ಇಲ್ಲಿಗೆ ಹರಹರ, ಇಲ್ಲಿಗೆ ಶಿವ ಶಿವ

ಪ್ರಭುಲಿಂಗಲೀಲೆ : ಒಂದು ಸಮಗ್ರ ಚಿಂತನೆ 29

          ಮರ್ತ್ಯಲೋಕದ ಮನುಜರ ಉದ್ಧಾರಕ್ಕಾಗಿ ದೇಶಸಂಚಾರ ಲೀಲೆಯನ್ನು ಕೈಕೊಂಡಿದ್ದ ಪ್ರಭುಲಿಂಗ ಕಲ್ಯಾಣದ ಶರಣರು ಸ್ವಾನುಭಾವ ಸಂಪನ್ನರಾಗಿ ತನ್ನ ನಿರೀಕ್ಷೆಯಲ್ಲಿರುವುದನ್ನು ತನ್ನಲ್ಲಿ ತಾನೆ ತಿಳಿದು ಕಲ್ಯಾಣ ನಗರಕ್ಕೆ ಆಗಮಿಸಿದ. ಮುಕ್ತಿಪಥವನ್ನು ಹೊಂದಲು ಹಂಬಲಿಸುತ್ತಿರುವ ಭಕ್ತರ ಭಕ್ತಿಯನ್ನು ಮತ್ತೊಮ್ಮೆ ಒರೆಗಲ್ಲಿಗೆ ಉಜ್ಜಿ ನೋಡಿ ಪ್ರಸನ್ನಚಿತ್ತನಾದ ಪ್ರಭುದೇವ ಬಸವಣ್ಣ ರೂಪಿಸಿದ ಶೂನ್ಯ ಸಿಂಹಾಸನವನ್ನು ಏರಿ, ನಿರಹಂಭಾವದಿಂದ ಅರ್ಪಿಸಿದ ಆರೋಗಣೆಯನ್ನು ಆರೋಗಿಸಿ ತನಗಾದ ತೃಪ್ತಿಯನ್ನು ಲಕ್ಷದ ಮೇಲೆ ತೊಂಬತ್ತಾರು ಸಾವಿರ ಜಂಗಮರಲ್ಲಿ ಮೆರೆದು ತೋರಿದ.

          ಜೀವಿಗಳು ಯಾವ ವಾಸನೆವಿಡಿದು ಈ ಲೋಕದಲ್ಲಿ ಜನಿಸುವರೋ ಅವರ ಆ ಅಭಿಲಾಷೆಗಳು ಈಡೇರುವವು. ನೀವು ಶಿವನ ಆದೇಶದಂತೆ ಮಾನವ ದೇಹವನ್ನು ತೊಟ್ಟು ಬಂದ ನಿಮ್ಮ ಮರ್ತ್ಯದ ಮಣಿಹ ಪೂರೈಸಿತು. ಇನ್ನು ನಿಮಗೆ ನಿಜವನೈದುವ ಉಪಾಯವನ್ನು ಹೇಳಿಕೊಡುವೆ ಎಂದು ಪ್ರಭುದೇವ ಬಸವಾದಿ ಶರಣರಿಗೆ ಮನೋಲಯಗೈದು ಸದ್ಯೋನ್ಮುಕ್ತರಾಗುವ ಬಗೆಯನ್ನು ಬೋಧಿಸಲು ತೊಡಗುತ್ತಾನೆ.

