ಪ್ರಜಾಪ್ರಭುತ್ವದ ಪರಿಕಲ್ಪನೆ ನೀಡಿದ ಸಾಂಸ್ಕೃತಿಕ ನಾಯಕ ಬಸವಣ್ಣ
ಕಲಬುರಗಿ:
ಜಿಲ್ಲೆಯ ಕಾಳಗಿ ತಾಲೂಕಿನ ಮಂಗಲಗಿ ಗ್ರಾಮದಲ್ಲಿ ಬಸವೇಶ್ವರ ಅಶ್ವಾರೂಢ ಮೂರ್ತಿ ಸಮಿತಿ ವತಿಯಿಂದ ಪ್ರತಿಷ್ಠಾಪಿಸಲಾದ 11 ಅಡಿ ಎತ್ತರದ ಅಶ್ವಾರೂಢ ಬಸವೇಶ್ವರ ಮೂರ್ತಿಯನ್ನು ಮಾಜಿ ಸಂಸದ ಡಾ. ಉಮೇಶ್ ಜಾಧವ್ ಅನಾವರಣಗೊಳಿಸಿದರು.
ನಂತರ ಮಾತನಾಡಿದ ಅವರು, ಕಾಯಕ ಯೋಗಿ ಬಸವಣ್ಣ ಅವರು ತಮ್ಮ ದೂರದೃಷ್ಟಿ ಚಿಂತನೆಯಿಂದ ಅಂದಿನ ಕಾಲದಲ್ಲಿ ಅನುಭವ ಮಂಟಪ ನಿರ್ಮಿಸುವ ಮೂಲಕ ವಿಶ್ವದಲ್ಲೇ ಮೊದಲ ಬಾರಿಗೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಡಿಪಾಯ ಹಾಕಿದರು. ಅವರು ನಮ್ಮೆಲ್ಲರಿಗೂ ಪ್ರೇರಣೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಅವರ ಜೀವನ, ಆದರ್ಶ ಹಾಗೂ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಂಡು ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕು ಎಂದು ತಿಳಿಸಿದರು.

ವಿಶ್ವವೇ ಅಜ್ಞಾನದ ಕತ್ತಲ್ಲಲ್ಲಿ ಮುಳುಗಿದ್ದ ಸಂದರ್ಭದಲ್ಲಿ ಸುಲಭ ಕನ್ನಡ ಭಾಷೆಯ ವಚನಗಳ ಮೂಲಕ ಕ್ರಾಂತಿ ಮಾಡಿದ ಬಸವೇಶ್ವರರು ಕಲ್ಯಾಣ ರಾಜ್ಯವನ್ನೇ ಸೃಷ್ಟಿಸಿದ್ದರು ಎಂದರು.

ಬಸವಕಲ್ಯಾಣ ಮಹಾಮನೆಯ ಪೂಜ್ಯ ಬಸವಪ್ರಭು ಮಹಾಸ್ವಾಮಿಗಳು ಮಾತನಾಡಿ, ಬಸವಣ್ಣ ಜಾತಿ, ಭೇದವನ್ನು ಮಾಡದೇ ಎಲ್ಲರನ್ನೂ ಸಮಾನವಾಗಿ ನೋಡಿದ ಸಾಂಸ್ಕೃತಿಕ ನಾಯಕ. ಅವರ ವಚನದಲ್ಲಿನ ತತ್ವಗಳು ಬದುಕಿನಲ್ಲಿ ಬದಲಾವಣೆಗೆ ದಾರಿಯಾಗಲಿವೆ ಎಂದರು.
ಬಸವಣ್ಣ ತಮ್ಮ ಚಿಂತನೆ, ವಚನಗಳ ಮೂಲಕವೇ ನಿಜವಾದ ಸಾಂಸ್ಕೃತಿಕ ನಾಯಕ ಎನ್ನಿಸಿದರು. ಅವರಿಗೆ ಎರಡು ವರ್ಷದ ಹಿಂದೆ ಸಾಂಸ್ಕೃತಿಕ ನಾಯಕ ಎನ್ನುವ ಗೌರವ ನೀಡಿದ್ದನ್ನು ಮೆಚ್ಚಲೇಬೇಕು. ಸಮಾನತೆ ತತ್ವ ಅಳವಡಿಸಿಕೊಂಡರೆ ಸಮಾಜದ ಸ್ವಾಸ್ಥ್ಯ ಹಾಳಾಗದಂತೆ ಮಾಡಬಹುದು ಎಂದು ಹಲವು ದಾರ್ಶನಿಕರು ಹೇಳಿದರು. ಆದರೆ, ಬಸವಣ್ಣ 12ನೇ ಶತಮಾನದಲ್ಲಿಯೇ ತೋರಿಸಿಕೊಟ್ಟ ಈ ಹಾದಿ ಜಗತ್ತಿಗೆ ಮಾದರಿಯಾಗಿದೆ ಎಂದರು.
ಆಳಂದ ತೋಂಟದಾರ್ಯ ಮಠದ ಪೂಜ್ಯ ವಿಶ್ವನಾಥ ಕೋರಣೇಶ್ವರ ಮಹಾಸ್ವಾಮಿಗಳು ಮಾತನಾಡಿ, ಬಸವಣ್ಣನವರು ಹಲವು ಸಾಮಾಜಿಕ ಸುಧಾರಣಾ ಕಾರ್ಯಗಳಿಂದಲೇ ಪ್ರಸಿದ್ಧಿಯಾದವರು. ಸಮಾಜದಲ್ಲಿ ಜಾತಿ ವ್ಯವಸ್ಥೆಯಿಂದ ಸಂಪೂರ್ಣವಾಗಿ ಮುಕ್ತವಾಗಿರಬೇಕು. ಸಮಾನತೆ ಇರಬೇಕೆಂದು ಬಯಸಿದ್ದರು ಎಂದರು.
ಬೀದರಿನ ಚನ್ನಬಸವಾನಂದ ಸ್ವಾಮೀಜಿ, ಭರತನೂರ ಪೂಜ್ಯ ಚಿಕ್ಕಗುರುನಂಜೇಶ್ವರ ಮಹಾಸ್ವಾಮಿಗಳು, ಮಂಗಲಗಿ ಪೂಜ್ಯ ಡಾ. ಶಾಂತಸೋಮನಾಥ ಶಿವಾಚಾರ್ಯರು ಮಾತನಾಡಿದರು. ಸೇಡಂ ಪೂಜ್ಯ ಡಾ. ಸದಾಶಿವ ಮಹಾಸ್ವಾಮಿಗಳು ಕಾರ್ಯಕ್ರಮ ಜ್ಯೋತಿ ಬೆಳಗಿಸಿದರು. ಶರಣ ಸಾಹಿತಿ ಡಾ. ನೀಲಾಂಬಿಕಾ ಪೊಲೀಸಪಾಟೀಲ ಅನುಭಾವ ನೀಡಿದರು. ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಆರ್.ಜಿ. ಶೆಟಗಾರ ಮಾತನಾಡಿದರು.

ಇದೇ ವೇಳೆ ಅಶ್ವಾರೂಢ ಬಸವೇಶ್ವರ ಮೂರ್ತಿ ಸಮಿತಿ ಸದಸ್ಯರಿಗೆ ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ಕಾಳಗಿ ವೀರಶೈವ ಲಿಂಗಾಯತ ಸಮಾಜದ ವತಿಯಿಂದ ತಲಾ 21 ಸಾವಿರ ದೇಣಿಗೆ ನೀಡಿದರು.
ಜಾಗತಿಕ ಲಿಂಗಾಯತ ಮಹಾಸಭೆ ರಾಜ್ಯ ಸಂಚಾಲಕ ರವೀಂದ್ರ ಶಾಬಾದಿ, ಬಸವೇಶ್ವರ ಮೂರ್ತಿ ಪ್ರತಿಷ್ಠಾಪನೆ ಸಮಿತಿ ಕೊಶಾಧ್ಯಕ್ಷ ನಾಗೇಂದ್ರ ದೇಶಮುಖ, ಕಾರ್ಯಾಧ್ಯಕ್ಷ ಸಂತೋಷ ಆರ್. ಪಾಟೀಲ, ಶರಣಗೌಡ ಪೊಲೀಸಪಾಟೀಲ, ಶಿವಶರಣಪ್ಪ ಕಮಲಾಪೂರ, ಮಲ್ಲಿನಾಥ ಕೊಲಕುಂದಿ, ಶೇಖರ ಪಾಟೀಲ, ಮಲ್ಲಿನಾಥ ಪಾಟೀಲ, ಜಗನ್ನಾಥ ತೇಲಿ, ಪ್ರಶಾಂತ ಕದಮ, ಪುರುಷೋತ್ತಮ ಗುತ್ತೇದಾರ, ರಮೇಶ ಕಿಟ್ಟದ, ರಾಜಶೇಖರ ತಿಮ್ಮನಾಯಕ, ಮಾರುತಿ ಜಮಾದಾರ, ಸಂಗ್ರಾಮ ಉಚ್ಚೇದ ಕೊಟಗಾ, ರಾಮುಗೌಡ ಗೋಟೂರ, ಶರಣು ಚಂದಾ, ರೇವಣಸಿದ್ದ ಕಲಶೆಟ್ಟಿ, ನಾಗರಾಜ ಚಿಕ್ಕಮಠ, ಬಂಡು ಬೊಮ್ಮಣ್ಣಿ, ಸಂಗಾರೆಡ್ಡಿ ಕೌಳಾಸ, ಈಶುಗೌಡ ಮಳಗಿ, ಮೋನಪ್ಪ ವಿಶ್ವಕರ್ಮ ಸೇರಿದಂತೆ ಅನೇಕರು ಇದ್ದರು.
ಸಂಗಣ್ಣ ವೀರಪ್ಪ ದೂಳಾಗುಂಡಿ ಸ್ವಾಗತಿಸಿದರು. ಬಸವೇಶ್ವರ ಮೂರ್ತಿ ಪ್ರತಿಷ್ಠಾಪನೆ ಸಮಿತಿ ಅಧ್ಯಕ್ಷ ನಿಂಬೆಣಪ್ಪ ಕೋರವಾರ ಪ್ರಾಸ್ತಾವಿಕ ಮಾತನಾಡಿದರು. ಬಸವರಾಜ ದೂಳಗುಂಡಿ ನಿರೂಪಿಸಿ ವಂದಿಸಿದರು.
