ಉತ್ಸವದಲ್ಲಿ ಪಾಲ್ಗೊಳ್ಳಲು ಡಾ. ಚನ್ನಬಸವಾನಂದ ಶ್ರೀ ಕರೆ
ಬೀದರ :
ಬಸವಧರ್ಮ ಪೀಠದ ಸ್ವಾಭಿಮಾನಿ ಹಾಗೂ ತತ್ವನಿಷ್ಠ ಶರಣರಿಂದ ಅಕ್ಟೋಬರ್ 24 ಮತ್ತು 25ರಂದು 25ನೇ ಕಲ್ಯಾಣಪರ್ವ ರಜತ ಮಹೋತ್ಸವ ಆಯೋಜಿಸಲಾಗಿದೆ ಎಂದು ಬೆಂಗಳೂರಿನ ಶ್ರೀ ಚನ್ನಬಸವೇಶ್ವರ ಜ್ಞಾನಪೀಠದ ಪೂಜ್ಯ ಡಾ. ಚನ್ನಬಸವಾನಂದ ಸ್ವಾಮೀಜಿ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೀದರ್ಯ ಜಿಲ್ಲಾ ರಾಷ್ಟ್ರೀಯ ಬಸವದಳ, ಲಿಂಗಾಯತ ಧರ್ಮ ಮಹಾಸಭಾ ಹಾಗೂ ಕ್ರಾಂತಿ ಗಂಗೋತ್ರಿ ಮಹಿಳಾ ಗಣದ ಸಂಯುಕ್ತಾಶ್ರಯದಲ್ಲಿ ಬಸವಕಲ್ಯಾಣದ ಸಸ್ತಾಪುರ ಬಂಗ್ಲಾ ಸಮೀಪದ ಎಂ.ಎಂ. ಬೇಗ್ ಸಭಾ ಮಂಟಪದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದರು.
2002ರಲ್ಲಿ ಬಸವಧರ್ಮ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಅವರ ನೇತೃತ್ವದಲ್ಲಿ ಆರಂಭವಾದ ಕಲ್ಯಾಣಪರ್ವ ಇದೀಗ 25ನೇ ವರ್ಷಕ್ಕೆ ಕಾಲಿಟ್ಟಿದೆ. ಮಾತೆ ಮಹಾದೇವಿ ಅವರ ಆಶಯದಂತೆ ಕಾರ್ಯನಿರ್ವಹಿಸುತ್ತಿರುವ ರಾಷ್ಟ್ರೀಯ ಬಸವದಳದ 25 ಶಾಖೆಗಳನ್ನು ಆಯ್ಕೆ ಮಾಡಿ ಅತ್ಯುತ್ತಮ ರಾಷ್ಟ್ರೀಯ ಬಸವದಳ ಪ್ರಶಸ್ತಿ ನೀಡಲಾಗುವುದು.

ಲಿಂಗಾನಂದ ಅಪ್ಪಾಜಿ ಅವರ ಸ್ಮರಣಾರ್ಥ ಗೌರವ ಪುರಸ್ಕಾರವನ್ನೂ ಪ್ರದಾನ ಮಾಡಲಾಗುವುದು ಎಂದು ಹೇಳಿದರು.
ಬಸವ ತತ್ವ ಅನುಸರಿಸುತ್ತಿರುವ 25 ಜೋಡಿ ದಂಪತಿಗಳಿಗೆ ‘ಆದರ್ಶ ಶರಣ ದಂಪತಿಗಳು’ ಪ್ರಶಸ್ತಿ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ 25 ಸಾಧಕರಿಗೆ ಗೌರವ ಪುರಸ್ಕಾರ ನೀಡಿ ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ಕ್ರಾಂತಿ ಗಂಗೋತ್ರಿ ಮಹಿಳಾ ಗಣದ ರಾಷ್ಟ್ರೀಯ ಅಧ್ಯಕ್ಷೆ ಸತ್ಯಾದೇವಿ ಮಾತೆ ಮಾತನಾಡಿ, ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ ಸೇರಿದಂತೆ ವಿವಿಧ ರಾಜ್ಯಗಳು ಹಾಗೂ ಕರ್ನಾಟಕದ ಎಲ್ಲ ಜಿಲ್ಲೆಗಳಿಂದ ಸುಮಾರು 10 ಸಾವಿರಕ್ಕೂ ಅಧಿಕ ಬಸವ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಆಗಮಿಸುವ ಭಕ್ತರಿಗೆ ಪ್ರಸಾದ ಹಾಗೂ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
24ರಂದು ಉದ್ಘಾಟನೆ:
24ರಂದು ಬೆಳಿಗ್ಗೆ 6ಕ್ಕೆ ಸಾಮೂಹಿಕ ಇಷ್ಟಲಿಂಗ ಪೂಜೆ, 7ಕ್ಕೆ ವೇದಿಕೆ ದೈವೀಕರಣ ಹಾಗೂ ಶ್ರೀ ಬಸವೇಶ್ವರ ಪೂಜಾವೃತ್ತ ನಡೆಯಲಿದೆ. ಬೆಳಿಗ್ಗೆ 11ಕ್ಕೆ ಕಲ್ಯಾಣ ಪರ್ವದ ರಜತ ಮಹೋತ್ಸವ ಉದ್ಘಾಟನಾ ಸಮಾರಂಭ ಹಾಗೂ ಲಿಂಗಾಯತ ಧರ್ಮದ ಮಾನ್ಯತೆ ಹೋರಾಟ ಕುರಿತು ಚಿಂತನಗೋಷ್ಠಿ ನಡೆಯಲಿದೆ.
25ರಂದು ಪ್ರಶಸ್ತಿ ಪ್ರದಾನ, ಸಾಧಕರಿಗೆ ಸನ್ಮಾನ, ಪಥಸಂಚಲನ, ಭವ್ಯ ಮೆರವಣಿಗೆ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಆಯೋಜಕರು ತಿಳಿಸಿದರು. ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಪೋಸ್ಟರ್ ಪ್ರದರ್ಶಿಸಲಾಯಿತು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಶಿವರಾಜ ಪಾಟೀಲ ಅತಿವಾಳ, ಶಿವಶರಣಪ್ಪ ಪಾಟೀಲ ಹಾರೂರಗೇರಿ, ಮಲ್ಲಿಕಾರ್ಜುನ ಶಾಪೂರ, ಮಲ್ಲಿಕಾರ್ಜುನ ಬುಕ್ಕಾ, ಬಸವರಾಜ ಸಂಗಮದ, ವಿಶ್ವನಾಥ ಪಾಟೀಲ ಗೊಂದೆಗಾಂವ, ರವಿಕಾಂತ ಬಿರಾದಾರ, ಸರಸ್ವತಿ ಶಟಕಾರ, ಮನ್ಮಥಯ್ಯ ಸ್ವಾಮಿ ಸೇರಿದಂತೆ ಹಲವರಿದ್ದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece
