ಬೀದರ:
ಕನ್ನಡ ನಾಡು ನುಡಿ ಸಮಾಜಸೇವೆ ಜಯದೇವಿತಾಯಿ ಲಿಗಾಡೆ ಅವರ ಉಸಿರಾಗಿದ್ದವು ಎಂದು ಉಪನ್ಯಾಸಕ ಬಸವರಾಜ ಮಯೂರ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಅಂಬೇಡ್ಕರ್ ವೃತ್ತದಲ್ಲಿರುವ ಕರ್ನಾಟಕ ಪುಸ್ತಕ ಮಳಿಗೆಯಲ್ಲಿ ಬೀದರನ ಶ್ರೀ ಪ್ರಭುರಾವ ಕಂಬಳಿವಾಲೆ ಪ್ರತಿಷ್ಠಾನ ಮತ್ತು ಬಸವಕಲ್ಯಾಣದ ಡಾ. ಜಯದೇವಿತಾಯಿ ಲಿಗಾಡೆ ಪ್ರತಿಷ್ಠಾನಗಳ ಸಹಯೋಗದಲ್ಲಿ ಹಮ್ಮಿಕೊಂಡ ಡಾ. ಜಯದೇವಿತಾಯಿ ಲಿಗಾಡೆ ಅವರ 114ನೇ ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಯದೇವಿತಾಯಿ ಲಿಗಾಡೆಯವರು ಅಪ್ಪಟ ಕನ್ನಡದ ನೆಲವಾಗಿದ್ದ ಮಹಾರಾಷ್ಟ್ರ ರಾಜ್ಯಕ್ಕೆ ಸೇರಿದ ಸೊಲ್ಲಾಪುರದಲ್ಲಿ ಜನಿಸಿದರು. ತಮ್ಮ ಓದು ಬರಹ ಮರಾಠಿ ಮಾಧ್ಯಮದಲ್ಲಿ ಆದರೂ ಶರಣ ಸಾಹಿತ್ಯದ ಮೇಲಿನ ಪ್ರೀತಿ ಅಭಿಮಾನದಿಂದ ಸ್ವಪ್ರೇರಣೆಯಿಂದ ನಾಲ್ಕು ಮಕ್ಕಳ ತಾಯಿ ಆದನಂತರ ಕನ್ನಡ ಕಲಿತು ಶ್ರೀ ಸಿದ್ದರಾಮೇಶ್ವರ ಪುರಾಣದಂಥ ಮಹಾ ಕಾವ್ಯ ರಚಿಸಿದರು.

ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಭಾಗಿಯಾಗಿ ತಮ್ಮ ರಕ್ತದಲ್ಲಿ ಪತ್ರ ಬರೆದು ಹೋರಾಟಗಾರರಿಗೆ ಸ್ಪೂರ್ತಿ ನೀಡಿದರು. ಕರ್ನಾಟಕ ಮಹಾರಾಷ್ಟ್ರ ಗಡಿಭಾಗದ ಶಾಲೆಗಳಿಗೆ ಸ್ವಂತ ಖರ್ಚಿನಲ್ಲಿ ಸುಮಾರು ನಾಲ್ಕು ನೂರು ಕನ್ನಡ ಶಿಕ್ಷಕರನ್ನು ನೇಮಕಮಾಡಿಕೊಂಡು ಕನ್ನಡ ಕಲಿಸಿದರು.
ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕದಿನ ರಾತ್ರಿ ಹನ್ನೆರಡು ಗಂಟೆಗೆ ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿ ಇದ್ದ ಲಿಗಾಡೆ ತಾಯಿಯವರು ಸ್ತ್ರೀಯರ ಪ್ರವೇಶ ನಿಷೇಧಿಸಿದ ಶ್ರೀ ಸಿದ್ದರಾಮೇಶ್ವರ ದೇವಸ್ಥಾನದಲ್ಲಿ “ಇಂದು ದೇಶಕ್ಕೆ ಸ್ವತಂತ್ರ ಬಂದಿದೆ, ಸ್ತೀಯರಾದ ನಮಗೂ ದೇವಸ್ಥಾನದಲ್ಲಿ ಪ್ರವೇಶಕ್ಕೆ ಅವಕಾಶ ನೀಡಿ ಎಂದು ಹಟ ಹಿಡಿದು ದೇವಸ್ಥಾನದಲ್ಲಿ ಪ್ರವೇಶ ಮಾಡಿ ದೇವರ ದರ್ಶನ ಪಡೆಯುವ ಮೂಲಕ ಮಹಿಳಾ ಸ್ವಾತಂತ್ರ್ಯ ಮೆರೆದ ಧೀರ ಮಹಿಳೆಯಾಗಿದ್ದಾರೆ.
ಸರಸ್ವತಿ ಸದನ, ಮಹಿಳಾ ಮಂದಿರ ಸಂಸ್ಥೆಗಳ ಮೂಲಕ ಹೆಣ್ಣುಮಕ್ಕಳಿಗೆ ಅಕ್ಷರ ಅಭ್ಯಾಸದೊಂದಿಗೆ ಹೊಲಿಗೆ, ಕಸೂತಿ ತರಬೇತಿ ನೀಡುವ ಮೂಲಕ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿದರು ಎಂದರು.
ಬೀದರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷ ಎಂ.ಎಸ್. ಮನೋಹರ ಮಾತನಾಡಿ, ಸ್ವಾತಂತ್ರ್ಯ ನಂತರ ಸಂಸ್ಥಾನಗಳ ವಿಲಿನಿ ಕಾಲದ ಭಾರತದಲ್ಲಿ ವಿಲಿನವಾಗಲು ಹೈದರಾಬಾದ ನಿಜಾಮ ಅಪಸ್ವರ ಎತ್ತಿದ. ಆಗ ಭಾರತದ ಪರವಾಗಿದ್ದ ಸ್ವತಂತ್ರ ಪ್ರೀಯ ಜನರ ಧ್ವನಿ ಅಡಗಿಸಲು ರಜಾಕಾರರು ಕೊಲೆ ಸುಲಿಗೆ ಮಾಡಲು ಮುಂದಾದರು, ಆ ರಜಾಕಾರರ ಉಪಟಳಕ್ಕೆ ಹೆದರಿ ಪ್ರಾಣಭಯದಿಂದ ಸೋಲಾಪುರಕ್ಕೆ ಹೋದ ಬೀದರ, ರಾಯಚೂರು, ಕಲಬುರ್ಗಿಯ ನಿರಾಶ್ರಿತರಿಗೆ ಸೊಲ್ಲಾಪುರದ ತಮ್ಮ ತೋಟದಲ್ಲಿ ಗಂಜಿ ಕೇಂದ್ರ ತೆರೆದು ಅನ್ನ ಆಶ್ರಯ ನೀಡಿದರು. ಅಲ್ಲದೆ ಕಲ್ಯಾಣ ನಾಡಿನಲ್ಲಿ ಜಯದೇವಿತಾಯಿ ಲಿಗಾಡೆಯವರು ಪ್ರವೇಶಿಸುವುದನ್ನು ಅಂದಿನ ನಿಜಾಮ ಸರಕಾರ ನಿಷೇಧಿಸಿತ್ತು. ಅದಾವುದನ್ನು ಲೆಕ್ಕಿಸದೆ ಜಹಿರಾಬಾದನಲ್ಲಿ ಸ್ವಾತಂತ್ರ ಹೋರಾಟಗಾರರನ್ನು ಉದ್ದೇಶಿಸಿ ಬಹಿರಂಗ ಸಭೆಯಲ್ಲಿ ಮಾತನಾಡಿದ ದಿಟ್ಟ ಮಹಿಳೆ ಲಿಗಾಡೆ ತಾಯಿಯವರಾಗಿದ್ದಾರೆ ಎಂದು ಹೇಳಿದರು.
ಪತ್ರಕರ್ತ ನಾಗಶೆಟ್ಟಿ ಪಾಟೀಲ ಗಾದಗಿ ಮಾತನಾಡಿ ಪ್ರಭುರಾವ ಕಂಬಳಿವಾಲೆ, ಪೂಜ್ಯ ಚನ್ನಬಸವ ಪಟ್ಟದೇವರು, ಡಾ. ಜಯದೇವಿತಾಯಿ ಲಿಗಾಡೆ ಇವರ ಶ್ರಮದ ಫಲವಾಗಿ ಬೀದರ ಕರ್ನಾಟಕ ರಾಜ್ಯದಲ್ಲಿ ಉಳಿಯಲು ಸಾಧ್ಯವಾಯಿತು. ಈಗಾಗಲೇ ಸರಕಾರ ಲಿಗಾಡೆ ತಾಯಿ ಮತ್ತು ಕಂಬಳಿವಾಲೆ ಅವರ ಹೆಸರಿನಲ್ಲಿ ಪ್ರತಿಷ್ಠಾನಗಳನ್ನು ರಚಿಸಿದೆ. ಆದರೆ ಅವುಗಳಿಗೆ ಅಧ್ಯಕ್ಷರ ನೇಮಕಮಾಡದೆ ತಾತ್ಸಾರ ಮಾಡುತ್ತಿದೆ. ಅಧ್ಯಕ್ಷರ ನೇಮಕವಾದಲ್ಲಿ ಆ ಸಂಸ್ಥೆಗಳಿಗೆ ಜೀವಬರುತ್ತದೆ. ಸಂಸ್ಥೆಗಳು ಕಾರ್ಯ ಪ್ರವೃತ್ತವಾದರೆ ಮಹಾನ್ ವಿಚಾರಗಳು ಜನಮಾನಸಕ್ಕೆ ತಲುಪುತ್ತವೆ ಎಂದರು.
ಪ್ರಭುರಾವ ಕಂಬಳಿವಾಲೆ ಪ್ರತಿಷ್ಠಾನದ ನಿರ್ದೇಶಕರಾದ ಶಾಂತಕುಮಾರ ಉದಗಿರೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿಷ್ಣುಕಾಂತ ಮಹೇಂದ್ರಕರ್ ಉಪಸ್ಥಿತರಿದ್ದರು. ಲಿಗಾಡೆ ಪ್ರತಿಷ್ಠಾನದ ಕಾರ್ಯದರ್ಶಿ ದೇವಿಂದ್ರ ಬರಗಾಲೆ ನಿರೂಪಿಸಿದರು.
