ಬಸವಕಲ್ಯಾಣ :
ಮನು ಸಂಸ್ಕೃತಿಯಲ್ಲಿ ಹೆಣ್ಣನ್ನು ಮತ್ತು ಶೂದ್ರರನ್ನು ಅತಿಯಾಗಿ ಶೋಷಣೆ ಮಾಡಲಾಗುತ್ತಿದ್ದ ಸಂದರ್ಭದಲ್ಲಿ ಕರ್ಮವಾದಿಗಳ ವಿರುದ್ಧ ಬಂಡೆದ್ದು ದೇವ ಸೃಷ್ಟಿಯಲ್ಲಿ ಸರ್ವರೂ ಸಮಾನರು ಎಂದು ಹೇಳಿ ಶತಶತಮಾನಗಳಿಂದ ಶೋಷಣೆಗೊಳಗಾಗಿದ್ದ ಹೆಣ್ಣಿಗೆ ಧಾರ್ಮಿಕ ಸ್ವಾತಂತ್ರ್ಯ ನೀಡಿದವರು ಬಸವಣ್ಣನವರು ಎಂದು ಪೂಜ್ಯ ಬಸವಪ್ರಭು ಸ್ವಾಮೀಜಿ ಅವರು ತಿಳಿಸಿದರು.
ಅವರು ಮುಧೋಳು (ಬಿ) ಗ್ರಾಮದ ವಿಶ್ವಗುರು ಬಸವೇಶ್ವರ ಅನುಭವ ಮಂಟಪದಲ್ಲಿ ಬಸವ ಪಂಚಮಿ ನಿಮಿತ್ತ ಹಮ್ಮಿಕೊಂಡ ವಿಶ್ವಗುರು ಬಸವಣ್ಣನವರ 831ನೇ ಲಿಂಗೈಕ್ಯ ಸಂಸ್ಮರಣೆ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡುತ್ತಿದ್ದರು.
ಬಸವಣ್ಣನವರು ಶ್ರೇಷ್ಠ ಸಮಾಜವಾದಿಯಾಗಿದ್ದ ಕಾರಣ ಅನುಭವ ಮಂಟಪದಲ್ಲಿ ಸರ್ವ ಕಾಯಕ ವರ್ಗದವರನ್ನು ಒಂದೆಡೆ ಸೇರಿಸಿ ಸಮಾನತೆ ತತ್ವವನ್ನು ಸಾರಿದ್ದರು. ಇಂದು ನಾವೆಲ್ಲ ಬಸವಣ್ಣನವರ ತ್ಯಾಗ ಬಲಿದಾನವನ್ನು ಅರ್ಥ ಮಾಡಿಕೊಂಡು ಬಸವತತ್ವದಲ್ಲಿ ಮುನ್ನೆಡೆಯಬೇಕಲ್ಲದೆ ವಿಶ್ವಕ್ಕೆ ಅವರ ವಚನ ಸಂದೇಶವನ್ನು ಮುಟ್ಟಿಸುವ ಗುರುತರ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಶರಣ ನಾಗಯ್ಯ ಸ್ವಾಮಿಯವರು, ಲಿಂಗಾಯತ ಧರ್ಮಿಯರು ಹುತ್ತಿಗೆ, ಕಲ್ಲಿಗೆ ಹಾಲೆರೆಯುವ ವೈದಿಕ ಸಂಪ್ರದಾಯದಿಂದ ಹೊರಗೆ ಬಂದು, ವೈಜ್ಞಾನಿಕವಾಗಿ ಯೋಚನೆ ಮಾಡಬೇಕು. ಸಮಾಜದ ಬಡ ಮಕ್ಕಳಿಗೆ, ನಿರ್ಗತಿಕರಿಗೆ, ಅನಾಥರಿಗೆ, ರೋಗಿಗಳಿಗೆ, ವೃದ್ಧರಿಗೆ ಹಾಲುಣಿಸಿದರೆ ದೇವರಿಗೆ ನೈವೇದ್ಯ ಅರ್ಪಿಸಿದಂತೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅಮೃತರಾವ ವಟಗೆ ಮಾತನಾಡಿ, ಶ್ರಾವಣ ಮಾಸದ ನಿಮಿತ್ತ ಬಸವ ಮಂಟಪದಲ್ಲಿ ಹಮ್ಮಿಕೊಂಡ ಜೀವನ ದರ್ಶನ ಪ್ರವಚನಕ್ಕೆ ಸರ್ವರೂ ಬಂದು ಭಾಗಿಯಾಗಿ ಪೂಜ್ಯರ ಪ್ರವಚನ ಆಲಿಸಬೇಕು. ನಮ್ಮ ಸಂಸಾರ ಜೀವನದಲ್ಲಿ ವರ್ಷಪೂರ್ತಿ ಸಾಕಷ್ಟು ನೋವು ಕಂಡಿರುತ್ತೇವೆ. ಶ್ರಾವಣ ಮಾಸ ಒಂದು ತಿಂಗಳು ಪ್ರವಚನ ಕೇಳಿದರೆ ಮನಸ್ಸಿಗೆ ನೆಮ್ಮದಿ ಸಿಕ್ಕು ಸಂಸಾರ ಜೀವನವನ್ನು ಸಂಸ್ಕಾರದಿಂದ ಮುನ್ನೆಡೆಸಲು ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ವಿಶೇಷವಾಗಿ ಮಕ್ಕಳಿಗೆ ಹಾಲು ಕುಡಿಸಿ ಬಸವ ಪಂಚಮಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮಲ್ಲಮ್ಮ ಬಿಚ್ಕುಂದಿ, ಹಾವಗಿರಾವ ವಟಗೆ, ಶಿವಕುಮಾರ ಕುಂಬಾರ, ಬಸವರಾಜ ಖೇಳಗೆ, ಬಾಲಾಜಿ ಹಲಬುರಗೆ, ಗುರುನಾಥರಾವ ವಟಗೆ, ಸುನಿತಾ ಅಳಕಾಯಿ, ಮಹಾದೇವಿ ನಾಗಯ್ಯ, ಸುವರ್ಣಾ ಒಂಟೆ ಉಪಸ್ಥಿತರಿದ್ದರು. ನಾಗನಾಥ ಶಂಕು ಸ್ವಾಗತಿಸಿ, ನಿರೂಪಿಸಿದರೆ, ಬಸವರಾಜ ಒಂಟೆ ವಂದಿಸಿದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH
