‘ದಂಪತಿಗಳು ಅನುಮಾನವಿಲ್ಲದೆ ಸಾಮರಸ್ಯದಿಂದ ಬಾಳಬೇಕು’

ಬಸವ ಮೀಡಿಯಾ
ಬಸವ ಮೀಡಿಯಾ

ಚಿತ್ರದುರ್ಗ:

ಸತಿ ಪತಿಗಳಿಬ್ಬರು ದಾಂಪತ್ಯದಲ್ಲಿ ಸಾಮರಸ್ಯದಿಂದ ಬಾಳಬೇಕು. ಯಾವುದೇ ಕಾರಣದಿಂದ ಅನುಮಾನಗಳು ನುಸುಳಲು ಅವಕಾಶ ನೀಡದಂತೆ ಬದುಕಬೇಕು ಎಂದು ಬಸವ ಕೇಂದ್ರ, ಮುರುಘಾಮಠದ ಆಡಳಿತ ಮಂಡಳಿ ಸದಸ್ಯ ಪೂಜ್ಯ ಡಾ. ಬಸವಕುಮಾರ ಸ್ವಾಮೀಜಿ ಹೇಳಿದರು.

ಈಚೆಗೆ ಚಿತ್ರದುರ್ಗದ ಮುರುಘಾಮಠದಲ್ಲಿ ನಡೆದ 37ನೇ ವರ್ಷದ 7ನೇ ತಿಂಗಳ ಉಚಿತ ಸಾಮೂಹಿಕ ವಿವಾಹ ಮಹೋತ್ಸವದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ವೈವಾಹಿಕ ಜೀವನದಲ್ಲಿ ಹಾಗೊಂದು ವೇಳೆ ಅನುಮಾನಗಳಿದ್ದರೆ ವಿವೇಚನೆಯಿಂದ ನಿರ್ಧಾರ ಕೈಗೊಳ್ಳಬೇಕು. ಬದುಕಿದ್ದಾಗ ನಾವು ಹೊಂದಿರುವ ಒಳ್ಳೆಯ ಗುಣಗಳೇ ಮುಂದೆ ನಮಗೆ ನಿಜವಾದ ಆಸ್ತಿಯಾಗಿರುತ್ತವೆ ಎಂದರು.

ಬಸವಾದಿ ಶರಣರ ಆಶಯದಂತೆ ನವದಂಪತಿಗಳು ಯಾವುದೇ ಜಾತಿ ಬೇಧವಿಲ್ಲದೆ ಒಂದೇ ವೇದಿಕೆಯಲ್ಲಿ ವಿವಾಹವಾಗುತ್ತಿರುವುದು ಅತ್ಯಂತ ಸಾತ್ತ್ವಿಕ ಮತ್ತು ಶ್ಲಾಘನೀಯ ಕಾರ್ಯ.

1990ರಲ್ಲಿ ಮಠದ ಪೂಜ್ಯ ಜಗದ್ಗುರುಗಳಾದ ಮಲ್ಲಿಕಾರ್ಜುನ ಶ್ರೀಗಳು ಈ ಉಚಿತ ವಿವಾಹ ಕಾರ್ಯಕ್ರಮದ ಪರಂಪರೆಯನ್ನು ಆರಂಭಿಸಿದರು. ಅಂದಿನಿಂದ ಇಂದಿನವರೆಗೆ ಪ್ರತಿ ತಿಂಗಳು ಸುಮಾರು 20 ರಿಂದ 30 ಉಚಿತ ವಿವಾಹಗಳು ಮಠದಲ್ಲಿ ನಿರಂತರವಾಗಿ ನೆರವೇರುತ್ತಾ ಬಂದಿವೆ. ಅಖಿಲ ಭಾರತ ಮಟ್ಟದಲ್ಲಿ ಶ್ರೀ ಮಠವು ತುಂಬ ಹಿಂದಿನಿಂದಲೂ ಇಂತಹ ಸತ್ಕಾರ್ಯಗಳನ್ನು ನಡೆಸಿಕೊಂಡು ಬಂದಿದೆ ಎಂದು ಸ್ಮರಿಸಿದರು.

ಇದೇ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಒಟ್ಟು 9 ಜೋಡಿಗಳು ವೈವಾಹಿಕ ಜೀವನಕ್ಕೆ ಪಾದಾರ್ಪಣೆ ಮಾಡಿದರು. ನವದಂಪತಿಗಳಿಗೆ ಶುಭ ಹಾರೈಸಿದ ಶ್ರೀಗಳು, ಆರೋಗ್ಯ ಮತ್ತು ಸೌಹಾರ್ದಯುತ ಬದುಕು ನಿಮ್ಮದಾಗಲಿ ಎಂದರು.

ಬಸವಾದಿ ಶರಣರ ತತ್ವಗಳು ಹಾಗೂ ಮಠದ ಸತ್ಕಾರ್ಯಗಳನ್ನು ಮುಂದಿನ ಪೀಳಿಗೆಗೂ ಮುಂದುವರಿಸಿಕೊಂಡು ಹೋಗಬೇಕು. ಈ ವಿವಾಹ ಮಹೋತ್ಸವದಲ್ಲಿ ದಾಂಪತ್ಯಕ್ಕೆ ಅಡಿ ಇಟ್ಟ ಜೋಡಿಗಳು ಮಠದ ನಿಯಮಾವಳಿಗಳನ್ನು ಶಿಸ್ತುಬದ್ಧವಾಗಿ ಪಾಲಿಸುವ ಮೂಲಕ ಆದರ್ಶ ದಂಪತಿಗಳಾಗಿ ಸಮಾಜಕ್ಕೆ ಮಾದರಿಯಾಗಬೇಕು ಎಂದು ಹೇಳಿದರು.