          ನಾನು ಸಾಕ್ಷಾತ್ ಶಿವಸ್ವರೂಪನೆಂಬ ತನ್ನ ನಿಜದ ಅರಿವನ್ನು ಮರೆದ ಸ್ವರೂಪಜ್ಞಾನವಿಲ್ಲದ ಮಾನವನ ಅವಿವೇಕಿ ಮನವು ಇಲ್ಲದಿಹ ಮಾಯಾ ಪ್ರಪಂಚ ಇದೆ ಎಂದು ಭಾವಿಸಿ, ವಿಷಯ ವಾಸನೆಗೆ ಬಲಿ ಬಿದ್ದು, ಇಂದ್ರಿಯಗಳ ಮುಖಾಂತರ ಬಹಿರಂಗದಲ್ಲಿ ವಿಹರಿಸುತ್ತ ಭವಬಂಧನದಲ್ಲಿ ತೊಳಲಾಡುತ್ತದೆ. ಹೀಗೆ ತಾನೆ ನಿರ್ಮಿಸಿದ ಭವದಲ್ಲಿ ಬಂಧನ ಪಡೆದ ಮನವು ಎಚ್ಚತ್ತು ನಿತ್ಯ ಸುಖವನ್ನು ಹೊಂದುವ ಹಂಬಲದಿಂದ ಭವ ವಿಮೋಚನೆಗಾಗಿ ಪರಿತಪಿಸುತ್ತದೆ. ಭವ ಬಂಧನಕ್ಕೂ ಬಿಡುಗಡೆಗೂ ಮೂಲ ಕಾರಣ ಮನಸ್ಸು. ಅಂತಹ ಮನಸ್ಸನ್ನು ಬಹಿರಂಗದಲ್ಲಿ ಸಡಿಲ ಬಿಡುವ ಮನುಜ ಅಜ್ಞಾನಿ. ಅಂತರ್ಮುಖದಲ್ಲಿ ಆಚರಿಸಿದವನು ಸರ್ವಜ್ಞ. ಮನವು ಮನದಲ್ಲಿ ನಿಂದು ನಿರ್ವಾಸನೆಯಲ್ಲಿ ಇದ್ದವನು ಸುಜ್ಞಾನಿ. ಮನವನ್ನು ಅಳಿದವನೆ ನಿತ್ಯನಾಗುತ್ತಾನೆ. ಶಿವ ಶಕ್ತಿ ನಾಮ ರೂಪ ಕ್ರಿಯೆ ಸಕಲ ಬ್ರಹ್ಮಾಂಡ ಸಚರಾಚರಾದಿ ತೋರುವ ತೋರಿಕೆಗಳೆಲ್ಲ ಮನಸ್ಸಿನ ಉತ್ಪತ್ತಿ, ಮನವನ್ನು ಅಳಿದರೆ ಅವೂ ಲಯ ಹೊಂದುತ್ತವೆ. ಮನವೆ ಹೆತ್ತ ವಾಸನೆಗಳಿಗೆ ಬಲಿ ಬಿದ್ದು ಆಸೆಪಡುವ ಮನುಷ್ಯ ಅಧಮನಾಗುತ್ತಾನೆ. ಮನಸ್ಸಿನ ಸಂಕಲ್ಪ ವಿಕಲ್ಪಗಳಿಗೆ ಒಳಗಾಗಿ ಬೇಕು ಬೇಡೆಂಬ ವಿವೇಕವಿಲ್ಲದ ಮಾನವನು ಆಸೆಯೆಂಬ ಮಾಯಾಪಾಶದಲ್ಲಿ ಸಿಲುಕಿ ಶೋಕ ಮೋಹಾದಿ ಕ್ಲೇಶಗಳನ್ನು ಭೋಗಿಸುತ್ತ ಭವಬಂಧನದಲ್ಲಿ ತಿರುಗುತ್ತಾನೆ. ಹೀಗೆ ಮನವು ಯಾವಾಗಲೂ ಏನಾದರೊಂದನ್ನು ನೆನೆಯುತ್ತಲೇ ಇರುತ್ತದೆ. ಈ ಮನದ ನೆನಹಿನಿಂದಲೇ ಸರ್ವ ಪ್ರಪಂಚಗಳು ತೋರುತ್ತವೆ. ಇದರ ತಿರುಳನ್ನು ತಿಳಿದು, ಸದಾ ಮರ್ತ್ಯದ ವಿಷಯ ಚಿಂತನೆಯಲ್ಲಿ ಅಲೆಯುವ ಮನವನ್ನು ತಡೆದು ಮಹಾಲಿಂಗದ ಧ್ಯಾನದಲ್ಲಿ ತಲ್ಲೀನನಾಗುವಂತೆ ಮಾಡುವ ಮನೋಲಯವನ್ನು ಸಾಧಿಸುವ ಶಿವಯೋಗ ಸಮಾಧಿಯಲ್ಲಿ ಮನವನ್ನು ತೊಡಗಿಸುವ ಪ್ರವೃತ್ತಿಯಲ್ಲಿ ಸಿಲುಕಿ ಕೀಳಾಗಿರುವ ಮನವನ್ನು ನಿವೃತ್ತಿಗೊಳಿಸಿ ಸದ್ವೃತ್ತಿಯತ್ತ ತಿರುಗಿಸಿ ಘನಮನವನ್ನಾಗಿ ಮಾಡುವ ಮಾನವರಿಗಷ್ಟೇ ನಿತ್ಯಸುಖ ಪ್ರಾಪ್ತಿಯಾಗುತ್ತದೆ. ಅವರೇ ಪ್ರಪಂಚದಲ್ಲಿದ್ದೂ ಸದ್ಯೋನ್ಮುಕ್ತ-ಜೀವನ್ಮುಕ್ತರೆನ್ನಿಸಿಕೊಳ್ಳುತ್ತಾರೆ.

          ವಿಷಯ ವಾಸನೆಗೆ ಹೊರಗೆ ಹರಿಯುವ ಮನಸ್ಸನ್ನು ನಿರ್ವಾಸನೆಗೆ ತರಬಹುದು! ಅದು ಕಠಿಣವಾದರೂ ಅಸಾಧ್ಯವಲ್ಲ. ಆದರೆ ಮನವನಳಿದಿಹೆ ಎನ್ನುವ ಮನವನ್ನೇ ಅಳಿಯುವುದೆಂತು? ಮನವು ಮನವನ್ನೇ ತಿಂದು ತೇಗುವುದಾದರೂ ಹೇಗೆ ಎಂದು ಆಶ್ಚರ್ಯಚಕಿತನಾದ ಬಸವಣ್ಣ, ‘ಪ್ರಭುದೇವಾ ಮನವನ್ನು ಅಳಿದ ನಿರಾವಲಂಬದ ಕುರುಹು ಯಾವುದು? ಅದನ್ನು ಜೀವನೋ ಪರಮನೋ ಅಥವಾ ಪರಾತ್ಪರನೋ ಅವನ ಅಂಕಿತ ಯಾವುದು? ಎಲ್ಲವನ್ನು ನಾವು ತಿಳಿಯುವಂತೆ ನಿರೂಪಿಸು’ ಎಂದು ಬೇಡಿಕೊಳ್ಳುತ್ತಾನೆ.

          ಆಗ ಪ್ರಭು ‘ನಾನು ತಾನು ವಿಶ್ವಪ್ರಪಂಚ ನಾಮ ರೂಪ ಕ್ರಿಯೆ ತೋರುವ ತೋರಿಕೆಯೆಲ್ಲ ಮನಸ್ಸಿನ ನೆನಹಿನಿಂದಾದಷ್ಟೆ. ಇಂತಹ ಮನವನ್ನೆ ತಿಂದು ನಾಮ ರೂಪ ಕ್ರಿಯೆ ನಷ್ಟವಾಗಿ ತಾನು ತಾನಾದ ಆ ನಿರೂಪಮ ನಿರಾಳಗೆ ಕುರುಹಿದ್ದರಲ್ಲವೇ ತೋರುವುದು? ಆ ಮಹಾತ್ಮ ಲಿಂಗೈಕ್ಯನಾದ ಕಾರಣ ಅಭೇದ್ಯ’ ಎಂದು ಹೇಳುತ್ತಾನೆ.

          ಪ್ರಭುವಿನ ಬೋಧನೆಯನ್ನು ಆಲಿಸಿ ‘ಗುರುವೆ, ನೀನು ಹೇಳಿದ ಆ ಅನುಪಮ ಲಕ್ಷ್ಯವನ್ನು ಕುರಿತು ಮತ್ತಷ್ಟು ವಿವರವಾಗಿ ಹೇಳು’ ಎನ್ನುತ್ತಾನೆ ಚನ್ನಬಸವಣ್ಣ.

          ‘ಲಕ್ಷ್ಯವನ್ನು ಹೇಳಬೇಕೆಂದರೆ ಅದು ಶಬ್ದಾತೀತವಾಗಿ, ಮಾತಿನ ಲಕ್ಷ್ಯವಲ್ಲ. ಮನ ಬುದ್ಧಿ ಚಿತ್ತಗಳಿಗೆ ನಿಲುಕದುದಾಗಿ ಮಹಾನುಭಾವದ ಲಕ್ಷ್ಯವಲ್ಲ. ಯಮ ನಿಯಮ ಆಸನ ಪ್ರಾಣಾಯಾಮ ಪ್ರತ್ಯಾಹಾರ ಧ್ಯಾನ ಧಾರಣ ಸಮಾಧಿ ಯೋಗದ ಈ ಅಷ್ಟ ಅಂಗಗಳಿಗೆ ಅಳವಡದಾಗಿ ಅಷ್ಟಾಂಗ ಯೋಗದ ಲಕ್ಷ್ಯವಂತೂ ಮೊದಲೇ ಇಲ್ಲ. ಸದಾ ಏನಾದರೊಂದನ್ನು ನೆನೆಯುವ ಅಂತರಂಗದ ಮನವನ್ನು ಏನನ್ನೂ ನೆನೆಯದಂತೆ ನಿರ್ಮಮವಾಗಿಸುವ ನಿರ್ಲಕ್ಷ್ಯವೇ ಅದರ ಲಕ್ಷಣ’ ಎನ್ನುತ್ತಾನೆ ಪ್ರಭು.

