ಭಾಲ್ಕಿ:
ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಭಾಲ್ಕಿ ನಗರದ ಮಹಾತ್ಮಗಾಂಧಿ ವೃತ್ತದಲ್ಲಿ ನಡೆಯುತ್ತಿರುವ ರೈತರ ಧರಣಿ ಸತ್ಯಾಗ್ರಹ ಏಳನೇ ದಿನಕ್ಕೆ ಕಾಲಿಟ್ಟಿದ್ದು, ಧರಣಿ ಸತ್ಯಾಗ್ರಹಕ್ಕೆ ವಿವಿಧ ಸಂಘ-ಸಂಸ್ಥೆಗಳು ಬೆಂಬಲ ವ್ಯಕ್ತಪಡಿಸಿವೆ.
ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರು ಭಾನುವಾರ ಧರಣಿ ಸ್ಥಳಕ್ಕೆ ಭೇಟಿ ನೀಡಿ ರೈತರ ಹೋರಾಟಕ್ಕೆ ಬೆಂಬಲಿಸಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ಪಟ್ಟದ್ದೇವರು ಮಾತನಾಡಿ, “ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಮಳೆಯ ಕೊರತೆ ತೀವ್ರವಾಗಿದೆ. ಸಾಲ-ಸೋಲ ಮಾಡಿ ಬಿತ್ತನೆ ಮಾಡಿರುವ ರೈತರು ಸಮರ್ಪಕ ಬೆಳೆ ಬೆಳೆದು ಬರಲಾಗದೇ ಆರ್ಥಿಕ ಸಂಕಷ್ಟಕ್ಕೆ ಈಡಾಗಿದ್ದಾರೆ. ರೈತರ ಈ ಗಂಭೀರ ಸಮಸ್ಯೆಯನ್ನು ಅರಿತು ಅವರಿಗೆ ನ್ಯಾಯ ಒದಗಿಸುವ ಉದ್ಧೇಶದಿಂದ ರೈತ ಸಂಘ ಸೇರಿದಂತೆ ವಿವಿಧ ಸಂಘ–ಸಂಸ್ಥೆಗಳು ನಡೆಸುತ್ತಿರುವ ಧರಣಿ ಸತ್ಯಾಗ್ರಹ ನ್ಯಾಯಯುತವಾಗಿದೆ”ಎಂದು ಹೇಳಿದರು.

“ಕಳೆದ ಆರು ದಿನಗಳಿಂದ ರೈತರು ತಮ್ಮ ದಿನನಿತ್ಯದ ಕಾರ್ಯಗಳನ್ನು ತೊರೆದು ಹಗಲು-ರಾತ್ರಿ ಎನ್ನದೇ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ಸರ್ಕಾರ ರೈತರ ಸಂಕಷ್ಟವನ್ನು ಗಂಭೀರವಾಗಿ ಪರಿಗಣಿಸಬೇಕು. ಕೂಡಲೇ ಜಿಲ್ಲೆಯ ಉಳಿದ ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸುವುದು ಸೇರಿದಂತೆ ರೈತರ ವಿವಿಧ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಿ ಅನ್ನದಾತರ ನೆರವಿಗೆ ಧಾವಿಸಬೇಕು”ಎಂದು ಆಗ್ರಹಿಸಿದರು.
ರವಿವಾರ ರಾತ್ರಿ 12 ಗಂಟೆಗೆ ಪೂಜ್ಯ ಹವಾ ಮಲ್ಲಿನಾಥ ಮಹಾರಾಜರು ಸಹ ರೈತರ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಬೆಂಬಲಿಸಿದರು.
“ದೇಶಕ್ಕೆ ಅನ್ನ ನೀಡುವ ರೈತರು ಇಂದು ಬೀದಿಗೆ ಬಂದು ಹೋರಾಡುವ ಪರಿಸ್ಥಿತಿ ನಿರ್ಮಾಣವಾಗಿರುವುದು ಅತ್ಯಂತ ದುರ್ದೈವದ ಸಂಗತಿ” ಎಂದು ಹೇಳಿ, ಸರ್ಕಾರ ರೈತರ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ, ಪ್ರಮುಖರಾದ ಖಾಶಿಂ ಅಲಿ, ಚನ್ನಬಸವ ಬಳತೆ, ಕಿರಣ ಖಂಡ್ರೆ, ಜೈರಾಜ ಕೊಳ್ಳಾ, ನಾಗಶೆಟ್ಟೆಪ್ಪ ಲಂಜವಾಡೆ, ಅಶೋಕ ಕಾರಬಾರಿ, ಸಂಗಮೇಶ ಕಾರಮುಂಗೆ, ಮಲ್ಲಿಕಾರ್ಜುನ ಬಿರಾದಾರ, ವಿಠಲರಾವ ಮೇತ್ರೆ, ಭವರಾವ ನೆಲವಾಡೆ, ಡಿಗಂಬರರಾವ ಮಾನಕಾರಿ, ಪಂಡರಿ ಮೇತ್ರೆ, ವೀರಾರೆಡ್ಡಿ ಪಾಟೀಲ್, ಬಾಬುರಾವ ಧನಾಸುರೆ ಮತ್ತಿತರರು ಉಪಸ್ಥಿತರಿದ್ದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH
