ಬಸವಾದಿ ಶರಣರ ಹೆಸರಿನ ಹಿಂದೂ ಸಮಾವೇಶ ವಿರುದ್ಧ ‘ಶಹಾಪೂರ ಚಲೋ’

ಬಸವಾದಿ ಶರಣರ ಹೆಸರಿನ ದುರ್ಬಳಕೆ ವಿರುದ್ಧ ‘ಬಸವಾದಿ ಶರಣ ಜಾಗೃತಿ ಸಮಾವೇಶ’

ಕಲಬುರಗಿ

ಬಸವಾದಿ ಶರಣರ ಹೆಸರಿನ ದುರ್ಬಳಕೆ ವಿರುದ್ಧ ಬಸವಪರ ಸಂಘಟನೆಗಳು ‘ಶಹಾಪೂರ ಚಲೋ’ ಪ್ರತಿಭಟನೆಗೆ ಕರೆ ಕೊಟ್ಟಿವೆ.

ಕನ್ನೇರಿ ಸ್ವಾಮಿ ನೇತೃತ್ವದಲ್ಲಿ ಸಂಘ ಪರಿವಾರ ಬಸವಾದಿ ಶರಣರ ಹೆಸರಿನ ಹಿಂದೂ ಸಮಾವೇಶವನ್ನು ಮೇ 19 ಆಯೋಜಿಸಿದೆ.

ಇದರ ವಿರುದ್ಧವಾಗಿ ಮೇ 15 ನಗರದಲ್ಲಿ ಬಸವಪರ ಸಂಘಟನೆಗಳು ‘ಬಸವಾದಿ ಶರಣ ಜಾಗೃತಿ ಸಮಾವೇಶ’ ನಡೆಸಲು ಸಿದ್ಧವಾಗುತ್ತಿವೆ.

ಕನ್ನೇರಿ ಸ್ವಾಮಿ ಸಮಾವೇಶದ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಬಸವಪರ ಸಂಘಟನೆಗಳು ಕಳೆದ ವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು.

ಜಾಗತಿಕ ಲಿಂಗಾಯತ ಮಹಾಸಭಾ, ಸೌಹಾರ್ದ ಕರ್ನಾಟಕ, ಕಾಯಕ ಶರಣರ ಒಕ್ಕೂಟ ಹಾಗೂ ಹಲವಾರು ಬಸವಪರ ಸಂಘಟನೆಗಳು ‘ಬಸವಾದಿ ಶರಣ ಜಾಗೃತಿ ಸಮಾವೇಶ’ಕ್ಕೆ ಜನರನ್ನು ಸೇರಿಸಲು ಶುರು ಮಾಡಿವೆ.

“ಹಿಂದೂ ಸಮಾವೇಶ ಮಾಡಲು ನಮ್ಮ ವಿರೋಧವಿಲ್ಲ. ಆದರೆ ಬಸವಾದಿ ಶರಣರ ಹೆಸರಿನ ಹಿಂದೂ ಸಮಾವೇಶಕ್ಕೆ ನಮ್ಮ ಸಂಪೂರ್ಣ ವಿರೋಧವಿದೆ,” ಎಂದು ಕಲಬುರಗಿ ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷ ಆರ್.ಜಿ. ಶೆಟಗಾರ ಹೇಳಿದರು.

ಆರ್.ಜಿ. ಶೆಟಗಾರ

“ಯಾದಗಿರಿ, ಕಲಬುರಗಿ ಬೀದರ, ವಿಜಯಪುರ ಜಿಲ್ಲೆಗಳಿಂದಲೂ ಬಸವಭಿಮಾನಿಗಳು ಬರುತ್ತಾರೆ. ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ಸಭೆಗಳನ್ನು ನಡೆಸುತ್ತಿದ್ದೇವೆ. ಈಗಾಗಲೇ 50 ಹಳ್ಳಿಗಳಲ್ಲಿ ಪ್ರಚಾರ ಕೆಲಸ ಮುಗಿದಿದೆ.

10 ಸಾವಿರ ಕರಪತ್ರ ಮುದ್ರಿಸಿ ಹಂಚುತ್ತಿದ್ದೇವೆ. ಸಮಾವೇಶಕ್ಕೆ ಸುಮಾರು 5 ಸಾವಿರ ಜನ ಭಾಗವಹಿಸಬಹುದು. ಸಮಾವೇಶದ ದಿನ ಬೆಳಿಗ್ಗೆ ಬೈಕ್ ರ್ಯಾಲಿ ಇರುತ್ತದೆ. ಮಧ್ಯಾಹ್ನದ ನಂತರ ಬೃಹತ್ ಮೆರವಣಿಗೆ, ಸಮಾವೇಶ ನಡೆಯುತ್ತದೆ,” ಎಂದು ಶೆಟಗಾರ ತಿಳಿಸಿದರು.

“ಇನ್ನೆರಡು ದಿನಗಳಲ್ಲಿ ಯಾದಗಿರಿ, ಕಲಬುರಗಿ ಜಿಲ್ಲೆಗಳ ಮಂತ್ರಿಗಳನ್ನು ಬಸವಪರ ಸಂಘಟನೆಗಳ ವತಿಯಿಂದ ಭೇಟಿಯಾಗಿ ಮಾತಾಡುತ್ತೇವೆ. ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರಿಗೆ ಅಪಚಾರ, ಅವಮಾನ ಎಸಗುತ್ತಿರುವುದನ್ನು ತಿಳಿಸುತ್ತೇವೆ. ವೀರಶೈವ ಮಹಾಸಭಾದವರಿಗೂ ಸೇರಿ ಅನೇಕ ಸಂಘಟನೆಗಳಿಗೆ ಪಾಲ್ಗೊಳ್ಳಲು ಅಹ್ವಾನ ನೀಡಿದ್ದೇವೆ,” ಎಂದು ಶೆಟಗಾರ ಹೇಳಿದರು.

‘ಬಸವಾದಿ ಶರಣ ಜಾಗೃತಿ ಸಮಾವೇಶ’ಕ್ಕೆ ಬಿಡುಗಡೆ ಮಾಡಿರುವ ವಿಶೇಷ ಕರಪತ್ರದಲ್ಲಿ ಶರಣರ ಹೆಸರಿನ ದುರ್ಬಳಕೆಯನ್ನು ಖಂಡಿಸಲಾಗುವೆ.

“ತಮ್ಮ ರಾಜಕೀಯ ಅಜೆಂಡಾಕ್ಕೆ ಬಳಸಿಕೊಳ್ಳಲೆಂದು ಕೋಮುವಾದಿಗಳು ಇತ್ತೀಚೆಗೆ ಹಿಂದೂ ಹೆಸರಿನಲ್ಲಿ ವರ್ಣಾಶ್ರಮ ಪದ್ಧತಿಯನ್ನು ಪುನಃ ಪ್ರತಿಷ್ಠಾಪಿಸಲು ಹೊರಟಿದ್ದಾರೆ. ಅದರ ಭಾಗವಾಗಿಯೇ ಶಹಾಪುರದಲ್ಲಿ ಬಸವಾದಿ ಶರಣ ಹಿಂದೂ ಸಮಾವೇಶ ಮಾಡಲು ಹೊರಟಿದ್ದಾರೆ.

ಶರಣರ ಅನುಯಾಯಿಗಳಾಗಿರುವ ಅಸಂಖ್ಯ ದುಡಿಯುವ ಜನರನ್ನು ತಮ್ಮತ್ತ ಸೆಳೆದುಕೊಳ್ಳುವ ಕುತಂತ್ರ ಇಂಥ ಸಮಾವೇಶಗಳದು.

ಅವರು ತೋಡಿದ ಖೆಡ್ಡಾಕ್ಕೆ ಭಾವುಕ ಮುಗ್ಧ ಅಸಂಖ್ಯಾತ ಜನರು ಬೀಳದಂತೆ ಎಚ್ಚರ ವಹಿಸಲೆಂದು ಬಸವಾದಿ ಶರಣ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ,” ಎಂದು ತಿಳಿಸಲಾಗಿದೆ.

