ಒಳ್ಳೆಯ ಜೀವನ ಶೈಲಿಯಿಂದ ಉತ್ತಮ ಆರೋಗ್ಯ ಹೊಂದಲು ಸಾಧ್ಯ :  ಡಾ. ಸಿದ್ಧರಾಮ ಶ್ರೀಗಳು

ಬಸವ ಮೀಡಿಯಾ
ಬಸವ ಮೀಡಿಯಾ

ಗದಗ :

ಸಮತೋಲಿತ ಆಹಾರ-ವಿಹಾರ, ದೈಹಿಕ ಶ್ರಮ, ಉತ್ತಮ ಆಚಾರ ವಿಚಾರಗಳು ನಮ್ಮ ದಿನನಿತ್ಯದ ದಿನಚರಿಯಾಗಬೇಕು. ಒಳ್ಳೆಯ ಜೀವನ ಶೈಲಿಯಿಂದ ಉತ್ತಮ ಆರೋಗ್ಯ ಹೊಂದಲು ಸಾಧ್ಯ ಎಂದು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಹೇಳಿದರು.

ಲಿಂಗಾಯತ ಪ್ರಗತಿಶೀಲ ಸಂಘದ ೨೭೯೭ ನೆಯ ಶಿವಾನುಭವದ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಪ್ರಸ್ತುತ ಒತ್ತಡದ ಬದುಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಪ್ರತಿಯೊಬ್ಬರು ಯಾವುದಾದರೊಂದು ಒತ್ತಡದಲ್ಲಿ ಬಿದ್ದು ಒದ್ದಾಡುತ್ತಿರುತ್ತಾರೆ. ಮಾನಸಿಕ ನೆಮ್ಮದಿ ಹೆಚ್ಚಿನ ಜನರಲ್ಲಿ ಇಂದು ಇಲ್ಲ. ಮಾನಸಿಕ ಒತ್ತಡಕ್ಕೆ ಒಳಗಾಗಿ ದೈಹಿಕ ಮತ್ತು ಮಾನಸಿಕವಾಗಿ ಅನೇಕ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ.

ಸಣ್ಣಮಗುವಿನಿಂದ ಹಿಡಿದು ಹಿರಿಯರವರೆಗೂ ಅತ್ಯುತ್ತಮ ಜೀವನಶೈಲಿ ರೂಢಿಸಿಕೊಂಡು ದೇಹ ಮತ್ತು ಮನಸ್ಸಿನ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ದೇಹ ಚೆನ್ನಾಗಿದ್ದರೆ ಮನಸ್ಸು ಚೆನ್ನಾಗಿರುತ್ತದೆ. ದೇಹ ಮತ್ತು ಮನಸ್ಸು ಉತ್ತಮವಾಗಿದ್ದರೆ ಶ್ರೇಷ್ಠ ಸಾಧನೆ ಮಾಡಲು ಸಾಧ್ಯವಿದೆ ಎಂದರು.

ಹುಬ್ಬಳ್ಳಿಯ ಖ್ಯಾತ ತಜ್ಞ ವೈದ್ಯರಾದ ಡಾ. ಸುನೀಲ ಕರಿ ಅವರು ಸಕ್ಕರೆ ಕಾಯಿಲೆಯಿಂದ ಬರಬಹುದಾದ ಗ್ಯಾಂಗ್ರಿನ್ ತಡೆಗಟ್ಟುವಿಕೆ ಹಾಗೂ ಅದಕ್ಕೆ ನೀಡಬಹುದಾದ ವೈದ್ಯಕೀಯ ಚಿಕಿತ್ಸೆಯ ಕುರಿತು ಮಾತನಾಡಿದರು.

ಸಕ್ಕರೆ ಕಾಯಿಲೆಯಿಂದ ಕಣ್ಣು, ಹೃದಯ, ಕಿಡ್ನಿ ಮತ್ತು ಪಾದಗಳಿಗೆ ಹಾನಿಯಾಗುತ್ತದೆ. ದೇಹದ ಪ್ರಮುಖ ಅಂಗಗಳಲ್ಲಿ ಒಂದಾದ ಪಾದಗಳು ಹಾಗೂ ಕಾಲಿನ ರಕ್ಷಣೆ ಮಾಡಿಕೊಳ್ಳುವುದು ತುಂಬಾ ಅವಶ್ಯ. ರೋಗ ಬಂದ ಮೇಲೆ ಚಿಕಿತ್ಸೆ ಪಡೆಯುವುದಕ್ಕಿಂತ ಬರದಂತೆ ಮುನ್ನೆಚ್ಚರಿಕೆ ವಹಿಸುವುದು ಬಹಳ ಮುಖ್ಯವೆಂದರು.

ಎಂಬಿಎ ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ಸ್ಥಾನದೊಂದಿಗೆ ಐದು ಚಿನ್ನದ ಪದಕ ಪಡೆದ ಕುಮಾರಿ ವಾಣಿಶ್ರೀ ಎಸ್. ಕಲಬುರ್ಗಿ ಅವರನ್ನು ಸನ್ಮಾನಿಸಲಾಯಿತು. ವಾಣಿಶ್ರೀ ಅವರು ಸನ್ಮಾನೋತ್ತರವಾಗಿ ಪರಿಶ್ರಮ ಮತ್ತು ಹಿರಿಯರ ಪ್ರೋತ್ಸಾಹದಿಂದ ಈ ಸಾಧನೆ ಮಾಡಲು ಸಾಧ್ಯವಾಯಿತು ಎಂದರು.

ಪ್ರಾರಂಭದಲ್ಲಿ ವಚನ ಸಂಗೀತವನ್ನು ಶಿವಮೊಗ್ಗದ ನಾಗರತ್ನ ಟಿ.ಜೆ. ಹಾಗೂ ತನ್ಮಯಿ ಎಚ್. ಎಸ್. ನಡೆಸಿಕೊಟ್ಟರು. ಧರ್ಮಗ್ರಂಥ ಪಠಣವನ್ನು ಸೃಷ್ಟಿ ಸುಳ್ಳದ ವಚನ ಚಿಂತನವನ್ನು ಸನ್ಮತಿ ಕಾಟ್ರಳ್ಳಿ ನೆರವೇರಿಸಿದರು. ದಾಸೋಹ ಸೇವೆಯನ್ನು ಲಿಂಗೈಕ್ಯ ಶೋಭಾ ಹಾಗೂ ಲಿಂಗೈಕ್ಯ ಬಸವರಾಜ ರಾಜಪ್ಪ ಅಂಗಡಿ ಸ್ಮರಣಾರ್ಥ ಚೇತನ ಬಸವರಾಜ ಅಂಗಡಿ ಗಜೇಂದ್ರಗಡ ಮತ್ತು ರಾಮದುರ್ಗದ ಅಂಗಡಿ ಪರಿವಾರದವರು ನೆರವೇರಿಸಿದರು.

ಕರ್ನಾಟಕ ಸರ್ಕಾರದಲ್ಲಿ ಸಚಿವರಾಗಿದ್ದ ಡಿ. ಸುಧಾಕರ ಹಾಗೂ ಗದುಗಿನ ಕನಕದಾಸ ಶಿಕ್ಷಣ ಸಮಿತಿಯ ಶಕುಂತಲಾ ದಂಡಿನ ಅವರು ಲಿಂಗೈಕ್ಯರಾದ ನಿಮಿತ್ಯ ಒಂದು ನಿಮಿಷ ಮೌನಾಚರಣೆ ಮಾಡಿ ಸಂತಾಪದ ಗೌರವವನ್ನು ಸಲ್ಲಿಸಲಾಯಿತು.

ಶಿವಾನುಭವದಲ್ಲಿ ನೆರೆದ ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನು ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷರಾದ ಡಾ. ಉಮೇಶ ಪುರದ ಮಾಡಿದರು. ಕಾರ್ಯಕ್ರಮ ನಿರೂಪಣೆಯನ್ನು ಸಮಿತಿಯ ಚೇರ್ಮನ್ನರಾದ ಡಾ. ರಮೇಶ ಕಲ್ಲನಗೌಡರ ನೆರವೇರಿಸಿದರು. ಶಿವಾನುಭವದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದ ಉಪಾಧ್ಯಕ್ಷರಾದ ಪ್ರಭು ಗಂಜಿಹಾಳ, ಸುರೇಖಾ ಪಿಳ್ಳಿ, ಕಾರ್ಯದರ್ಶಿಗಳಾದ ಸಿದ್ಧರಾಮ ಪಟ್ಟೇದ ಸಹಕಾರ್ಯದರ್ಶಿಗಳಾದ ಪ್ರತಿಭಾ ಬಡ್ನಿ, ಕೋಶಾಧ್ಯಕ್ಷರಾದ ವೀರಣ್ಣ ಗೋಟಡಕಿ, ಕೆ.ಎಸ್. ಕೋರಿಮಠ, ಸೋಮಶೇಖರ ಪುರಾಣಿಕ, ಆದೇಶ ಅಂಗಡಿ ಹಾಗೂ ಶ್ರೀಮಠದ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿ ಶಿವಾನುಭವ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KEa0QcMUeol3Lxo87TDFPa

Share This Article
Leave a comment

Leave a Reply

Your email address will not be published. Required fields are marked *