ಗುಳೇದಗುಡ್ಡ:
“ವಚನಗಳನ್ನು ಸಂಗ್ರಹಿಸಿ, ಪರಿಷ್ಕರಿಸಿ, ಪ್ರಕಟಿಸಿ ಮುಂದಿನ ಜನಾಂಗಕ್ಕೆ ತಲುಪಿಸುವ ಮಹಾಸಾಧನೆಯನ್ನು ವಚನ ಪಿತಾಮಹ ಡಾ ಫ. ಗು. ಹಳಕಟ್ಟಿ ಅವರು ಮಾಡಿದರು.
ಅವರ ಪರಿಶ್ರಮದಿಂದ ಕರ್ನಾಟಕದ ಮ್ಯಾಕ್ಸ್ ಮುಲ್ಲರ್ ಎಂಬ ಹೊಗಳಿಕೆಗೆ ಪಾತ್ರರಾದರಲ್ಲದೆ, ಅಲ್ಲಲ್ಲಿ ಗೆದ್ದಿಲು ಹತ್ತಿ ಜೀರ್ಣವಾದ ವಚನಕಟ್ಟುಗಳಿಂದ ವಚನ ಶಾಸ್ತ್ರಸಾರ ಭಾಗ ಒಂದು ಎರಡು ಮೂರು, ಶಿವಶರಣರ ಚರಿತ್ರೆ ಶೂನ್ಯ ಸಂಪಾದನೆ, ಕರ್ನಾಟಕದ ಲಿಂಗಾಯತ ಅರಸು ಮನೆತನಗಳ ಚರಿತ್ರೆ, ಹರಿಹರನ ರಗಳೆಗಳು ಮೊದಲಾದವುಗಳನ್ನು ತಮ್ಮದೇ ಆದ ಶಿವಾನುಭವ ಪತ್ರಿಕೆಯಲ್ಲಿ ಮುದ್ರಿಸಿ ವಚನ ಗುಮ್ಮಟ ಎಂದೆನಿಸಿಕೊಂಡ ಹಳಕಟ್ಟಿಯವರು ತಮ್ಮ ಹೆಸರಿನಂತೆ ಫಕೀರರಾಗಿಯೆ ಅನ್ವರ್ಥಕವಾಗಿ ಬಾಳಿದರು.

ಅವರ ಜೀವನ ಪಾರದರ್ಶಕವಾಗಿ ನಿರಾಡಂಬರವಾಗಿತ್ತು. ಇಂದು ನಾವು ವಚನಗಳನ್ನು ಓದುತ್ತಿರುವುದು ಹಲವಾರು ಮಠ ಪೀಠ ಪಟ್ಟಗಳಿಗೆ ಜ್ಞಾನ ಪ್ರಸಾರ ಕಾರ್ಯಕ್ಕೆ ಕಾರಣವಾಗಿರುವುದು ಡಾ. ಹಳಕಟ್ಟಿ ಅವರ ವಚನ ಸಂಶೋಧನೆ ಎಂದರೆ ತಪ್ಪಾಗಲಿಕ್ಕಿಲ್ಲ” ಎಂದು ಪ್ರೊ. ಬಸಲಿಂಗಯ್ಯ ಕಂಬಾಳಿಮಠ ಅವರು ಹೇಳಿದರು.
ಅವರು ಗುಳೇದಗುಡ್ಡದ ಬಸವ ಕೇಂದ್ರದ ವತಿಯಿಂದ ಹುಚ್ಚಪ್ಪ ಮುರನಾಳ ಅವರ ಮನೆಯಲ್ಲಿ ಶನಿವಾರ ಜರುಗಿದ ಸಾಪ್ತಹಿಕ ಮನೆಯಲ್ಲಿ ಮಹಾಮನೆ ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸಕರಾಗಿ ಮಾತನಾಡುತ್ತಿದ್ದರು.

