ಬಕ್ಕೇಶ್ವರರ ಸ್ಮರಣೆಯೊಂದಿಗೆ ಶರಣ ಚಿಂತನ ಮಾಲಿಕೆ ಸಮಾರೋಪ

ಬಸವ ಮೀಡಿಯಾ
ಬಸವ ಮೀಡಿಯಾ

ಚಿತ್ರದುರ್ಗ:

೧೨ನೇ ಶತಮಾನ ಮಾನವ ಇತಿಹಾಸದಲ್ಲಿಯೇ ಅತ್ಯಂತ ಅಮೋಘವಾದ ಕಾಲ. ಸಾಮಾಜಿಕ ಧಾರ್ಮಿಕ ಆರ್ಥಿಕವಾಗಿ ಸರ್ವತೋಮುಖ ಅಭಿವೃದ್ಧಿಯ ಚಿಂತನೆಗಳನ್ನು ತಿಳಿಸಿದ ಕಾಲವದು. ೧೨ನೇ ಶತಮಾನದಲ್ಲಿ ನಾವು ಕಂಡದ್ದು ದೇವರ ರೂಪದಲ್ಲಿರುವ ಶರಣರನ್ನು.

೧೨ನೇ ಶತಮಾನದ ಚಳುವಳಿಯಲ್ಲಿ ಮಾಡಿದ ಮಾನವೋದ್ಧಾರದ ಕಾರ್ಯವನ್ನು ಪ್ರಸ್ತುತ ಕಾಲಘಟ್ಟದಲ್ಲಿ ಚಿತ್ರದುರ್ಗ ಶ್ರೀ ಮುರುಘರಾಜೇಂದ್ರ ಬೃಹನ್ಮಠ ಮುಂದುವರೆಸಿಕೊಂಡು ಹೋಗುತ್ತಿದೆ ಎಂದು ದಾವಣಗೆರೆಯ ಬಸವ ಪ್ರಜ್ಞಾ ಸಂಚಾಲಕ ಡಾ. ಮಲ್ಲಿಕಾರ್ಜುನ ಜವಳಿ ಹೇಳಿದರು.

ಅವರು ಇಲ್ಲಿನ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಶ್ರಾವಣ ಮಾಸದ ಪ್ರಯುಕ್ತ ಆಯೋಜಿಸಿರುವ ಅನುಭಾವ ಶ್ರಾವಣ; ಶರಣ ಚಿಂತನ ಮಾಲಿಕೆಯ ಸಮಾರೋಪ ಸಮಾರಂಭದಲ್ಲಿ ದಾವಣಗೆರೆಯ ಶ್ರೀ ಬಕ್ಕೇಶ್ವರರ ಜೀವನ ಹಾಗೂ ಸಾಧನೆ ಕುರಿತ ಚಿಂತನಗೋಷ್ಠಿಯಲ್ಲಿ ಉಪನ್ಯಾಸ ನೀಡುತ್ತಿದ್ದರು.

ಕಳೆದ ೨೮ ದಿನಗಳಿಂದ ಶ್ರೀಮಠದಲ್ಲಿ ನಡೆದ ಅನುಭಾವ ಶ್ರಾವಣ ಚಿಂತನ ಮಾಲಿಕೆಯಲ್ಲಿ ಪ್ರತಿದಿನ ಸತ್ಪುರುಷರ ಭಕ್ತಿ ಜ್ಞಾನ ಮತ್ತು ದಾಸೋಹದ ಧಾರೆಯನ್ನು ಎರೆದುಕೊಟ್ಟಿದೆ. ಅನುಭಾವವಿಲ್ಲದ ಕ್ರಿಯೆ ಆಚಾರಕ್ಕೆ ದೂರ. ಶರಣರು ತಾವು ಆಲೋಚಿಸಿದ ವಿಷಯಗಳನ್ನು ತಮ್ಮ ಪ್ರಾಯೋಗಿಕ ಜೀವನಕ್ಕೆ ಅಳವಡಿಸಿಕೊಂಡರು. ಅನುಭಾವವಿಲ್ಲದ ಭಕ್ತಿ ಅರಿವಿಗೆ ದೂರ. ಇಂತಹ ಅನುಭಾವವನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಸಮಾಜದ ಉದ್ಧಾರಕ್ಕೆ ಶ್ರಮಿಸಿದವರು ದಾವಣಗೆರೆಯ ಬಕ್ಕೇಶ್ವರರು.

