ಸಂವಿಧಾನ, ಪ್ರಜಾಪ್ರಭುತ್ವದ ಮೇಲಿನ ದಾಳಿಯ ಬಗ್ಗೆ ಚರ್ಚೆ
ಹುಬ್ಬಳ್ಳಿ
ಇಂದು ಬಸವಾದಿ ಶರಣರ ಮೂಲ ತತ್ವ, ಅವರ ಚಳವಳಿ, ವಚನಗಳಿಗೆ ಅಪಮಾನ ಮಾಡುವ ಕೃತ್ಯಗಳು ನಡೆಯುತ್ತಿವೆ, ಎಂದು ಸಾಮಾಜಿಕ ಹೋರಾಟಗಾರ್ತಿ ಕೆ. ನೀಲಾ ಹೇಳಿದರು.
ಇಲ್ಲಿನ ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪದ ನರಗುಂದ-ನವಲಗುಂದ ರೈತ ಬಂಡಾಯ ವೇದಿಕೆಯಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ 12ನೇ ಮೇ ಸಾಹಿತ್ಯ ಮೇಳದಲ್ಲಿ ದಿಕ್ಸೂಚಿ ಭಾಷಣ ಮಾಡಿ ಮಾತನಾಡಿದರು.
ಕೆಲವು ಕೋಮು, ಮನುವಾದಿಗಳು ಶಹಪುರದಲ್ಲಿ ಬಸವಾದಿ ಶರಣರ ಹೆಸರಿನಲ್ಲಿ ಹಿಂದೂ ಸಮಾವೇಶ ಆಯೋಜಿಸುತ್ತಿರುವುದು ಖಂಡನಾರ್ಹ.
ಮನುಸ್ಮೃತಿಯ ಧರ್ಮ ರಕ್ಷಣೆಗಾಗಿ ಕೆಲವರು ವಚನ ಸಾಹಿತ್ಯವನ್ನು ತಿರಚಲು ಹೊರಟಿದ್ದಾರೆ. ಈ ಕುರಿತು ಸಮಾಜದ ಎಲ್ಲರೂ ಜಾಗೃತಿ ಹೊಂದಿ ವಿರೋಧಿಸಬೇಕಿದೆ. ಶರಣರು, ಸಂತರು, ವಚನಕಾರರು ಯಾವುದೇ ಧರ್ಮ, ಜಾತಿಗೆ ಮೀಸಲಾದವರಲ್ಲ, ಎಂದರು.

ಜನರ ಮುಂದೆ ಹುಟ್ಟಿರುವ ಸಂವಿಧಾನ ನಮ್ಮದಾಗಿದ್ದು, ಅದರ ರಹದಾರಿ ಮುಚ್ಚುವ ಕೆಲಸ ನಡೆಯುತ್ತಿದೆ. ಅದನ್ನು ರಕ್ಷಿಸಿಕೊಳ್ಳಲು ನಾವೆಲ್ಲರೂ ಮುಂದಾಗಬೇಕು. ಪ್ರಜಾಪ್ರಭುತ್ವ ಗಟ್ಟಿಗೊಳಿಸುವ ಕಾರ್ಯಕ್ಕೆ ಮುಂದಾಗಬೇಕಿದೆ.
ಮನುವಾದಿಗಳು ನಮ್ಮನ್ನು ನಾವಿದ್ದ ಜಾಗದಲ್ಲೇ ಜೈಲು ಕೈದಿಯನ್ನಾಗಿಸುವ ಹುನ್ನಾರ ನಡೆಸುತ್ತಿದ್ದಾರೆ. ನಮಗೆ ಆಕ್ರೋಶ ಮತ್ತು ಕೋಪ ಬರದಿದ್ದರೆ ಅವರು ಕೊಟ್ಟಿದ್ದನ್ನು ಒಪ್ಪಿಕೊಂಡಂತೆಯೇ. ಅನ್ಯಾಯದ ವಿರುದ್ಧ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ನಮ್ಮ ಶತ್ರು ಯಾರು, ಮಿತ್ರರು ಯಾರು ಎಂಬುದನ್ನು ಡಾ. ಬಿ.ಆರ್. ಅಂಬೇಡ್ಕರ್ ತಿಳಿಸಿದ್ದಾರೆ, ಎಂದರು.
