‘ಬಂಗಾರದ ಕರಡಿಗೆ ಅಡವಿಟ್ಟು ವಿದ್ಯಾರ್ಥಿಗಳ ಹಸಿವು ನೀಗಿಸಿದ ರಾಜೇಂದ್ರ ಸ್ವಾಮೀಜಿ’

ಮೈಸೂರು :

ಡಾ. ಶಿವರಾತ್ರಿ ರಾಜೇಂದ್ರ ಶ್ರೀಗಳು ಮೊದಲಾಗಿ ಅನೇಕ ಸಮುದಾಯಗಳ ಸ್ವಾಮಿಗಳೂ ಸೇರಿದಂತೆ, ಕರ್ನಾಟಕದಲ್ಲಿ ವಿಶೇಷವಾಗಿ ಶಿಕ್ಷಣ ಕ್ಷೇತ್ರದಲ್ಲಿ ಮಾಡಿದ ಸೇವೆ ಶ್ಲಾಘನೀಯವಾದದ್ದು.

ತಮ್ಮ ಭಕ್ತರು ನೀಡಿದ್ದ ಬಂಗಾರದ ಕರಡಿಗೆಯನ್ನು ಬಡ ವಿದ್ಯಾರ್ಥಿಗಳ ಹಸಿವು ನೀಗಿಸಲು ಅಡವಿಟ್ಟು ಅನ್ನದಾನ ಮಾಡಿದ ಲಿಂಗೈಕ್ಯ ಜಗದ್ಗುರು ಶಿವರಾತ್ರಿ ರಾಜೇಂದ್ರ ಶ್ರೀಗಳು ನಿಜಕ್ಕೂ ಶ್ರೇಷ್ಠ ಸದ್ಗುರುವೇ ಸರಿ, ಅದೇ ರೀತಿ ಲಿಂಗೈಕ್ಯ ಇಮ್ಮಡಿ ಶಿವಬಸವ ಸ್ವಾಮಿಗಳು, ಜಡೆಮಹಂತ ಸ್ವಾಮಿಗಳು ಕೂಡಾ ತಮ್ಮ ಉತ್ಕೃಷ್ಟ ಸಮಾಜ ಸೇವೆಯಿಂದಲೇ ನಮ್ಮ ಗೌರವಕ್ಕೆ ಪಾತ್ರರಾಗಿದ್ದಾರೆ, ಇಂತಹ ಸಂತ ಮಹಂತರನ್ನು ಪಡೆದ ಸಮಾಜ ನಿಜಕ್ಕೂ ಧನ್ಯ ಎಂದು ಮೈಸೂರಿನ ಕ.ರಾ.ಮು.ವಿ.ವಿ. ಕುಲಪತಿಗಳಾದ ಪ್ರೊ. ಜ್ಞಾನಪ್ರಕಾಶ ಎಂ.ಪಿ. ಹೇಳಿದರು.

ಅ.ಭಾ.ಶರಣ ಸಾಹಿತ್ಯ ಪರಿಷತ್ತಿನ ಮೈಸೂರು ನಗರ ಘಟಕವು, ಮೈಸೂರು ನಗರದ ಜಯಲಕ್ಷ್ಮೀಪುರಂನಲ್ಲಿರುವ ಶ್ರೀ ಸತ್ಯಸಾಯಿಬಾಬಾ ಪ.ಪೂ.ಕಾಲೇಜನಲ್ಲಿ ಹಮ್ಮಿಕೊಂಡಿದ್ದ ಪೂಜ್ಯರಾದ ಲಿಂಗೈಕ್ಯ ಡಾ. ಇಮ್ಮಡಿ ಶಿವಬಸವಸ್ವಾಮಿಗಳು ಹಾಗೂ ಶ್ರೀ ಜಡೆಸ್ವಾಮಿಗಳ ದತ್ತಿ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.

