ಅಕ್ಕ ಸ್ವಾಭಿಮಾನದ ಸಂಕೇತ: ಗೀತಾ ಈಶ್ವರ ಖಂಡ್ರೆ
ಕಲಬುರಗಿ:
ಅಕ್ಕ ಮಹಾದೇವಿ ಮನುಕುಲದ ಸ್ವಾಭಿಮಾನದ ಸಂಕೇತವಾಗಿದ್ದಾರೆ ಎಂದು ಭಾಲ್ಕಿಯ ಶಾಂತಿ ವಿದ್ಯಾವರ್ಧಕ ಸಂಘದ ನಿರ್ದೇಶಕಿ ಹಾಗೂ ಸಮಾಜ ಸೇವಕಿ ಡಾ. ಗೀತಾ ಈಶ್ವರ ಖಂಡ್ರೆ ನುಡಿದರು.
ಡಾ. ಬಿ.ಡಿ.ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನ ಕೇಂದ್ರ, ಬಸವ ಸಮಿತಿ ಅಕ್ಕನ ಬಳಗದ ವತಿಯಿಂದ ಶನಿವಾರ ಜಯನಗರದ ಅನುಭವ ಮಂಟಪದಲ್ಲಿ ಜರುಗಿದ ಮಹಾದೇವಿ ಅಕ್ಕಗಳ ಸಮ್ಮೇಳನ-16 ಉದ್ಘಾಟಿಸಿ ಮಾತನಾಡಿದ ಅವರು, ಮಲ್ಲಿಕಾರ್ಜುನನಲ್ಲಿ ನಿಷ್ಠೆ, ವೈರಾಗ್ಯ, ಅಧ್ಯಾತ್ಮದ ಎತ್ತರಕ್ಕೆ ಏರಿದ ಅಕ್ಕನ ಬದುಕು ಮಹಿಳಾ ಕುಲಕ್ಕೆ ಮಾದರಿಯಾಗಿದೆ ಎಂದರು.
ವಚನ ಸಾಹಿತ್ಯ ಜಗತ್ತಿಗೆ ನೀಡಿದ ಅಮೂಲ್ಯ ಕೊಡುಗೆಯಾಗಿದ್ದು, ಚೆನ್ನಮಲ್ಲಿಕಾರ್ಜುನ ಅಂಕಿತದಲ್ಲಿ ರಚನೆಗೊಂಡ ಅಕ್ಕನ ವಚನಗಳು ಜೀವನ ದರ್ಶನ ಮಾಡಿಸುವಂತಿವೆ ಎಂದು ತಿಳಿಸಿದರು.