ಸಂವಿಧಾನ ನಾಶ ಮಾಡುವ ಹುನ್ನಾರ
ಹಿರಿಯ ಪತ್ರಕರ್ತ ಸನತ್‌ಕುಮಾರ ಬೆಳಗಲಿ ಮನುವಾದಿ ಶಕ್ತಿಗಳು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು ಸಂವಿಧಾನ ನಾಶ ಮಾಡುವ ಹುನ್ನಾರ ಯಶಸ್ವಿಯಾಗಿ ಮಾಡುತ್ತಿದ್ದಾರೆ. ಚುನಾವಣಾ ಆಯೋಗ, ನ್ಯಾಯಾಲಯಕ್ಕೆ ಅವರಿಂದ ಅಪಾಯ ಎದುರಾಗಿದೆ, ಎಂದು ಎಚ್ಚರಿಸಿದರು.
ಪ್ರಜಾಪ್ರಭುತ್ವ ರಾಷ್ಟ್ರ ನಾಶಗೊಳಿಸಿ ಮನುವಾದಿ ರಾಷ್ಟ್ರ ನಿರ್ಮಾಣ ಮಾಡುವ ದಿಕ್ಕಿನತ್ತ ಕೆಲವರು ಸಾಗುತ್ತಿದ್ದಾರೆ. ಸಂಸದೀಯ ವ್ಯವಸ್ಥೆ ಹಾಗೂ ಸಹ ಬಾಳ್ವೆಯಲ್ಲಿ ನಂಬಿಕೆಯಿರುವ ಶಕ್ತಿಗಳೆಲ್ಲ ಒಂದಾಗಿ ಇದರ ವಿರುದ್ಧ ಹೋರಾಡಬೇಕಿದೆ ಎಂದು ಕರೆನೀಡಿದರು.

ಮಾಜಿ ಸಂಸದ ಪ್ರೊ. ಐ.ಜಿ. ಸನದಿ ಮಾತನಾಡಿ, ತುಪ್ಪ ತಿಂದವರಲ್ಲಿ ಮಾತ್ರ ಪ್ರತಿಭೆಗಳಿಲ್ಲ, ಮಣ್ಣಿನಲ್ಲೂ ಪ್ರತಿಭೆಗಳಿವೆ ಎಂದು ಈ ಮೇಳ ಸಾಕ್ಷೀ ಎಂದರು.
ದಿಕ್ಕೂಚಿ ಭಾಷಣ ಮಾಡಿದ ತೆಲುಗು ಸಾಹಿತಿ ಪಾಣಿ ಕರ್ನೂಲ್, ದೇಶದ ಪ್ರಜಾಪ್ರಭುತ್ವವನ್ನು ಮೋದಿ ಪ್ರಭುತ್ವ ಆವರಿಸಿಕೊಳ್ಳುತ್ತಿದೆ. ಸಾಮಾನ್ಯ ಮನುಷ್ಯರು ಫ್ಯಾಶಿಸ್ಟ್ ಶಕ್ತಿಗಳಿಗೆ ಸೋಲಲು ಸಾಧ್ಯವಿಲ್ಲ. ಬಸವಣ್ಣನಿಂದ ಹಿಡಿದು ಇಂದಿನ ಲೇಖಕರವರೆಗೆ ಸಮಾಜದ ನಿರಂಕುಶ ಪ್ರಭುತ್ವ, ಫ್ಯಾಶಿಸ್ಟ್ ಶಕ್ತಿಗಳ ವಿರುದ್ಧ ದನಿ ಎತ್ತುತ್ತಲೇ ಬಂದಿದ್ದಾರೆ. ನೆಲಮೂಲ ಸಾಹಿತ್ಯ ಯಾವತ್ತೂ ಪ್ರಭುತ್ವಕ್ಕೆ ಮಣಿಯುವುದಿಲ್ಲ. ಈ ರೀತಿ ದನಿ ಎತ್ತುತ್ತಿರುವುದಕ್ಕೆ ನನ್ನ ಮೇಲೆ 20ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ಹೇಳಿದರು.