ಬಸವಾದಿ ಶರಣರ ಪಳಯುಳಿಕೆಯಂತೆ ಇದ್ದುದು ಮುರುಘಾ ಪರಂಪರೆ. ಈ ಪರಂಪರೆಯಲ್ಲಿ ಬಕ್ಕೇಶ್ವರರು ಕಾಣಸಿಗುತ್ತಾರೆಂದರು.

ಶಿವಜ್ಞಾನದ ಶಿವಯೋಗಿಗಳಲ್ಲಿ ಬಕ್ಕೇಶ್ವರರೂ ಒಬ್ಬರು. ಇವರು ಚಿತ್ರದುರ್ಗ, ದಾವಣಗೆರೆ ಪರಿಸರದ ಗುಮ್ಮನೂರು ಗ್ರಾಮದ ಬಸವಲಿಂಗಪ್ಪ ಪಾರ್ವತಮ್ಮನವರ ಪುತ್ರರಾಗಿ ಜನಿಸಿದರು.

ಇವರಿಗೆ ಉಳವಿ ಚೆನ್ನಬಸವೇಶ್ವರರ ಕೃಪೆಯಾಗಿರುತ್ತದೆ. ಶಿವಯೋಗಿ ಎಂದರೆ ಸರ್ವರನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯುವವನು ಎಂದರ್ಥ. ಶಿವಯೋಗಿ ಸ್ವರೂಪದ ಬಕ್ಕೇಶ್ವರರು ದನಕಾಯುವ ಕೆಲಸದಿಂದ ಪ್ರಾರಂಭಿಸಿ ತನ್ನ ಲೀಲೆಗಳನ್ನು ತೋರಿಸಿದರು. ಇವರ ಗೆಳೆಯ ಸಿದ್ದಪ್ಪನಿಗೆ ತನ್ನ ಲೀಲೆಗಳನ್ನು ತೋರಿಸುತ್ತಿದ್ದರು. ಧರ್ಮ ಜಾಗೃತಿಗಾಗಿ ದೀನ ದಲಿತರ ಉದ್ಧಾರಕ್ಕಾಗಿ ಧರ್ಮ ಪ್ರಚಾರ ಕೈಗೊಳ್ಳಲು ದೇಶಾಂತರ ಹೋದರು. ಬೇರೆಯವರಿಗೆ ಶಿವಸ್ವರೂಪಿಯಾಗಿ ಕಾಣುತ್ತಿದ್ದರು.

ಬಕ್ಕೇಶ್ವರರು ಹಂಪಿಗೆ ಹೋದಾಗ ಜನ ವಿರೂಪಾಕ್ಷನನ್ನು ನೋಡುವುದುನ್ನು ಬಿಟ್ಟು, ತಪಸ್ಸಿನಲ್ಲಿ ನಿರತರಾದ ಬಕ್ಕೇಶ್ವರರ ಬಳಿ ಬಂದು ನಮಸ್ಕರಿಸಿ ಅವರಿಗೆ ದಾನವನ್ನು ನೀಡುತ್ತಿದ್ದರು. ಅದನ್ನು ತೆಗೆದು ಬಕ್ಕೇಶ್ವರರು ಬಡವರಿಗೆ ದೀನ ದಲಿತರಿಗೆ ನೀಡುತ್ತಿದ್ದರು ಎಂದರು.