ವಚನ ಪರಂಪರೆ ಬಗ್ಗೆ ನಮಗೆ ಆತ್ಮಾಭಿಮಾನ ಇರಬೇಕು. ಬಸವಾದಿ ಶರಣ-ಶರಣೆಯರ ಆಚಾರ-ವಿಚಾರಗಳನ್ನು ಪಾಲಿಸಲು ಅವರು ಕರೆ ನೀಡಿದರು.
ಸಮ್ಮೇಳನಾಧ್ಯಕ್ಷೆ ಡಾ. ನೀಲಮ್ಮ ಕತ್ನಳ್ಳಿ ಮಾತನಾಡಿ, ಮಹಿಳೆ ಮತ್ತು ದೀನ, ದಲಿತ, ದುರ್ಬಲರ ಕೊರಳ ದನಿಯಾದ ಬಸವಣ್ಣ ಸಮಾಜದ ಅರ್ಧ ಭಾಗವಾಗಿದ್ದ ಮಹಿಳೆಯರ ಉದ್ಧಾರಕ್ಕೆ ಮುಂದಾದರು. ಆ ಮೂಲಕ ಮಹಿಳೆಯರ ಅನಂತಕಾಲದ ಕಣ್ಣೀರಿನ ಕಥೆಗೆ ಕೊನೆ ಹಾಡಿದರು ಎಂದರು.
ಶರಣರು ಮಹಿಳೆಯರಿಗೆ ಶಿಕ್ಷಣ ಒದಗಿಸಿ ಧಾರ್ಮಿಕ, ಸಾಮಾಜಿಕ ಸ್ವಾತಂತ್ರ್ಯ ಕಲ್ಪಿಸಿದರು. ಅನುಭವ ಮಂಟಪದ ಚರ್ಚೆಯಲ್ಲಿ ಭಾಗವಹಿಸಲು ಅವಕಾಶ ಕೊಟ್ಟರು. ಅಕ್ಕ, ಮುಕ್ತಾಯಕ್ಕ, ಗಂಗಾಂಬಿಕೆ, ನೀಲಾಂಬಿಕೆ, ಹಡಪದ ಲಿಂಗಮ್ಮ, ಸತ್ಯಕ್ಕ, ಕಾಳವ್ವೆ, ಸೂಳೆ ಸಂಕವ್ವೆ ಮುಂತಾದ ವಚನಕಾರ್ತಿಯರು ನೈತಿಕ ಮೌಲ್ಯಗಳನ್ನು ಎತ್ತಿ ಹಿಡಿದರು.
ಕಲ್ಯಾಣ ಕ್ರಾಂತಿಯ ನಂತರ ಹೆಣ್ಣಿನ ಶೋಷಣೆ ಮತ್ತೆ ನಡೆದಿದೆ. ಮಹಿಳೆಯರ ಮೇಲೆ ಅತ್ಯಾಚಾರ, ವರದಕ್ಷಿಣೆ ಕಿರುಕುಳ, ಆತ್ಮಹತ್ಯೆ ಪ್ರಕರಣಗಳು ಜರುಗುತ್ತಿರುವುದು ಸಮಾಜದ ದುರಂತವಾಗಿದೆ.

ಸಮಾಜದಲ್ಲಿ ಇಂದು ಪ್ರಾಮಾಣಿಕತೆಯ ಕೊರತೆ, ಮಿತಿಮೀರಿದ ಭ್ರಷ್ಟಾಚಾರ, ಟಿವಿ, ಮೊಬೈಲ್ ಹಾವಳಿ ಹೆಚ್ಚಾಗಿವೆ. ಸಮಾಜದ ಎಲ್ಲ ಸಮಸ್ಯೆಗಳಿಗೆ ವಚನ ಸಾಹಿತ್ಯದಲ್ಲಿ ಸಮಾಧಾನವಿದೆ. ಸಾಂತ್ವನವಿದೆ, ಪರಿಹಾರವಿದೆ ಎಂದು ಡಾ. ನೀಲಮ್ಮ ಹೇಳಿದರು.
ಕಲಬುರಗಿ ಬಸವ ಸಮಿತಿ ಅಧ್ಯಕ್ಷೆ ಡಾ. ವಿಲಾಸವತಿ ಖೂಬಾ ಪ್ರಾಸ್ತಾವಿಕ ಮಾತನಾಡಿದರು. ಸಮ್ಮೇಳನದ ಸಂಚಾಲಕಿ ಡಾ. ಜಯಶ್ರೀ ದಂಡೆ ಸ್ವಾಗತಿಸಿದರು. ಶಾರದಾ ಅರವಿಂದ ಜತ್ತಿ, ವಿಜಯಲಕ್ಷ್ಮೀ ವೇದಿಕೆಯಲ್ಲಿದ್ದರು.
ಡಾ. ಐಶ್ವರ್ಯ ದೇವಣಿ ವಚನ ನೃತ್ಯ ಮಾಡಿದರು. ಡಾ. ಸುನಿತಾ ಗುಮ್ಮಾ, ಜಗದೇವಿ ಪಾಟೀಲ ನಿರೂಪಿಸಿದರು.

ನಂತರ ವಚನ ನಿರ್ವಚನ, ಸಾಂಸ್ಕೃತಿಕ ಗೋಷ್ಠಿಗಳು ಜರುಗಿದವು. ಇದಕ್ಕೂ ಮುನ್ನ ಮಹಾದೇವಿ ಅಕ್ಕಗಳ ಭಾವಚಿತ್ರ ಮೆರವಣಿಗೆ ಜರುಗಿತು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HyjxiPYAeioCDGVqP9ADsE
