ಮಕ್ಕಳಲ್ಲಿ ಸದ್ಗುಣಗಳು ಬೆಳೆಯಲು ಶಿಕ್ಷಕರ ಪಾತ್ರ ಮಹತ್ತರ
ಗದಗ :
ಶಿಕ್ಷಕ ವೃತ್ತಿ ಬಹಳ ಪವಿತ್ರವಾದುದು. ದೇಶದ ಭದ್ರಬುನಾದಿ, ಏಳಿಗೆ, ಭವಿಷ್ಯಕ್ಕೆ ಉತ್ತಮ ಮಕ್ಕಳು ಬಹಳ ಮುಖ್ಯ. ಮಕ್ಕಳಲ್ಲಿ ಸದ್ಗುಣಗಳು ಬೆಳೆಯಲು ಶಿಕ್ಷಕರ ಪಾತ್ರ ಮಹತ್ತರವಾದುದು ಎಂದು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಹೇಳಿದರು.
ಲಿಂಗಾಯತ ಪ್ರಗತಿಶೀಲ ಸಂಘದ ೨೮೧೪ನೇ ಶಿವಾನುಭವದ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಡಾ. ಸರ್ವಪಲ್ಲಿ ರಾಧಾಕೃಷ್ಣನ್, ಸಾವಿತ್ರಿಬಾಯಿ ಫುಲೆ ಅವರು ಈ ನಾಡು ಕಂಡ ಶ್ರೇಷ್ಠ ಶಿಕ್ಷಕರು. ಮಕ್ಕಳಿಗೆ ತಾಯಿಯೇ ಮೊದಲ ಗುರು
ಮಕ್ಕಳಲ್ಲಿ ಒಳ್ಳೆಯ ಸಂಸ್ಕಾರ, ನಡೆ-ನುಡಿ, ಆದರ್ಶಗಳನ್ನು ತುಂಬಬೇಕು. ಇಂದಿನ ಮಕ್ಕಳೇ ದೇಶದ ಮುಂದಿನ ಪ್ರಜೆಗಳು. ದೇಶ ಅಭಿವೃದ್ಧಿ ಹೊಂದಬೇಕಾದರೆ ಶಿಕ್ಷಣದಲ್ಲಿ ಗುಣಮಟ್ಟ ಇನ್ನೂ ಹೆಚ್ಚಾಗಬೇಕು ಎಂದು ಶ್ರೀಗಳು ಮಾತನಾಡಿದರು.

ವಿಧಾನಸಭೆಯ ಅಧ್ಯಕ್ಷರಾಗಿ ಆಯ್ಕೆಯಾದ ಜಿ. ಎಸ್. ಪಾಟೀಲ ಅವರನ್ನು ಶ್ರೀಗಳು ಇದೇ ಸಂದರ್ಭದಲ್ಲಿ ಸನ್ಮಾನಿಸಿ ಅವರಿಗೆ ಶುಭಹಾರೈಸಿದರು.
ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದ ವಿಧಾನಸಭಾಧ್ಯಕ್ಷರಾದ ಮಾನ್ಯ ಜಿ.ಎಸ್. ಪಾಟೀಲ ಅವರು, ನಾನು ಈ ಉನ್ನತ ಸ್ಥಾನ ಪಡೆಯಲು ಲಿಂಗೈಕ್ಯ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಹಾಗೂ ಹಾಳಕೇರಿಯ ಅಭಿನವ ಅನ್ನದಾನ ಮಹಾಸ್ವಾಮಿಗಳು, ತೋಂಟದ ಸಿದ್ಧರಾಮ ಮಹಾಸ್ವಾಮಿಗಳವರ ಹಾಗೂ ತಮ್ಮೆಲ್ಲರ ಶುಭ ಹಾರೈಕೆಗಳು ಈ ಮಟ್ಟಕ್ಕೆ ಬೆಳೆಸಿವೆ ಎಂದರು.
