ಮಂಡ್ಯದಲ್ಲಿ ಸಿದ್ದಗಂಗಾಶ್ರೀ ಉದ್ಯಾನವನದಲ್ಲಿ ದಾಸೋಹ ಹುಣ್ಣಿಮೆ

ಬಸವ ಮೀಡಿಯಾ
ಬಸವ ಮೀಡಿಯಾ

ಮಂಡ್ಯ:

ಹಸಿದು ಬಂದವರಿಗೆ ಅನ್ನ ನೀಡುವುದೇ ನಿಜವಾದ ಧರ್ಮ ಎಂಬ ಆದರ್ಶವನ್ನು ಜಗತ್ತಿಗೆ ಸಾರಿ ಸಹಸ್ರಾರು ಮಂದಿ ಬಡ ವಿದ್ಯಾರ್ಥಿಗಳ ಬಾಳನ್ನು ಹಸನುಗೊಳಿಸಿದ ಪರಮಪೂಜ್ಯ ಡಾ.ಶ್ರೀ ಶಿವಕುಮಾರ ಮಹಾಸ್ವಾಮೀಜಿಯವರ ದಾಸೋಹ ಸೇವೆ ಸೂರ್ಯ ಚಂದ್ರರಿರುವ ತನಕ ಅಮರವಾಗಿರುತ್ತದೆ ಎಂದು ಯೋಗಶಿಕ್ಷಕ ಹೆಚ್.ವಿ.ಶಿವರುದ್ರಸ್ವಾಮಿ ಹೇಳಿದರು.

ನಗರದ ಸ್ವರ್ಣಸಂದ್ರ ಬಡಾವಣೆಯಲ್ಲಿರುವ ಸಿದ್ದಗಂಗಾಶ್ರೀಗಳ ಉದ್ಯಾನವನದಲ್ಲಿ ಕಾಯಕಯೋಗಿ ಫೌಂಡೇಶನ್ ಹಾಗೂ ಸಿದ್ದಗಂಗಾಶ್ರೀಸೇವಾ ಸಮಿತಿ ವತಿಯಿಂದ ಪ್ರತಿ ತಿಂಗಳು ನಡೆಯುವ `ಸಿದ್ದಗಂಗಾಶ್ರೀ ದಾಸೋಹ ಹುಣ್ಣಿಮೆ’ ಕಾರ್ಯಕ್ರಮದಲ್ಲಿ ದಾಸೋಹಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಹಸಿವಿನ ಮಹತ್ವವನ್ನು ಅರಿತಿದ್ದ ಸಿದ್ದಗಂಗಾಮಠ ಸ್ವಾತಂತ್ರö್ಯ ಪೂರ್ವದಿಂದಲೇ ಜಾತಿ, ಧರ್ಮ, ವರ್ಣ, ವರ್ಗಗಳ ಬೇಧವನ್ನು ಕಿತ್ತೊಗೆದು ಸರ್ವರಿಗೂ ವಿದ್ಯೆ, ಅನ್ನ, ಆಸರೆಯಂತಹ ತ್ರಿವಿಧ ದಾಸೋಹವನ್ನು ಉಣಬಡಿಸುತ್ತಲೇ ಬಂದಿದೆ. ಹತ್ತು ಸಾವಿರಕ್ಕೂ ಹೆಚ್ಚು ಮಂದಿಗೆ ಶ್ರೀಸಿದ್ದಗಂಗಾಮಠ ಉಚಿತ ಶಿಕ್ಷಣ ನೀಡುತ್ತಾ ಬಂದಿರುವುದು ಎಲ್ಲಾ ಮಠಗಳಿಗೂ ಆದರ್ಶಪ್ರಾಯವಾಗಿದೆ ಎಂದರು.

ಕಾಯಕಯೋಗಿ ಫೌಂಡೇಶನ್ ಅಧ್ಯಕ್ಷ ಎಂ.ಶಿವಕುಮಾರ್ ಮಾತನಾಡಿ, ವಿಶ್ವಗುರು ಬಸವಣ್ಣನವರು ಹನ್ನೆರಡನೇ ಶತಮಾನದಲ್ಲೇ ಕಾಯಕ-ದಾಸೋಹ ಎರಡರ ಮಹತ್ವವನ್ನು ತಮ್ಮ ವಚನಗಳ ಮೂಲಕ ತಿಳಿಸಿ ಬದುಕುವ ದಾರಿಯನ್ನು ತೋರಿದ್ದಾರೆ. ಸಿದ್ದಗಂಗಾಶ್ರೀಗಳು ಅಣ್ಣನವರ ಆದರ್ಶಗಳನ್ನು ೨೧ನೇ ಶತಮಾನದಲ್ಲಿ ಅನುಷ್ಠಾನಕ್ಕೆ ತಂದ ಮಹಾನ್ ಸಂತರಾಗಿದ್ದು ಶ್ರೀಗಳ ಶುಭನಾಮದಲ್ಲಿ ಪ್ರತಿ ಹುಣ್ಣಿಮೆಯ ದಿನದಂದು ದಾಸೋಹಹುಣ್ಣಿಮೆ ಆಚರಿಸಲಾಗುತ್ತಿದೆ ಎಂದರು.