ಡಾ. ಫ. ಗು. ಹಳಕಟ್ಟಿಯವರ ಜಯಂತಿಯನ್ನು ಹಮ್ಮಿಕೊಂಡ ಈ ಸಂದರ್ಭದಲ್ಲಿ ಇನ್ನೋರ್ವ ಅತಿಥಿಗಳಾದ ಶಿಕ್ಷಕಿ ರೇಖಾ ಚೆನ್ನಿ ಅವರು ಹಳಕಟ್ಟಿಯವರ ಕುರಿತು ಮಾತನಾಡುತ್ತ, “ಹಳಕಟ್ಟಿ ಅವರ ವಚನ ಸಾಹಿತ್ಯ ಸೇವೆ ಅಮೋಘವಾದದು. ಅವರು ಇಷ್ಟು ಮಾತ್ರಕ್ಕೆ ಸೀಮಿತಗೊಳ್ಳದೆ ನಾಡು ನುಡಿಯನ್ನು ಕುರಿತು ಶ್ರಮಿಸಿದರು. ಹಲವಾರು ಸಂಘ ಸಂಸ್ಥೆಗಳನ್ನು ಕಟ್ಟಿ ವಿಜಾಪುರವನ್ನು ಬರಗಾಲದಿಂದ ಮುಕ್ತ ಮಾಡುವ ಸಂಕಲ್ಪ ತೊಟ್ಟಿದ್ದರು. ನಾಡಿನ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಹಾಗೂ ಧಾರ್ಮಿಕ ರಂಗವನ್ನು ಉಜ್ವಲಗೊಳಿಸಿದರು. ಅವರೊಬ್ಬ ಮಹಾನ್ ಚಿಂತಕ ಎಂದು ಬಣ್ಣಿಸಿದರು.

ಜೊತೆಗೆ ಪ್ರತಿವಾರದಂತೆ ಜರುಗಿದ ಮಹಾಮನೆ ಕಾರ್ಯಕ್ರಮದಲ್ಲಿ ಶ್ರೀ ಬಸವ ತಂದೆಗಳ’ ತನ್ನಾಶ್ರಯದ ರತಿಸುಖ”ವನ್ನು ಎಂಬ ವಚನವನ್ನು ಪ್ರೊ. ಶ್ರೀಕಾಂತ ಗಡೇದ, ಮಹಾಂತೇಶ ಸಿಂದಗಿ, ಮಹಾಲಿಂಗಪ್ಪ ಕರನಂದಿ, ಗಾಯತ್ರಿ ಕಲ್ಯಾಣಿ ಹಾಗೂ ಸಿದ್ದಲಿಂಗಪ್ಪ ಬರಗುಂಡಿಯವರು ವಿಶ್ಲೇಷಿಸಿದರು.
ಆರಂಭದಲ್ಲಿ ಮುರುಗೇಶ ಶೇಖಾ ಅವರು ಸ್ವಾಗತಿಸಿದರು. ಕೊನೆಯಲ್ಲಿ ಎಸ್.ಟಿ. ರಾಜನಾಳ ಶರಣು ಸಮರ್ಪಣೆ ಗೈದರು. ಪಾಂಡಪ್ಪ ಕಳಸಾ, ಪುತ್ರಪ್ಪ ಬೀಳಗಿ, ರಾಚಪ್ಪ ಎಂಡಿಗೇರಿ, ರಾಚಣ್ಣ ಕೆರೂರ ಶರಣೆ ಶ್ರೀದೇವಿ ಶೇಖಾ ಮೊದಲಾದವರು ಉಪಸ್ಥಿತರಿದ್ದರು. ಹುಚ್ಚಪ್ಪ ಮುರನಾಳ ಹಾಗೂ ಅವರ ಬಂದು ಬಳಗ ಉಪಸ್ಥಿತರಿದ್ದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/IuAONC0TfmA8PyaqHT9WIP
