ಸತಿ’-ಪತಿಗಳಲ್ಲಿ ಶ್ವಾಸವಿರುವವರೆಗೂ ವಿಶ್ವಾಸವಿರಬೇಕು’

ಬಸವ ಮೀಡಿಯಾ
ಬಸವ ಮೀಡಿಯಾ

ಮುರುಘಾ ಮಠದಲ್ಲಿ ಸಾಮೂಹಿಕ ಕಲ್ಯಾಣ ಮಹೋತ್ಸವ

ಚಿತ್ರದುರ್ಗ:

ಮನುಷ್ಯ ಶ್ವಾಸ ಇರುವವರೆಗೂ ವಿಶ್ವಾಸ ಬಿಡಬಾರದು. ಸತಿ-ಪತಿಗಳು, ಗುರು-ಶಿಷ್ಯರು, ಸ್ನೇಹಿತರು ಸಂಬಂಧದಲ್ಲಿ ವಿಶ್ವಾಸವಿಟ್ಟುಕೊಂಡರೆ ಜಗತ್ತೇ ಆನಂದವಾಗಿರುತ್ತದೆ ಎಂದು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ವಿದ್ಯಾಪೀಠದ ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ ಹೇಳಿದರು.

ನಗರದ ಬಸವಕೇಂದ್ರ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿ ಬುಧವಾರ ೩೬ನೇ ವರ್ಷದ ಎಂಟನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ೦೩ ಜೋಡಿಗಳ ವಿವಾಹ ನೆರವೇರಿಸಿ ಮಾತನಾಡಿದ ಶ್ರೀಗಳು, ಲಿಂಗೈಕ್ಯ ಮಲ್ಲಿಕಾರ್ಜುನ ಶ್ರೀಗಳು ಶ್ರೀಮಠದಲ್ಲಿ ಸಾಮೂಹಿಕ ಕಲ್ಯಾಣ ನಡೆಯಲು ಕಾರಣೀಭೂತರು.

ಜಾತಕ, ರಾಶಿ ನೋಡದೇ ಇಂದು ಮದುವೆಯಾದ ವಧು ವರರು ಹಾಗೂ ಅವರ ಕುಟುಂಬ ವರ್ಗದವರು ಬಸವಾದಿ ಪ್ರಮಥರ ಕರುಣೆಗೆ ಪಾತ್ರರಾಗಿದ್ದಾರೆ ಅವರೆಲ್ಲ ಅಭಿನಂದನಾರ್ಹರು.

ಶ್ರೀಮಠವು ಮಹಾಲಯ ಅಮಾವಾಸ್ಯೆ ದಿನ ೧೮೦ ಜೋಡಿ ಮದುವೆ ಮಾಡಿದ ಉದಾಹರಣೆಯಿದೆ. ನಮ್ಮ ನಡೆ-ನುಡಿ ಸರಿಯಿಲ್ಲದೆ, ಕಾಲ ಸರಿಯಿಲ್ಲ ಎನ್ನುವವರು ವಿಕಾರಿಗಳು. ಮನುಷ್ಯ ಇಂದು ಮನಸ್ಸನ್ನು ಕಲುಷಿತಗೊಳ್ಳುವ, ಅಹಂಕಾರದ ಮಾತುಗಳನ್ನಾಡುತ್ತಿದ್ದಾನೆ. ಇಂತಹ ಮಾತುಗಳ ಬದಲಾಗಿ ಹಿತ ಮಾತುಗಳನ್ನಾಡಬೇಕೆಂದರು.

ಕುಟುಂಬ, ಸಮಾಜ ಚೆನ್ನಾಗಿರಬೇಕಾದರೆ ನಿರಹಂಕಾರಿಯಾಗಿ, ಅಂತಃಕರುಣಿಯಾಗಿರಬೇಕು. ೧೨ನೇ ಶತಮಾನದ ವಚನ ಚಳುವಳಿ ಕುಟುಂಬ, ಸಮಾಜ, ಮನುಷ್ಯ ಹೇಗಿರಬೇಕೆಂಬ ತತ್ವವನ್ನು ತಿಳಿಸಿದೆ. ಅವುಗಳನ್ನು ನಾವೆಲ್ಲರೂ ಅನುಸರಿಸಬೇಕು.

ಹಣವನ್ನು ದುಂದುವೆಚ್ಚ ಮಾಡಿದರೆ ರಾಷ್ಟ್ರೀಯ ಸಂಪತ್ತನ್ನು ಹಾಳು ಮಾಡಿದಂತೆ. ಹಾಗಾಗಿ ಮೂಢನಂಬಿಕೆ, ಕಂದಾಚಾರ ಬಿಟ್ಟು ಬದುಕಿ.