          ನೆನಹಿಗಿಲ್ಲದ ನೋಟಕಿಲ್ಲದ ತನುವಿಗಿಲ್ಲದ ಸಾಧನದ ಭಾವನೆಯೊಳಿಲ್ಲದ ಹೇಳಲಿಲ್ಲದ ಕೇಳಲಿಲ್ಲದ ಆ ಅನುಪಮವನ್ನು ಇನ್ನಾವ ಪರಿಯಿಂದ ಅನುಭವಿಸಿ ನೆರೆದು ನಿತ್ಯರಾಗುವುದು? ಎಂದು ಮಡಿವಾಳ ಮಾಚಯ್ಯ ಪ್ರಭುದೇವನನ್ನು ಪ್ರಶ್ನೆ ಮಾಡುತ್ತಾನೆ.

          ಆಗ ಪ್ರಭುದೇವ ‘ಜನನ ಮರಣಗಳ ಪುನರಾವೃತ್ತಿಯಾದ ಸಂಸಾರವೆಂಬ ಅನಿತ್ಯಸ್ವಪ್ನದಲ್ಲಿ ಆತ್ಮನು ಸ್ವಮಾಯಾ ಮೋಹಿತನಾಗಿ ನಾನು ತನು ಮನ ಪ್ರಾಣ ಎಂಬ ಭ್ರಾಂತಿಗೆ ಒಳಗಾಗಿದ್ದಾನೆ. ತನುಮನಗಳ ಅರಿವು ಮರವೆಯ ಬೀಜವಾದ ಮನಸ್ಸಿನಿಂದ ಎಂದು ಭಾವಿಸಿ ಮಾಯಾ ಪ್ರಕೃತಿಯಲ್ಲಿ ಮೂಡಿದ ಅರಿವಿನ ವಿವರವಾದ ಮನದಿಂದ ಅರಿದೆನೆನ್ನುವುದು ಅಜ್ಞಾನ. ಇನ್ನು ಇಲ್ಲದ ತನುಮನಗಳನ್ನು ಅರಿದೆವೆಂಬ ಅರಿವುಳ್ಳವರು (ಆತ್ಮಜ್ಞಾನವುಳ್ಳವರು) ಈ ತನುಮನಗಳೊಳಗೆ ತಾವು ಇಲ್ಲದೆ ಇರಬೇಕು. ಅಲ್ಲದೆ, ಇಲ್ಲದ ಎಚ್ಚತ್ತ ಅರಿವು ಮರವೆಯ ತೊಂದರೆ ನೀಗಿ ತಾನು ತಾನಾಗಿ ಇರಬಲ್ಲಡೆ ಆತನೆ ಮುಕ್ತನಾಗುತ್ತಾನೆ’ ಎಂದು ಬೋಧಿಸುತ್ತಾನೆ.

          ಹೀಗೆ ಬಸವಣ್ಣ, ಮಡಿವಾಳ ಮಾಚಯ್ಯ, ಚೆನ್ನಬಸವಣ್ಣ, ಹಡಪದ ಅಪ್ಪಣ್ಣ, ಅಕ್ಕನಾಗಮ್ಮ ಮೊದಲಾದ ಶಿವಶರಣರಿಗೆ ಗುರುಗುಹೇಶ್ವರನ ದಿವ್ಯ ಕಾರುಣ್ಯದಿಂದ ಅಚಲಪದವಿಯನ್ನು ಪ್ರಭುದೇವ ಕರುಣಿಸುತ್ತಾನೆ.

          ಜಂಗಮಲಿಂಗನ ಲೋಕಕಲ್ಯಾಣ ಯಾತ್ರೆಯಾದ ಪ್ರಭುಲಿಂಗಲೀಲೆ ಇಲ್ಲಿಗೆ ಮುಕ್ತಾಯವಾಗುತ್ತದೆ. ಅದರ ಮಹಾಮಂಗಲವನ್ನು ಚಾಮರಸ ತುಂಬ ಭಕ್ತಿಯಿಂದ ಹೀಗೆ ನಿರೂಪಿಸುತ್ತಾನೆ:

ಶರಣ ಸಂದೋಹವನು ತನ್ನಯ

ಪರಮ ನಿತ್ಯಾನಂದ ಪದವಿಯ

ಲಿರಿಸಿ ತಾನಲ್ಲಿಂದೆ ಹೋಗುತಲವರ ಬೀಳ್ಕೊಟ್ಟು

ಕರುಣದಿಂದಲಿ ಸಕಲ ಸಚರಾ

ಚರರೊಳಂತರಿಯಾಮಿಯಾಗಿಯೆ

ಗುರು ಗುಹೇಶ್ವರಲಿಂಗನಿರ್ದನು ತನ್ನ ಲೀಲೆಯಲಿ

          “ಅಲ್ಲಮಪ್ರಭುವನ್ನೇ ಕೇಂದ್ರವಾಗಿಯುಳ್ಳ ಪ್ರಭುಲಿಂಗಲೀಲೆ ಸ್ವತಂತ್ರ ಕಾವ್ಯವಾಗಿ ಮೈವೆತ್ತಿತು. ಕಾವ್ಯಶಕ್ತಿಯ ವಿಚಾರದಲ್ಲಿ ಚಾಮರಸ ಬಹಳ ಉದಾತ್ತವಾದ ಭಾವನೆಯನ್ನಿಟ್ಟುಕೊಂಡವನು. ಕಾವ್ಯೋದ್ದೇಶವನ್ನು ಕುರಿತು ಆತನು ಹೇಳಿದ ಈ ಕೆಳಗಿನ ಮಾತುಗಳು ಹರಿಹರನ ಮಾತುಗಳನ್ನು ನೆನಪಿಗೆ ತರುತ್ತವೆ:

ಸತ್ತವರ ಕಥೆಯಲ್ಲ ಜನನದ

ಕುತ್ತದಲಿ ಕುದಿಕುದಿದು ಕರ್ಮದ

ಕತ್ತಲೆಗೆ ಸಿಲುಕುವರ ಸೀಮೆಯ ಹೊಲಬು ತಾನಲ್ಲ

ಹೊತ್ತು ಹೋಗದೆ ಪುಂಡರಾಲಿಪ

ಮತ್ತ ಮತಿಗಳ ಗೋಷ್ಠಿಯಲ್ಲಿದು

ಸತ್ಯಶರಣರು ತಿಳಿವುದೀ ಪ್ರಭುಲಿಂಗಲೀಲೆಯನು

ಕಥಾಸರಣಿ ಈ ಆಶಯದ ಮಟ್ಟದಲ್ಲಿಯೇ ನಡೆಯುತ್ತದೆ. ಅದು ಕೇವಲ ಕಾವ್ಯದ ಮಟ್ಟದಲ್ಲಿ ನಿಲ್ಲುವುದಿಲ್ಲ. ಅಂತರಂಗದ ವಿಕಾಸಕ್ಕೆ ಒಂದು ಕೈಪಿಡಿಯಾಗಿ ಪರಿಣಮಿಸುತ್ತದೆ. ಮನಸ್ಸಿನ ಸಂಕಲ್ಪ-ವಿಕಲ್ಪಗಳಿಂದ ತೊಡಗಿ ಮನೋಲಯದಲ್ಲಿ ಪರ್ಯವಸಾನಗೊಳ್ಳು ತ್ತದೆ.

ಜೀವನದ ಗಂಭೀರ ತತ್ವದರ್ಶನವನ್ನು ಕಲಾತ್ಮಕವಾದ ಕಾವ್ಯರೂಪದಲ್ಲಿ ಹೇಗೆ ನಿರೂಪಿಸಬಹುದೆಂಬುದಕ್ಕೆ ಈ ಕೃತಿ ಒಳ್ಳೆಯ ಉದಾಹರಣೆ. ಇಡೀ ಕೃತಿ ಊರ್ಧ್ವಗಮನಾಭಿಲಾಷಿಯಾದ ಆಧ್ಯಾತ್ಮಿಕ ಚೇತನದ ನಿರಂತರ ಹೋರಾಟಕ್ಕೆ ಸಂಕೇತ ವಾಗಿ ಪರಿಣಮಿಸುವಂತೆ ಚಾಮರಸ ಇದನ್ನು ನಿರ್ವಹಿಸಿದ್ದಾನೆ. ಲಿಂಗಾಯತ ಧರ್ಮದ ಹಿನ್ನೆಲೆಯಲ್ಲಿ ಇದು ರೂಪಿತವಾಗಿದೆ ಎಂಬುದು ನಿಜ. ಅದಕ್ಕನುಗುಣವಾಗಿ ಷಟ್ಸ್ಥಲಾದಿ ಗಳ ನಿರೂಪಣೆಯೂ ಇಲ್ಲಿ ಬಾರದೆ ಇಲ್ಲ. ಆದರೆ ಅದು ಪಾರಿಭಾಷಿಕವಾದ ಉಪದೇಶ ವಾಗಿ ಬಂದಿಲ್ಲ. ಧರ್ಮ ಮತ್ತು ಕಾವ್ಯಧರ್ಮಗಳೆರಡನ್ನೂ ಒಂದಾಗಿ ಬೆಸೆದುಬಿಟ್ಟಿದ್ದಾನೆ ಚಾಮರಸ.” ಎಂಬ ಡಾ. ಎಚ್. ತಿಪ್ಪೇರುದ್ರ ಸ್ವಾಮಿಗಳವರ ಮಾತು ಅಕ್ಷರಶಃ ನಿಜ.