ಪಾಣಿ ಭಾಷಣಗಳನ್ನು ಕನ್ನಡಕ್ಕೆ ಅನುವಾದಿಸಿದ ಹಿರಿಯ ಸಾಹಿತಿ ಕುಂ. ವೀರಭದ್ರಪ್ಪ, ಭಾರತ ಒಂದು ಧರ್ಮದ ದೇಶವಲ್ಲ, ಭಾರತ ಯಾವುದೋ ಒಂದು ಧರ್ಮದ ಸೊತ್ತಲ್ಲ ಎಂದು ಪ್ರತಿಪಾದಿಸಿದರು.

ಹಿರಿಯ ಪತ್ರಕರ್ತ ಸನತಕುಮಾರ ಬೆಳಗಲಿ, ರೈತ ಹೋರಾಟಗಾರ ಬಿ.ಎಸ್.ಸೊಪ್ಪಿನ, ಮರ್ಯಾದೆ ಹತ್ಯೆ ಪ್ರಕರಣದಲ್ಲಿ ಪತ್ನಿ ಮಾನ್ಯ ಪಾಟೀಲರನ್ನು ಕಳೆದುಕೊಂಡ ವಿವೇಕಾನಂದ ದೊಡ್ಡಮನಿ, ವಸತಿರಹಿತರ ಪರ ಹೋರಾಟಗಾರ್ತಿ ಬೀಬೀಜಾನ್ ಮುಲ್ಲಾ, ಕಾರ್ಮಿಕ ಮಹಿಳೆ ಅಂಜುಮ್ ಬಾಗೇವಾಡಿ, ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಲಿನೆಟ್ ಡಿಸಿಲ್ಲ ಅವರು ಭಾರತ ನಕಾಶೆಯ ತುಣುಕುಗಳನ್ನು ಜೋಡಿಸುವುದರ ಮೂಲಕ ಮೇಳಕ್ಕೆ ಚಾಲನೆ ನೀಡಿದರು.
ಕೆ.ಪಿ.ಸುರೇಶ ಪ್ರಾಸ್ತಾವಿಕವಾಗಿ ಮಾತನಾಡಿದರು. ಶರೀಫ ಬಿಳಿಮಲೆ ಸಂವಿಧಾನ ಪ್ರಸ್ತಾವ ಓಡಿದರು. ಪ್ರೊ. ಬಿ.ಜಿ. ಸನದಿ ಸ್ವಾಗತಿಸಿದರು. ಪಿಚ್ಚಳ್ಳಿ ಶ್ರೀನಿವಾಸ ಹಾಗೂ ಸಂಗಡಿಗರು ಆಶಯ ಗೀತೆ ಹಾಡಿದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ರೆವರೆಂಡ್ ಜಾರ್ಜ್ ಫರ್ಡಿನ್ಯಾಂಡ್ ಕಿಟೆಲ್, ಫ.ಗು. ಹಳಕಟ್ಟಿ, ಜಗದೀಶ ಮಂಗಳೂರಮಠ, ಪ್ರಹ್ಲಾದ ಅಗಸನಕಟ್ಟೆ, ಜಿ.ಎಚ್. ರಾಘವೇಂದ್ರ ಸ್ಥಾರಕ ಪುಸ್ತಕ ಮಳಿಗೆಗಳನ್ನು ಮಾನಸ ಉದ್ಘಾಟಿಸಿದರು. ಡಿ.ವಿ. ಹಾಲಭಾವಿ, ಎಂ.ಎ. ಮಿಣಜಗಿ, ಎಂ. ಜೀವನ, ನೀಲಗಂಗಯ್ಯ ಪೂಜಾರ, ಫಕ್ಕೀರಪ್ಪ ಗುಡಿಸಾಗರ ‘ಸ್ಥಾರಕ ಚಿತ್ರಕಲಾ ಪ್ರದರ್ಶನ ಮಳಿಗೆಯನ್ನು ಶ್ಯಾಮಲಾ ಗುರುಪ್ರಸಾದ ಅವರು ಉದ್ಘಾಟಿಸಿದರು. ಬಸವರಾಜ ಸೂಳಿಭಾವಿ, ಅನ್ವರ ಮುಧೋಳ, ಲಿಂಗರಾಜ ಅಂಗಡಿ, ವಿ.ಬಿ.ಮಾಗನೂರ ಹಾಗೂ ಇತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಹಕ್ಕೊತ್ತಾಯಗಳನ್ನು ಗುರುನಾಥ ಉಳ್ಳ ಕಾಶಿ ಮಂಡಿಸಿದರೆ, ಜಿಲ್ಲಾ ಮಟ್ಟದ ಹಕ್ಕೊತ್ತಾಯಗಳನ್ನು ಮಹೇಶ ಪತ್ತಾರ ಮಂಡಿಸಿದರು. ನಂತರ ಬೆಂಗಳೂರಿನ ‘ಸಹಚಾರಿ’ ನೃತ್ಯ ತಂಡದ ಕಲಾವಿದೆಯರಿಂದ ‘ಸಮತೆಯೆಡೆಗೆ’ ನರ್ತನ ಪ್ರಸ್ತುತಿ ನಡೆಯಿತು.
ಲಡಾಯಿ ಪ್ರಕಾಶನ, ಧಾರವಾಡದ ಚಿತ್ತಾರ ಕಲಾ ಬಳಗ, ಕವಲಕ್ಕಿಯ ಕವಿ ಪ್ರಕಾಶನ ಹಾಗೂ ಮೇ ಸಾಹಿತ್ಯ ಮೇಳ ಹುಬ್ಬಳ್ಳಿ ಬಳಗದ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು.
9 ಹಕ್ಕೊತ್ತಾಯ ಮಂಡನೆ
ಮೇ ಸಾಹಿತ್ಯ ಮೇಳದಲ್ಲಿ ರಾಜ್ಯಕ್ಕೆ ಸಂಬಂಧಿಸಿದ ಒಂಬತ್ತು ಹಕ್ಕೊತ್ತಾಯಗಳನ್ನು ಮಂಡಿಸಲಾಯಿತು. ಅವುಗಳಿಗೆ ಸರ್ವಾನುಮತದಿಂದ ಒಪ್ಪಿಗೆ ಸೂಚಿಸಲಾಯಿತು.
1) ನಾಗರಿಕ ಪೌರತ್ವ ತೀರ್ಮಾನ ಮಾಡುವ ಹಕ್ಕು ಚುನಾವಣಾ ಆಯೋಗಕ್ಕೆ ಇಲ್ಲದಿದ್ದರೂ, ಎಸ್‌ಐಆರ್ ಮೂಲಕ ದಲಿತ, ಹಿಂದುಳಿದ, ಅಲ್ಪಸಂಖ್ಯಾತರ ಪೌರತ್ವ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಇದಕ್ಕೆ ಮೇ ಸಾಹಿತ್ಯ ಮೇಳ ಅವಕಾಶ ನೀಡುವುದಿಲ್ಲ.
2) 67,662 ಕನ್ನಡ ಪ್ರಾಥಮಿಕ ಶಾಲೆಗಳಲ್ಲಿ 25,685 ಶಾಲೆಗಳನ್ನು ಮುಚ್ಚಿ ಕೆಬಿಎಸ್, ಮ್ಯಾಗ್ನೆಟ್ ಶಾಲೆಗಳನ್ನು ತೆರೆಯಲು ರಾಜ್ಯ ಸರ್ಕಾರ ನಿರ್ಧರಿಸಿರುವುದನ್ನು ಮೇಳ ವಿರೋಧಿಸುತ್ತದೆ. ಕನ್ನಡ ಶಾಲೆಗೆಗಳಿಗೆ ಮೂಲಸೌಲಭ್ಯ ಕಲ್ಪಿಸಿ, ಅಭಿವೃದ್ಧಿಪಡಿಸಬೇಕು.

3) ಒಳಮೀಸಲಾತಿ ಸ್ವಾಗತಾರ್ಹ. ಅದರಲ್ಲಿ ಅಲೆಮಾರಿ ಸಮುದಾಯಗಳಿಗೆ ಶೇ 1 ಮೀಸಲಾತಿ ಕಲ್ಪಿಸಲೇಬೇಕು. ಈ ಮೀಸಲಾತಿ ಕೇವಲ ಪರಿಶಿಷ್ಟ ಜಾತಿಗೆ ಸೀಮಿತವಾಗಿಸದೆ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳಿಗೂ ಅನ್ವಯಿಸಬೇಕು.
