ವಿಜಯಪುರ :
ಬಹುದೇವೋಪಾಸನೆಯಿಂದ ಏಕದೇವೋಪಾಸನೆಯೆಡೆಗೆ, ಮಂದಿರದಿಂದ ಅನುಭವ ಮಂಟಪದೆಡೆಗೆ, ಜಾತಿಯಿಂದ ನೀತಿಯೆಡೆಗೆ, ಕರ್ಮ ಸಿದ್ಧಾಂತದಿಂದ ಕಾಯಕ ಸಿದ್ಧಾಂತದೆಡೆಗೆ, ಮೂಢನಂಬಿಕೆಯಿಂದ ವೈಚಾರಿಕತೆಯೆಡೆಗೆ ಹಾಗೂ ಲಿಂಗ ಭೇದವಿಲ್ಲದ ಸಮಸಮಾಜದೆಡೆಗೆ ಕರೆದೊಯ್ದ ವ್ಯಕ್ತಿತ್ವ ಬಸವಣ್ಣನವರದು ಎಂದು ಕೊಡಗು ವಿಶ್ವವಿದ್ಯಾಲಯದ ಕುಲಪತಿ ಡಾ. ಅಶೋಕ ಆಲೂರ ಹೇಳಿದರು.
ನಗರದಲ್ಲಿ ಶನಿವಾರ ಪುಣೆಯ ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರದ ವಿಜಯಪುರ ಜಿಲ್ಲಾ ಘಟಕ ಆಯೋಜಿಸಿದ ಬಸವ ಜಯಂತಿ ಕಾರ್ಯಕ್ರಮ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಅಹಿಂಸೆಯ ಪರಾಕಾಷ್ಠೆ ಬೋಧಿಸಿದ ಬಸವ ದರ್ಮ ಜಗದ ಧರ್ಮ. ಅರಿವು, ಆಚಾರ ಮತ್ತು ಅನುಭಾವ ಇವು ಅದರ ಉತ್ತುಂಗದ ತತ್ವಗಳು. ಅನುಭವ ಮಂಟಪದಲ್ಲಿ ವಿಶ್ವದಲ್ಲೇ ಮೊದಲು ಪ್ರಜಾಪ್ರಭುತ್ವದ ಚಿಂತನೆಗಳು ನೀಡಿದ ಪ್ರಥಮ ಹರಿಕಾರ ಬಸವಣ್ಣನವರು ಎಂದು ಡಾ. ಆಲೂರ ಬಣ್ಣಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಗಂಗಾಧರ ಸಂಬಣ್ಣಿ ಮಾತನಾಡಿ, ಲಿಂಗಾಯತರು ಉಪಪಂಗಡಗಳ ಸಂಕುಚಿತ ಭಾವ ತೊರೆದು ಬಸವಧರ್ಮ ಪಾಲಿಸಬೇಕು ಎಂದು ಕರೆ ನೀಡಿದರು.
ಪುಣೆಯ ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ ಡಾ. ಶಶಿಕಾಂತ ಪಟ್ಟಣ ಮಾತನಾಡಿ, ಜಗತ್ತಿನಲ್ಲಿ ಪಶು-ಪ್ರಾಣಿ-ಪಕ್ಷಿಗಳನ್ನು ಪ್ರೀತಿಸುವ ಹಾಗೂ ವರ್ಗ ಮತ್ತು ವರ್ಣ ಶ್ರೇಷ್ಠತೆಯನ್ನು ತೆಗೆದುಹಾಕಿದ ಏಕೈಕ ಧರ್ಮ ಬಸವ ಧರ್ಮ. ಜಗತ್ತು ಕಂಡ ಬಹುದೊಡ್ಡ ದಾರ್ಶನಿಕ ಬಸವಣ್ಣ. ಅವರ ಜನ್ಮಭೂಮಿಯಾದ ವಿಜಯಪುಯದಲ್ಲಿ ಸರ್ಕಾರ ವಚನ ವಿಶ್ವವಿದ್ಯಾಲಯ ಸ್ಥಾಪಿಸಬೇಕು. ಅದಕ್ಕಾಗಿ ಇಲ್ಲಿಯ ಜನತೆ ಒಕ್ಕೊರಲಿಂದ ಆಗ್ರಹಿಸಬೇಕು ಎಂದು ಕರೆ ನೀಡಿದರು.
ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಸಂಸ್ಥೆಯ ಅಧ್ಯಕ್ಷ ಸುರೇಶ ದೇಸಾಯಿ, ಬಳ್ಳಾರಿಯ ರಾಷ್ಟ್ರೀಯ ಬಸವ ದಳದ ಅಧ್ಯಕ್ಷೆ ಶಾರದಮ್ಮ ಹಾಗೂ ಧಾರವಾಡದ ಡಾ. ಮೃತ್ಯುಂಜಯ ಶೆಟ್ಟರ ಮಾತನಾಡಿದರು.