ಶ್ರೀಮಠವು ೨೫ ಸಾವಿರ ಮದುವೆಗಳನ್ನು ಮಾಡಿದೆ. ಈ ಕಾರ್ಯವನ್ನು ದೇಶದ ಯಾವುದೇ ಮಠಗಳು ಮಾಡಿಲ್ಲ. ಮದುವೆ ಕಾರ್ಯದಲ್ಲಿ ಭಾಗವಹಿಸುವವರ ಅನುಕೂಲಕ್ಕಾಗಿಯೇ ಈ ಅನುಭವ ಮಂಟಪವನ್ನು ನಿರ್ಮಿಸಲಾಯಿತು ಎಂದು ಸ್ಮರಿಸಿದರು.

ಗುರುಮಠಕಲ್‌ನ ಶ್ರೀ ಗುರುಶಾಂತವೀರ ಮುರುಘರಾಜೇಂದ್ರ ಸ್ವಾಮಿಗಳು ಮಾತನಾಡಿ, ಲಿಂಗೈಕ್ಯ ಮಲ್ಲಿಕಾರ್ಜುನ ಸ್ವಾಮಿಗಳು ಪ್ರತಿವರ್ಷ ಜಯವಿಭವ ಸ್ವಾಮಿಗಳ ಸ್ಮರಣೋತ್ಸವದ ನೆನಪಿಗಾಗಿ ಶ್ರೀಮಠದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಅಲ್ಲಿಂದ ಇಲ್ಲಿಯವರೆಗೆ ಶ್ರೀಮಠವು ಪ್ರತಿತಿಂಗಳು ೫ನೇ ತಾರೀಕಿನಂದು ಸಾಮೂಹಿಕ ಕಲ್ಯಾಣ ಮಹೋತ್ಸವವನ್ನು ನಿರಂತರವಾಗಿ ಮುನ್ನಡೆಸಿಕೊಂಡು ಬರುತ್ತಿದೆ. ಮಧ್ಯಕರ್ನಾಟಕ ಭಾಗದ ಜನರಿಗೆ ಅನುಕೂಲವಾಗುವ ದೂರದೃಷ್ಟಿಯಿಂದ ಈ ಕಾರ್ಯವನ್ನು ನೆರವೇರಿಸುತ್ತಿದೆ.

ವೈಚಾರಿಕ, ವೈಜ್ಞಾನಿಕ ಹಾಗೂ ಬಸವಾದಿ ಶರಣರ ಚಿಂತನೆಗಳನ್ನು ಬಿತ್ತುವ ಕೆಲಸ ಶ್ರೀಮಠವು ಮಾಡುತ್ತಿದೆ. ಬಡಜನತೆಗೆ ವಿವಾಹದ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟ ಉಂಟಾಗಬಾರದು, ಸಾಲಕ್ಕೆ ಒಳಗಾಗಬಾರದೆನ್ನುವ ನಿಟ್ಟಿನಲ್ಲಿ ಶ್ರೀಮಠವು ಸರಳವಾಗಿ ಮದುವೆ ಮಾಡಲು ಸಹಕಾರಿಯಾಗಿದೆ ಎಂದು ಸ್ಮರಿಸಿದರು.

ಅದ್ಧೂರಿ ಆಡಂಬರ ಮದುವೆಗಿಂತ ಆದರ್ಶದ ಮದುವೆ ನಮಗೆ ಬೇಕು.

ಆಷಾಡದಲ್ಲಿ ಮೂಢನಂಬಿಕೆಯನ್ನು ದೂರಮಾಡಿ ಇಂದು ಕಲ್ಯಾಣ ಮಹೋತ್ಸವ ನೆರವೇರುತ್ತಿದೆ. ವಧು-ವರರು ಬಸವಾದಿ ಶರಣರ ಆದರ್ಶಗಳನ್ನು ಪಾಲಿಸಿಕೊಂಡು ಜೀವನ ಸಾಗಿಸಬೇಕು. ಜೀವನದ ಅತ್ಯಂತ ಅಮೂಲ್ಯ ಘಟ್ಟವೆಂದರೆ ದಾಂಪತ್ಯ ಜೀವನ. ಸತಿಪತಿಗಳಲ್ಲಿ ಶ್ವಾಸವಿರುವವರೆಗೂ ವಿಶ್ವಾಸವಿರಬೇಕು. ಆಗ ಜೀವನದಲ್ಲಿ ನೆಮ್ಮದಿ ಸಂತೋಷ ಸಿಗುತ್ತದೆ ಎಂದರು.