4) ರೈತ ವಿರೋಧಿ ಮೂರು ಕಾಯ್ದೆಯನ್ನು ಕೇಂದ್ರ ಸರ್ಕಾರ ಹಿಂಪಡೆದಿದ್ದರೂ, ರಾಜ್ಯ ಸರ್ಕಾರ ಅವುಗಳನ್ನು ಅಂಗೀಕರಿಸಿದೆ. ತಕ್ಷಣ ರಾಜ್ಯ ಸರ್ಕಾರ ಇವುಗಳನ್ನು ಹಿಂಪಡೆಯಬೇಕು.
5) ರಾಜ್ಯವನ್ನು ಗುಡಿಸಲು ಮುಕ್ತವಾಗಿಸಲು, ಸರ್ಕಾರ ಕೂಡಲೇ ಸಮೀಕ್ಷೆ ಮಾಡಿ ಎಲ್ಲ ಕುಟುಂಬದವರಿಗೂ ಮನೆ ನಿರ್ಮಿಸಿಕೊಡಬೇಕು. ಕ್ರಿಯಾಯೋಜನೆ ರೂಪಿಸಬೇಕು.
6) ಭೂ ಸುಧಾರಣಾ ಕಾಯ್ದೆ ವ್ಯಾಜ್ಯ ಇನ್ನೂ ಜೀವಂತವಾಗಿದ್ದು, ಸರ್ಕಾರ ನೀತಿ ಸಂರಕ್ಷಣೆಗೆ ನೂತನ ಕಾಯ್ದೆ ಜಾರಿಗೆ ತರಬೇಕು. ಭೂಮಿ ಪಡೆದ ರೈತರ ಹಿತ ಕಾಪಾಡಬೇಕು.
7) ರಾಜ್ಯದಲ್ಲಿ ದ್ವಿ ಭಾಷ ನೀತಿ ಜಾರಿಗೆ ಮುಂದಾಗಬೇಕು. ಕೇಂದ್ರ ಸರ್ಕಾರ ರಾಜ್ಯದ ಮೇಲೆ ಹಿಂದಿ ಹೇರಿಕೆ ಮಾಡುವುದನ್ಜು ನಿಲ್ಲಿಸಬೇಕು.
8) ಕೈಗಾರಿಕೆಗಳಿಂದ ಪರಿಸರದ ಮೇಲೆ ಆಗುವ ದುಷ್ಪರಿಣಾಮ ವಿರೋಧಿಸಿ ಕೊಪ್ಪಳದಲ್ಲಿ ನಡೆದಿರುವ ‘ಕೊಪ್ಪಳ ಬಚಾವೋ’ ಆಂದೋಲನವನ್ನು ಮೇಳ ಬೆಂಬಲಿಸುತ್ತದೆ. ಬೃಹತ್ ಕೈಗಾರಿಕೆ ವಿಸ್ತರಣೆಗೆ ಸರ್ಕಾರ ಅನುಮತಿ ನೀಡಬಾರದು.
9) ಸಂಜೆ 7 ಗಂಟೆ ನಂತರ ಸಾರ್ವಜನಿಕ ರಸ್ತೆ, ಸ್ಥಳಗಳಲ್ಲಿ ಧಾಟರ್ಮಿಕ ಮೆರವಣಿಗೆಗೆ ಅನುಮತಿ ನೀಡಬಾರದು. ಡಿಜೆ ಬಳಕೆಗೆ ಅನುಮತಿ ನೀಡದಿರುವ ಕಾಯ್ದೆ ಜಾರಿಗೆ ತರಬೇಕು. ಸರ್ಕಾರಿ ಕಚೇರಿ, ಶಾಲಾ ಆವರಣ, ಪಾರ್ಕ್‌ಗಳಲ್ಲಿ ಸಂಘ, ಸಂಸ್ಥೆಗಳು ಧಾರ್ಮಿಕ ಕಾರ್ಯಕ್ರಮ ಮಾಡುವುದನ್ನು ನಿಷೇಧಿಸಬೇಕು.

ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ |
ಚಿನ್ನದಾತುರಕಿಂತ ಹೆಣ್ನುಗಂಡೊಲವು ||
ಮನ್ನಣೆಯ ದಾಹವೀಯೆಲ್ಲಕಂ ತೀಕ್ಷ್ಣತಮ |
ತಿನ್ನುವುದದಾತ್ಮವನೆ – ಮಂಕುತಿಮ್ಮ ||