ಚಂದ್ರವಳ್ಳಿಯ ಅಂಕಲಿಮಠದಲ್ಲಿ ಬಕ್ಕೇಶ್ವರರು ಶಿವಯೋಗ ನಿರತರಾಗಿದ್ದರು. ಸಮಾಜವನ್ನು ತಿದ್ದುವಂತಹ ಅನೇಕ ಕೆಲಸಗಳನ್ನು ಅವರು ಮಾಡಿದರು. ಕಾರಣಿಕ ಪುರುಷರಿವರು. ಕಳ್ಳರ ಮನಸ್ಸನ್ನು ಪರಿವರ್ತಿಸಿ ಒಳ್ಳೆಯ ವ್ಯಕ್ತಿಗಳನ್ನಾಗಿ ರೂಪಿಸಿದವರು. ಗೋಕರ್ಣ, ಹಂಪಿ, ಕಾಶಿ ಅನೇಕ ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ಎಲ್ಲಾ ಕನಿಷ್ಠತೆಗಳಲ್ಲಿ ಶ್ರೇಷ್ಠತೆಯನ್ನು ಗುರುತಿಸಿ ಸನ್ಮಾರ್ಗಕ್ಕೆ ಎಲ್ಲರನ್ನು ಕೊಂಡೊಯ್ದವರು ಶ್ರೀ ಬಕ್ಕೇಶ್ವರರು ಎಂದು ತಿಳಿಸಿದರು.

ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ ಮಾತನಾಡಿ, ಶ್ರಾವಣ ಮಾಸದ ೨೮ ದಿನಗಳಿಂದ ನಡೆದು ಬಂದ ಕಾರ್ಯಕ್ರಮದ ಸಮಾರೋಪ ಸಾಂಕೇತಿಕವಾಗಿ ನಡೆಯುತ್ತಿದೆ. ಸ್ಮರಣೆಗಿಂತ ಮತ್ತೊಂದು ವಸ್ತು ಯಾವುದಿಲ್ಲ. ಕೃತಜ್ಞತಾ ಭಾವನೆ ಎಲ್ಲರಲ್ಲೂ ಇರಬೇಕು. ಕರ್ನಾಟಕದ ಎಲ್ಲ ಮಠಗಳಲ್ಲಿರುವ ಮೂಲಗುರುಗಳನ್ನು ಸ್ಮರಿಸಬೇಕು. ಮುಂಚೂಣಿಯಲ್ಲಿಲ್ಲದ ೩೦ ಜನರ ಸ್ಮರಣೆಯನ್ನು ಕಾರ್ತಿಕ ಮಾಸದಲ್ಲಿ ಮಾಡಲಾಯಿತು. ಅದರಂತೆ ಶ್ರಾವಣ ಮಾಸದಲ್ಲಿಯೂ ೨೮ ಶರಣರ ಸ್ಮರಣೆಯನ್ನು ಈಗ ಮಾಡಲಾಗಿದೆ.

ಆತ್ಮಶೋಧನೆಯಿಲ್ಲದೆ ಶರಣರ ಬಗ್ಗೆ ಮಾತನಾಡುವುದು ಸಂಶೋಧನೆ ಮಾಡುವುದು ಮೂರ್ಖತನ ಎನಿಸಿಕೊಳ್ಳುತ್ತದೆ ಎನ್ನುವ ಮಲ್ಲಿಕಾರ್ಜುನ ಶ್ರೀಗಳ ಮಾತನ್ನು ನೆನಪಿಸಿಕೊಂಡರು. ಶರಣರ ಪವಾಡಗಳನ್ನು ಹೇಳುತ್ತೇವೇಯೇ ಹೊರತು ಆತ್ಮಶೋಧನೆ ಮಾಡಿಕೊಳ್ಳುತ್ತಿಲ್ಲ. ಬಸವಾದಿ ಶರಣರ ತತ್ವಗಳನ್ನು ನಾವು ಅನುಷ್ಠಾನಗೊಳಿಸಿಕೊಳ್ಳಬೇಕು. ಆಧುನಿಕ ಜಗತ್ತಿನಲ್ಲಿ ಮಠಗಳು ಬೆಳೆಯುತ್ತಿವೆ. ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸಲು ಶಾಂತವೀರ ಸ್ವಾಮಿಗಳು ಬಹಳ ಕಷ್ಟಪಟ್ಟಿದ್ದಾರೆ.