ಶ್ರೀಮಠದ ಗೌರವ ಸ್ವೀಕರಿಸಿ ಮಾತನಾಡಿದ, ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಹಿರಿಯ ಶಸ್ತ್ರಚಿಕಿತ್ಸಾ ತಜ್ಞರಾದ ಡಾ. ಸಾಲಿಮಂಜಪ್ಪ, ಏನಾದರೂ ಸಾಧನೆ ಮಾಡಬೇಕು ಎಂಬ ಆಸೆಯನ್ನು ಇಟ್ಟುಕೊಂಡು ಬೆಳೆದವನು ನಾನು. ಕಷ್ಟ ಬಂದಾಗ ಕುಗ್ಗದೇ ಸುಖ ಬಂದಾಗ ಹಿಗ್ಗದೇ ಸಮನಾಗಿ ಸ್ವೀಕರಿಸಿ ಬದುಕನ್ನು ಸಾಗಿಸಬೇಕು.

ಬಸವಣ್ಣನವರ ಕಾಯಕವೇ ಕೈಲಾಸ ನುಡಿ ನಮ್ಮ ಮನಸ್ಸಿನಲ್ಲಿ ಹಾಸು ಹೊಕ್ಕಾಗಬೇಕು. ಕಷ್ಟಪಟ್ಟು ಕೆಲಸ ಮಾಡಿದರೆ ನಮಗೆ ಒಳ್ಳೆಯ ಫಲ ಸಿಕ್ಕೇ ಸಿಗುತ್ತದೆ. ನಾವು ನಮ್ಮ ಕೆಲಸ ಮಾಡುತ್ತಾ ಹೋಗೋಣ ಫಲಾಫಲಗಳನ್ನು ದೇವರಿಗೆ ಒಪ್ಪಿಸೋಣ. ಶ್ರೀಮಠವು ನನ್ನ ಕಾರ್ಯವನ್ನು ಗುರುತಿಸಿ ಸನ್ಮಾನಿಸಿದ್ದಕ್ಕೆ ಕೃತಜ್ಜ್ಞತೆ ಸಲ್ಲಿಸುತ್ತೇನೆಂದರು.

ಎಸ್.ಜೆ.ಎಂ. ವಿಶ್ವವಿದ್ಯಾಲಯದ ಕುಲಪತಿ ಡಾ. ಕೆ.ಬಿ. ಗುಡಸಿ ಮಾತನಾಡಿ, ಆಷಾಢ ಮಾಸದಲ್ಲೂ ಕಾರ್ಯಗಳನ್ನು ಮಾಡಲು ಒಳ್ಳೆಯ ಮುಹೂರ್ತ ಸಿಗುತ್ತಿಲ್ಲ ಎಂದು ಹೇಳುವ ಕಾಲಘಟ್ಟದಲ್ಲಿ ಈ ಮೂರು ಜೋಡಿಗಳು ಧೈರ್ಯಮಾಡಿ ವಿವಾಹವಾಗುತ್ತಿರುವುದು ಮೆಚ್ಚುಗೆಯ ಸಂಗತಿ. ಇದೇ ನಿಜವಾದ ಆದರ್ಶ.

ಬಸವಣ್ಣನವರು ಹೇಳಿದ ಹಾಗೆ ಗಳಿಗೆ, ರಾಶಿ, ಮುಹೂರ್ತ ನೋಡದೆ ಆಷಾಡದಲ್ಲಿ ಜೀವನದ ಅತಿಮುಖ್ಯ ಘಟ್ಟ ವಿವಾಹವನ್ನು ಆಚರಿಸಿಕೊಳ್ಳುತ್ತಿರುವುದು ವಿಶೇಷ. ಶ್ರೀಮಠವು ವೈಚಾರಿಕ ಮೌಲ್ಯಗಳನ್ನು ಬಿತ್ತುತ್ತ ಬಂದಿದೆ. ಅಂತಹ ಮಠ ಆಶ್ರಯದಲ್ಲಿ ನಾವಿದ್ದೇವೆ ಎಂಬುದೇ ಅಭಿಮಾನ. ನವ ವಧುವರರು ಹೊಂದಾಣಿಕೆಯಿಂದ ಜೀವನ ಮಾಡಿ. ನಿಮ್ಮ ಮಕ್ಕಳು ದೇಶವನ್ನು ಕಟ್ಟುವಂತಹ ಮಕ್ಕಳಾಗಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಮೂರು ಜೋಡಿಗಳ ವಿವಾಹ ನೆರವೇರಿತು. ದಾವಣಗೆರೆ ವಿರಕ್ತಮಠದ ಡಾ. ಬಸವಪ್ರಭು ಮಹಾಸ್ವಾಮಿಗಳು ವೇದಿಕೆಯಲ್ಲಿದ್ದರು. ಜಮುರಾ ಕಲಾವಿದ ಉಮೇಶ ಪತ್ತಾರ ವಚನ ಸಂಗೀತ ಹಾಡಿದರು. ಲಿಂಗರಾಜ ಸ್ವಾಗತಿಸಿ, ಕಾರ‍್ಯಕ್ರಮ ನಿರೂಪಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LcykjUHphtT2VDkfrKC3PM

Share This Article
Leave a comment

Leave a Reply

Your email address will not be published. Required fields are marked *