ಬೆಂಗಳೂರು
ಬಿ. ಎಸ್. ಯಡಿಯೂರಪ್ಪನವರ ೫೫ ವರ್ಷಗಳ ‘ಜನಸೇವೆ’ಯ ಕುರುಹಾಗಿ ಅಭಿಮಾನೋತ್ಸವವು ನಡೆಯುತ್ತಿದೆ. ಅಭಿಮಾನಿಗಳು ಮತ್ತು ಅವರ ಕುಟುಂಬಸ್ಥರು ಇದನ್ನು ನಡೆಸುತ್ತಿದ್ದಾರೆ.
ಯಡಿಯೂರಪ್ಪ ಪ್ರಶ್ನಾತೀತ ಲಿಂಗಾಯತ ನಾಯಕ ಎನ್ನುವುದು ಸಾಮಾನ್ಯ ಭಾವನೆ. ಲಿಂಗಾಯತರಲ್ಲಿ ಇವರ ಬಗ್ಗೆ ಇಂತಹ ಉತ್ಕಟ ಅಭಿಮಾನವಿರುವುದೂ ಸತ್ಯ.
ಇಂದು ಪ್ರಜಾವಾಣಿ ಪತ್ರಿಕೆಯಲ್ಲಿ(ಮೇ ೦೮) ಅಭಿಮಾನೋತ್ಸವದ ಬಗ್ಗೆ ಎರಡು ಪೂರ್ಣ ಪುಟಗಳ ಜಾಹಿರಾತನ್ನು ನೀಡಲಾಗಿದೆ. ಅದರಲ್ಲಿ ಎಲ್ಲಿಯೂ ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರ ಭಾವಚಿತ್ರವಿಲ್ಲ. ಜೊತೆಗೆ ಯಡಿಯೂರಪ್ಪನವರ ಮುಖದಲ್ಲಿ ವಿಭೂತಿಯಿಲ್ಲ.
ಇವರು ವಿಭೂತಿಧಾರಿಗಳಲ್ಲ, ಕುಂಕುಮಧಾರಿಗಳು. ವಿಭೂತಿ ಲಿಂಗಾಯತ ವ್ಯಕ್ತಿತ್ವಕ್ಕೆ ಪವಿತ್ರವಾದ ಭೂಷಣ. ಇದು ಇವರಿಗೆ ಗೊತ್ತಿಲ್ಲ.
ಈ ಬಗ್ಗೆ ಚೆನ್ನಬಸವಣ್ಣನವರ ವಚನ ನೆನಸಿಕೊಳ್ಳೋಣ:
ವೇದ ಶಾಸ್ತ್ರ ಪುರಾಣಾಗಮಂಗಳಲ್ಲಿ ತಾನೆ ಪ್ರಸಿದ್ಧವಾಗಿ,
ಕೊಂಡಾಡಿಸಿಕೊಳ್ಳಲ್ಪಟ್ಟ
ಶ್ರೀ ಮಹಾಭಸಿತವ ಧರಿಸಿದಾತನೆ ಸದ್ಬ್ರಾಹ್ಮಣ.
ಇಂತಪ್ಪ ಮಹಾಭಸಿತವ ಬಿಟ್ಟು ಅಜ್ಞಾನಮತದಿಂದ
ವೇದ ಶಾಸ್ತ್ರಾಗಮಪುರಾಣಂಗಳಲ್ಲಿ ವಿರುದ್ಧವಾದ
ಮಟ್ಟಿಮಸಿಗಳ ಹಣೆಯಲ್ಲಿಟ್ಟುಕೊಂಡನಾದಡೆ,
ಅವನು ಬ್ರಾಹ್ಮಣನಲ್ಲ, ಅವನು ಪಂಚಮಹಾಪಾತಕ,
ಆತ ಶ್ವಪಚನೆಂದು ಪುರಾಣಪ್ರಸಿದ್ಧ…
೨೦೧೩ರಲ್ಲಿ ಸಿದ್ಧರಾಮಯ್ಯನವರು ಬಸವ ಜಯಂತಿಯಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿ ಐದು ವರ್ಷ ಪೂರ್ಣಾವಧಿ ಆಡಳಿತ ನಡೆಸಿದರು.
ಆದರೆ ಮನೆಯಲ್ಲಿ ಹೋಮ ಮಾಡಿ ಕುಂಕುಮ ಧರಿಸಿಕೊಂಡು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಯಡಿಯೂರಪ್ಪನವರು ತಮ್ಮ ಐದು ವರ್ಷದ ಅವಧಿಯನ್ನು ಪೂರ್ಣಗೊಳಿಸಲಿಲ್ಲ. ಡಿನೋಟಿಫಿಕೇಶನ್ ಪ್ರಕರಣದಲ್ಲಿ ಜೈಲಿಗೂ ಹೋಗಿ ಬಂದರು.
ತಮ್ಮ ಮುಖ್ಯಮಂತ್ರಿ ಪಟ್ಟವನ್ನು ಉಳಿಸಿಕೊಳ್ಳುವುದಕ್ಕಾಗಿ ಇವರು “ಅಕ್ರಮ ಗಣಿಗಾರಿಕೆ’ ಅವ್ಯಾಹತವಾಗಿ ನಡೆಯಲು ಅಕ್ರಮ ಗಣಿಗಾರಿಕೆಯ ರೂವಾರಿ ಜನಾರ್ದನರೆಡ್ಡಿಗೆ ಅನುವು ಮಾಡಿಕೊಟ್ಟು ರಾಜ್ಯಕ್ಕೆ ಸರಿಸುಮಾರು ರೂ.೧.೫ ಲಕ್ಷ ಕೋಟಿ ನಷ್ಟ ಮಾಡಿದರು ಎಂಬ ಆಪಾದನೆಯನ್ನು ಎದುರಿಸಿದರು.
ಯಡಿಯೂರಪ್ಪನವರ ಲಿಂಗಾಯತ ನಾಯಕ ನಿಜ. ಆದರೆ ಈ ನಾಡಿಗೆ ಅಮೋಘ ಕಾಣಿಕೆ ನೀಡಿದ ಲಿಂಗಾಯತ ಮಾಜಿ ಮುಖ್ಯಮಂತ್ರಿಗಳಾದ ಎಸ್. ನಿಜಲಿಂಗಪ್ಪ, ಬಿ. ಡಿ. ಜತ್ತಿ, ಎಸ್. ಆರ್. ಕಂಠಿ, ವೀರೇಂದ್ರ ಪಾಟೀಲ್, ಎಸ್, ಆರ್. ಬೊಮ್ಮಾಯಿ ಮತ್ತು ಜೆ. ಎಚ್. ಪಟೇಲ ಮುಂತಾದವರ ಸಾಲಿನಲ್ಲಿ ಯಡಿಯೂರಪ್ಪ ನಿಲ್ಲುತ್ತಾರಾ?
ಈ ಪ್ರಶ್ನೆಗೆ ಉತ್ತರ ನಿಮಗೂ ಗೊತ್ತು ಎಂದು ಭಾವಿಸಿದ್ದೇನೆ.

ಖಂಡಿತ ನಿಲ್ಲುವುದಿಲ್ಲ