          ಪ್ರಭುಲಿಂಗಲೀಲೆ ಚಾಮರಸನೇ ಹೇಳುವಂತೆ, ಅಪ್ರತಿಮ ಪಾರಮಾರ್ಥ ಚಾರಿತ್ರ್ಯವನ್ನೊಳಗೊಂಡ ಅಪ್ರೇಮಯನಾದ ಅಲ್ಲಮನ ಗತಿಯ ಗಾಂಭೀರ್ಯ ವನ್ನೂ ಹಾಗೂ ನಿರ್ದೇಹಿಯಾದ ಆತನ ನಿಜಾಕೃತಿಯನ್ನೂ ಸಂಗ್ರಹಿಸಿ ತೋರಿದ ಸರ್ವಶ್ರೇಷ್ಠ ಕಾವ್ಯವಾಗಿದೆ. ಅದರಲ್ಲಿ ಬರುವ ಅಲ್ಲಮ ಹನ್ನೆರಡನೆಯ ಶತಮಾನದಲ್ಲಿ ಆಧ್ಯಾತ್ಮಿಕ ಬದುಕನ್ನು ಬಾಳಿ ಬೆಳಗಿದ ಐತಿಹಾಸಿಕ ವ್ಯಕ್ತಿಯಾದರೂ ಮಾನವತೆಯ ನಾಮ ರೂಪ ಕ್ರೀ ಕಳಾಪವನ್ನು ಜಯಿಸಿ, ಅನುಪಮ ದಿವ್ಯ ತೇಜೋ ವ್ಯೋಮ ಮೂರುತಿಯಾದ ಗುರುಗುಹೇಶ್ವರಲಿಂಗ. ಲೋಕೋದ್ಧಾರ ನಿಮಿತ್ಯ ಕಾರಣ ಕಾಯದ ಮಾನವಾಕಾರ ತೊಟ್ಟು ಧರೆಯಲ್ಲಿ ಸುಳಿದರೂ ಸರ್ವಗತನಾದ ಮಹಾತ್ಮ. ಅವನ ನುಡಿಯೆಲ್ಲ ಶಿವತತ್ವ, ನಡೆಯೆಲ್ಲ ಲಿಂಗಲೀಲೆ.

ಶ್ರಾವಣಮಾಸ ಒಂದು ಪವಿತ್ರಮಾಸವಾಗಿರುವುದರಿಂದ, ಸತ್ ಚಿಂತನೆಗಳನ್ನು ಆಲಿಸಬೇಕು, ಅಧ್ಯಯನ ಮಾಡಬೇಕೆಂಬ ಸದುದ್ದೇಶದಿಂದ ಒಂದು ತಿಂಗಳ ಪರ್ಯಂತ ಚಾಮರಸ ಕವಿಯ ಪ್ರಭುಲಿಂಗಲೀಲೆ ಒಂದು ಸಮಗ್ರ ಚಿಂತನೆಯನ್ನು ಮಾಡಿದ ತೃಪ್ತಿ ನನ್ನದು. ಖ್ಯಾತ ವಿಮರ್ಶಕರಾಗಿದ್ದ ಕೀರ್ತಿನಾಥ ಕುರ್ತಕೋಟಿ ಅವರು ಹನ್ನೊಂದು ದಿನಗಳ ಕಾಲ ಕುಮಾರವ್ಯಾಸನ ಮಾಡಿದ ಉಪನ್ಯಾಸಗಳ ಸಂಗ್ರಹವನ್ನು ಒಂದು ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದರು. ಇದನ್ನು ಓದಿದ ನಂತರ, ಇದೇ ಮಾದರಿಯಲ್ಲಿ ಚಾಮರಸನ ಪ್ರಭುಲಿಂಗಲೀಲೆ ಕುರಿತು ಚಿಂತನೆ ಮಾಡಬೇಕೆಂಬುದು ನನ್ನ ಬಹುದಿನಗಳ ಆಸೆಯಾಗಿತ್ತು. ಈ ಶ್ರಾವಣ ಮಾಸ ಅದಕ್ಕೊಂದು ಅವಕಾಶ ಒದಗಿಸಿಕೊಟ್ಟಿತು. ಸಾಮಾಜಿಕ ಜಾಲತಾಣಗಳಲ್ಲಿ ಬರುತ್ತಿದ್ದ ಈ ಚಿಂತನೆಗಳನ್ನು ಕರ್ನಾಟಕದ ಮೂಲೆ ಮೂಲೆಯ ಜನರು ಓದಿ ತಮ್ಮ ಸಂತೋಷವನ್ನು ಹಂಚಿಕೊಂಡಿದ್ದಾರೆ. ಅದರಲ್ಲೂ ಮುಖ್ಯವಾಗಿ ಖ್ಯಾತ ವಿದ್ವಾಂಸರಾದ ಪ್ರೊ. ಚಂದ್ರಕಾಂತ ಪೋಕಳೆ, ಪ್ರೊ. ಆರ್. ವಿ. ಕುಲಕರ್ಣಿ, ಡಾ. ಎ.ಬಿ.ಘಾಟಗೆ ಗುರುಗಳು ಪ್ರತಿನಿತ್ಯ ಆಯಾ ಚಿಂತನೆಗಳನ್ನು ಓದಿ, ಅಭಿಪ್ರಾಯವನ್ನು ಬರೆದು ತಿಳಿಸುತ್ತಿದ್ದರು. ಇದು ನನ್ನ ಬರವಣಿಗೆಗೆ ಅದ್ಭುತವಾದ ಚೇತನಶಕ್ತಿಯಾಗಿ ನಿಂತಿತು. ಈ ಮೂವರು ವಿದ್ವಜ್ಜನರು ಲಿಂಗಾಯತರಲ್ಲ; ಆದರೆ ನನ್ನ ಬರವಣಿಗೆಯನ್ನು ಪ್ರತಿನಿತ್ಯ ಓದಿ, ಪ್ರೋತ್ಸಾಹಿಸುತ್ತಿದ್ದ ರೀತಿ ಅನನ್ಯವಾದದ್ದು. ಅದರಲ್ಲೂ ಇಂಗ್ಲಿಷ್ ಪ್ರಾಧ್ಯಾಪಕರಾದ ಪ್ರೊ. ಆರ್. ವಿ. ಕುಲಕರ್ಣಿ ಸರ್ ಅವರಂತೂ ಫೋನ್ ಮಾಡಿ “ನಿನ್ನ ಪ್ರಭುಲಿಂಗಲೀಲೆ ಓದಿ, ಅದರಲ್ಲೂ ಇಷ್ಟಲಿಂಗ ಗತಿ ಓದಿ ನಾನೂ ಲಿಂಗಾಯತ ಚಿಂತನೆಯಲ್ಲಿ ಮುಳುಗುವಂತೆ ಮಾಡಿದೆ, ನಿನ್ನ ಬರಹಕ್ಕೆ ಅಂತಹ ಶಕ್ತಿ ಇದೆ. ಈ ಚಿಂತನೆಗಳನ್ನೆಲ್ಲ ಆದಷ್ಟು ಬೇಗ ಪುಸ್ತಕ ರೂಪದಲ್ಲಿ ಪ್ರಕಟಿಸು” ಎಂದು ಹೇಳಿದ ಮಾತು ನನ್ನಲ್ಲಿ ರೋಮಾಂಚನವನ್ನುಂಟು ಮಾಡಿದೆ. ಈ ಮೂವರು ಹಿರಿಯರಿಗೆ ನನ್ನ ಅನಂತ ಅನಂತ ಶರಣುಗಳನ್ನು ಸಲ್ಲಿಸುವೆ.

          ನನ್ನ ಚಿಂತನೆಗಳನ್ನು ಪ್ರತಿನಿತ್ಯ ಶರಣ ತತ್ವಾಭಿಮಾನಿಗಳಿಗೆ ಮುಟ್ಟಿಸಿದ ‘ಬಸವ ಮೀಡಿಯಾ’ ತಂಡಕ್ಕೆ ನನ್ನ ಅನಂತ ಶರಣುಗಳು. ಹಾಗೆಯೇ ಶ್ರೀ ಶಂಕರ ಗುಡಸ, ಡಾ.ಕೆ. ಶಶಿಕಾಂತ, ಡಾ. ಎಂ. ಎಸ್. ಉಕ್ಕಲಿ, ಗದುಗಿನ ಶಿವನಗೌಡ ಗೌಡರ ಅವರು ಇಲ್ಲಿಯ ಚಿಂತನೆಗಳನ್ನು ತಮ್ಮ ವಾಟ್ಸಪ್ ಗ್ರೂಪ್ಗಳಲ್ಲಿ ನಿರಂತರವಾಗಿ ಹಾಕಿ, ನೂರಾರು ಜನರಿಗೆ ಮುಟ್ಟುವಂತೆ ಮಾಡಿದ್ದಾರೆ.

