶ, ಎಂ.ಬಿ. ಮಹಾಂತಮ್ಮ, ಪಿ. ತುಳಸಿ, ಬಸವಲಿಂಗಮ್ಮ, ಪ್ರತಿಭಾ ಬಸವರಾಜ ಉಪಸ್ಥಿತರಿದ್ದರು.
ಆರ್.ಬಿ. ಗುರುಶಂಕ್ರಪ್ಪ ಮತ್ತು ಸಂಗಡಿಗರು ಭಜನಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
