ಗದಗ :
ಸಾವಿರಾರು ವರ್ಷಗಳಿಂದ ವ್ಯಕ್ತಿಯಿಂದ ವ್ಯಕ್ತಿಗೆ ಬೆಳೆದು ಬಂದುದು ಜಾನಪದ ಸಾಹಿತ್ಯ. ಇತಿಹಾಸ, ಸಂಸ್ಕೃತಿ ಮತ್ತು ಆಧ್ಯಾತ್ಮ ಜಾನಪದ ಸಾಹಿತ್ಯದಲ್ಲಿ ಅಡಕವಾಗಿವೆ ಎಂದು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳವರು ನುಡಿದರು.

ಲಿಂಗಾಯತ ಪ್ರಗತಿಶೀಲ ಸಂಘದ ೨೮೨೩ನೇ ಶಿವಾನುಭವದ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಜನಪದಿಯರು ತಮ್ಮ ಜೀವನಾನುಭವವನ್ನು ತಮ್ಮ ಕಂಠಸಿರಿಯಿಂದ ಜೀವನದ ಆಗುಹೋಗುಗಳನ್ನು ಒಬ್ಬರಿಂದ ಮತ್ತೊಬ್ಬರಿಗೆ ಪಸರಿಸುತ್ತಾ ಬೆಳೆಸಿದ ಸಾಹಿತ್ಯವಾಗಿದೆ. ಆಧುನಿಕ ಜಗತ್ತಿನ ಇಂದಿನ ತಂತ್ರಜ್ಞಾನ ಯುಗದಲ್ಲಿ ಅದನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕಿದೆ.
ಜಾನಪದ ವಿದ್ವಾಂಸರಾದ ಗದ್ಗಿಮಠ, ಎಂ. ಎಸ್. ಸುಂಕಾಪೂರ ಮೊದಲಾದವರು ಜಾನಪದ ಸಾಹಿತ್ಯದ ಬೆಳವಣಿಗೆಗೆ ನೀಡಿದ ಕೊಡುಗೆ ಅಪಾರ. ಕಿವಿಗೆ ಇಂಪು ನೀಡುವ, ದೇಹದ ದಣಿವು ನೀಗಿಸಿ ಕೆಲಸದಲ್ಲಿ ಉತ್ಸಾಹ ಇಮ್ಮಡಿಸುವ ಶಕ್ತಿ ಜಾನಪದದಲ್ಲಿದೆ. ಈ ಸಾಹಿತ್ಯ ಬೆಳವಣಿಗೆಗಾಗಿ ಇಂದು ಜಾನಪದ ವಿಶ್ವವಿದ್ಯಾಲಯ ಹೊಸ ಪ್ರಯೋಗಗಳ ಮೂಲಕ ಜಾನಪದವನ್ನು ಬೆಳೆಸಬೇಕು ಎಂದರು.

ಕರ್ನಾಟಕ ವಿಧಾನ ಪರಿಷತ್ತಿಗೆ ಮೂರನೇ ಬಾರಿ ಆಯ್ಕೆಯಾದ ಪ್ರೊ. ಎಸ್. ವ್ಹಿ. ಸಂಕನೂರ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಾನಪದ ಕಲಾವಿದ ಪಾಂಡಪ್ಪ ಲಮಾಣಿ ಅವರನ್ನು ಸನ್ಮಾನಿಸಲಾಯಿತು.
ಗದಗ ಪರಿಸರದ ಜಾನಪದ ಕಲಾವಿದರಾದ ಕೋಟುಮಚಗಿಯ ಇಮಾಮಸಾಬ ಹುಯಿಲಗೋಳ, ಲಕ್ಕುಂಡಿಯ ಅನುಸೂಯ ಭೂಮಣ್ಣವರ ಅವರನ್ನು ಸನ್ಮಾನಿಸಲಾಯಿತು.
ಪ್ರೊ. ಎಸ್. ವ್ಹಿ. ಸಂಕನೂರ ಅವರು ಮಾತನಾಡಿ, ಸರ್ಕಾರದಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇದ್ದು ಅವುಗಳನ್ನು ಸರ್ಕಾರದಿಂದ ತುಂಬಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು. ಗದಗ ಜಿಲ್ಲೆಗೆ ಕೈಗಾರಿಕಾ ಯೋಜನೆಗಳು ಬಂದಲ್ಲಿ ಉದ್ಯೋಗವಂಚಿತರಿಗೆ ಜೀವನಕ್ಕೆ ಆಶ್ರಯವಾಗುತ್ತದೆ. ಈ ದಿಶೆಯಲ್ಲಿ ನಾನೂ ಕೂಡ ಪ್ರಯತ್ನ ಮಾಡುತ್ತೇನೆ ಎಂದರು.

ಜಾನಪದ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಿರಿಯರಾದ ಪಾಂಡಪ್ಪ ಲಮಾಣಿ ವಿವಿಧ ಜಾನಪದ ಗೀತೆಗಳನ್ನು ಹಾಡಿದರು.
ಮುಖ್ಯ ಅತಿಥಿಯಾಗಿದ್ದ ಜನಪದ ಕಲಾವಿದ ರಾಮು ಮೂಲಗಿ ಅವರು ಮಾತನಾಡಿ, ಕನ್ನಡ ಸಾಹಿತ್ಯ ಮೌಖಿಕವಾಗಿ ಬೆಳೆದು ಬಂದ ವಿಷಯಗಳನ್ನು ತಮ್ಮ ಕಂಠ ಸಿರಿಯ ಮೂಲಕ ಅನೇಕ ಜಾನಪದ ಗೀತೆಗಳನ್ನು ಹಾಡಿದರು. ಕನ್ನಡದ ಹಿರಿಯ ಸಾಹಿತಿ ಕೆ. ವಿ. ನಾರಾಯಣ ಅವರ ಅನಿರೀಕ್ಷಿತ ಅಗಲುವಿಕೆಯಿಂದ ಕನ್ನಡ ಸಾರಸ್ವತ ಲೋಕಕ್ಕೆ ದೊಡ್ಡ ಹಾನಿಯಾಗಿದೆ ಎಂದು ಮೂಲಗಿ ಹೇಳಿದರು.

ಮೃತ್ಯುಂಜಯ ಹಿರೇಮಠ, ಗುರುನಾಥ ಸುತಾರ ವಚನ ಸಂಗೀತ, ಧರ್ಮಗ್ರಂಥ ಪಠಣ ಸಾಗರ ಕದ್ನಳ್ಳಿ, ವಚನಚಿಂತನ ಯಶವಂತ ದಳವಾಯಿ ಅವರಿಂದ ಜರುಗಿತು. ಧಾರವಾಡದ ಸುರೇಶ ದಾನಪ್ಪ ಹಾಲಬಾವಿ ಅವರು ದಾಸೋಹ ಸೇವೆ ವಹಿಸಿಕೊಂಡಿದ್ದರು.
ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷರಾದ ಡಾ. ಉಮೇಶ ಪುರದ ಅವರು ಸ್ವಾಗತ, ಡಾ. ರಮೇಶ ಕಲ್ಲನಗೌಡರ ಹಾಗೂ ವಿದ್ಯಾ ಗಂಜಿಹಾಳ ಕಾರ್ಯಕ್ರಮ ನಿರೂಪಣೆ ಮಾಡಿದರು. ವಚನಮಂಗಲದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

ಡಾ. ಆದೇಶ ಅಂಗಡಿ, ಡಾ. ಪ್ರಭು ಗಂಜಿಹಾಳ, ಸೋಮು ಪುರಾಣಿಕ, ಸುನಂದಾ ಪಿಳ್ಳಿ, ಶ್ರೀಮಠದ ಆಡಳಿತಾಧಿಕಾರಿಗಳಾದ ಪ್ರೊ. ಎಸ್. ಎಸ್. ಪಟ್ಟಣಶೆಟ್ಟರ, ಎಸ್. ಎಸ್. ಜೋಶಿ, ಜಿ.ಬಿ. ಪಾಟೀಲ, ರಾಜೇಂದ್ರ ಗಡಾದ ಮುಂತಾದವರು ಉಪಸ್ಥಿತರಿದ್ದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HhJYSZVofEgD6VIx5ufPBU
