ತಮಿಳುನಾಡಿನಲ್ಲಿ ಅಂತರರಾಜ್ಯ ಶರಣ ಸಂಗಮ ಕಾರ್ಯಕ್ರಮ

ಬಸವ ಮೀಡಿಯಾ
ಬಸವ ಮೀಡಿಯಾ

ಬೇಡಗಂಪಣ ಸಮುದಾಯದಲ್ಲಿ ಬಸವತತ್ವದ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ

ಕೊಳ್ಳೇಗಾಲ

ಇಂದು ಸಂಜೆ ಆರು ಗಂಟೆಗೆ ತಮಿಳುನಾಡಿನ ಈರೋಡ್ ಜಿಲ್ಲೆಯ ದ್ರೋಣನಗಿರಿ ಮಠದಲ್ಲಿ ಅಂತರರಾಜ್ಯ ಶರಣ ಸಂಗಮ ಕಾರ್ಯಕ್ರಮ ನಡೆಯುತ್ತಿದೆ.

ಹನೂರು ತಾಲೂಕಿನ ಬಸವಕೇಂದ್ರ ಆಯೋಜಿಸಿರುವ ಕಾರ್ಯಕ್ರಮ ಪೂಜ್ಯ ಶಿವರಾತ್ರಿ ರಾಜೇಂದ್ರ ಮಹಾಸ್ವಾಮೀಜಿಗಳವರ 111ನೇ ಜಯಂತಿ ಮಹೋತ್ಸವದ ಅಂಗವಾಗಿ ನಡೆಯುತ್ತಿದೆ.

“ಈರೋಡ್ ಜಿಲ್ಲೆಯ 55 ಹಳ್ಳಿಗಳಲ್ಲಿ ಬೇಡಗಂಪಣರಿದ್ದಾರೆ. ಅವರಲ್ಲಿ ಬಸವತತ್ವದ ಬಗ್ಗೆ ಜಾಗೃತಿ ಮೂಡಿಸಲು ಶರಣ ಸಂಗಮ ನಡೆಯುತ್ತಿದೆ,” ಎಂದು ವೀರಶೈವ ಮಹಾಸಭಾದ ಕೇಂದ್ರ ಸಮಿತಿ ಸದಸ್ಯ ಎನ್.ರಿಚ್ ಮಹದೇವಸ್ವಾಮಿ ಹೇಳಿದರು.

ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ದ್ರೋಣನಗಿರಿ ಮಠಾಧ್ಯಕ್ಷರಾದ ಪೂಜ್ಯ ಅಶೋಕ ರಾಜೇಂದ್ರ ಸ್ವಾಮೀಜಿ, ಪೂಜ್ಯ ಸದಾಶಿವ ಸ್ವಾಮೀಜಿ ವಹಿಸಲಿದ್ದಾರೆ.

ಮಾಜಿ ಶಾಸಕ ಪ್ರೊ. ಕೆ.ಆರ್. ಮಲ್ಲಿಕಾರ್ಜುನಪ್ಪ, ಅಧ್ಯಕ್ಷರು, ಬಸವ ಬಳಗಗಳ ಒಕ್ಕೂಟ ಚಾಮರಾಜನಗರ, ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಪ್ರಾಸ್ತವಿಕ ನುಡಿಗಳನ್ನು ಎನ್.ರಿಚ್ ಮಹದೇವಸ್ವಾಮಿ ಹೇಳಲಿದ್ದಾರೆ.

ಕೋಡಿಮೋಳೆ ರಾಜಶೇಖ‌ರ್, ಪುಟ್ಟಣ ತಿಮ್ಮರಾಜೀಪುರ, ವೃಷಬೇಂದ್ರಸ್ವಾಮಿ ಕಣ್ಣೂರು, ಜಿ. ಸೋಮಶೇಖರ್, ಎಂ. ವೇದಮೂರ್ತಿ, ಗುರುಸ್ವಾಮಿ ಧನಗೆರೆ, ಪರಮೇಶ್ ಹೊನ್ನೂರು, ಪಿ. ಮರಿಸ್ವಾಮಿ, ಲೊಕೇಶ್ ಬಿಂದು, ಮಂಜು ಹೊನ್ನೂರು, ಚಂದ್ರು ಲಕ್ಕೂರು, ಶಿವಸ್ವಾಮಿ ಹೆಗ್ಗೋಠಾರ ಉಪಸ್ಥಿತರಿರುತ್ತಾರೆ.

ಕೊಳ್ಳೇಗಾಲ, ಹನೂರು, ರಾಮಾಪುರ, ನಾಲ್‌ರೋಡ್ ಮಾರ್ಗವಾಗಿ ಗರಿಕೆಕಂಡೆ ತಾವರೆಗೆರೆ ತಲುಪಿ ಎಡಕ್ಕೆ ತಿರುಗಿದರೆ ಬರಗೂರು ಮೂಲಕ ದ್ರೋಣನಗಿರಿ ಮಠ (ಮಡಂ) ತಲುಪಬಹುದೆಂದು ಆಯೋಜಕರು ತಿಳಿಸಿದ್ದಾರೆ.

ಕರ್ನಾಟಕ ತಮಿಳುನಾಡು ಗಡಿಯ ಕಾಡು ಪ್ರದೇಶದಲ್ಲಿರುವ ಬೇಡಗಂಪಣ ಜನಾಂಗದವರು ಮಲೆ ಮಹದೇಶ್ವರರಿಂದ ಲಿಂಗ ದೀಕ್ಷೆ ಪಡೆದವರು. ಮಹದೇಶ್ವರ ಬೆಟ್ಟದಲ್ಲಿ ಇವರ ಬಳಗದವರೇ ಪೂಜೆ ಮಾಡುವುದು.

ಕೊರಳಲ್ಲಿ ಲಿಂಗ ಕಟ್ಟಿಕೊಂಡು ಮಹದೇಶ್ವರರಿಗೆ ನಿಷ್ಠೆಯಿಂದ ನಡೆದುಕೊಂಡು ಬದುಕು ಮಾಡುತ್ತಿದ್ದರೂ ಇವರು ಲಿಂಗಾಯತರ ಯಾವುದೇ ಉಪ ಜಾತಿಗಳ ಪಟ್ಟಿಯಲ್ಲಿಯೂ ಗುರುತಿಸಲ್ಪಟ್ಟಿಲ್ಲ.

ಬೇಡಗಂಪಣ ಶಾಖಾಹಾರಿ ಬುಡಕಟ್ಟು ಸಮುದಾಯ ಎನ್ನುವುದು ಮತ್ತೊಂದು ವಿಶೇಷ. ಚಾಮರಾಜನಗರ ಜಿಲ್ಲೆಯ ಬಸವ ಕೇಂದ್ರ ಇವರಲ್ಲಿ ಬಸವ ಪ್ರಜ್ಞೆ ಮೂಡಿಸುವ ಕಾರ್ಯವನ್ನು ಆದ್ಯತೆಯ ಮೇಲೆ ಮಾಡಿಕೊಂಡು ಬಂದಿದೆ.

‘ಇವರಲ್ಲಿ ಮಹದೇಶ್ವರರೇ ನಮ್ಮ ಧರ್ಮ ಗುರು ಎನ್ನುವ ಭಾವನೆಯಿದೆ. ಬಸವಣ್ಣನವರ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಈಗ ಶುರುವಾಗಿದೆ,’ ಎಂದು ಎನ್ರಿಚ್ ಮಹದೇವಸ್ವಾಮಿ ಹಿಂದೆ ಹೇಳಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

Share This Article
Leave a comment

Leave a Reply

Your email address will not be published. Required fields are marked *