ಬೀದರ:
ಇಲ್ಲಿನ ಲಾಡಗೇರಿ ನಿವಾಸಿಗಳಾದ, ಪೂಜ್ಯ ಲಿಂಗಾನಂದ ಸ್ವಾಮೀಜಿ ಮತ್ತು ಪೂಜ್ಯ ಮಾತೆ ಮಹಾದೇವಿ ಅವರ ಕರಸಂಜಾತರಾದ ಶಶಿಕಲಾ ಚಂದ್ರಶೇಖರ ಚರಾಲ ಅವರು ತಮ್ಮ ಮನೆಯಲ್ಲಿ ಶ್ರಾವಣ ಮಾಸ ನಿಮಿತ್ತ ‘ಲಿಂಗೋತ್ಸವ’ ಕಾರ್ಯಕ್ರಮವನ್ನು ಆಯೋಜಿಸಿದ್ದರು.

ಈ ಕಾರ್ಯಕ್ರಮದಲ್ಲಿ ಗುಣತೀರ್ಥವಾಡಿ ಕಲ್ಯಾಣ ಮಹಾಮನೆಯ ಪೂಜ್ಯ ಬಸವಪ್ರಭು ಸ್ವಾಮೀಜಿ ಅವರ ಸಾನಿಧ್ಯದಲ್ಲಿ 125 ಜನಗಳಿಗೆ ಇಷ್ಟಲಿಂಗ ದೀಕ್ಷೆಯನ್ನು ನೀಡಲಾಯಿತು.
ಶಶಿಕಲಾ ಚಂದ್ರಶೇಖರ ಅವರು ಬಸವತತ್ವ ಪ್ರೇಮಿಗಳಾಗಿದ್ದು, ಧರ್ಮದ ಬೆಳವಣಿಗೆ ತಮ್ಮ ಮನೆಯಿಂದಲೇ ಪ್ರಾರಂಭವಾಗಬೇಕು ಎಂದು ಸಂಕಲ್ಪಿಸಿ ತಮ್ಮ ದೂರ ದೂರದ ಬಂಧುಗಳ ಮನವೊಲಿಸಿ ಅವರೆಲ್ಲರನ್ನು ಕರೆಯಿಸಿ ಲಿಂಗದೀಕ್ಷೆ ಕೊಡಿಸಿರುವ ಕಾರ್ಯ ಶ್ಲಾಘನೀಯ.

ದೀಕ್ಷೆ ಪಡೆದವರಿಗೆಲ್ಲ ನೂರಕ್ಕೂ ಅಧಿಕ ಪೂಜಾ ಸಾಮಾಗ್ರಿ ಮತ್ತು ಪೆಟ್ಟಿಗೆ ವಿತರಿಸಿದರು.
ಲಿಂಗಾಯತ ಮಠಾಧೀಶರು ಮಾಡಬಹುದಾದ ಕಾರ್ಯವನ್ನು ಚರಾಲ ಪರಿವಾರ ಮಾಡುತ್ತಿರುವುದಕ್ಕೆ ಬಸವಪ್ರಭು ಸ್ವಾಮೀಜಿ ಸಂತಸ ವ್ಯಕ್ತಪಡಿಸಿದರಲ್ಲದೆ ಪ್ರತಿಯೊಂದು ಕುಟುಂಬಗಳು ಈ ಮಾರ್ಗ ಅನುಸರಿಸಿದರೆ ಬಸವಧರ್ಮ ವೇಗವಾಗಿ ಬೆಳೆಯಲು ಸಾಧ್ಯ, ಸುಸಂಸ್ಕೃತ ಸಮಾಜ ನಿರ್ಮಾಣ ಸಾಧ್ಯ ಎಂದರು.

ಬೀದರನ ಹಳ್ಳದಕೇರಿ ಕೌನ್ಸಿಲರ್, ನಗರ ಸಭಾ ಉಪಮೇಯರ್ ಲಕ್ಷ್ಮೀಬಾಯಿ ಹಂಗರಗಿ, ನಾಗಶೆಟ್ಟಿ ಶೆಟಗಾರ, ರೋಟರಿ ಕ್ಲಬ್ ಅಧ್ಯಕ್ಷ ಆನಂದ ಖೂಬಾ, ನಿವೃತ್ತ ಅಧೀಕ್ಷಕ ಶಿವಕುಮಾರ ಯಲಾಲ, ಶಂಕರಪ್ಪ ಪಾಟೀಲ, ಎಇಇ ಅಶೋಕ ರೆಡ್ಡಿ, ಸಂಗಣ್ಣ, ಜಗದೇವಿ ಎಸ್ ಪಾಟೀಲ, ಶಾಂತಾ ಆಶೋಕ ಉಳ್ಳಾಗಡ್ಡಿ, ಮಲ್ಲಿಕಾರ್ಜುನ ಇಂದೂರಿ, ಮಲ್ಲಿಕಾರ್ಜುನ ಡೊಗಣಗಾಪೂರು, ಅರ್ಚನಾ ದಿಲೀಪಕುಮಾರ ಪಾಟೀಲ, ಚಿಮ್ಮಕೋಡ, ಕಂಗಟಿ, ಚಿಲ್ಲರ್ಗಿ, ಜಹೀರಾಬಾದ, ತೆಲಂಗಾಣ ಕುಶನೂರು, ಲಾಡಗೇರಿ, ಹೂಗೇರಿ, ಹಾರೂಗೇರಿ ಸ್ಥಳಗಳಿಂದ ಬಂದಿದ್ದ ನೂರಾರು ಬಂಧುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