೧೯೦೩ ರಿಂದ ೧೯೩೪ರ ಅವಧಿಯಲ್ಲಿ ಜಯದೇವ ಶ್ರೀಗಳು ೩೪ ಲಕ್ಷ ರೂ.ಗಳನ್ನು ವಿದ್ಯಾರ್ಥಿಗಳಿಗೆ ಕೊಟ್ಟಿದ್ದರು ಎಂಬುದನ್ನು ನಾಲ್ವಡಿ ಕೃಷ್ಣರಾಜ ಒಡೆಯರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಶ್ರೀಮಠದ ಭವ್ಯತೆ ತುಂಬಾ ಶ್ರೇಷ್ಠವಾದುದು. ಶ್ರೀಮಠದ ಪರಿಸರ, ಸೌಂದರ್ಯ, ಗದ್ದುಗೆ, ರಾಜಾಂಗಣ, ಮುರುಘಾವನ, ನಿರಂತರ ದಾಸೋಹ, ದೊಡ್ಡದಾದ ಅನುಭವ ಮಂಟಪ ಇಂತಹ ಮಠ ಇನ್ನೆಲ್ಲಿಯೂ ಕಾಣಸಿಗದು. ಹಾಗಾಗಿ ನಮ್ಮ ಪರಂಪರೆ, ಕುಟುಂಬದ ಮಕ್ಕಳಿಗೆ ಈ ವಿಚಾಗಳನ್ನು ತಿಳಿಸಿದಾಗ ಶ್ರೀಮಠದ ಹೆಸರು ಪರಂಪರೆಯಿಂದ ಪರಂಪರೆಗೆ ಬೆಳೆಯುತ್ತಾ ಹೋಗುತ್ತದೆ.

ಸರ್ವಧರ್ಮಗಳ ಸಾರವನ್ನು ತಿಳಿಸುವ ಲಿಂಗಾಯತ ಧರ್ಮ ಎಲ್ಲರನ್ನೂ ಒಂದೇ ಎಂದು ಭಾವಿಸುತ್ತದೆ ಎಂದು ಹೇಳಿದರು.

ಶರಣ ಸಂಸ್ಕೃತಿ ಉತ್ಸವದ ಸಂದರ್ಭದಲ್ಲಿ ಭದ್ರಾ ನಾಲೆಗೆ ಭೂಮಿ ಕೊಟ್ಟ ರೈತರು, ಇಂಜಿನಿಯರ್‌ಗಳ ಪಾತ್ರವನ್ನು ಶ್ಲಾಘಿಸಿದರಲ್ಲದೆ, ಈ ಸಲದ ಶರಣ ಸಂಸ್ಕೃತಿ ಉತ್ಸವದಲ್ಲಿ ಚೆನ್ನಬಸವಣ್ಣನವರಿಂದ ಅಕ್ಟೋಬರ್ ೧೩ ರಿಂದ ೨೧ರವರೆಗೆ ಯೋಗವನ್ನು ಏರ್ಪಡಿಸಲಾಗಿದೆ. ವಿಚಾರ ಸಂಕಿರಣ, ಚಿನ್ಮೂಲಾದ್ರಿಯ ಚಿದ್ರೂಪ ಗ್ರಂಥ ಬಿಡುಗಡೆ, ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ, ಎಸ್. ನಿಜಲಿಂಗಪ್ಪನವರ ವಿಚಾರ ಸಂಕಿರಣ, ಶಿವಾನುಭವ ಪತ್ರಿಕೆಗೆ ೧೦೦ ವರ್ಷ ತುಂಬಿರುವುದರಿಂದ ವಿಚಾರಸಂಕಿರಣ ಇರುತ್ತದೆ ಎಂದರು.

ಖನಿಜ ನಿಗಮದ ಮಾಜಿ ಅಧ್ಯಕ್ಷ ಎಸ್. ಲಿಂಗಮೂರ್ತಿ ಮಾತನಾಡಿ, ಶರಣರ ಭಾವಚಿತ್ರಗಳನ್ನು ಪೂಜಿಸುತ್ತೇವೆ. ಸಮಾಜ ಪರಿವರ್ತನೆ, ದಾರಿದ್ರ‍್ಯ, ಜಾತಿ ವ್ಯವಸ್ಥೆಯನ್ನು ಹೋಗಲಾಡಿಸುವ ಕೆಲಸವನ್ನು ಮಾಡಿದ ಶರಣರ ಚಿಂತನೆಗಳನ್ನು ಶ್ರೀಮಠ ನಡೆಸುತ್ತ, ಸ್ವಾರ್ಥರಹಿತ ಸಮಾಜ ನಿರ್ಮಾಣ ಮಾಡುತ್ತ ಬಂದಿದೆ. ಇದು ಸಂತೋಷದ ವಿಚಾರ.

ನೀರು ಜೀವಜಲ. ನೀರಿಲ್ಲದೆ ಬದುಕಿಲ್ಲ. ಇಂತಹ ನೀರನ್ನು ತರುವಲ್ಲಿ ಮುರುಘಾಮಠ ಮುಂಚೂಣಿಯಲ್ಲಿತ್ತು.

ಗೋನೂರು ಕೆರೆಗೆ ಭದ್ರಾ ನೀರು ಹರಿದುಬಂದಿರುವುದು ಈ ಭಾಗದ ರೈತರ ಮೊಗದಲ್ಲಿ ಹರ್ಷವನ್ನುಂಟು ಮಾಡಿದೆ ಎಂದರು.

ಬಾಪೂಜಿ ವಿದ್ಯಾಸಂಸ್ಥೆಯ ಕೆ.ಎಂ. ವೀರೇಶ್ ಮಾತನಾಡಿ, ಶರಣ ಸೇವೆ ಮಾಡುವುದು ಮುಖ್ಯ. ಮುರುಘಾಮಠ ಯಾವ ಕೊರತೆಯಿಲ್ಲದೆ ಜ್ಞಾನ ಮತ್ತು ಅನ್ನದಾಸೋಹವನ್ನು ಯಶಸ್ವಿಯಾಗಿ ಮಾಡುತ್ತಾ ಬಂದಿದೆ. ಶ್ರೀಮಠದಲ್ಲಿ ಅನೇಕ ಶರಣರ ಚಿಂತನೆಗಳನ್ನು ಸ್ಮರಿಸುವ ಕಾರ್ಯ ನಡೆಯುತ್ತಿದೆ. ಒಳ್ಳೆಯ ಮನಸ್ಥಿತಿಯಿಂದ ಶರಣರಾಗಿ ಬದುಕುವ ಮಾರ್ಗವನ್ನು ಶ್ರೀಮಠವು ತೋರಿಸುತ್ತಿದೆ. ಎಲ್ಲಾ ಪರಂಪರೆಗಳ ಕೆಲಸವನ್ನು ಮಾಡುತ್ತಿದೆ.

ಜಿಲ್ಲೆಗೆ ಭದ್ರಾ ನೀರು ಬಂದಿದೆ. ಇದರಲ್ಲಿ ಶ್ರೀಮಠ, ರಾಜಕಾರಣಿಗಳು, ರೈತರ, ಹೋರಾಟಗಾರರ ಪಾತ್ರ ಮುಖ್ಯವಾಗಿದೆ ಎಂದು ನೆನಪಿಸಿಕೊಂಡರು.