ಪುಣೆಯ ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರದ ವಿಶ್ವಸ್ಥರಾದ ಶಾರದಾ ಪಾಟೀಲ (ಮೇಟಿ), ಜಿಲ್ಲಾ ಘಟಕದ ಗೌರವಾಧ್ಯಕ್ಷರಾದ ಡಾ. ಸರಸ್ವತಿ ಪಾಟೀಲ, ಯಾದಗಿರಿ ಜಿಲ್ಲಾ ಅಧ್ಯಕ್ಷೆ ವಿಜಯಲಕ್ಷ್ಮಿ ಹಂಗರಗಿ ವೇದಿಕೆ ಮೇಲಿದ್ದರು.
ಇದೇ ಸಂದರ್ಭದಲ್ಲಿ ನಾಡಿನ ೨೧ ಜನ ಸಾಧಕರಿಗೆ ಕ್ರಾಂತಿ ಗಂಗೋತ್ರಿ ಅಕ್ಕನಾಗಮ್ಮ ಪ್ರಶಸ್ತಿ, ವಚನ ಗಾನಕೋಗಿಲೆ ಪ್ರಶಸ್ತಿ ಹಾಗೂ ಬಸವ ಸೇವಾ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ಇದೇ ವೇಳೆ ಶರಣ ಸಾಹಿತ್ಯ ಪರಿಷತ್ತಿನ ಹಿರಿಯರಾದ ವ್ಹಿ.ಸಿ. ನಾಗಠಾಣ ಮತ್ತು ಸಿದ್ರಾಮಪ್ಪ ಉಪ್ಪಿನ ಅವರನ್ನು ಸನ್ಮಾನಿಸಲಾಯಿತು.

ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರದ ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ. ಆರ್.ಎಸ್. ಬಿರಾದಾರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರಧಾನ ಕಾರ್ಯದರ್ಶಿ ಡಾ. ಶಾರದಾಮಣಿ ಹುಣಶ್ಯಾಳ ಸಂದೇಶ ವಾಚಿಸಿದರು. ಸಂಘಟನಾ ಕಾರ್ಯದರ್ಶಿ ಶರಣು ಸಬರದ ಸ್ವಾಗತಿಸಿ, ಪರಿಚಯಿಸಿದರು. ಸವಿತಾ ದೇಶಮುಖ ನಿರೂಪಿಸಿದರು. ಸಿದ್ದಪ್ಪ ಪಡನಾಡ ವಂದಿಸಿದರು.
ಸಂಗೀತ ಕಲಾವಿದರಾದ ಗಾಯಿತ್ರಿ ಬಡಿಗೇರ ಮತ್ತು ಡಾ. ಮೃತ್ಯುಂಜಯ ಶೆಟ್ಟರ ಅವರ ವಚನ ಗಾಯನ ಸಭಿಕರ ಮನಸೂರೆಗೊಂಡಿತು.

ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರದ ಜಿಲ್ಲಾ ಘಟಕದ ಉಪಾಧ್ಯಕ್ಷ, ಉದ್ಯಮಿ ಗಂಗಾಧರ ಬಿ. ಸಾಲಕ್ಕಿ, ಕೋಶಾಧ್ಯಕ್ಷೆ ರತ್ನಾಬಾಯಿ ಬಿರಾದಾರ, ಪುಷ್ಪಾವತಿ ಗೋಟ್ಯಾಳ, ಸಂಘಟನಾ ಕಾರ್ಯದರ್ಶಿಗಳಾದ ರೇಣುಕಾ ಪಾಟೀಲ, ಬಸವರಾಜ ಕೋರಿ, ಬನಶ್ರೀ ಹತ್ತಿ, ಪ್ರೊ. ಬಿ.ಎಂ. ಬಿರಾದಾರ ’ಉದಯರಶ್ಮಿ’ ದಿನಪತ್ರಿಕೆ ಪ್ರಕಾಶಕಿ ಶೈಲಾ ಮಣ್ಣೂರ, ಬೆಳಗಾವಿಯ ಸುಧಾ ಪಾಟೀಲ, ಡಾ. ದಾನಮ್ಮ ಝಳಕಿ, ಗೌರಮ್ಮ ನಾಶಿ ಸೇರಿದಂತೆ ಅನೇಕ ಶರಣ-ಶರಣೆಯರು ಉಪಸ್ಥಿತರಿದ್ದರು.
