ಮುಂದಿನ ತಿಂಗಳ ಅನುಭವ ಮಂಟಪ ಉತ್ಸವಕ್ಕೆ ಆಹ್ವಾನ

ಬಸವ ಮೀಡಿಯಾ
ಬಸವ ಮೀಡಿಯಾ

ಭಾಲ್ಕಿ :

ಬಸವಕಲ್ಯಾಣ ಅನುಭವಮಂಟಪದಲ್ಲಿ ನವೆಂಬರ್ 28 ಮತ್ತು 29ರ ಎರಡು ದಿವಸಗಳು ನಡೆಯಲಿರುವ 47ನೆಯ ಶರಣಕಮ್ಮಟ ಹಾಗೂ ಅನುಭವಮಂಟಪ ಉತ್ಸವ- 2026 ಕ್ಕೆ ಪೂಜ್ಯ ಗುರುಬಸವ ಪಟ್ಟದ್ದೇವರು ತಳವಾಡದ ಶರಣ ನೂರಂದಪ್ಪ ಬಾಳೂರೆ ಹಾಗೂ ಶರಣ ಹಣಮಂತರಾಯ ಬಾಳೂರೆ ಅವರ ತೋಟದಲ್ಲಿ ಬಸವಭಕ್ತರಿಗೆ ಉತ್ಸವಕ್ಕೆ ಆಮಂತ್ರಿಸಿದರು.

ಅವರು ಮಾತನಾಡುತ್ತ, 12ನೇ ಶತಮಾನದ ಸಾಮಾಜಿಕ ಮತ್ತು ಧಾರ್ಮಿಕ ಕ್ರಾಂತಿಯ ಹರಿಕಾರರಾದ ಬಸವಣ್ಣನವರು, ಕಲ್ಯಾಣದಲ್ಲಿ ಅನುಭವಮಂಟಪವನ್ನು ಸ್ಥಾಪಿಸಿದರು. ಇದು ವಿಶ್ವದ ಮೊದಲ ಧಾರ್ಮಿಕ ಮತ್ತು ಅಧ್ಯಾತ್ಮಿಕ ಸಂಸತ್ತು ಎಂದು ಕರೆಯಲ್ಪಡುತ್ತದೆ. ಜಾತಿ, ಧರ್ಮ, ಅಂಗ ಮತ್ತು ವರ್ಗ ಭೇದವಿಲ್ಲದೆ ಎಲ್ಲರಿಗೂ ಸಮಾನ ಅವಕಾಶ ನೀಡಿದ ಮಹಾನ್ ವೇದಿಕೆಯೇ ಅನುಭವಮಂಟಪ.

ಎಲ್ಲಾ ಶಿವಶರಣರು ಒಗ್ಗೂಡಿ ಸರಳ ಕನ್ನಡದಲ್ಲಿ ರಚಿತವಾದ ವಚನಗಳ ಮೂಲಕ ಮೂಢನಂಬಿಕೆಗಳನ್ನು ಖಂಡಿಸಿ ಸತ್ಯ, ಕರುಣಿ ಹಾಗೂ ಅಹಿಂಸೆಯ ಆಧಾರದ ಮೇಲೆ ಕಲ್ಯಾಣ ಸಮಾಜವನ್ನು ನಿರ್ಮಿಸಲು ಅನುಭವಮಂಟಪವು ಬುನಾದಿ ಹಾಕಿತು. ಇದು ಇಂದಿಗೂ ಪ್ರಜಾಪ್ರಭುತ್ವದ ಮತ್ತು ಮಾನವ ಹಕ್ಕುಗಳ ದಾರಿದೀಪವಾಗಿದೆ.

ಮತ್ತೆ ಬಸವತತ್ತ್ವದ ಬೀಜವನ್ನು ಬಿತ್ತುವುದಕ್ಕಾಗಿ ಅನುಭವಮಂಟಪದ ಅಧ್ಯಕ್ಷರಾದ ಪರಮ ಪೂಜ್ಯ ಶ್ರೀ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರ ಸಾನಿಧ್ಯದಲ್ಲಿ ಹಾಗೂ ಮಾರ್ಗದರ್ಶನದಲ್ಲಿ ಕಳೆದ ಅನೇಕ ವರ್ಷಗಳಿಂದ ರಾಷ್ಟ್ರದ ಸಮಗ್ರ ಅಭಿವೃದ್ಧಿಯ ಚಿಂತನೆಗಳ ವೇದಿಕೆಯಾಗಿ ಅನುಭವಮಂಟಪ ಉತ್ಸವ ಆಚರಿಸುತ್ತಾ ಬರಲಾಗುತ್ತಿದೆ. ಅದೇ ರೀತಿ ಈ ವರ್ಷವೂ ಅನುಭವಮಂಟಪ ಉತ್ಸವ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಎರಡು ದಿವಸಗಳು ನಡೆಯಲಿರುವ ಈ ಉತ್ಸವಕ್ಕೆ ತಾವೆಲ್ಲರೂ ಆಗಮಿಸಬೇಕೆಂದು ಪೂಜ್ಯರು ಆಮಂತ್ರಣ ನೀಡಿದರು.

ಸಮಾರಂಭದಲ್ಲಿ ನೂರಂದಪ್ಪ ಬಾಳೂರೆ, ಹಣಮಂತರಾಯ ಬಾಳೂರೆ, ಮಲ್ಲಿಕಾರ್ಜುನ ರಾಚಣ್ಣ, ಸುನೀತಾ ಬಾಳೂರೆ, ವಿಮಲಾಬಾಯಿ ಬಾಳೂರೆ, ಶಿವಕುಮಾರ ಕಮಠಾಣಿ, ಗಳಂಗಳೆಪ್ಪ ಬಾಳೂರೆ, ನಾಗಶೆಟ್ಟಿ ಪಾಟೀಲ, ಶಿವಪ್ರಕಾಶ ಕುಂಬಾರ ಮತ್ತು ಬಾಳೂರೆ ಪರಿವಾರ ಹಾಗೂ ತಳವಾಡದ ಗ್ರಾಮದ ಅನೇಕ ಭಕ್ತಾದಿಗಳು ಪಾಲ್ಗೊಂಡಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

Share This Article
Leave a comment

Leave a Reply

Your email address will not be published. Required fields are marked *