ಗoಗಾವತಿ :
ಕನ್ನೇರಿ ಸಮಾವೇಶ ನಿರ್ಬಂಧ ಮನವಿಗೆ ಸ್ಪಷ್ಟವಾಗಿ ಸ್ಪಂದಿಸದ ತಹಶೀಲ್ದಾರರು
ಗಂಗಾವತಿ
ಕನ್ನೇರಿ ಸ್ವಾಮಿ ಸಮಾವೇಶವನ್ನು ನಿರ್ಬಂಧಿಸುವ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿರದಿರುವ ತಹಶೀಲ್ದಾರರ ವಿರುದ್ಧ ಬಸವಪರ ಸಂಘಟನೆಗಳ ಪ್ರಮುಖರು ತಾಲೂಕ ಆಡಳಿತ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
ಕನ್ನೇರಿ ಸ್ವಾಮಿ ನೇತೃತ್ವದಲ್ಲಿ ಬಸವಾದಿ ಶರಣರ ಹೆಸರಿನ ಹಿಂದೂ ಸಮಾವೇಶವನ್ನು ನವೆಂಬರ್ 3 ಪಟ್ಟಣದಲ್ಲಿ ನಡೆಸಲು ಸಿದ್ಧತೆ ನಡೆಯುತ್ತಿದೆ.
ಇದೆ ತಿಂಗಳ 22ರಂದು ಬಸವಪರ ಸಂಘಟನೆಗಳು ಕನ್ನೇರಿ ಸ್ವಾಮಿ ಸಮಾವೇಶವನ್ನು ನಿರ್ಬಂಧಿಸಲು ತಹಶೀಲ್ದಾರರಿಗೆ ಮನವಿ ನೀಡಿದ್ದರು.
ಇದರ ಬಗ್ಗೆ ಅವರು ಯಾವುದೇ ನಿರ್ಧಾರ ತೆಗೆದುಕೊಳ್ಳದಿದ್ದಾಗ ಅಕ್ಟೊಬರ್ 28 ಮತ್ತೆ ಅವರನ್ನು ಭೇಟಿ ಮಾಡಿ ಒಂದು ದಿನದೊಳಗೆ ತಮ್ಮ ನಿರ್ಧಾರ ತಿಳಿಸದಿದ್ದರೆ ಅವರ ವಿರುದ್ಧವೇ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದರು.
ಆದರೂ ಗಡುವಿನೊಳಗೆ ತಹಶೀಲ್ದಾರರು ಸ್ಪಷ್ಟವಾಗಿ ಸ್ಪಂದಿಸಲು ನಿರಾಕರಿಸಿದ್ದರಿಂದ ಅವರ ಕಚೇರಿಯಲ್ಲೇ ಬಸವಭಕ್ತರು ದಿಕ್ಕಾರ ಕೂಗಿ ಪ್ರತಿಭಟಿಸಿದರು. ತಹಶೀಲ್ದಾರರು ಮನುವಾದಿಗಳ ಕೈಗೊಂಬೆಯಾಗಿದ್ದಾರೆಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿ, ಹಿಂದೂ ಸಮಾವೇಶ ನಿರ್ಬಂಧಿಸುವಂತೆ ಆಗ್ರಹಿಸಿದರು.
ತಹಶೀಲ್ದಾರರ ವರ್ತನೆ ಅನುಮಾನ ತಂದಿದೆ ಎಂದು ಬಸವಾಭಿಮಾನಿಗಳು ಆರೋಪಿಸಿದ್ದಾರೆ.
“ನಮ್ಮ ಅರ್ಜಿಗೆ ತಹಶೀಲ್ದಾರರು ಇಲ್ಲಿಯವರೆಗೆ ಹಿಂಬರಹ ನೀಡಿಲ್ಲ. ಅವರು ತಕ್ಷಣ ತಮ್ಮ ನಿರ್ಧಾರ ತಿಳಿಸಿದ್ದರೆ ನಾವು ಕೋರ್ಟಿಗೆ ಹೋಗುತ್ತಿದ್ದೆವು. ಈಗ ಉದ್ದೇಶಪೂರ್ವಕವಾಗಿ ವಿಳಂಬ ಮಾಡಿ ಕೋರ್ಟಿಗೆ ಹೋಗದಂತೆ ನೋಡಿಕೊಂಡಿದ್ದಾರೆ,” ಎಂದು ವೀರ ಗಣಾಚಾರಿ ಪಡೆಯ ಮಹೇಶ್ ಕುಮಾರ್. ಎ.ಕೆ ಹೇಳಿದರು.
“ತಹಶೀಲ್ದಾರರು ಮನುವಾದಿಗಳ ಕೈ ಗೊಂಬೆಯಂತೆ ವರ್ತಿಸುತ್ತಿದ್ದಾರೆ. ಪೊಲೀಸರಿಗೆ ಬರೆದಿರುವ ಪತ್ರದಲ್ಲಿ ಬಸವಪರ ಸಂಘಟನೆಗಳಿಗೆ ಒಂದು ಪ್ರತಿ ಕಳಿಸಿರುವುದಾಗಿ ತಿಳಿಸಿದ್ದಾರೆ. ಆದರೆ ನಮಗೆ ಯಾವುದೇ ಪತ್ರ ಬಂದಿಲ್ಲ.
ಕಾಂಗ್ರೆಸ್ ಅಧಿಕಾರದಲ್ಲಿದ್ದು, ಅಂಬೇಡ್ಕರ್ ಸಂವಿಧಾನದ ರಕ್ಷಣೆ ಇರುವಾಗಲೇ ಈ ಅಧಿಕಾರಿಗಳು ಇಷ್ಟೊಂದು ನಾಟಕವಾಡುತ್ತಿದ್ದಾರೆ. ಇನ್ನು ಮನುವಾದಿಗಳಿಗೆ ಸಂಪೂರ್ಣ ಬಹುಮತ ಸಿಕ್ಕರೆ ನಾಗರಿಕರ ಗತಿಯೇನು,” ಎಂದು ರಾಷ್ಟ್ರೀಯ ಬಸವದಳದ ವೀರೇಶ ಆಸರೆಡ್ಡಿ ಆತಂಕ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆಗಳ ಮುಖಂಡರಾದ ದಿಲೀಪಕುಮಾರ ವಂದಾಲ, ವೀರೇಶ ಆಸರೆಡ್ಡಿ, ಕೆ. ಬಸವರಾಜ, ಎ. ಕೆ. ಮಹೇಶಕುಮಾರ, ವಿನಯಕುಮಾರ ಅಂಗಡಿ, ಕೆ. ಬಾಲಪ್ಪ, ಮಹೇಶ ಹೊಮ್ಮಿನಾಳ, ಕೆ. ಶರಬಣ್ಣ, ಚಿನ್ಮಯಪ್ರಸಾದ, ಮಲ್ಲಿಕಾರ್ಜುನ ನೀರ್ಲೂಟಿ, ಬಸವರಾಜ ಮಾಲಿಪಾಟೀಲ, ನಿರುಪಾಧಿ ಹಡಪದ, ಬಸವಜ್ಯೋತಿ ಬಿ. ಲಿಂಗಾಯತ ಚನ್ನಬಸಮ್ಮ ಕಂಪ್ಲಿ, ರೇಣುಕಾ ಬಸವರಾಜ ಪಾಲ್ಗೊಂಡಿದ್ದರು.

