ಹುನಗುಂದ:
ಬಸವಪ್ಪ ಹಾದಿಮನಿ ಶರಣರು ತಮ್ಮ ಬದುಕಿನಲ್ಲಿ ಶರಣರ ಕಾಯಕತತ್ವ, ನಿಸ್ವಾರ್ಥ ಸಮಾಜಸೇವೆ ಮತ್ತು ದಾಸೋಹದಂಥ ಉದಾತ್ತ ಮೌಲ್ಯಗಳನ್ನು ಅಳವಡಿಸಿಕೊಂಡು ಆದರ್ಶರಾಗಿದ್ದರು ಎಂದು ನಿವೃತ್ತ ಉಪನಿರ್ದೇಶಕ ಎಂ.ಜಿ. ದಾಸರ ಹೇಳಿದರು.
ಅವರು ನಗರದ ಗುದ್ಲಿ ಕಾಯಕಯೋಗಿ ಬಸವಪ್ಪ ಹಾದಿಮನಿ ಶರಣತತ್ವ ದರ್ಶನ ಟ್ರಸ್ಟ್, ಶರಣ ಸಾಹಿತ್ಯ ಪರಿಷತ್ತು ಹಾಗೂ ಕದಳಿ ಮಹಿಳಾ ವೇದಿಕೆ ಸಂಯುಕ್ತವಾಗಿ ಶುಕ್ರವಾರ ಹಮ್ಮಿಕೊಂಡ ಬಸವಪ್ಪ ಹಾದಿಮನಿ ಶರಣರ ೪೫ ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಶರಣರು ಕೃಷಿ, ಶಿಕ್ಷಣ ಮತ್ತು ಸಮಾಜ ಸೇವೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದರು. ದಾಸೋಹ ಮಾಡುವುದು, ಸಮಾನತೆಯ ಆಶಯಗಳನ್ನು ಸಮಾಜದಲ್ಲಿ ಅನುಷ್ಠಾನಗೊಳಿಸುವುದು ಹಾಗೆಯೇ ಮಾನವೀಯ ಮೌಲ್ಯಗಳನ್ನು ಬೆಳೆಸಬೇಕು.
ಸಾಧಕರು ಮತ್ತು ದಾರ್ಶನಿಕರ ಜೀವನ ಆದರ್ಶ ನಮ್ಮ ಸಮಾಜದಲ್ಲಿ ಬಿತ್ತಿ ಬೆಳೆಯುವುದು ಇಂದಿನ ಅಗತ್ಯ ಎಂದರು.

ಸಾನಿಧ್ಯ ವಹಿಸಿದ್ದ ಇಳಕಲ್ಲ ವಿಜಯಮಹಾಂತೇಶ್ವರ ಮಠದ ಪೂಜ್ಯ ಡಾ. ಗುರುಮಹಾಂತ ಅಪ್ಪಗಳು ಆಶೀರ್ವಚನ ನೀಡಿ, ಬಸವಾದಿ ಶರಣರು ಹೇಳಿದ ತತ್ವಗಳನ್ನು ಸಮಾಜ, ಜನ ಬದುಕಿನಲ್ಲಿ ಪಾಲಿಸಿದರೆ ಶರಣರ ಜೀವನ ಆದರ್ಶಗಳಿಗೆ ಅರ್ಥ ಬರುತ್ತದೆ. ಆಗ ಆದರ್ಶ ಸಮಾಜ ತಾನಾಗಿ ನಿರ್ಮಾಣ ಆಗುವುದು ಎಂದರು.

ಅಮೀನಗಡ ಶಂಕರ ರಾಜೇಂದ್ರ ಶ್ರೀಗಳು, ಹುಲ್ಯಾಳದ ಪ್ರವಚನಕಾರ್ತಿ ಶ್ರೀದೇವಿ ಮಾತಾಜಿ ಮಾತಾಡಿದರು. ಇದೇ ಸಂದರ್ಭದಲ್ಲಿ ಕೃಷಿ ಪ್ರಶಸ್ತಿ ಪಡೆದ ಸಂಗಣ್ಣ ಸಂಗನಬಸಪ್ಪ ನಾಗರಾಳ, ವಿದ್ಯಾ ಪರುತಪ್ಪ ಭಾವಿ ಮತ್ತು ಬಸಪ್ಪ ಶಿವಪ್ಪ ಕೆಂದೂರ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪ್ರತಿಭಾವಂತ ವಿದ್ಯಾರ್ಥಿಗಳು ಮತ್ತು ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಟ್ರಸ್ಟ್ ಕಾರ್ಯಾಧ್ಯಕ್ಷ ವಿ.ಎಂ. ಹಾದಿಮನಿ ಸ್ವಾಗತಿಸಿದರು. ಟ್ರಸ್ಟ್ ಪ್ರಧಾನಕಾರ್ಯದರ್ಶಿ ಡಾ. ಲಲಿತಾ ಹೊಸಪ್ಯಾಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಗಮೇಶ ಹೊದ್ಲೂರ ನಿರೂಪಿಸಿದರು. ಟ್ರಸ್ಟ್ ಅಧ್ಯಕ್ಷ ಎಸ್.ಎನ್. ಹಾದಿಮನಿ ವಂದಿಸಿದರು.

