ಅನುಭವ ಮಂಟಪ ಬಳಗದ ಕಾರ್ಯಕ್ರಮ
ದಾವಣಗೆರೆ :
ಮನುಷ್ಯನಿಗೆ ಬರುವ ಎಲ್ಲಾ ರೀತಿಯ ಮಾನಸಿಕ ಸಮಸ್ಯೆಗಳಿಗೆ ಇಷ್ಟಲಿಂಗ ಶಿವಯೋಗ ಪರಿಹಾರ ನೀಡಬಲ್ಲದು ಎಂದು ಶರಣ ಸಾಹಿತಿ ಶಿವಪ್ರಸಾದ ಕರ್ಜಗಿ ಅವರು ಅಭಿಪ್ರಾಯಪಟ್ಟರು.
ಅವರು ಅನುಭವ ಮಂಟಪ ಬಳಗದ ವತಿಯಿಂದ ದಾವಣಗೆರೆ ತಾಲ್ಲೂಕು ಕುರುಡಿ ಗ್ರಾಮದಲ್ಲಿ ನಡೆದ ಶರಣರ ಸಂಜೆ ಕಾರ್ಯಕ್ರಮದಲ್ಲಿ ತಮ್ಮ ಅನುಭವ ಹಂಚಿಕೊಂಡರು.
ಮುಂದುವರೆದು ಮಾತನಾಡಿದ ಅವರು, ಜೀವಾತ್ಮ ಮತ್ತು ಪರಮಾತ್ಮ ಒಂದಾಗುವ ಪ್ರಕ್ರಿಯೆ ಎಂದರೆ ಅದು ಶಿವಯೋಗ.
ಇಂಥಹ ಶಿವಯೋಗವನ್ನು 12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ನಮಗೆ ಕೊಟ್ಟಿದ್ದಾರೆ ಎಂದರು.
ಅನುಭವ ಮಂಟಪ ಬಳಗದ ಸದಸ್ಯರಾದ ವೀಣಾ ಮಂಜುನಾಥ ಮಾತನಾಡಿ, ಇಷ್ಟಲಿಂಗದಲ್ಲಿ ಮುಕ್ಕೋಟಿ ದೇವತೆಗಳು ಇವೆ, ಹಾಗಾಗಿ ನಾವು ಯಾವುದೇ ದೇವರನ್ನು ಹೊರಗಡೆ ಹುಡುಕುವುದು ಬೇಡ. ನಮ್ಮ ತಂದೆ ತಾಯಿಗಳೇ ನಮಗೆ ದೇವರು ಎಂದು ತಿಳಿಸಿದರು.

ರೈತರು ಪ್ರಶ್ನೆ ಮಾಡದಿದ್ದರೆ , ಹೋರಾಟ ಮಾಡದಿದ್ದರೆ ಖಂಡಿತಾ ರೈತರಿಗೆ ನ್ಯಾಯ ಸಿಗುವುದಿಲ್ಲ, ಹಾಗಾಗಿ ರೈತರ ಜಾಗೃತಿ ಆಗಬೇಕು ಎಂದು ರೈತ ಮುಖಂಡ ಅರುಣ ಕುರುಡಿ ಅವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಇನ್ನೋರ್ವ ಅತಿಥಿಗಳಾಗಿ ಮಾತನಾಡಿದ ಆವರಗೆರೆ ರುದ್ರಮುನಿ ಅವರು, ರೈತರೇ ದೇಶದ ಬೆನ್ನೆಲುಬು, ಶರಣರು ಕೃಷಿ ಕಾಯಕ ಸೇರಿದಂತೆ ಎಲ್ಲಾ ಶ್ರಮಜೀವಿಗಳ ಕಾಯಕವನ್ನು ಗೌರವಿಸಿದ್ದಾರೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ವಿಶ್ವೇಶ್ವರಯ್ಯ ಬಿ.ಎಂ. ಹೆಮ್ಮನಬೇತೂರು ಅವರು ವಿಶ್ವದ ಪ್ರಜಾಪ್ರಭುತ್ವದ ಮೂಲ ಕನ್ನಡದ ನೆಲದಲ್ಲಿ ಪ್ರಾರಂಭವಾಗಿದೆ, ಇದು ವಿಶ್ವಕ್ಕೆ ಗೊತ್ತಾಗುತ್ತಿದೆ, ಕನ್ನಡಿಗರಾದ ನಮಗೆ ಗೊತ್ತಿರಬೇಕು ಎಂದರು.

ಬಿ.ಎಂ. ಸಿದ್ದಯ್ಯ ಅವರು ಮಾತನಾಡಿ, ಪರಮಾತ್ಮ ಮತ್ತು ನಮ್ಮ ನಡುವೆ ಸಂಪರ್ಕ ಕಲ್ಪಿಸುವುದು ಶಿವಯೋಗ ಎಂದು ತಿಳಿಸಿದರು.
ಕಾರ್ಯಕ್ರಮಕ್ಕೂ ಮೊದಲು ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಥ ಸಂಚಲನ ಮಾಡಲಾಯಿತು.
ಸಮಾರಂಭದಲ್ಲಿ ಗ್ರಾಮದ ಪ್ರಮುಖರಾದ ಸಿದ್ದೇಶ ಕೆ.ಜಿ., ಕೆಂಪೇಗೌಡ ಪತ್ರೆ, ಬಸಪ್ಪ ಪೂಜಾರಿ, ಚಂದ್ರಣ್ಣ ಮಹೇಶ್ವರಪ್ಪ, ವಿಜಯಕುಮಾರ, ವೇದಮೂರ್ತಿ, ಬಸವರಾಜಪ್ಪ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.