ಸೋಹಂ ಎನಿಸದೆ ದಾಸೋಹಂ' ಎಂದೆನಿಸಯ್ಯ ಎಂಬ ಶರಣರ ತತ್ವವನ್ನು ಪ್ರತಿಯೊಬ್ಬರೂ ಅರಿತಾಗ ಸಮಸಮಾಜ ನಿರ್ಮಾಣವಾಗಲು ಸಾಧ್ಯವಾಗುತ್ತದೆ. ಅಹಂಕಾರವನ್ನು ತೊರೆದು ನಿರಹಂಕಾರಿಯಾಗಿ ಬಡಿಸುವುದೇದಾಸೋಹ’. ಹಸಿದು ಬಂದವರಿಗೆ ಅನ್ನ, ವಿದ್ಯೆ ಇಲ್ಲದವರಿಗೆ ಶಿಕ್ಷಣ, ಅನಾಥರಿಗೆ ಆಶ್ರಯದಂತಹ ಪುಣ್ಯದ ಕೆಲಸಗಳನ್ನು ಮಾಡುವುದರಿಂದ ದೇವರನ್ನು ಕಾಣಬಹುದೇ ಹೊರತು ಕಾಲ್ಪನಿಕ ದೇವರುಗಳನ್ನು ಹುಡುಕುತ್ತಾ, ಹರಕೆ ಹೊತ್ತು ಸಮಯವನ್ನು ವ್ಯರ್ಥ ಮಾಡದೆ ದೀನ ದಲಿತರ, ಬಡಜನತೆಯ ಸೇವೆಯನ್ನೇ ದೈವವನ್ನಾಗಿಸಿಕೊಂಡಾಗ ಜೀವನ ಸಾರ್ಥಕವಾಗುತ್ತದೆ ಎಂದರು.

ಲಿಂಗಾಯತ ಮಹಾಸಭಾ ಅಧ್ಯಕ್ಷ ಎಂ.ಎಸ್.ಮಂಜುನಾಥ್ ಬೆಟ್ಟಹಳ್ಳಿ ಮಾತನಾಡಿ, ಸಕ್ಕರೆ ನಾಡು ಮಂಡ್ಯ ನಗರಕ್ಕೆ ಪ್ರವೇಶಸುತ್ತಿದ್ದಂತೆಯೇ ಕೈ ಬೀಸಿ ಕರೆಯುವ ಹಸಿರಿನ ಸುಂದರವಾದ ಸಿದ್ದಗಂಗಾಶ್ರೀಗಳ ಉದ್ಯಾನವನ ಮನಸ್ಸಿಗೆ ಆನಂದವನ್ನುಂಟು ಮಾಡುತ್ತದೆ. ಕಳೆದ ಹತ್ತಾರು ವರ್ಷಗಳ ಹಿಂದೆ ಪಾಳುಬಿದಿದ್ದ ಈ ಜಾಗವನ್ನು ಅಚ್ಚಹಸಿರಿನಿಂದ ಕಂಗೊಳಿಸುವಂತೆ ಮಾಡಿ ಪೂಜ್ಯಸಿದ್ದಗಂಗಾಶ್ರೀಗಳ ಹೆಸರಿನಲ್ಲಿ ಪ್ರತಿ ತಿಂಗಳು ದಾಸೋಹ ಹುಣ್ಣಿಮೆ ಆಚರಿಸಿ ನೂರಾರು ಮಂದಿಗೆ ಅನ್ನಸಂತರ್ಪಣೆ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಕಾಯಕಯೋಗಿ ಫೌಂಡೇಶನ್ ನಿರ್ದೇಶಕರಾದ ತಬ್ರೇಜ್ ಖಾನ್, ಸಾಗರ್, ನಟರಾಜ್, ಮುಖಂಡರಾದ ಬೆಳ್ಳಪ್ಪ, ಆಟೋ ರಾಜು, ಶಶಿಕಲಾ, ಮಹದೇವಪ್ಪ, ಪಂಚಲಿಂಗಯ್ಯ, ಪಾಪಣ್ಣ ಮತ್ತಿತರರು ಉಪಸ್ಥಿತರಿದ್ದರು.

ಮಂಡ್ಯ ನಗರದ ಸಿದ್ದಗಂಗಾಶ್ರೀಗಳ ಉದ್ಯಾನವನದಲ್ಲಿ ಕಾಯಕಯೋಗಿ ಫೌಂಡೇಶನ್ ಹಾಗೂ ಸಿದ್ದಗಂಗಾಶ್ರೀಸೇವಾ ಸಮಿತಿ ವತಿಯಿಂದ ಪ್ರತಿ ತಿಂಗಳು ನಡೆಯುವ `ದಾಸೋಹ ಹುಣ್ಣಿಮೆ’ ಕಾರ್ಯಕ್ರಮದಲ್ಲಿ ಗಣ್ಯರು ದಾಸೋಹಕ್ಕೆ ಚಾಲನೆ ನೀಡಿದರು. ಎಂ.ಶಿವಕುಮಾರ್, ಯೋಗಶಿಕ್ಷಕ ಶಿವರುದ್ರಪ್ಪ, ಎಂ.ಎಸ್.ಮಂಜುನಾಥ್ ಬೆಟ್ಟಹಳ್ಳಿ ಮತ್ತಿತರರಿದ್ದರು.

Share This Article
Leave a comment

Leave a Reply

Your email address will not be published. Required fields are marked *