ಎಸ್.ಜೆ.ಎಂ. ವಿವಿ ಕುಲಪತಿ ಪ್ರೊ. ಕೆ.ಬಿ. ಗುಡಸಿ ಮಾತನಾಡಿ, ಎಷ್ಟೇ ಜನ ಬಂದರೂ ಶ್ರೀಮಠ ಅನ್ನದಾಸೋಹವನ್ನು ಕೊಡುತ್ತಿದೆ. ಅಲ್ಲದೆ ಶ್ರೀಮಠದಲ್ಲಿ ಸ್ವಚ್ಛತೆಯಿರುತ್ತದೆ. ಅನ್ನ, ಜ್ಞಾನ, ಆರೋಗ್ಯದ ದಾಸೋಹವನ್ನು ಶ್ರೀಮಠ ನೀಡುತ್ತಿದೆ. ಕಳೆದ ತಿಂಗಳು ಸಾವಿರಾರು ಗಿಡಗಳನ್ನು ನೆಟ್ಟು ಪರಿಸರ ಉಳಿಸುವ ಕೆಲಸ ಮಾಡಿದೆ. ಅನುಭಾವ ಶ್ರಾವಣದಿಂದ ಎಲ್ಲ ಮಹನೀಯರನ್ನು ಜೀವಂತವಾಗಿಡಲು ಅವರ ಚಿಂತನೆಗಳನ್ನು ಜನರಿಗೆ ತಿಳಿಸುವ ಈ ಕಾರ್ಯ ಶ್ರೀಮಠದಿಂದ ಸಾಧ್ಯ ಎಂದರು.

ಸಮಾರಂಭದಲ್ಲಿ ಬಸವಮೂರ್ತಿ ಮಾದಾರಚೆನ್ನಯ್ಯ ಸ್ವಾಮೀಜಿ, ಬಸವ ಮುರುಘೇಂದ್ರ ಸ್ವಾಮೀಜಿ, ಬಸವಮೂರ್ತಿ ಗುಂಡಯ್ಯ ಸ್ವಾಮೀಜಿ, ಲಾಳನಹಳ್ಳಿ ಶರಣೆ ಜಯದೇವಿ, ಶರಣೆ ಚಿನ್ಮಯಿದೇವಿ, ವಿವಿಧ ಸಮಾಜಗಳ ಮತ್ತು ಸಂಘಟನೆಗಳ ಮುಖಂಡರಾದ ಡಿ.ಎಸ್. ಮಲ್ಲಿಕಾರ್ಜುನ, ಪಟೇಲ ಶಿವಕುಮಾರ, ಎಸ್. ಷಣ್ಮುಖಪ್ಪ, ಎಸ್.ವಿ. ಕೊಟ್ರೇಶ್, ಎಸ್.ವಿ. ಮುರುಘೇಶ, ವೀರೇಶ್ ಎಸ್., ಗುತ್ತಿನಾಡು ಪ್ರಕಾಶ, ಎಸ್. ಪರಮೇಶ, ಗಾಯತ್ರಿ ಶಿವರಾಂ, ನಾಗರಾಜ ಸಂಗಂ, ಡಾ. ದೊಡ್ಡಮಲ್ಲಯ್ಯ, ಕಸವನಹಳ್ಳಿ ಶಿವಣ್ಣ, ಬಸವರಾಜ ಕಟ್ಟಿ ಮೊದಲಾದವರಿದ್ದರು.

ಜಮುರಾ ಕಲಾವಿದ ಉಮೇಶ ಪತ್ತಾರ ವಚನ ಪ್ರಾರ್ಥನೆ ಹಾಡಿದರು. ಪಿ. ವೀರೇಂದ್ರಕುಮಾರ ಸ್ವಾಗತಿಸಿದರು. ರವಿಕಲಾ ನಿರೂಪಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KwtAu0MkQzPIzsDZf3EOP6

Share This Article
Leave a comment

Leave a Reply

Your email address will not be published. Required fields are marked *