 ಈ ಚಿಂತನೆಗಳನ್ನು ಓದಿ ಕಾರಂಜಿಮಠದ ಪೂಜ್ಯ ಶ್ರೀ ಗುರುಸಿದ್ಧ ಸ್ವಾಮೀಜಿ ಹಾಗೂ ಬೀಳಗಿ ಪೂಜ್ಯ ಶ್ರೀ ಗುರುಪಾದ ಶಿವಾಚಾರ್ಯ ಸ್ವಾಮೀಜಿ ಅವರು, ಚಾಮರಸನ ಈ ಚಿಂತನೆಗಳು ತುಂಬ ಮೌಲಿಕವಾಗಿವೆ ಎಂದು ಆಶೀರ್ವದಿಸಿದ್ದಾರೆ.  ಚಾಮರಸನ ಪ್ರಭುಲಿಂಗಲೀಲೆ ಒಂದು ದಾರ್ಶನಿಕ ಚಿಂತನೆ ಎಂಬ ವಿಷಯ ಕುರಿತು ಪಿಎಚ್.ಡಿ. ಸಂಶೋಧನೆ ಮಾಡಿದ ಡಾ. ಬಾಗಲಕೋಟ ಅವರು ನನ್ನ ಚಿಂತನೆಗಳನ್ನು ಮೆಚ್ಚಿದ್ದು ನನಗೆ ಅತೀವ ಸಂತೋಷವನ್ನುಂಟು ಮಾಡಿದೆ. ಬೆಂಗಳೂರಿನಲ್ಲಿ ವಾಸವಾಗಿರುವ ಹಿರಿಯ ನಿವೃತ್ತನ್ಯಾಯಾಧೀಶರೂ, ಬೆಳಗಾವಿ ಚಾರಿಟಿ ಕಮೀಷನರ್ ಆಗಿದ್ದ ಶ್ರೀ ಕೆ.ಎಸ್. ಬೀಳಗಿ ಸಾಹೇಬರು ಫೋನ್ ಮಾಡಿ ಸಂತೋಷ ಹಂಚಿಕೊಂಡಿದ್ದಾರೆ. ಹಿರಿಯ ಸಂಶೋಧಕರಾದ ಡಾ. ಎಂ. ಜಿ. ನಾಗರಾಜ ಅವರ ಸಹೋದರರಾದ ಶ್ರೀ ಚಂದ್ರಕಾಂತ ಅವರು ನನ್ನ ಚಿಂತನೆಗಳನ್ನು ಓದಿ ಇಂದಿನ ಕೆಟ್ಟ ವಾತಾವರಣದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಚಿಂತನೆಗಳ ಪ್ರಸಾರ ಹೆಚ್ಚು ಹೆಚ್ಚು ಆಗಬೇಕೆಂದು ಸಂತಸ ವ್ಯಕ್ತಪಡಿಸಿದ್ದಾರೆ. ಈ ಎಲ್ಲ ಮಹನೀಯರಿಗೆ ನಾನು ಕೃತಜ್ಞತಾಪೂರ್ವಕ ಶರಣುಗಳನ್ನು ಸಲ್ಲಿಸುವೆ.

          ಬೆಳಗಾವಿಯಿಂದ ಬೀದರವರೆಗೆ, ಬೀದರದಿಂದ ಚಾಮರಾಜನಗರದವರೆಗೆ ಕರ್ನಾಟಕದ ಎಲ್ಲ ಭಾಗಗಳಿಂದಲೂ ಜನರು ಓದಿ ಫೋನ್ ಮೂಲಕ ತಮ್ಮ ಸಂತೋಷವನ್ನು ಹಂಚಿಕೊಂಡಿದ್ದಾರೆ. ಆ ಎಲ್ಲ ಓದುಗ ಲೋಕಕ್ಕೆ ನನ್ನ ಅನಂತ ಶರಣು ಶರಣಾರ್ಥಿಗಳು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Share This Article
Leave a comment

Leave a Reply

Your email address will not be published. Required fields are marked *