ಹಾವೇರಿ :
ಸ್ವಾಭಿಮಾನದ ಕಾಯಕದೊಂದಿಗೆ ಸ್ವಾನುಭಾವದ ಬದುಕು ರೂಪಿಸುವ ಮೂಲಕ ಶರಣ ಸಂಸ್ಕೃತಿಯೇ ಶ್ರಮ ಸಂಸ್ಕೃತಿ ಎಂದು ಸಾರಿದ ಹೆಗ್ಗಳಿಕೆ ಅನುಭವ ಮಂಟಪಕ್ಕೆ ಸಲ್ಲುತ್ತದೆ ಎಂದು ಹೊಸಮಠದ ಪೂಜ್ಯ ಶಾಂತಲಿಂಗ ಸ್ವಾಮೀಜಿ ಹೇಳಿದರು.
ಇತ್ತೀಚೆಗೆ ಹೊಸಮಠದಲ್ಲಿ ಬಸವ ಕೇಂದ್ರದಿಂದ ಜರುಗಿದ ಶರಣ ಸಂಗಮ ಹಾಗೂ ಕಾಯಕ ದಿನಾಚರಣೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.
ಕಾಯಕ, ಶ್ರಮ ಜೀವಿಗಳ ತ್ಯಾಗ, ಸಮರ್ಪಣೆ ಮತ್ತು ಸಮಾಜ ನಿರ್ಮಾಣದಲ್ಲಿ ಅವರ ಕೊಡುಗೆಯನ್ನು ಗೌರವಿಸುವ ದಿನವಾಗಿದೆ.
ಶ್ರಮಿಕ ವರ್ಗವನ್ನು ಗೌರವಿಸಿದ ಬಸವಾದಿ ಪ್ರಮಥರು ಕಾಯಕ ಮತ್ತು ದಾಸೋಹ ಸಿದ್ಧಾಂತವನ್ನು ಸಾರಿದರು. ಹೊಟ್ಟೆ ಹಸಿವು ಬದುಕಿನಲ್ಲಿ ಅನೇಕ ಪಾಠ ಕಲಿಸುತ್ತದೆ. ಸತ್ಯ ಶುದ್ಧ ಕಾಯಕ ಜೀವನವನ್ನು ಸದಾ ಕಾಯುತ್ತದೆ ಎಂಬುದನ್ನು ತಿಳಿಸಿಕೊಟ್ಟರು.
ಕಾಯಕದೊಳು ನಿರತರಾಗಿ ಅಲ್ಲಿಯೇ ದೇವರನ್ನು ಕಾಣುವ ಶರಣರ ನಡೆ ಸದಾ ಸ್ಫೂರ್ತಿಯ ಚಿಲುಮೆ ಎಂದರು.
ದಲಿತ ಮುಖಂಡ ಉಡಚಪ್ಪ ಮಾಳಗಿ ಮಾತನಾಡಿ, ಕಾರ್ಮಿಕರು ದೇಶದ ಪ್ರಗತಿಗೆ ಶ್ರಮಿಸುತ್ತಿರುವರು. ಸರ್ಕಾರ ಜಾರಿಗೊಳಿಸಿರುವ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ತಾವೂ ಪ್ರಗತಿಯತ್ತ ಸಾಗಬೇಕು ಎಂದರು.
ಸಾಮಾಜಿಕ ಹೋರಾಟಗಾರ ಪರಶುರಾಮ ಹರ್ಲಾಪುರ ಮಾತನಾಡಿ, ಕಾರ್ಮಿಕರು ತಮ್ಮ ಬದುಕು ರೂಪಿಸಿಕೊಳ್ಳಲು ಸದಾ ಶ್ರಮಿಸುವರು. ಅವರ ಶ್ರಮದಲ್ಲೇ ದೇಶದ ಹಿತವೂ ಅಡಗಿದೆ ಅಂಥ ಶ್ರಮಿಕರನ್ನು ಶ್ರೀ ಮಠದಿಂದ ಗೌರವಿಸುತ್ತಿರುವುದು ಸಮಯೋಚಿತ ಎಂದರು.
ಆಂಬ್ಯುಲೆನ್ಸ್ ವಾಹನಗಳ ಸಂಘದ ಅಧ್ಯಕ್ಷ ಮಾರುತಿ ಬಣಕಾರ ಮಾತನಾಡಿ, ಕಾಯಕ ದಿನಾಚರಣೆ ನಿಮಿತ್ತ ಶ್ರೀಮಠದಿಂದ ಗೌರವ ಸ್ವೀಕರಿಸಿರುವುದು ನಮಗೆ ಅಭಿಮಾನ ಮೂಡಿಸಿದೆ ಎಂದರು.
ಇದೇ ಸಂದರ್ಭದಲ್ಲಿ ಪಾದರಕ್ಷೆ ತಯಾರಿಕೆಯ ಯಲ್ಲಪ್ಪ ಉಕ್ಕುಂದ, ಕಟ್ಟಡ ನಿರ್ಮಾಣ ಕಾರ್ಮಿಕ ಶಿವಪ್ಪ ಹಂಚಿ, ಸುಧಾ ಕಲಾಟೆ, ಪತ್ರಿಕಾ ವಿತರಣಾ ಕಾರ್ಮಿಕ ಗೂಳಪ್ಪ ಹಳಕೊಪ್ಪ, ಪೌರ ಕಾರ್ಮಿಕರಾದ ದುರ್ಗೇಶ ತಿಮ್ಮಾಪುರ, ರವಿ ಭೂದಗಟ್ಟಿ, ಶ್ರೀಮಠದ ಲಕ್ಷ್ಮಣ ಈಳಗೇರ ಅವರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು.
ಕಮಲಾ ಬುಕ್ಕಶೆಟ್ಟಿ, ರಕ್ಷಿತಾ ಮಡಿವಾಳರ, ಶಶಿಕಲಾ ಬೈಲಣ್ಣನವರ, ಶಾಂತಕ್ಕ ಶಿರೂರ, ಸುಜ್ಞಾನದೇವಿ ಮಠದ, ಶಿವಶರಣಮ್ಮ ಲಕ್ಕಣ್ಣನವರ, ಮಂಜುಳಾ ಕಡ್ಡಿ, ಶಾಂತಾ ಮಡಿವಾಳರ, ಮಲ್ಲೇಶ ಎಚ್. ಉಪಸ್ಥಿತರಿದ್ದರು. ನಿಂಗಪ್ಪ ಆರೇರ ನಿರೂಪಿಸಿದರು. ಗೂಳಪ್ಪ ಅರಳಿಕಟ್ಟಿ ವಂದಿಸಿದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KEa0QcMUeol3Lxo87TDFPa
