ಅಖಿಲ ಭಾರತ ಹೊರನಾಡ ಕನ್ನಡ ಸಂಘಗಳ ಪ್ರತಿನಿಧಿಗಳ ಮಹಾಮೇಳ
ಸೋಲಾಪುರ:
ಕನ್ನಡ ಭಾಷೆ ಐತಿಹಾಸಿಕ ಭಾಷೆಯಾಗಿದ್ದು. ಇದು ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ. ಮುಧೋಳದ ಮೃತ್ಯುಂಜಯ ಅಪ್ಪಗಳವರ ಅಪಾರ ಕನ್ನಡದ ಪ್ರೀತಿ, ಕಳಕಳಿಯಿಂದ ಇಂದು ಸೋಲಾಪುರದಲ್ಲಿ ಕನ್ನಡ ಸಂಪದ್ಭರಿತವಾಗಿ ಬೆಳೆದಿದೆ. ಸೋಲಾಪುರದ ರುದ್ರಾಂಬಿಕಾ ತಾಯಿ ಮೃತ್ಯುಂಜಯ ಅಪ್ಪಗಳನ್ನು ಮಧೋಳದಿಂದ ಕರೆಯಿಸಿ ಪ್ರವಚನ ಮಾಡಿಸುತ್ತಿದ್ದರು. ಹೀಗಾಗಿ ಕೀರೀಟ ಮಠವನ್ನು ಶ್ರೀಗಳಿಗೆ ರುದ್ರಾಂಬಿಕಾ ತಾಯಿ ದಾನರೂಪದಲ್ಲಿ ನೀಡಿರುವುದು ಇತಿಹಾಸ ಎಂದು ಸೋಲ್ಲಾಪುರದ ಕೀರಿಟೇಶ್ವರ ಮಠದ ಪೂಜ್ಯ ಸ್ವಾಮಿನಾಥ ಮಹಾಸ್ವಾಮಿಗಳು ಹೇಳಿದರು.
ಅವರು ಕರ್ನಾಟಕ ವಿದ್ಯಾವರ್ಧಕ ಸಂಘವು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರದ ನೆರವಿನಿಂದ ಹಾಗೂ ಸೋಲ್ಲಾಪುರ ಜಿಲ್ಲೆಯ ಕನ್ನಡ ಸಂಘಗಳ ಸಹಯೋಗದಲ್ಲಿ ಸೋಲ್ಲಾಪುರದ ಹುತಾತ್ಮ ಸ್ಮೃತಿ ಮಂದಿರದ, ಸೊನ್ನಲಗಿ ಸಿದ್ಧರಾಮ ಸಭಾಂಗಣ ಮತ್ತು ವಾರದ ಮಲ್ಲಪ್ಪನವರ ವೇದಿಕೆಯಲ್ಲಿ ಜರುಗಿದ ಅಖಿಲ ಭಾರತ ಹೊರನಾಡ ಕನ್ನಡ ಸಂಘಗಳ ಪ್ರತಿನಿಧಿಗಳ ೧೦ ನೇ ಮಹಾಮೇಳ ಉದ್ಘಾಟಿಸಿ ಮಾತನಾಡುತ್ತಿದ್ದರು.
ವಿಶ್ರಾಂತ ಕುಲಪತಿ ಡಾ. ಮಲ್ಲಿಕಾ ಘಂಟಿ ಮಾತನಾಡಿ, ಹೊರನಾಡು ಕನ್ನಡಿಗರಿಗೆ ಅಭದ್ರತೆ ಕಾಡುತ್ತಿದ್ದು, ಅವರಿಗೆ ನಿಮ್ಮ ಜೊತೆಗೆ ನಾವಿದ್ದೇವೆ ಎಂಬ ಧೈರ್ಯ ನೀಡುವ ಕಾರ್ಯವನ್ನು ನಾಡಿನ ಹಿರಿಯ ಸಂಸ್ಥೆ ಕರ್ನಾಟಕ ವಿದ್ಯಾವರ್ಧಕ ಸಂಘವು ಹೊರನಾಡು ಸಂಘಗಳ ಮೂಲಕ ಮಾಡುತ್ತಿದೆ. ಆದರೆ, ಇದೇ ನಡೆಯನ್ನು ಕರ್ನಾಟಕ ಸರ್ಕಾರ ಏತಕ್ಕೆ ಮಾಡುತ್ತಿಲ್ಲ? ಆದ್ದರಿಂದ ರಾಜಕಾರಣಿಗಳನ್ನು ಹೇಗೆ ಭಾಷಾ ರಾಜಕಾರಣಕ್ಕೆ ತೊಡಗಿಸಬೇಕು ಎಂಬುದನ್ನು ಕನ್ನಡದ ಸಂಘಗಳು ಆಲೋಚನೆ ಮಾಡಬೇಕು.
ಭಾಷೆ, ಭಾಷಾ ತತ್ವ ಇಟ್ಟುಕೊಂಡು ಪ್ರಣಾಳಿಕೆ ಸಿದ್ಧಪಡಿಸಿ ಭಾಷಿಕ ಪಕ್ಷವನ್ನು ಕಟ್ಟಬೇಕಿದೆ. ಆಗ ಭಾಷಾ ಸಮಸ್ಯೆಗಳಿಗೆ ಪರಿಹಾರ ಸಿಗಬಹುದು ಎಂಬ ನಂಬಿಕೆ ಇದೆ. ಇದರ ಭಾಗವಾಗಿ ದಕ್ಷಿಣ ಭಾರತದ ಐದಾರು ರಾಜ್ಯಗಳ ಮುಖ್ಯಮಂತ್ರಿಗಳು ಕೇಂದ್ರದ ಜನವಿರೋಧಿ ನೀತಿಗಳನ್ನು ವಿರೋಧಿಸಲು ಸಾಧ್ಯವಿದೆ ಎಂಬುದನ್ನು ಭಾಷಿಕ ನೆಲೆಗಟ್ಟಿನ ಮೂಲಕ ಆಲೋಚನೆ ಮಾಡಿದರೆ ಇಲ್ಲಿಯ ಸಮಸ್ಯೆಗಳಿಗೆ ಪರಿಹಾರ ಸಿಗಬಹುದು ಎಂದು ಪ್ರತಿಪಾದಿಸಿದರು.
ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಕಾರ್ಯಾಧ್ಯಕ್ಷ ಬಸವಪ್ರಭು ಹೊಸಕೇರಿ, ಕರ್ನಾಟಕದ ಕನ್ನಡಿಗರಿಗಿಂತ ಹೆಚ್ಚು ಕನ್ನಡವನ್ನು ಹೊರನಾಡು ಕನ್ನಡಿಗರು ಜತನದಿಂದ ಕಾಪಾಡಿಕೊಂಡು ಬರುತ್ತಿದ್ದಾರೆ.
ಹೊರನಾಡು ಕನ್ನಡಿಗರು ಏಕಾಂಗಿಯಲ್ಲ ನಮ್ಮೊಟ್ಟಿಗೆ ಇದ್ದಾರೆ ಎಂದು ಹೊರನಾಡು, ಒಳನಾಡು ಕನ್ನಡಿಗರ ಮನಸ್ಸು ಬೆಸೆಯುವ ಕೆಲಸವೇ ಸಮ್ಮೇಳನದ ಪ್ರಮುಖ ಗುರಿ ಎಂದ ಅವರು, ಕರ್ನಾಟಕದ ಸುತ್ತಲಿನ ಸಹೋದರ ಭಾಷೆಗಳು ನಮ್ಮ ವೈರಿಗಳಲ್ಲ. ಸಹೋದರ ಭಾಷೆಗಳೊಂದಿಗೆ ಜಗಳವಾಡಿ ಇನ್ನೊಬ್ಬ ವೈರಿ ಇಂಗ್ಲಿಷ್ನ್ನು ಬೆಳೆಸುತ್ತಿದ್ದೇವೆ. ನನ್ನ ಭಾಷೆಯನ್ನು ಸಂಸ್ಕೃತಿಯಾಗಿ ಉಳಿಸಿಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘವು ಪ್ರಕಟಿಸಿದ ವಾಗ್ಭೂಷಣ ತ್ರೈಮಾಸಿಕ ಪತ್ರಿಕೆಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಆಯುಕ್ತ ಡಾ. ವೆಂಕಟೇಶ ಮಾಚಕನೂರ ಬಿಡುಗಡೆ ಮಾಡಿದರು.
ಸಂತ ತುಕಾರಾಮರ ಅಭಂಗ ಶತಕ ಕೃತಿಯನ್ನು (ಕನ್ನಡಕ್ಕೆ ಅನುವಾದಿಸಿದ ಶಿವಾನಂದ ಗೋಗಾವ್) ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.
ಆರಂಭದಲ್ಲಿ ಡಾ. ಜ್ಯೋತಿಲಕ್ಷ್ಮಿ ಕೂಡ್ಲಿಗಿ ಹಾಗೂ ತಂಡದಿಂದ ಸುಗಮ ಸಂಗೀತ ಜರುಗಿತು. ಹರ್ಲಾಪುರದ ಸಿ.ವಾಯ್.ಸಿ.ಡಿ. ಕಲಾತಂಡದ ಶಂಭಯ್ಯ ಹಿರೇಮಠ ಹಾಗೂ ತಂಡದಿಂದ ನಾಡಗೀತೆ ಜರುಗಿತು.
ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಶಿವಾನಂದ ಭಾವಿಕಟ್ಟಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ನಿರೂಪಿಸಿದರು. ಕೋಶಾಧ್ಯಕ್ಷ ಸತೀಶ ತುರಮರಿ ವಂದಿಸಿದರು.
ವೇದಿಕೆಯಲ್ಲಿ ಸಂಘದ ಪದಾಧಿಕಾರಿಗಳಾದ ಸಂಜೀವ ಕುಲಕರ್ಣಿ, ಶಂಕರ ಕುಂಬಿ, ವೀರಣ್ಣ ಒಡ್ಡೀನ, ಗುರು ಹಿರೇಮಠ, ಡಾ. ಜಿನದತ್ತ ಹಡಗಲಿ, ಡಾ. ಮಹೇಶ ಧ. ಹೊರಕೇರಿ, ಪ್ರೊ. ಧನವಂತ ಹಾಜವಗೋಳ, ವಿಶ್ವೇಶ್ವರಿ ಹಿರೇಮಠ, ಶ್ರೀನಿವಾಸ ವಾಡಪ್ಪಿ, ಪ್ರೊ. ತಮಿಳು ಸೆಲ್ವಿ ಹಾಗೂ ಶಾಂತವೀರ ಬಸವಂತಿ ಸೇರಿದಂತೆ ರಾಜ್ಯ ಹಾಗೂ ಹೊರ ರಾಜ್ಯಗಳ ಕನ್ನಡ ಸಂಘಗಳ ಪ್ರತಿನಿಧಿಗಳು ಮತ್ತಿತರರು ಭಾಗವಹಿಸಿದ್ದರು.