ಯುವ ಪೀಳಿಗೆ ಹಾಗೂ ಸಾರ್ವಜನಿಕರಿಗೆ ಬದುಕಿನ ಸತ್ಯಗಳನ್ನು ಮನವರಿಕೆ ಮಾಡುವ ನಿಟ್ಟಿನಲ್ಲಿ ಹಿರಿಯರು ಮಹತ್ವದ ಕಿವಿಮಾತುಗಳನ್ನು ನೀಡಿದ್ದಾರೆ. ಜೀವನದ ಮೌಲ್ಯ ಅರಿಯಲು ಮನೆಯಿಂದ ಹೊರಬೀಳುವ ಮುನ್ನ ಪ್ರತಿಯೊಬ್ಬರೂ ಬದುಕಿನ ಮೌಲ್ಯವನ್ನು ಅರಿತುಕೊಳ್ಳುವುದು ಅತ್ಯಗತ್ಯವಾಗಿದೆ ಎಂದು ಶಿರಸಂಗಿ ಮಠದ ಪೂಜ್ಯ ಬಸವ ಮಹಾಂತ ಸ್ವಾಮೀಜಿ ಮಾತನಾಡಿದರು.

ಕೇವಲ ಮನೆಯ ಯಜಮಾನ ಅಥವಾ ಮಾಲೀಕರು ಮಾತ್ರವಲ್ಲದೆ, ಮನೆಯಲ್ಲಿರುವ ಪ್ರತಿಯೊಬ್ಬ ಸದಸ್ಯರೂ ಜವಾಬ್ದಾರಿಯನ್ನು ಅರಿತು ಮುನ್ನಡೆದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ. ಯುವ ಸಮುದಾಯವು ಕಾಲಕಾಲಕ್ಕೆ ತಕ್ಕಂತೆ ಶಿಸ್ತು ಮತ್ತು ಕಠಿಣ ನಿಯಮಗಳನ್ನು ಅಳವಡಿಸಿಕೊಳ್ಳಬೇಕು. ಮಿತಿಮೀರಿದ ವೆಚ್ಚ ಹಾಗೂ ದುಂದುವೆಚ್ಚಗಳಿಗೆ ಕಡಿವಾಣ ಹಾಕಿ, ಜೀವನದಲ್ಲಿ ನಿಯಂತ್ರಣ ಸಾಧಿಸುವುದು ಯಶಸ್ಸಿನ ಪ್ರಮುಖ ಸೂತ್ರವಾಗಿದೆ ಎಂದರು.

ಸಮಾಜದಲ್ಲಿ ದಲಿತ, ಶೋಷಿತ ಹಾಗೂ ನಿರಾಶ್ರಿತರ ಕಲ್ಯಾಣಕ್ಕಾಗಿ ಶ್ರೀಮಠವು ನಿರಂತರವಾಗಿ ಶ್ರಮಿಸುತ್ತಿದೆ. ಪೂಜ್ಯರ ಮಾರ್ಗದರ್ಶನದಲ್ಲಿ ಮಠವು ಶರಣ ಸಂಸ್ಕೃತಿಯಂತಹ ಅನೇಕ ಜನಪರ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ. ಪ್ರತಿಯೊಬ್ಬ ಮಾನವನೂ ಜೀವನದಲ್ಲಿ ನೀತಿ ಹಾಗೂ ನಿಷ್ಠೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಛಲವಾದಿ ಮಹಾಸಂಸ್ಥಾನ ಮಠದ ಪೂಜ್ಯ ಬಸವನಾಗಿದೇವ ಸ್ವಾಮೀಜಿ ತಿಳಿಸಿದರು.

ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಎಸ್.ಎಸ್. ಚಂದ್ರಶೇಖರ್‌ ಅವರು ಮಾತನಾಡಿ, ಕಳೆದ 37 ವರ್ಷಗಳಿಂದ ಅಮಾವಾಸ್ಯೆ, ಹುಣ್ಣಿಮೆ, ಆಷಾಢ ಎನ್ನದೆ ನಿರಂತರವಾಗಿ ಪ್ರತಿತಿಂಗಳು ಐದನೇ ತಾರೀಖಿನಂದು ಸಾಮೂಹಿಕ ಕಲ್ಯಾಣ ಮಹೋತ್ಸವ ನೆರವೇರಿಸುತ್ತಿರುವುದು ಅತ್ಯಂತ ಶ್ಲಾಘನೀಯ ಎಂದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಪ್ರೇಮಲತಾ ಬಿ., ಪೂಜ್ಯ ಬಸವ ಮುರುಗೇಂದ್ರ ಸ್ವಾಮಿಗಳು ಉಪಸ್ಥಿತರಿದ್ದರು.

ಜಮುರಾ ಕಲಾವಿದರು ಪ್ರಾರ್ಥಿಸಿದರು. ಗಿರೀಶ ಆಚಾರ್ಯ ಸ್ವಾಗತಿಸಿದರು. ಲಂಕೇಶ ದೇವರು ನಿರೂಪಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/IuAONC0TfmA8PyaqHT9WIP

Share This Article
Leave a comment

Leave a Reply

Your email address will not be published. Required fields are marked *