ನನ್ನ ತಾಯಿ ಮತ್ತು ಹಿರಿಯರು ನನ್ನ ಹಾಗೂ ನನ್ನ ಸಹೋದರರನ್ನು ತುಂಬಾ ಪ್ರೀತಿ ಹಾಗೂ ಸಂಸ್ಕಾರದಿಂದ ಬೆಳೆಸಿದ್ದಾರೆ. ಅವರ ಆದರ್ಶದಲ್ಲಿ ನಾವು ಮುನ್ನಡೆಯುತ್ತೇವೆ ಎಂದರು.

ಶಿಕ್ಷಕ ದಿನಾಚರಣೆ ನಿಮಿತ್ತ ನಾಡೋಜ ಡಾ. ಚನ್ನವೀರ ಕಣವಿಯವರು ಇವರ ತಂದೆಯವರಾದ ಲಿಂಗೈಕ್ಯ ಸಕ್ರಪ್ಪ ಕಣವಿ ಅವರ ಸ್ಮರಣಾರ್ಥ ಹಾಗೂ ಶಿಕ್ಷಣ ತಜ್ಞರಾದ ಡಾ. ಬಿ. ಮಲ್ಲಿಕಾರ್ಜುನ ಇವರ ತಂದೆಯವರಾದ ಲಿಂಗೈಕ್ಯ ಬಳ್ಳಾರಿ ಚಿತ್ರಕಿ ಕೊಟ್ರಪ್ಪ ಅವರ ಸ್ಮರಣಾರ್ಥ ನೀಡಲಾಗುವ ಆದರ್ಶ ಶಿಕ್ಷಕ ಪ್ರಶಸ್ತಿಯನ್ನು ಆಲಮಟ್ಟಿಯ ಹಳಕಟ್ಟಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ಜಿ.ಎಂ. ಕೋಟ್ಯಾಳ ಹಾಗೂ ಬೆಳ್ಳಟ್ಟಿಯ ಎಸ್.ಜೆ.ಎಫ್. ಪ್ರೌಢಶಾಲೆಯ ಕನ್ನಡ ಶಿಕ್ಷಕಿ ಮಹೇಶ್ವರಿ ಸಿದ್ದರಾಮಪ್ಪ ಸವಡಿ ಅವರಿಗೆ ಪೂಜ್ಯರು ಪ್ರದಾನ ಮಾಡಿದರು.
ಗಿರಿಜಕ್ಕ ಧರ್ಮರಡ್ಡಿ ಅವರು ಶ್ರಾವಣ ಮಾಸದಲ್ಲಿ ‘ಶರಣರು ಕಂಡ ಅನಾದಿ ಬಸವಣ್ಣ’ ಎಂಬ ವಿಷಯದ ಕುರಿತು ನೀಡಿದ ಪ್ರವಚನದ ಮಂಗಲೋತ್ಸವವು ನಡೆಯಿತು.

ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಡಿ. ಆರ್. ಪಾಟೀಲ ಅವರು ಮುಖ್ಯಅತಿಥಿಗಳಾಗಿ ಮಾತನಾಡಿ, ವಿಧಾನಸಭೆಯ ಅಧ್ಯಕ್ಷರಾಗಿ ಜಿ.ಎಸ್.ಪಾಟೀಲ ಆಯ್ಕೆಯಾಗಿದ್ದು ಸಂತೋಷವನ್ನುಂಟು ಮಾಡಿದೆ. ಅವರ ಅವಧಿಯಲ್ಲಿ ವಿಧಾನಸಭೆಯ ಕಾರ್ಯಕಲಾಪಗಳು ಅರ್ಥಪೂರ್ಣವಾಗಿ ಜರುಗಲಿ ಎಂದರು.
ಮಕ್ಕಳನ್ನು ಸತ್ಪ್ರಜೆಗಳನ್ನಾಗಿ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಬಹಳ ದೊಡ್ಡದು. ಹೆಚ್ಚಿನ ಯುವಕರು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಮಕ್ಕಳ ಮೇಲೆ ಪಾಲಕರ ಗಮನ ಹೆಚ್ಚಾಗಬೇಕು ಎಂದು ಪಾಟೀಲ ಮಾತನಾಡಿದರು.
ಶಿವಾನುಭವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಮಾಜಿ ಸಚಿವರಾದ ಎಸ್. ಎಸ್. ಪಾಟೀಲ ಅವರು, ಜಿ.ಎಸ್. ಪಾಟೀಲ ಅವರು ತಮ್ಮ ತಾಯಿಯ ಆಶೀರ್ವಾದದ ಬಲದಿಂದ ವಿಧಾನಸಭಾಧ್ಯಕ್ಷರ ಸ್ಥಾನ ಪಡೆಯಲು ಸಾಧ್ಯವಾಗಿದೆ ಎಂದು ಹೇಳಿದರು. ಅವರಿಗೆ ಬಸವಾದಿ ಶಿವಶರಣರ ಆಶೀರ್ವಾದ ಸದಾಕಾಲವಿರಲಿ ಎಂದರು.
ಡಿ.ಸಿ. ಪಾವಟೆ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿನಿ ಕಾವೇರಿ ಬಡಿಗೇರ ಅವರನ್ನು ಸನ್ಮಾನಿಸಲಾಯಿತು.
ಪ್ರಾರಂಭದಲ್ಲಿ ಈಚೆಗೆ ಲಿಂಗೈಕ್ಯರಾದ ರತ್ನಕ್ಕ ಬಸನಗೌಡ ಪಾಟೀಲ ಮತ್ತು ಬಸವದಳದ ಮಾಜಿ ಅಧ್ಯಕ್ಷರಾದ ಹೂಗಾರ ಅವರ ಅಗಲುವಿಕೆಗೆ ಮೌನಾಚರಣೆ ಮಾಡಿ ಸಂತಾಪ ಸೂಚಿಸಲಾಯಿತು.

ವಚನ ಸಂಗೀತ ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ ಸುತಾರ, ಧರ್ಮಗ್ರಂಥ ಪಠಣ ಸಂಜನಾ ಎಂ. ಹದ್ಲಿ, ವಚನ ಚಿಂತನ ಸನ್ನಿಧಿ ಎಂ. ಹದ್ಲಿ ಮಾಡಿದರು. ದಾಸೋಹ ಸೇವೆಯನ್ನು ಕಾರಟಗಿಯ ಎಲ್.ವಿ.ಟಿ. ಮಾಲೀಕರಾದ ಸಣ್ಣಸೂಗಪ್ಪ, ಹುಬ್ಬಳ್ಳಿಯ ಡಾ. ಎಸ್.ಎಸ್. ಅಕ್ಕಮಹಾದೇವಿ, ವೀರಣ್ಣ ಬೇವಿನಮರದ, ೨೦೨೬ ನೇ ಸಾಲಿನ ತೋಂಟದಾರ್ಯ ಜಾತ್ರಾ ಮಹೋತ್ಸವ ಸಮಿತಿಯ ಪದಾಧಿಕಾರಿಗಳು ವಹಿಸಿಕೊಂಡಿದ್ದರು.
ನಿರೂಪಣೆಯನ್ನು ಶಿವಾನುಭವ ಸಮಿತಿಯ ಚೇರ್ಮನ್ನರಾದ ಡಾ. ರಮೇಶ ಕಲ್ಲನಗೌಡರ, ಸ್ವಾಗತವನ್ನು ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷರಾದ ಡಾ. ಉಮೇಶ ಪುರದ ಮಾಡಿದರು. ಶಿವಾನುಭವದಲ್ಲಿ ಉಪಾಧ್ಯಕ್ಷ ಪ್ರಭು ಗಂಜಿಹಾಳ, ಸುರೇಖಾ ಪಿಳ್ಳಿ, ಕಾರ್ಯದರ್ಶಿ ಸಿದ್ಧರಾಮ ಪಟ್ಟೇದ, ಸಹಕಾರ್ಯದರ್ಶಿ ಪ್ರತಿಭಾ ಬಡ್ನಿ, ಕೋಶಾಧ್ಯಕ್ಷ ವೀರಣ್ಣ ಗೋಟಡಕಿ, ಕೆ.ಎಸ್. ಕೋರಿಮಠ, ಸೋಮಶೇಖರ ಪುರಾಣಿಕ, ಆದೇಶ ಅಂಗಡಿ ಶ್ರೀಮಠದ ಸದ್ಭಕ್ತರು ಭಾಗವಹಿಸಿದ್ದರು.
