ಉತ್ತರದಿಂದ ಜೈನ, ಬೌದ್ಧ, ವೈದಿಕ, ಆಗಮ ಶೈವ ಎಂಬ ನಾಲಕ್ಕು ಧರ್ಮಗಳು ಪ್ರಾಚೀನ ಕರ್ನಾಟಕಕ್ಕೆ ವಲಸೆ ಬಂದವು.
ಇವುಗಳ ನಡುವೆ ಪ್ರಾಬಲ್ಯಕ್ಕಾಗಿ ದೊಡ್ಡ ಹೋರಾಟ ನಡೆದು, ಕೊನೆಗೆ ವೈದಿಕ ಧರ್ಮ ಜಯ ಸಾಧಿಸಿತು.
೧೨ ಶತಮಾನ ದಲ್ಲಿ ವಚನಕಾರರು ಬರುವ ಹೊತ್ತಿಗೆ ಜೈನ ಪುರಾಣ, ರಾಮಾಯಣ, ಮಹಾಭಾರತ, ಪಂಚತಂತ್ರ ಇತ್ಯಾದಿ ಕನ್ನಡದಲ್ಲಿ ಲಭ್ಯವಿದ್ದವು.
ಆ ಕಾಲದ ಕನ್ನಡದ ಕವಿಗಳು ಬರೆದ ಕೃತಿಗಳಲ್ಲಿ ಈ ವಿಷಯಗಳೇ ಅದರಲ್ಲೂ ಮುಖ್ಯವಾಗಿ ವೈದಿಕ ಕಥೆಗಳೇ ತುಂಬಿದ್ದವು.
ಇವುಗಳ ಪ್ರಭಾವಕ್ಕೆ ಕನ್ನಡಿಗರು ಬಲಿಯಾಗಿದ್ದರಿಂದ, ಕನ್ನಡವೆಂದರೆ ಅಪವಿತ್ರ, ವೈದಿಕದ ಸಂಸ್ಕೃತವೆಂದರೆ ಪವಿತ್ರವೆಂಬ ಭಾವನೆ ದಟ್ಟವಾಗಿತ್ತು
ಈ ಸಾಂಸ್ಕೃತಿಕ ದಾಳಿಯನ್ನು ವಚನಕಾರರು ‘ವಿದ್ಯೆಯೆಂದರೆ ರಾಮಾಯಣ ಭಾರತವಲ್ಲ’ ಎಂದು ನೇರವಾಗಿ ಪ್ರತಿರೋಧಿಸಿದರು.
ಸಂಸ್ಕೃತವನ್ನು ಮೀನಿನ ಬಾಯಿಗೆ ಹುಲ್ಲು ಹಾಕಿದಂತೆ ಎಂದು ನಗೆಯ ಮಾರಿತಂದೆ ಖಂಡಿಸಿದರೆ, ವೇದ ಪುರಾಣಗಳು ಹೋತನಿಗೆ ಮಾರಿ ಎಂದು ಬಸವಣ್ಣ ಹೇಳಿದರು.
ವೈದಿಕ ಭಾಷೆಯ ಆಕ್ರಮಣದ ವಿರುದ್ಧವಾಗಿ ನಿಂತ ಶರಣರು ಶೋಷಿತ ವರ್ಗಗಳ ಭಾಷೆ (ಕನ್ನಡ), ಸಿದ್ದಾಂತ, ಆಚರಣೆಗಳಿಗೆ ಪ್ರತಿಷ್ಠೆಯನ್ನು ಒದಗಿಸಿದರು.
(ವಚನ ಸಾಹಿತ್ಯ: ವೈದಿಕ ವಿರೋಧ ಮತ್ತು ಜಾತಿ ನಿರಸನ’ ಲೇಖನದಿಂದ ಆಯ್ದ ಮತ್ತು ಸಂಕ್ಷಿಪ್ತಗೊಳಿಸಿರುವ ಭಾಗ – ಮಾರ್ಗ ೭)