ಡಾ.ಶಿವರಾತ್ರಿ ರಾಜೇಂದ್ರ ಶ್ರೀಗಳ ಮೊದಲಾಗಿ ಈ ಇಬ್ಬರೂ ಪೂಜ್ಯರು ಸಮುದಾಯದುದ್ಧಾರಕ್ಕಾಗಿ ಮಾಡಿದ ಸೇವೆ ಅನುಪಮವಾದದ್ದೆಂದೂ, ಆ ಕಾರಣದಿಂದ ಅವರಿಗೆ ಸಮುದಾಯ ಹಾಗೂ ಸರ್ಕಾರಗಳೆರಡೂ ಚಿರಋಣಿಯಾಗಿವೆಯೆಂದೂ ತಿಳಿಸಿ, ಮೂವರೂ ಪೂಜ್ಯರನ್ನು ನೆನೆಸಿಕೊಂಡರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಪರಿಷತ್ತಿನ ಮೈಸೂರು ನಗರ ಘಟಕದ ಅಧ್ಯಕ್ಷ ಹಾಗೂ ಕವಿ ಜಯಪ್ಪ ಹೊನ್ನಾಳಿ ಮಾತನಾಡಿ, ನಾವಿಂದು ನೆನೆದುಕೊಳ್ಳುತ್ತಿರುವ ಒಬ್ಬರು ಜಗದ್ಗುರು ಹಾಗೂ ಇಬ್ಬರು ಸದ್ಗುರುಗಳು ನಿಜಕ್ಕೂ ಸಮಾಜಕ್ಕೆ ತಮ್ಮನ್ನು ತಾವೇ ಸಮರ್ಪಿಸಿಕೊಂಡು, ಸರ್ವರ ಏಳ್ಗೆಗಾಗಿ ತಾವಿರುವವರೆಗೂ ಸವೆದ ಸಾಧಕ ಶ್ರೇಷ್ಠ ಸಂತರು, ಇಂತಹ ಸಾಧಕರಿಗೆ ಸಾವೆಲ್ಲಿ!? ಸಾಧನೆಯ ಮೂಲಕ ಅವರು ಅಮೃತಪುತ್ರರಾಗಿದ್ದಾರೆ, ಕಾಲಾತೀತರಾಗಿ ಪೂಜನೀಯರಾಗಿದ್ದಾರೆ.

ಅಂತೆಯೇ ಕೀರ್ತಿಶೇಷ ಡಾ. ಮೃತ್ಯುಂಜಯಪ್ಪನವರೂ ಕೂಡಾ ಒಬ್ಬ ಆದರ್ಶ ವೈದ್ಯರಾಗಿದ್ದರು, ಅವರು ರೋಗಿಯ ಸೇವೆಯನ್ನೇ ಪರಮಾತ್ಮನ ಪೂಜೆಯೆಂದು ಪರಿಭಾವಿಸಿ ಸೇವೆಗೈದು, ಆ ಕಾರಣದಿಂದಲೇ ರೋಗಿಗಳ ಪಾಲಿಗೆ ಪರಮಾತ್ಮನೆನಿಸಿ, ರೋಗಿಗಳ ಗುಣಪಡಿಸುವ ಕಾಯಕದಲ್ಲೇ ಧನ್ಯತೆಯನ್ನೂ ಮಾನ್ಯತೆಯನ್ನೂ ಪಡೆದು ಕೈಲಾಸವಾಸಿಯಾಗಿ ಕೀರ್ತಿಶೇಷರಾದರು ಎಂದರು.

ಸಭೆಯ ಸಾನಿಧ್ಯ ವಹಿಸಿದ್ದ ಮೈಸೂರಿನ ಕುಂದೂರುಮಠದ ಪೂಜ್ಯ ಡಾ. ಶರತ್ ಚಂದ್ರ ಸ್ವಾಮಿಗಳು ಆಶೀರ್ವಚನ ನೀಡುತ್ತಾ, ಈ ಮೂರೂ ಜನ ಮಹಂತರೂ ತ್ಯಾಗವೆಂಬ ಅತಿಶ್ರೇಷ್ಠ ಗುಣ ಹೊಂದಿದ್ದರಿಂದಲೇ ಅಮರರಾದರು. ತಮ್ಮ ಹಿತಕ್ಕಿಂತ ಈ ಮೂವರಿಗೂ ಪರರ ಹಿತ ಬಹುಮುಖ್ಯವೆನಿಸಿತ್ತು, ಆ ಕಾರಣದಿಂದಾಗಿಯೇ ತಮಗೆ ಬಂದ ಸಂಕಷ್ಟಗಳನ್ನೆಲ್ಲ ಸಮಾಧಾನದಿಂದ ಅನುಭವಿಸಿ, ಸರ್ವರ ಅಭಿವೃದ್ಧಿಗಾಗಿ ತ್ರಿವಿಧ ದಾಸೋಹಿಗಳಾದರು.

ಅಜ್ಞಾನ ಅಳಿದು ಸುಜ್ಞಾನ ಬೆಳೆವುದು ಅವರುಗಳ ಆತ್ಮದಾಶಯವಾಗಿತ್ತು, ಅದಕ್ಕಾಗಿ ಪರಿಶ್ರಮಿಸುವುದೇ ಪರಮನ ಪೂಜೆಯೆಂದು ಅವರು ಪರಿಭಾವಿಸಿದ್ದರಿಂದಲೇ ಸಮಾಜಕ್ಕೆ ಏನೆಲ್ಲಾ ಒಳಿತಾಯಿತು. ಈ ಮೂವರೂ ನಮಗೆ ಪ್ರಾತಃಸ್ಮರಣೀಯರೆ ಎಂದರು.

ಮೂರೂ ಜನ ಶ್ರೀಗಳ ಕುರಿತು ಹಲವಾರು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಲಿಖಿತ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಲಾಗಿತ್ತು. ಪ್ರಥಮ ಸ್ಥಾನ ಪಡೆದ ಮರಿಮಲ್ಲಪ್ಪ ಪ್ರೌಢಶಾಲಾ ವಿದ್ಯಾರ್ಥಿ ನಮನ 5,000 ರೂ. ದ್ವಿತೀಯ ಸ್ಥಾನ ಪಡೆದ ಅದೇ ಶಾಲೆಯ ವಿದ್ಯಾರ್ಥಿ ಅಮರ್ 4,000 ರೂ. ತೃತೀಯ ಸ್ಥಾನ ಪಡೆದ ಶ್ರೀ ಸಿದ್ಧೇಶ್ವರ ಶಾಲೆಯ ಜಗನ್ ಜಿ.ಪಿ. 3,000 ರೂ. ಸಮಾಧಾನಕರ ಬಹುಮಾನ ಪಡೆದ ಸದ್ವಿದ್ಯಾ ಶಾಲೆಯ ನಿಧಿಶ್ರೀ 2,000 ರೂ. ಪ್ರೋತ್ಸಾಹಕರ ಬಹುಮಾನ ಪಡೆದ ಸದ್ವಿದ್ಯಾ ಶಾಲೆಯ ಉಜ್ವಲ್ 1,000 ರೂ. ಬಹುಮಾನವನ್ನು ಪ್ರಮಾಣ ಪತ್ರದೊಂದಿಗೆ ಪಡೆದರು.

ಸಮಗ್ರ ಪರ್ಯಾಯ ಪಾರಿತೋಷಕ ಮರಿಮಲ್ಲಪ್ಪ ಪ್ರೌಢಶಾಲೆಯ ಪಾಲಾಯಿತು. ವಿದ್ಯಾರ್ಥಿಗಳಿಗೆ ಈ ಬಹುಮಾನಗಳನ್ನು ಬೆಂಗಳೂರು ಜ್ಞಾನ ಭಾರತಿ ವಿವಿ ಪ್ರಾಧ್ಯಾಪಕರಾದ ಎರ್ರಿಸ್ವಾಮಿ ಎಂ.ಸಿ. ಅವರು ನೀಡಿ, ಶುಭ ಹಾರೈಸಿದರು.

ಶ್ರೀ ಸತ್ಯಸಾಯಿಬಾಬಾ ಪ. ಪೂ. ಕಾಲೇಜಿನ ಪ್ರಾಂಶುಪಾಲರಾದ ತ್ರಿಮೂರ್ತಿ, ದತ್ತಿ ದಾನಿಗಳಾದ ಸುಧಾ ಮೃತ್ಯುಂಜಯಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವೇದಿಕೆಯಲ್ಲಿದ್ದ ಪೂಜ್ಯರನ್ನೂ ಹಾಗೂ ಗಣ್ಯರನ್ನೂ ಗೌರವಿಸಿ ಸನ್ಮಾನಿಸಲಾಯಿತು.

ಪರಿಷತ್ತಿನ ಉಪಾಧ್ಯಕ್ಷ ಚಿನ್ನಸ್ವಾಮಿ ಎಂ, ಕಾರ್ಯದರ್ಶಿ ನಂದೀಶ್ವರ ಬಿ. ಎನ್, ಖಜಾಂಚಿ ಡಾ. ಹೆಚ್ ಮುದ್ದುಮಲ್ಲೇಶ, ಸಂಚಾಲಕರಾದ ಡಾ. ಲೋಕೇಶಪ್ಪ ಹೆಚ್. ಎನ್, ಕದಳಿ ನಿಕಟಪೂರ್ವ ಅಧ್ಯಕ್ಷೆಯಾದ ಶಾರದಾ ಶಿವಲಿಂಗಸ್ವಾಮಿ, ಡಾ.ಶೈಲ ನಾಗರಾಜ, ಜಗದೀಶ ಬಿ.ಚಿಕ್ಕಮಠ, ಚನ್ನಬಸಪ್ಪ ಎಲ್ ಬಿ, ಲೋಕೇಶ್ವರ, ಬಿ.ಡಿ.ಎಂ.ಕುಮಾರ, ಗೀತಾಂಜಲಿ ಎಸ್, ಹೆಚ್. ಎಂ. ತಾಂಡವಮೂರ್ತಿ, ಆರ್. ಕೆ. ಸ್ವಾಮಿ, ಧನ್ಯಾ ಸತ್ಯೇಂದ್ರಮೂರ್ತಿ, ಶಿವಮ್ಮ, ವಿಮಲಾದೇವಿ ಬಿ.ಎನ್. ಮುಂತಾದವರಿದ್ದರು. ಹರಿಣಿ ನಿರೂಪಿಸಿದರೆ, ಸುಜಾತ ಪಿ. ಪ್ರಾರ್ಥಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HhJYSZVofEgD6VIx5ufPBU

Share This Article
Leave a comment

Leave a Reply

Your email address will not be published. Required fields are marked *