“ಈ ಕೋಮುವಾದಿಗಳಿಗೆ ಬಸವಣ್ಣನವರ ಅಥವಾ ಶರಣರ ಬಗೆಗೆ ಭಕ್ತಿಯೂ ಇಲ್ಲ. ಅಭಿಮಾನವಂತೂ ಮೊದಲೇ ಇಲ್ಲ. ಕರ್ನಾಟಕ ಸರಕಾರವು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ್ದು ಕೂಡ ಕೋಮುವಾದಿಗಳಿಗೆ ಕಿರಿಕಿರಿಯನ್ನುಂಟು ಮಾಡಿದೆ. ಬಸವಾದಿ ಶರಣರನ್ನು ನಿವಾರಿಸಿಕೊಳ್ಳಲು ಸಾಧ್ಯವಿಲ್ಲದ್ದರಿಂದ ಶರಣರ ತತ್ವಗಳನ್ನೆ ತಿರುಚಲು ಮುಂದಾಗಿದ್ದಾರೆ. ಶರಣರು ಪುರಾತನರೆ ಹೊರತು ಸನಾತನಿಗಳಲ್ಲ,” ಎಂದು ಕರಪತ್ರದಲ್ಲಿ ತಿಳಿಸಲಾಗಿದೆ.

ಕರಪತ್ರದಲ್ಲಿ ಸರಕಾರದ ವಿರುದ್ದವೂ ಕಿಡಿಕರಲಾಗಿದೆ.

“ಬಸವಣ್ಣನವರನ್ನು ಹಿಂದುತ್ವದ ಖೆಡ್ಡಾಕ್ಕೆ ಬೀಳಿಸಿ ಸಾಂಸ್ಕೃತಿಕ ನಾಯಕತ್ವವನ್ನು ವಿಕೃತಿಗೊಳಿಸಲು ಯತ್ನಿಸುತ್ತಿರುವ ಕೋಮುವಾದಿಗಳನ್ನು ತಡೆಗಟ್ಟುವುದು ಸರಕಾರದ ಕರ್ತವ್ಯವಾಗಿದೆ ಎಂದು ನೆನಪಿಸುತ್ತೇವೆ,” ಎಂದು ಹೇಳಲಾಗಿದೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KEa0QcMUeol3Lxo87TDFPa

Share This Article
3 Comments
  • 👍🏻👍🏻ಮುನ್ನುಗ್ಗಿ ಜಯ ಬಸವ 👌🏻👌🏻ಒಳ್ಳೆ ಕೆಲಸ ನಮ್ಮ ಬೆಂಬಲ ನಿಮಗಿದೆ 👏🏻🙏🏻🙏🏻ಶರಣು 👏🏻👏🏻

  • ರಾಯಚೂರು ಜಿಲ್ಲೆಯ ಬಸವಪರ ಸಂಘಟನೆಗಳು ಸಹ ಭಾಗವಹಿಸಲಿದ್ದಾರೆ ಎಂದು ಅಡಿಟ್ ಮಾಡಿ.

  • ಬಸವಾದಿ ಶರಣರ ಸಮಾವೇಶ ಮಾಡಲಿ. ಅಥವಾ ಹಿಂದೂ ಸಭಾವೇಶವಾದರು ಮಾಡಲಿ. ಬಸವಾದಿ ಶರಣರ ಹಿಂದೂ ಸಮಾವೇಶ ಮಾಡುವುದು ಕುಚೋದ್ಯದ ಕೆಲಸ. ಕಲ್ಯಾಣ ಕರ್ನಾಟಕದ ಮತ್ತು ಕರ್ನಾಟಕ ರಾಜ್ಯದ ಎಲ್ಲ ಲಿಂಗಾಯತ ಮಠಾಧೀಶರು, ಸಕಲ ಬಸವಾದಿ ಶರಣರ ಭಕ್ತರು, ಅನುಯಾಯಿಗಳು, ಅಭಿಮಾನಿಗಳು ಒಗ್ಗೂಡಿ ಬಸವಾದಿ ಶರಣರ ಹಿಂದೂ ಸಮಾವೇಶವೆಂಬ ಕುಚೋದ್ಯದ ಕೆಲಸ ಕೈಗೊಳ್ಳುವಂತೆ ತಡೆಯಲೇಬೇಕು.

Leave a Reply

Your email address will not be published. Required fields are marked *