ಪ್ರವಚನಕಾರರು: ಪೂಜ್ಯ ಬಸವೇಶ್ವರಿ ಮಾತಾಜಿ, ಬಸವಧಾಮ ಅತ್ತಿವೇರಿ
ಸ್ಥಳ: ಬಸವ ಮಂಟಪ, ಮಾಕಾ ಲೇಔಟ್, ಕಲಬುರಗಿ
ಆಯೋಜನೆ: ಜಗಜ್ಯೋತಿ ಬಸವೇಶ್ವರ ಸೇವಾ ಸಮಿತಿ
ದಿನಾಂಕ: 20 ಏಪ್ರಿಲ್ 2026
ಇಂದಿನ ಪ್ರವಚನದಲ್ಲಿ ಮಾತಾಜಿಯವರು ಬಸವಣ್ಣನವರ ತತ್ವಗಳು ಮತ್ತು ಶರಣ ಸಂಪ್ರದಾಯದ ಮಹತ್ವವನ್ನು ವಿಶದವಾಗಿ ವಿವರಿಸಿದರು. ಕಲ್ಯಾಣ ರಾಜ್ಯದ ಸಮೃದ್ಧಿಗೆ ಕಾರಣವಾದ “ಕಾಯಕ” ಮತ್ತು “ದಾಸೋಹ” ತತ್ವಗಳ ಬಗ್ಗೆ ವಿಶೇಷವಾಗಿ ಪ್ರಸ್ತಾಪಿಸಿ, ಕಾಯಕದ ಬಗ್ಗೆ ಮಾತನಾಡುವುದಕ್ಕಿಂತ ಅದನ್ನು ಅನುಷ್ಠಾನಗೊಳಿಸುವುದೇ ಮುಖ್ಯವೆಂದು ಹೇಳಿದರು.
ಆಯ್ದಕ್ಕಿ ಲಕ್ಕಮ್ಮ ಹಾಗೂ ಆಯ್ದಕ್ಕಿ ಮಾರಯ್ಯರ ವಚನಗಳ ಉದಾಹರಣೆಗಳ ಮೂಲಕ ಅತಿರೇಕ, ದುರಾಸೆ ಮತ್ತು ಅಹಂಕಾರದ ವಿರುದ್ಧ ಶರಣರು ನೀಡಿದ ಸಂದೇಶವನ್ನು ಸ್ಪಷ್ಟಪಡಿಸಿದರು.

ಸಮಾಜದಲ್ಲಿ ಅಸ್ಪೃಶ್ಯತೆಯನ್ನು ನಿರ್ಮೂಲಗೊಳಿಸಲು ಶರಣರು ನಡೆಸಿದ ಹೋರಾಟಗಳನ್ನು ಸ್ಮರಿಸಿದ ಅವರು, ಹರಳಯ್ಯ ಮತ್ತು ಮಧುವರಸರ ಘಟನೆಗಳ ಮೂಲಕ ಸಮಾನತೆ ಮತ್ತು ಮಾನವೀಯ ಮೌಲ್ಯಗಳ ಮಹತ್ವವನ್ನು ವಿವರಿಸಿದರು. ಹರಳಯ್ಯ ದಂಪತಿಗಳ ಭಕ್ತಿ, ಬಸವಣ್ಣನವರ ವಿನಯ ಮತ್ತು ಶರಣರ ಜೀವನ ಮೌಲ್ಯಗಳು ಇಂದಿನ ಸಮಾಜಕ್ಕೂ ಮಾರ್ಗದರ್ಶಕವಾಗಿವೆ ಎಂದು ಹೇಳಿದರು.
ಅಂತರ್ಜಾತಿ ವಿವಾಹ, ವಿಧವಾ ವಿವಾಹ ಸೇರಿದಂತೆ ಅನಿಷ್ಟ ಪದ್ಧತಿಗಳ ನಿರ್ಮೂಲನೆಗಾಗಿ ಬಸವಣ್ಣನವರು ಕೈಗೊಂಡ ಕ್ರಾಂತಿಕಾರಿ ಕ್ರಮಗಳನ್ನು ವಿವರಿಸಿ, ಪುರೋಹಿತಶಾಹಿ ಮತ್ತು ಸಂಪ್ರದಾಯವಾದಿಗಳಿಂದ ಎದುರಿಸಿದ ವಿರೋಧಗಳನ್ನೂ ಉಲ್ಲೇಖಿಸಿದರು. ಬಿಜ್ಜಳ ಅರಸರ ಕಾಲದಲ್ಲಿ ನಡೆದ ಸಂಘರ್ಷಗಳು, ಬಸವಣ್ಣನವರ ಗಡಿಪಾರು ಹಾಗೂ ಶರಣರ ಮೇಲಿನ ಹಿಂಸೆ ಕುರಿತು ಮಾತನಾಡಿ, ವಚನ ಸಾಹಿತ್ಯವನ್ನು ಉಳಿಸಲು ಶರಣರು ಮಾಡಿದ ತ್ಯಾಗ ಮತ್ತು ಹೋರಾಟಗಳನ್ನು ಸ್ಮರಿಸಿದರು.

ವಚನಗಳ ಸಂರಕ್ಷಣೆ ಮತ್ತು ಪ್ರಸಾರದಲ್ಲಿ ಫಕೀರಪ್ಪ ಹಳಕಟ್ಟಿ ಶರಣರು ಸೇರಿದಂತೆ ಅನೇಕರು ಮಾಡಿದ ತ್ಯಾಗಗಳನ್ನು ಪ್ರಶಂಸಿಸಿದ ಅವರು, ವಚನಗಳ ಮೌಲ್ಯವನ್ನು ಉಳಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಹೇಳಿದರು.
ಕನ್ನಡದಲ್ಲಿ ವಚನಗಳು ಇರುವುದರಿಂದ ಮಕ್ಕಳಿಗೆ ಕನ್ನಡ ಭಾಷೆಯನ್ನು ಆದ್ಯತೆಯಿಂದ ಕಲಿಸಬೇಕು ಎಂದು ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಅನೇಕ ಬಸವ ಅಭಿಮಾನಿಗಳು ಮತ್ತು ಭಕ್ತರು ಭಾಗವಹಿಸಿ, ಬಸವ ತತ್ವಗಳ ಕುರಿತು ಅರಿವು ಪಡೆದುಕೊಂಡರು.
ಬಸವ ದರ್ಶನ ಪ್ರವಚನವನ್ನು ಪ್ರತಿದಿನ ಬಸವ ಮೀಡಿಯಾಕ್ಕೆ ವರದಿ ದಾಸೋಹಕ್ಕಾಗಿ ಶರಣು ಶಿಣ್ಣೂರ ಅವರನ್ನು ರವಿವಾರ ಗೌರವಿಸಿ ಸನ್ಮಾನಿಸಲಾಯಿತು.
